ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: 100 ಜನರ ಬಲಿ ಪಡೆದ ಮಳೆ

ಜೈಲಿಗೆ ನುಗ್ಗಿದ ನೀರು; ಕೈದಿಗಳ ಸ್ಥಳಾಂತರ
Last Updated 30 ಸೆಪ್ಟೆಂಬರ್ 2019, 20:01 IST
ಅಕ್ಷರ ಗಾತ್ರ

ಲಖನೌ/ಬಲಿಯಾ, ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಾಜ್ಯದಲ್ಲಿ ಒಟ್ಟು 100 ಜನರು ಬಲಿಯಾಗಿದ್ದಾರೆ. ನೂರಾರು ಜನರು ಗಾಯಗೊಂಡಿದ್ದು, ಮನೆ ಹಾಗೂ ಬೆಳೆಗಳಿಗೆ ಹಾನಿಯಾಗಿದೆ.

ಅಯೋಧ್ಯೆಯಲ್ಲಿ 16 ಅಡಿ ಎತ್ತರದ ಹನುಮಾನ್ ಪ್ರತಿಮೆ ಜಲಾವೃತಗೊಂಡಿದೆ.ಕೆಹ್ರಾಪುರ ಗ್ರಾಮದ ಆಶ್ರಮ ಮುಳುಗಡೆಯಾಗಿದೆ. ಬಲಿಯಾ–ಛಪ್ರಾ ಮಾರ್ಗದ ರೈಲ್ವೆ ಹಳಿ ಮೇಲೆ ನೀರುನುಗ್ಗಿದ್ದು, 20 ರೈಲುಗಳ ಸಂಚಾರ ರದ್ದುಗೊಂಡಿದೆ. ದುರಸ್ತಿ ಕೆಲಸ ನಡೆಯುತ್ತಿದೆ.

ಅಧಿಕಾರಿಗಳ ರಜೆಯನ್ನು ರದ್ದುಗೊಳಿಸಿರುವ ಸರ್ಕಾರ, ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ನಡೆಸಲು ಸೂಚಿಸಿದೆ. ಮುಂದಿನ ದಿನಗಳಲ್ಲಿ ಮಳೆ ತಗ್ಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದರೂ, ರಾಜ್ಯದ ಪೂರ್ವ ಭಾಗಗಳಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ.

ಮುಳುಗಿದ ಜೈಲು:

ಗಂಗಾ ನದಿ ಪ್ರವಾಹದಿಂದ ಜಲಾವೃತಗೊಂಡ ಬನಿಯಾ ಜಿಲ್ಲಾ ಕಾರಾಗೃಹದ 900 ಕೈದಿಗಳನ್ನು ಇತರೆ ಜೈಲುಗಳಿಗೆ ಸೋಮವಾರ ಸ್ಥಳಾಂತರ ಮಾಡಲಾಯಿತು.

ಎಲ್ಲ ಬ್ಯಾರಕ್‌ಗಳಲ್ಲಿ ಮೂರು ಅಡಿ ನೀರು ನಿಂತಿದೆ. ಕೈದಿಗಳು ಮಲಗುವ ಕೋಣೆಯಲ್ಲಿ ಒಂದು ಅಡಿ ನೀರಿದೆ. ಒಳಚರಂಡಿಗಳು ತುಂಬಿ ಹರಿಯುತ್ತಿವೆ ಎಂದು ಎಎಸ್‌ಪಿ ಸಂಜಯ್ ಯಾದವ್ ಮಾಹಿತಿ ನೀಡಿದ್ದಾರೆ.

500 ಕೈದಿಗಳನ್ನು ಅಜಂಗಡ ಜೈಲಿಗೂ, ಉಳಿದವರನ್ನು ಅಂಬೇಡ್ಕರ್‌ನಗರ ಜೈಲಿಗೆ ವರ್ಗಾಯಿಸಲಾಯಿತು. ನದಿ ಸಮೀಪದಲ್ಲಿ ಇರುವ ಕಾರಣ ಜೈಲಿನ ಆವರಣ ನೀರಿನಿಂದ ತುಂಬಿದೆ. ಜೈಲಿನ ಹೊರಗಿನ ಪ್ರದೇಶದಲ್ಲಿ ನೀರು ನಿಂತಿರುವುದರಿಂದ ಪಂಪ್‌ ಮೂಲಕ ನೀರನ್ನು ಹೊರಹಾಕುವುದು ಕಷ್ಟ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಮ್ ಅಸ್ರೇ ತಿಳಿಸಿದ್ದಾರೆ.

ಕೈದಿಗಳ ಸ್ಥಳಾಂತರದ ವೇಳೆ ನಾಲ್ವರು ಡಿವೈಎಸ್‌ಪಿ, 20 ಎಸ್‌ಎಚ್‌ಒ, 80 ಸಬ್‌ ಇನ್ಸ್‌ಪೆಕ್ಟರ್ ಹಾಗೂ 146 ಹೆಡ್‌ಕಾನ್‌ಸ್ಟೆಬಲ್‌, 380 ಕಾನ್‌ಸ್ಟೆಬಲ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ಭವಾನಿ ಸಿಂಗ್ ಖಂಗಾರೌತ್ ತಿಳಿಸಿದ್ದಾರೆ.

ದೋಣಿ ಮೂಲಕ ಸುಶೀಲ್ ಮೋದಿ ರಕ್ಷಣೆ

ಬಿಹಾರದ ಪಟ್ನಾದಲ್ಲಿ ಸೋಮವಾರವೂ ಮಳೆ ಸುರಿದ್ದಿದ್ದು,ಉಪಮುಖ್ಯಮಂತ್ರಿ ಸುಶೀಲ್ ಮೋದಿ ಅವರ ನಿವಾಸ ಜಲಾವೃತವಾಗಿತ್ತು. ರಾಜ್ಯ ವಿಪತ್ತು ಪರಿಹಾರ ತಂಡದ ಸದಸ್ಯರು ರಾಜೇಂದ್ರ ನಗರದ ಮನೆಯಿಂದ ಸುಶೀಲ್ ಅವರ ಕುಟುಂಬದವರನ್ನು ಮುಖ್ಯರಸ್ತೆಗೆ ದೋಣಿ ಮೂಲಕ ಸ್ಥಳಾಂತರಿಸಿದರು. ಅಲ್ಲಿಂದ ವಾಹನದ ಮೂಲಕ ದೇಶರತ್ನ ಮಾರ್ಗದಲ್ಲಿರುವಅಧಿಕೃತ ನಿವಾಸಕ್ಕೆ ಅವರನ್ನು ಕಳುಹಿಸಿಕೊಡಲಾಯಿತು.

ರಾಜೇಂದ್ರ ನಗರ, ಕಂಕರಬಾಗ್‌ ಪಾಟಲಿಪುತ್ರ ಪ್ರದೇಶ ಸೇರಿದಂತೆ ಪಟ್ನಾದ ಬಹುತೇಕ ಪ್ರದೇಶಗಳಲ್ಲಿ ಮೂರ್ನಾಲ್ಕು ಅಡಿ ನೀರು ತುಂಬಿದೆ. ರಾಜ್ಯದಾದ್ಯಂತ ಮೃತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.ಗಯಾ ಜಿಲ್ಲೆಯಲ್ಲಿ ಗೋಡೆ ಕುಸಿದು ಐವರು ಮೃತಪಟ್ಟಿದ್ದಾರೆ. ಜಹಾನಾಬಾದ್ ಜಿಲ್ಲೆಯಲ್ಲಿ ಹಳೆಯ ಮನೆ ಕುಸಿದುಬಿದ್ದು ಮೂರುವರೆ ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.

ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದ್ದು, ಮುಂದಿನ 24 ಗಂಟೆಯಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಿದೆ.ಮುಂಜಾಗ್ರತಾ ಕ್ರಮವಾಗಿ ಶಾಲೆಗಳನ್ನು ಮುಚ್ಚಲಾಗಿದೆ. ಮೊಣಕಾಲುದ್ದದ ನೀರಿನಲ್ಲೇ ಕೆಲವು ಬೈಕ್ ಸವಾರರು ಪ್ರಯಾಣಿಸುತ್ತಿದ್ದರು.ಫರಕ್ಕಾ ಬ್ಯಾರೇಜ್‌ನಿಂದ 10 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಪರಿಹಾರ ಕಾರ್ಯಕ್ಕೆ ಸೇನಾ ಸಿಬ್ಬಂದಿ ಹಾಗೂ ಸೇನಾ ಹೆಲಿಕಾಪ್ಟರ್‌ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT