ರಾಜೀವ್, ವಾಜಪೇಯಿ, ಸೋನಿಯಾ: ರಾಜಕಾರಣ ಮೀರಿದ ಹೃದಯವಂತಿಕೆ

7

ರಾಜೀವ್, ವಾಜಪೇಯಿ, ಸೋನಿಯಾ: ರಾಜಕಾರಣ ಮೀರಿದ ಹೃದಯವಂತಿಕೆ

Published:
Updated:
Deccan Herald

ನವದೆಹಲಿ: 1984-89ರ ಅವಧಿಯಲ್ಲಿ ರಾಜೀವಗಾಂಧಿ ಪ್ರಧಾನಿಯಾಗಿದ್ದ ದಿನಗಳು. ಅಟಲ್ ಬಿಹಾರಿ ವಾಜಪೇಯಿ ಮೂತ್ರಕೋಶದ ತೀವ್ರ ವ್ಯಾಧಿಗೆ ತುತ್ತಾಗಿದ್ದರು. ವಿದೇಶದಲ್ಲಿ ನುರಿತ ತಜ್ಞರ ಚಿಕಿತ್ಸೆಯ ಅಗತ್ಯವಿತ್ತು. ಆದರೆ ಅವರು ಆಗ ಸಂಸತ್ ಸದಸ್ಯರಾಗಿರಲಿಲ್ಲ. ಗ್ವಾಲಿಯರ್‌ನಲ್ಲಿ ಮಾಧವರಾವ್ ಸಿಂಧ್ಯ ಅವರ ಎದುರು ಸೋತಿದ್ದರು.

ವಾಜಪೇಯಿ ಅನಾರೋಗ್ಯದ ವಿಷಯ ಅರಿತ ರಾಜೀವ್, ಅವರನ್ನು ವಿಶ್ವಸಂಸ್ಥೆಗೆ ತೆರಳುವ ಭಾರತೀಯ ನಿಯೋಗದ ಸದಸ್ಯರಾಗಿ ಸೇರಿಸಿದರು. ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯಲಿ ಎಂಬುದು ಅವರ ಉದ್ದೇಶವಾಗಿತ್ತು. ‘ಅಂದು ನಾನು ನ್ಯೂಯಾರ್ಕ್‌ಗೆ ಹೋದ ಕಾರಣ ಇಂದು ಜೀವಂತ ಇರುವುದಾಗಿ’ ಖುದ್ದು ವಾಜಪೇಯಿ ಅವರು ಪತ್ರಕರ್ತ ಕರಣ್ ಥಾಪರ್ ಅವರಿಗೆ ತಿಳಿಸಿದ್ದರು. ಅದು 1991ರಲ್ಲಿ ರಾಜೀವಗಾಂಧಿ ಶ್ರೀಪೆರಂಬದೂರಿನಲ್ಲಿ ಹತ್ಯೆಗೀಡಾಗಿದ್ದ ಸಂದರ್ಭ.

2001ರಲ್ಲಿ ಸೋನಿಯಾ ಆಗಷ್ಟೇ ಸಕ್ರಿಯ ರಾಜಕಾರಣ ಪ್ರವೇಶಿಸಿದ್ದರು. ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕಿ. ಹಿಂಜರಿಕೆ, ಸಂಕೋಚ ಅವರನ್ನು ಇನ್ನೂ ಬಿಟ್ಟಿರಲಿಲ್ಲ. ವಿಶ್ವಸಂಸ್ಥೆಯ ಏಡ್ಸ್‌ ಸಮ್ಮೇಳನಕ್ಕೆ ಭಾರತೀಯ ನಿಯೋಗದ ಮುಖ್ಯಸ್ಥರನ್ನಾಗಿ ಸೋನಿಯಾ ಅವರನ್ನು ಅಮೆರಿಕಕ್ಕೆ ಕಳಿಸಿಕೊಟ್ಟರು ಅಂದಿನ ಪ್ರಧಾನಿ ವಾಜಪೇಯಿ. ನಿಯೋಗದ ನೇತೃತ್ವ ತಮ್ಮ ಕೈ ತಪ್ಪಿತೆಂದು ಮುನಿಸಿಕೊಂಡಿದ್ದರು ಆರೋಗ್ಯ ಮಂತ್ರಿ ಡಾ.ಸಿ.ಪಿ. ಠಾಕೂರ್.

ಅಮೆರಿಕದ ಉಪಾಧ್ಯಕ್ಷ ಡಿಕ್ ಚೆನೆ ಅವರ ಮಹತ್ವದ ಭೇಟಿ ಸೋನಿಯಾ ಅವರಿಗೆ ಒದಗಿತ್ತು. ಸಾಲುಗಟ್ಟಿ ಜರುಗಿದ ಸಭೆಗಳು ಮತ್ತು ಪತ್ರಿಕಾಗೋಷ್ಠಿಗಳಲ್ಲಿ ಸೋನಿಯಾ ಒಮ್ಮೆಯೂ ಬಿಜೆಪಿ ಜೊತೆ ತಮಗಿರುವ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಪ್ರಸ್ತಾಪಿಸಲಿಲ್ಲ.

ತಿರುಗೇಟು ಸದಾ ಮೊನಚು...

ಮೊನಚು ಮತ್ತು ಚುರುಕು ಮಾತಿಗೆ ವಾಜಪೇಯಿ ಹೆಸರಾಗಿದ್ದರು. ಅವರು ಪ್ರಧಾನಿಯಾಗಿದ್ದಾಗ ಕಾಂಗ್ರೆಸ್‌ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರು ಸರ್ಕಾರವನ್ನು ಭ್ರಷ್ಟ, ಅಸಮರ್ಥ ಮತ್ತು ಅದಕ್ಷ ಎಂದು ಹಂಗಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ವಾಜಪೇಯಿ, ನಮ್ಮ ಚಿಂತನೆಗಳು ಭಿನ್ನವಾಗಿವೆ ನಿಜ. ಆದರೆ, ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ರೀತಿಯೇ ಇದು’ ಎಂದು  ತಿರುಗೇಟು ನೀಡಿದ್ದರು. ‘ಎದುರಲ್ಲಿ ಪದಕೋಶ ತೆರೆದಿಟ್ಟು ಈ ವಿಶೇಷ ಪದಗಳನ್ನು ನೀವು ಹೆಕ್ಕಿ ತೆಗೆದಂತಿದೆ’ ಎಂದು ಕುಟುಕಿದ್ದರು. 

ವಾಜಪೇಯಿ ಒಳ್ಳೆಯವರು, ಆದರೆ ಅವರ ಪಕ್ಷ ಸರಿಯಿಲ್ಲ ಎಂಬ ಟೀಕೆಗೂ ಇದೇ ರೀತಿಯ ಉತ್ತರವನ್ನು ಅವರು ನೀಡಿದ್ದರು. ‘ವಾಜಪೇಯಿ ಒಳ್ಳೆಯವರು, ಆದರೆ ಪಕ್ಷ ಒಳ್ಳೆಯದಲ್ಲ ಅಂತೀರಿ... ಒಳ್ಳೆಯ ವಾಜಪೇಯಿಯನ್ನು ಇಟ್ಟುಕೊಂಡು ನೀವು ಏನು ಮಾಡುತ್ತೀರಿ’ ಎಂದು ಪ್ರಶ್ನಿಸಿದ್ದರು.

**

ಇಂದಿರಾರನ್ನು 'ದುರ್ಗಾ’ ಎಂದಿರಲಿಲ್ಲ

* ಬಾಂಗ್ಲಾದೇಶ ಬಿಡುಗಡೆಯ ಹೋರಾಟಕ್ಕೆ ಬೆಂಬಲಿಸಿ ಪಾಕಿಸ್ತಾನದೊಂದಿಗೆ ಯುದ್ಧ ಸಾರಿ ಗೆದ್ದ ಇಂದಿರಾ ಗಾಂಧಿ ಅವರನ್ನು ನಾನು ‘ದುರ್ಗಾ’ ಅಂತ ಕರೆಯಲಿಲ್ಲ. ಪುಪುಲ್ ಜಯಕರ್ ಇಂದಿರಾ ಕುರಿತು ಪುಸ್ತಕ ಬರೆದರು. ನನ್ನ ಬಳಿಯೂ ಬಂದಿದ್ದರು. ಹಾಗೆ ಕರೆದಿಲ್ಲವೆಂದು ನಾನು ಅವರಿಗೆ ಸ್ಪಷ್ಟವಾಗಿ ಹೇಳಿದ್ದೆ. ಆದರೂ ಈ 'ದುರ್ಗಾ' ಕಮೆಂಟು ನನ್ನ ಬೆನ್ನು ಬಿಟ್ಟಿಲ್ಲ.

* ಬಾಬರಿ ಮಸೀದಿ ಉರುಳಿದಾಗ ಕಣ್ಣೀರು ಬಂದಿರಲಿಲ್ಲ. ಆದರೆ ನಡೆದದ್ದು ನನಗೆ ಮೆಚ್ಚುಗೆಯ ಬೆಳವಣಿಗೆ ಆಗಿರಲಿಲ್ಲ ಎಂಬುದು ನಿಜ. ಕಾಶಿ ಮಥುರಾ ನಮ್ಮ ಕಾರ್ಯಸೂಚಿಯಲ್ಲಿ ಇಲ್ಲ. ಮತ್ತೆ ಅಧಿಕಾರಕ್ಕೆ ಬಂದರೆ ಅಯೋಧ್ಯೆ ಮರುಕಳಿಸುವುದಿಲ್ಲ.

* ನಮ್ಮ ಆತ್ಮಬಲ ಬುದ್ಧಿಬಲದಿಂದಲೇ ನಿರ್ಣಯ ತೆಗೆದುಕೊಳ್ಳುತ್ತೇವೆ. ಸರ್ಕಾರವನ್ನು ರಜ್ಜೂ ಭಯ್ಯಾ (ಅಂದಿನ ಆರೆಸ್ಸೆಸ್ ಮುಖ್ಯಸ್ಥ) ನಡೆಸುತ್ತಾರೆಯೇ ಅಥವಾ ಅಟಲ್ ನಡೆಸುತ್ತಾರೆಯೇ ಎಂಬುದು ನಾವು ಅಧಿಕಾರಕ್ಕೆ ಬಂದ ನಂತರ ತಿಳಿಯುತ್ತದೆ.

* ನಾನು ನೆಹರೂ ವಿದೇಶಾಂಗ ನೀತಿಯ ಸಮರ್ಥಕ ಎಂಬುದು ಸರಿಯಲ್ಲ. ಅವರ ಮುಖಕ್ಕೆ ರಾಚುವಂತೆ ನಾನು ಟೀಕೆ ಮಾಡಿದ್ದೆ. ಆದರೆ ನಿರ್ಲಿಪ್ತ ನೀತಿಯನ್ನು ಸಮರ್ಥಿಸುತ್ತಿದ್ದೆ. ಅಂದಾಕ್ಷಣ ಅದು ನೆಹರೂ ನೀತಿಯ ಸಮರ್ಥನೆ ಅಲ್ಲ.  

ಬರಹ ಇಷ್ಟವಾಯಿತೆ?

 • 54

  Happy
 • 4

  Amused
 • 5

  Sad
 • 4

  Frustrated
 • 3

  Angry

Comments:

0 comments

Write the first review for this !