ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ವ್ಯತ್ಯಾಸ: ತನಿಖೆಗೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

Last Updated 20 ನವೆಂಬರ್ 2019, 17:21 IST
ಅಕ್ಷರ ಗಾತ್ರ

ನವದೆಹಲಿ: 17ನೇ ಲೋಕಸಭೆ ಚುನಾವಣೆಯಲ್ಲಿ 347 ಕ್ಷೇತ್ರಗಳಲ್ಲಿನ ಮತದಾನ ಪ್ರಮಾಣ ಮತ್ತು ಎಣಿಸಲಾದ ಮತಗಳ ನಡುವೆ ಅಂತರ ಇತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಬೇಕು ಎಂದು ಕೋರಿ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಮತ್ತು ಕಾಮನ್‌ ಕಾಸ್‌ ಎನ್‌ಜಿಒಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ.

ಲೋಕಸಭೆ ಮತ್ತು ವಿವಿಧ ವಿಧಾನಸಭೆ ಚುನಾವಣೆಗಳಿಗೆ ಸಂಬಂಧಿಸಿದ ನಿಖರ ಮತ್ತು ಪ್ರಶ್ನಾತೀತ ದತ್ತಾಂಶಗಳನ್ನು ಚುನಾವಣಾ ಆಯೋಗವು ಬಹಿರಂಗಪಡಿಸಿಲ್ಲ. ಈ ಮೂಲಕ ಆಯೋಗವು ಸಾಂವಿಧಾನಿಕ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆರೋಪಿಸಲಾಗಿದೆ.

ಎರಡೂ ಸಂಸ್ಥೆಗಳ ಪರವಾಗಿ ವಕೀಲ ಪ್ರಶಾಂತ್‌ ಭೂಷಣ್‌ ಅವರು ಜಂಟಿ ಅರ್ಜಿ ಸಲ್ಲಿಸಿದ್ದಾರೆ. ಮತ ಪ್ರಮಾಣ ಮತ್ತು ಎಣಿಸಲಾದ ಮತಗಳ ನಡುವಣ ವ್ಯತ್ಯಾಸಕ್ಕೆ ತಾರ್ಕಿಕವಾದ ಕಾರಣಗಳನ್ನು ಆಯೋಗವು ನೀಡಿಲ್ಲ. ತನ್ನ ವೆಬ್‌ಸೈಟ್‌ನಿಂದ ಕೆಲವು ಮಾಹಿತಿಯನ್ನು ಆಯೋಗವು ಅಳಿಸಿ ಹಾಕಿದೆ. ಇದು ಮತಎಣಿಕೆ ಮತ್ತು ಫಲಿತಾಂಶದ ಬಗ್ಗೆ ಜನರ ಮನಸ್ಸಿನಲ್ಲಿ ಗಂಭೀರ ಅನುಮಾನ ಸೃಷ್ಟಿಸಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಯಾವುದೇ ಚುನಾವಣೆಯ ಫಲಿತಾಂಶ ಪ್ರಕಟಿಸುವುದಕ್ಕೆ ಮುನ್ನ ದತ್ತಾಂಶಗಳನ್ನು ನಿಖರವಾಗಿ ಪರಿಶೀಲಿಸಬೇಕು ಎಂಬ ನಿರ್ದೇಶನವನ್ನು ಆಯೋಗಕ್ಕೆ ನೀಡಬೇಕು. ಯಾವುದೇ ರೀತಿಯ ವ್ಯತ್ಯಾಸಗಳು ಕಂಡು ಬಂದರೆ ಅದರ ತನಿಖೆಗೆ ಗಟ್ಟಿಯಾದ ವ್ಯವಸ್ಥೆ ರೂಪಿಸಬೇಕು ಎಂದು ಕೋರಲಾಗಿದೆ.

ಪ್ರತಿ ಕ್ಷೇತ್ರದಲ್ಲಿ ಎಷ್ಟು ಮತದಾನವಾಗಿದೆ ಎಂಬ ಮಾಹಿತಿಯನ್ನು ಮೊಬೈಲ್‌ ಆ್ಯಪ್‌ ಮೂಲಕ ನೀಡುವ ಕ್ರಮವನ್ನು 2019ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಅಳವಡಿಸಿಕೊಳ್ಳಲಾಗಿತ್ತು. ಮೊದಲ ಆರು ಹಂತಗಳ ಮತದಾನದಲ್ಲಿ ಈ ಮಾಹಿತಿ ನೀಡಲಾಗಿದೆ. ಕೊನೆಯ ಹಂತದ ಮತದಾನದಲ್ಲಿ ಮತದಾನದ ಶೇಕಡಾವಾರು ಪ್ರಮಾಣವನ್ನು ಮಾತ್ರ ನೀಡಲಾಗಿದೆ. ಹಿಂದಿನ ಎಲ್ಲ ದತ್ತಾಂಶಗಳನ್ನು ಅಳಿಸಿ ಹಾಕಲಾಗಿದೆ. ಹೆಚ್ಚಿನ ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣದಲ್ಲಿ ಆಗಿರುವ ವ್ಯತ್ಯಾಸಗಳನ್ನು ಮುಚ್ಚಿಡುವುದಕ್ಕಾಗಿ ಹೀಗೆ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

2019ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಪ್ರಶ್ನಿಸುವುದು ಅರ್ಜಿಯ ಉದ್ದೇಶವಲ್ಲ. ಆದರೆ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಖಾತರಿಗಾಗಿ ಹಾಗೂ ಮೂಲಭೂತ ಹಕ್ಕು ರಕ್ಷಣೆಗಾಗಿ ನ್ಯಾಯಾಲಯದ ಮಧ್ಯಪ್ರವೇಶ ಅಗತ್ಯವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT