ಬುಧವಾರ, ನವೆಂಬರ್ 20, 2019
24 °C
ಗುಣಮಟ್ಟ ಪರಿಕರ ಒದಗಿಸಲು ರಕ್ಷಣಾ ಉದ್ಯಮಗಳಿಗೆ ಮನವಿ: ಸೇನಾ ಘಟಕಗಳ ಸಮ್ಮೇಳನದಲ್ಲಿ ಬಿಪಿನ್‌ ರಾವತ್‌

ಸವಾಲು ಎದುರಿಸಲು ಪಾಲುದಾರಿಕೆಗೆ ಸೇನೆ ಸಿದ್ಧ

Published:
Updated:

ನವದೆಹಲಿ: ‘ನೆರೆಯ ಸ್ನೇಹಪರ ದೇಶಗಳ ಜೊತೆ ಶಾಂತಿ, ಸ್ಥಿರತೆ ಹೊಂದಲು ಭಾರತ ಬದ್ಧ. ವಿಶಾಲ ಅರ್ಥದಲ್ಲಿ ಭವಿಷ್ಯದ ಆಪತ್ತು ಎದುರಿಸಲು ಪಾಲುದಾರಿಕೆಗೂ ಸಿದ್ಧವಿದೆ’ ಎಂದು ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್‌ ರಾವತ್ ಹೇಳಿದರು.

ಶುಕ್ರವಾರ ಇಲ್ಲಿ ಸೇನಾ ಘಟಕಗಳ ನಾಲ್ಕನೇ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಗಾತ್ರವಷ್ಟೇ ಅಲ್ಲ, ವೃತ್ತಿಪರತೆ ಮತ್ತು ಯುದ್ಧ, ಇತರೆ ಅನುಭವಗಳ ದೃಷ್ಟಿಯಿಂದಲೂ ವಿಶ್ವದಲ್ಲಿಯೇ ಭಾರತದ್ದು ಮುಂಚೂಣಿಯಲ್ಲಿರುವ ಸಶಕ್ತ ಸೇನೆ’ ಎಂದರು.

‘ನಮ್ಮ ವಿಶೇಷ ತತ್ವ, ಸಿದ್ಧಾಂತಗಳಿಂದಾಗಿ ಸ್ನೇಹಪರ ರಾಷ್ಟ್ರಗಳು ಮತ್ತು ವಿಶಾಲ ಅರ್ಥದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಬದ್ಧವಾಗಿದ್ದೇವೆ. ಹಿಂದಿನಂತೆ, ಬರಬಹುದಾದ ಆಪತ್ತು ಎದುರಿಸಲು ಪಾಲುದಾರಿಕೆ ಹೊಂದಲಿದ್ದೇವೆ’ ಎಂದು ವಿವರಿಸಿದರು.

ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್‌ ಕರಂಬಿರ್ ಸಿಂಗ್‌ ಅವರು, ಕಡಲ್ಗಳ್ಳತನ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಉಲ್ಲೇಖಿಸಿದರು. ಇವುಗಳನ್ನು ಸಮರ್ಥವಾಗಿ ಎದುರಿಸಲು  ಹೊಂದಾಣಿಕೆ ಅಗತ್ಯ ಎಂದರು.

ಸಮಾನ ಮನಸ್ಕರ ಜೊತೆಗೆ ಸಹಕಾರಕ್ಕೂ ನೌಕಾಪಡೆ ಬದ್ಧ. ಸಹಕಾರವು ಪ್ರಧಾನಮಂತ್ರಿ ಪ್ರತಿಪಾದಿಸಿದಂತೆ  ‘5ಎಸ್‌’ ಅಂದರೆ ಗೌರವ (ಸಮ್ಮಾನ್‌), ಚರ್ಚೆ (ಸಂವಾದ), ಸಹಯೋಗ (ಸಹಕಾರ), ಶಾಂತಿ, ಸಮೃದ್ಧಿ ಆಧರಿಸಿದೆ ಎಂದರು.

ಇದಕ್ಕೂ ಮೊದಲು ಸೇನೆಯ ಮುಖ್ಯಸ್ಥರು, ‘ಸೇನೆಗೆ ಅಗತ್ಯವಿರುವ ಪರಿಕರಗಳನ್ನು ರಕ್ಷಣಾ ಉದ್ಯಮ ಒದಗಿಸಬೇಕು’ ಎಂದು ಒತ್ತಾಯಿಸಿದರು. ‘ಭದ್ರತೆ  ಹಾದಿಯ ಸವಾಲುಗಳನ್ನು ಎದುರಿಸಲು ನಾವು ಸನ್ನದ್ಧರಾಗಬೇಕು. ಇದಕ್ಕೆ ಪೂರಕವಾಗಿ ಅಗತ್ಯವಿರುವ ಪರಿಕರಗಳಿಗಾಗಿ ನಾವು ರಕ್ಷಣಾ ಉದ್ಯಮಗಳತ್ತ ದೃಷ್ಟಿಹರಿಸಿದ್ದೇವೆ’ ಎಂದು ತಿಳಿಸಿದರು.

‘ಯಾವುದೇ ದೇಶ ಶಾಂತಿ, ಸ್ಥಿರತೆಯನ್ನು ಹೊಂದಲು ಸದೃಢವಾದ ಸೇನಾ ಪಡೆಯನ್ನು ಹೊಂದಿರುವುದು ಅಗತ್ಯ. ಅದಕ್ಕೆ ಪೂರಕವಾಗಿ ಮಾನವ ಸಂಪನ್ಮೂಲವನ್ನು ಬಲಪಡಿಸಬೇಕಿದೆ. ಉತ್ತಮ ತರಬೇತಿ, ಗುಣಮಪಟ್ಟದ ಶಸ್ತ್ರಾಸ್ತ್ರ ಒದಗಿಸುವ ಮೂಲಕ ಇದನ್ನು ಸಾಧಿಸಬೇಕಾಗಿದೆ’ ಎಂದು ಹೇಳಿದರು.

ಜಾಗತೀಕರಣದ ಜಗತ್ತಿನಲ್ಲಿ ಅಪಾಯಗಳನ್ನು ಎದುರಿಸಲು ರಕ್ಷಣಾ ಪಡೆದಗಳ ನಡುವೆ ಜವಾಬ್ದಾರಿಗಳ ಹಂಚಿಕೆಯೂ ಅಗತ್ಯ. ಈ ನಿಟ್ಟಿನಲ್ಲಿ ರಕ್ಷಣಾ ಉದ್ಯಮವು ಸ್ನೇಹಪರ ರಾಷ್ಟ್ರಗಳ ರಕ್ಷಣಾ ಅಗತ್ಯಗಳಿಗೂ ಸ್ಪಂದಿಸಬೇಕಿದೆ ಎಂದು ಸಲಹೆ ಮಾಡಿದರು.

ಪ್ರತಿಕ್ರಿಯಿಸಿ (+)