ಮತ್ತೆ ಐವರು ಅತೃಪ್ತರಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಶನಿವಾರ, ಜೂಲೈ 20, 2019
24 °C

ಮತ್ತೆ ಐವರು ಅತೃಪ್ತರಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ

Published:
Updated:

ನವದೆಹಲಿ: ರಾಜೀನಾಮೆ ಕುರಿತು ನಿರ್ಧಾರ ಕೈಗೊಳ್ಳುವಂತೆ ಸ್ಪೀಕರ್‌ಗೆ ನಿರ್ದೇಶನ ನೀಡುವಂತೆ ಕೋರಿ ಮತ್ತೆ ಐವರು ಅತೃಪ್ತ ಶಾಸಕರು ಶನಿವಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಶಾಸಕರಾದ ಆನಂದ್‌ ಸಿಂಗ್‌, ಕೆ.ಸುಧಾಕರ್, ರೋಷನ್‌ ಬೇಗ್‌, ಎಂ.ಟಿ.ಬಿ. ನಾಗರಾಜ್‌ ಮತ್ತು ಮುನಿರತ್ನ ಅವರೇ ಮೇಲ್ಮನವಿ ಸಲ್ಲಿಸಿದ್ದು, ಈಗಾಗಲೇ ಜೆಡಿಎಸ್‌ ಮತ್ತು ಕಾಂಗ್ರೆಸ್‌ನ 10 ಜನ ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿಯೊಂದಿಗೆ ವಿಚಾರಣೆಗೆ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.

‘ನಾವು ಸ್ವಯಂ ಪ್ರೇರಣೆಯಿಂದ ಖುದ್ದಾಗಿ ಸಲ್ಲಿಸಿರುವ ರಾಜೀನಾಮೆಯನ್ನೂ ಸ್ಪೀಕರ್‌ ಸ್ವೀಕರಿಸಿಲ್ಲ. ಸಂವಿಧಾನದ 190ನೇ (3)(ಬಿ) ವಿಧಿ ಹಾಗೂ ವಿಧಾನಸಭೆಯ ನಿಯಮಗಳ ಅನ್ವಯ ರಾಜೀನಾಮೆ ಅರ್ಜಿಯನ್ನು ಇತ್ಯರ್ಥಪಡಿಸಲು ಪ್ರತ್ಯೇಕವಾದ ಹಾಗೂ ವಿಸ್ತೃತ ವಿಚಾರಣೆಯ ಅಗತ್ಯವೂ ಇಲ್ಲ. ಜನಪ್ರತಿನಿಧಿಗಳು ತಮ್ಮ ಸದಸ್ಯತ್ವಕ್ಕೆ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ಸಲ್ಲಿಸುವ ಹಕ್ಕನ್ನು ಹೊಂದಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಶುಕ್ರವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚಿಸುವ ಇಂಗಿತ ವ್ಯಕ್ತಪಡಿಸಿದ್ದು, ಸರ್ಕಾರಕ್ಕೆ ಬೆಂಬಲ ಸೂಚಿಸದಿದ್ದರೆ ನಮ್ಮ ಸದಸ್ಯತ್ವ ಅನರ್ಹಗೊಳಿಸುವ ಬೆದರಿಕೆ ಇದೆ. ರಾಜೀನಾಮೆ ಸ್ವೀಕೃತಿ ಆಗದಿದ್ದರೆ ನಮ್ಮ ಸದಸ್ಯತ್ವ ರದ್ದಾಗಬಹುದಾಗಿದೆ’ ಎಂದು ಅವರು ದೂರಿದ್ದಾರೆ.

‘ಅನರ್ಹತೆಯ ದೂರು ಸಲ್ಲಿಕೆ ಆಗುವ ಮೊದಲೇ ನಾವು ರಾಜೀನಾಮೆ ಸಲ್ಲಿಸಿರುವುದರಿಂದ, ಅನರ್ಹತೆ ಪ್ರಕರಣದ ವಿಚಾರಣೆಯ ಕಾರಣ ಮುಂದಿರಿಸಿ ರಾಜೀನಾಮೆಯ ಹಕ್ಕನ್ನು ನಿರಾಕರಿಸುವಂತಿಲ್ಲ. ಅಲ್ಲದೆ, ಜುಲೈ 10ರಂದು ರಾಜೀನಾಮೆ ಸಲ್ಲಿಸಲು ವಿಧಾನಸೌಧಕ್ಕೆ ತೆರಳಿದ್ದ ಸದಸ್ಯರೊಬ್ಬರ ಮೇಲೆ ಹಲ್ಲೆಯೂ ನಡೆದಿದೆ. ಅಲ್ಲಿದ್ದ ಪೊಲೀಸ್‌ ಸಿಬ್ಬಂದಿ ರಕ್ಷಿಸಿದ್ದಾರೆ’ ಎಂದು ಅರ್ಜಿದಾರರು ಹೇಳಿದ್ದಾರೆ.

ರಾಜೀನಾಮೆಗೆ ಸಂಬಂಧಿಸಿದಂತೆ ಉದ್ಭವವಾಗಿರುವ ಶಂಕೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅರ್ಜಿಯ ಜೊತೆಗೆ ಹೇಳಿಕೆಯನ್ನೂ ಸಲ್ಲಿಸಿರುವ ಅತೃಪ್ತ ಶಾಸಕರು ರಾಜೀನಾಮೆಯು ಸ್ವಯಂ ಪ್ರೇರಿತ ಎಂದು ಸ್ಪಷ್ಟಪಡಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 1

  Sad
 • 2

  Frustrated
 • 5

  Angry

Comments:

0 comments

Write the first review for this !