ಮಂಗಳವಾರ, ಅಕ್ಟೋಬರ್ 15, 2019
26 °C
ಶಿಲ್ಪಕಲಾ ಸೌಂದರ್ಯದ ನಾಡಿನಲ್ಲಿ ಎರಡು ದಿನಗಳ ಅನೌಪಚಾರಿಕ ಶೃಂಗಸಭೆ; ಭಾರತ–ಚೀನಾ ಸಂಬಂಧ ಸುಧಾರಣೆಯತ್ತ ಹೆಜ್ಜೆ

ಷಿ–ಮೋದಿ ಸ್ವಾಗತಕ್ಕೆ ಮಾಮಲ್ಲಪುರಂ ಸಜ್ಜು

Published:
Updated:
Prajavani

ನವದೆಹಲಿ: ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಎರಡು ದಿನಗಳ ಭೇಟಿಗಾಗಿ ಶುಕ್ರವಾರ ಭಾರತಕ್ಕೆ ಬರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಷಿ ಅವರನ್ನು ಸ್ವಾಗತಿಸಲು ತಮಿಳುನಾಡಿನ ಕಡಲತಡಿಯ ಪ್ರವಾಸಿತಾಣ ಮಾಮಲ್ಲಪುರಂ ಸಜ್ಜುಗೊಂಡಿದೆ. 

ಮೋದಿ–ಷಿ ನಡುವಣ ಎರಡನೇ ಅನೌಪಚಾರಿಕ ಶೃಂಗಸಭೆಯಲ್ಲಿ ಭಾರತ–ಚೀನಾ ನಡುವಿನ ದ್ವಿಪಕ್ಷೀಯ, ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ಮಹತ್ವದ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಎರಡು ವರ್ಷಗಳ ಹಿಂದೆ ಚೀನಾದ ವುಹಾನ್‌ನಲ್ಲಿ ಮೋದಿ–ಷಿ ನಡುವೆ ಮೊದಲ ಅನೌಪಚಾರಿಕ ಶೃಂಗಸಭೆ ನಡೆದಿತ್ತು.

ಜಮ್ಮು–ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ್ದರ ಪರಿಣಾಮ, ಷಿ ಅವರ ಭಾರತ ಭೇಟಿಯನ್ನು ಖಚಿತಪಡಿಸಲು ಚೀನಾ ವಿಳಂಬ ಮಾಡಿತು ಎನ್ನಲಾಗಿದೆ. ಸಾರ್ವಭೌಮತೆ ವಿಚಾರದಲ್ಲಿ ಯಾವುದೇ ದೇಶವು ಭಾರತದ ನಿರ್ಧಾರವನ್ನು ಪ್ರಶ್ನೆ ಮಾಡಿದರೂ, ತನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಭಾರತ ಸ್ಪಷ್ಟವಾಗಿ ಹೇಳಿದೆ. 

ಚೀನಾ ಅಧ್ಯಕ್ಷರಿಗೆ ಈ ವಿಚಾರದಲ್ಲಿ ಇನ್ನೂ ಹೆಚ್ಚಿನ ವಿವರಣೆ ಬೇಕಿದ್ದರೆ ಮೋದಿ ಅವರು ನೀಡಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಲಡಾಖ್‌ ಅನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿದ ಭಾರತದ ನಡೆಗೆ ಚೀನಾದ ಆಕ್ಷೇಪವಿದೆ. ಆದರೆ, ಅದು ಲಡಾಖ್‌ ಜನರ ಆಶಯದಂತೆ ತೆಗೆದುಕೊಂಡ ನಿರ್ಧಾರ ಎಂದು ಮನವರಿಕೆ ಮಾಡಿಕೊಡಲು ಭಾರತ ಸಿದ್ಧವಿದೆ. 

ಭವಿಷ್ಯದಲ್ಲಿ ಭಾರತ–ಚೀನಾ ನಡುವಿನ ಸಂಬಂಧಕ್ಕೆ ವಿಸ್ತಾರ ಮಾರ್ಗವನ್ನು ಗುರುತಿಸುವುದು ಮಾತುಕತೆಯ ಮುಖ್ಯ ಉದ್ದೇಶ. ಶೃಂಗಸಭೆಯಲ್ಲಿ ಯಾವುದೇ ಒಪ್ಪಂದಕ್ಕೆ ಸಹಿ ಹಾಕುವ ಅಥವಾ ಜಂಟಿ ಹೇಳಿಕೆ ಬಿಡುಗಡೆ ಮಾಡುವ ಕಾರ್ಯಕ್ರಮ ಇಲ್ಲ.  

ವ್ಯಾಪಾರದ ಹೆಬ್ಬಾಗಿಲು ಮಾಮಲ್ಲಪುರಂ

ಚೀನಾ ಹಾಗೂ ಭಾರತದ ನಡುವಿನ ಸಂಬಂಧಕ್ಕೆ 2000 ವರ್ಷಗಳ ಇತಿಹಾಸವಿದೆ. ಪಲ್ಲವರ ಆಳ್ವಿಕೆಗೆ ಒಳಪಟ್ಟಿದ್ದ ಮಾಮಲ್ಲಪುರಂ ಪಟ್ಟಣ ಹಾಗೂ ಚೀನಾದ ನಡುವೆ ರಕ್ಷಣೆ ಹಾಗೂ ವ್ಯಾಪಾರ ಸಂಬಂಧ ಇತ್ತು. 

ಶತಮಾನಗಳ ಹಿಂದೆ ಚೀನಾ ಸೇರಿದಂತೆ ಆಗ್ನೇಯ ಏಷ್ಯಾದ ದೇಶಗಳಿಗೆ ಸರಕು ರಫ್ತು ಹಾಗೂ ಆಮದು ಮಾಡುವ ಹೆಬ್ಬಾಗಿಲು ಎಂದು ಮಾಮಲ್ಲಪುರಂ ಬಂದರು ಖ್ಯಾತಿ ಪಡೆದಿತ್ತು. ಚೀನಾ ಜೊತೆ ಸಂಪರ್ಕ ಸಾಧಿಸಿದ್ದಕ್ಕೆ ಪುರಾವೆಯಾಗಿ ಚೀನಾ ಲಿಪಿಯಿರುವ ನಾಣ್ಯ, ಶಾಸನಗಳು ಉತ್ಖನನದ ವೇಳೆ ಪತ್ತೆಯಾಗಿವೆ.

ಪಲ್ಲವರಿಗೂ ಮುನ್ನ ಅಸ್ತಿತ್ವದಲ್ಲಿದ್ದ ಈ ಪಟ್ಟಣ, ಭಾರತ ಮತ್ತು ಚೀನಾ ನಡುವೆ ರೇಷ್ಮೆ ಹಾಗೂ ಸಂಬಾರ ಪದಾರ್ಥಗಳ ವ್ಯಾಪಾರದಲ್ಲಿ ಮುಖ್ಯ ಪಾತ್ರವಹಿಸಿತ್ತು. ಪಲ್ಲವರ ಕಾಲದಲ್ಲೂ ಇದು ಮುಂದುವರಿಯಿತು, ರಕ್ಷಣಾ ಸಹಕಾರ ಒಪ್ಪಂದವೂ ಏರ್ಪಟ್ಟಿತ್ತು ಎಂದು ತಮಿಳು ಲೇಖಕ ಕಾಯಲ್ ಬರಧವಾನ್ ಅವರ ‘ಬೋಧಿ ಧರ್ಮ’ ಕೃತಿ ಉಲ್ಲೇಖಿಸುತ್ತದೆ. ಪಲ್ಲವರ ಕಾಲದಲ್ಲಿ  ಅಸ್ತಿತ್ವಕ್ಕೆ ಬಂದ ಕಾಂಚಿಪುರ ರೇಷ್ಮೆ ಉದ್ದಿಮೆಗೆ ಬೇಕಾದ ಕಚ್ಚಾವಸ್ತು ಚೀನಾದಿಂದ ಆಮದಾಗುತ್ತಿತ್ತು. 

ಚೀನೀ ಯಾತ್ರಿಕ ಹ್ಯೂಯೆನ್‌ತ್ಸಾಂಗ್ 7ನೇ ಶತಮಾನದಲ್ಲಿ ಕಾಂಚಿಪುರಕ್ಕೆ ಭೇಟಿ ನೀಡಿ, ಉಭಯ ದೇಶಗಳ ಸಂಬಂಧವನ್ನು ಗಟ್ಟಿಗೊಳಿಸಿದ್ದ. ಈ ಅವಧಿಯಲ್ಲಿ ಬೌದ್ಧ ಧರ್ಮವು ಚೀನಾಕ್ಕೆ ಪಸರಿಸಿತು ಎಂದು ಇತಿಹಾಸಕಾರರು ಹೇಳುತ್ತಾರೆ.  

ಮಾತುಕತೆಯ ಹೂರಣ

* ಭಾರತ–ಚೀನಾ ನಡುವಿನ ಸಂಬಂಧಗಳನ್ನು ಸುಧಾರಿಸುವುದು ಭೇಟಿಯ ಮುಖ್ಯ ಉದ್ದೇಶ

* ರಾಜಕೀಯ ಸಂಬಂಧ, ವ್ಯಾಪಾರ, ಭಯೋತ್ಪಾದನೆ, ಗಡಿಗಳಲ್ಲಿ ಶಾಂತಿ ಸ್ಥಾಪನೆ

* ವಿಶ್ವಸಂಸ್ಥೆಯ ಸುಧಾರಣೆ, ವಿಶ್ವ ವ್ಯಾಪಾರ ಸಂಘಟನೆ ಎದುರಿಸುತ್ತಿರುವ ಸವಾಲುಗಳು

* ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದದ (ಆರ್‌ಸಿಇಪಿ) ಬಗ್ಗೆ ಚರ್ಚೆ

* ಚೀನಾದಲ್ಲಿ ಭಾರತ ಸರಕುಗಳಿಗೆ ನೇರ ಮಾರುಕಟ್ಟೆ ಕಲ್ಪಿಸುವ ಬೇಡಿಕೆ ಬಗ್ಗೆ ಚರ್ಚೆ

* ಚೀನಾದ ಟೆಲಿಕಾಂ ದೈತ್ಯ ಸಂಸ್ಥೆ ‘ಹುವೈ’ನ 5ಜಿ ಸೇವೆಗೆ ಹಸಿರುನಿಶಾನೆ ತೋರುವಂತೆ ಮೋದಿಗೆ ಷಿ ಒತ್ತಾಯಿಸುವ ಸಾಧ್ಯತೆ. ಭದ್ರತಾ ಕಾರಣಗಳಿಂದ ಅಮೆರಿಕ ಇದನ್ನು ವಿರೋಧಿಸುತ್ತಿದೆ. 

ವಿವಾದಗಳು ಒಂದೆರಡಲ್ಲ...

* ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರವನ್ನು ಭಾರತ ರದ್ದುಪಡಿಸಿದ್ದನ್ನು ಚೀನಾ ಖಂಡಿಸಿತ್ತು. ಇದಕ್ಕೆ ಭಾರತ ಆಕ್ರೋಶ ವ್ಯಕ್ತಪಡಿಸಿತ್ತು. ಕಾಶ್ಮೀರದ ಒಂದು ಭಾಗದ ಮೇಲೆ ಚೀನಾದ ಹಿಡಿತವಿದೆ. ಲಡಾಖ್‌ನ ಗಡಿ ವಿವಾದವೂ ಹಳೆಯದು. ಉಭಯ ದೇಶಗಳು ಸೈನಿಕರು ಈ ಭಾಗದಲ್ಲಿ ಕಣ್ಗಾವಲು ಇಟ್ಟಿದ್ದಾರೆ

* ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೂಲಕ ಹಾದುಹೋಗುವ ಚೀನಾದ ಮಹತ್ವಾಕಾಂಕ್ಷಿ ‘ಒನ್‌ ಬೆಲ್ಟ್, ಒನ್ ರೋಡ್’ ಯೋಜನೆಯನ್ನು ಭಾರತ ಟೀಕಿಸುತ್ತಾ ಬಂದಿದೆ 

* ಅರುಣಾಚಲ ಪ್ರದೇಶ ವಿಚಾರದಲ್ಲೂ ಉಭಯ ದೇಶಗಳ ನಡುವೆ ದಶಕಗಳಷ್ಟು ಹಳೆಯ ಬಿಕ್ಕಟ್ಟು ಇದೆ. 1962ರಲ್ಲಿ ಇದೇ ವಿಚಾರಕ್ಕೆ ಯುದ್ಧವೂ ನಡೆದಿತ್ತು. ತನಗೆ ಸೇರಿರುವ 90 ಸಾವಿರ ಚದರ ಕಿಲೋಮೀಟರ್ ಪ್ರದೇಶ ಭಾರತದ ನಿಯಂತ್ರಣದಲ್ಲಿದೆ ಎಂದು ಚೀನಾ ವಾದಿಸುತ್ತಾ ಬಂದಿದೆ 

* ಭೂತಾನ್‌ನ ದೋಕಲಾದಲ್ಲಿ 2017ರಲ್ಲಿ ಅತಿದೊಡ್ಡ ಸೇನಾ ಬಿಕ್ಕಟ್ಟು ಸೃಷ್ಟಿಯಾಗಿತ್ತು. ವಿವಾದಿತ ಸ್ಥಳದಲ್ಲಿ ಚೀನಾದಿಂದ ರಸ್ತೆ ನಿರ್ಮಾಣವನ್ನು ತಡೆಯಲು ಭಾರತ ಸೇನೆ ಕಳುಹಿಸಿತ್ತು 

* ದಕ್ಷಿಣ ಏಷ್ಯಾದಲ್ಲಿ ಹಿಡಿತ ಸಾಧಿಸಲು ಭಾರತ, ಚೀನಾ ಹವಣಿಸುತ್ತಿವೆ. ಉಭಯ ನಾಯಕರು ಈ ಹಿಂದೆ ಸಾಕಷ್ಟು ಚರ್ಚೆ ನಡೆಸಿದ್ದರೂ ಬದಲಾವಣೆ ಆಗಿದ್ದು ಮಾತ್ರ ಅತ್ಯಲ್ಪ ಎಂಬುದು ವಿಶ್ಲೇಷಕರ ಮಾತು. 

ಮೋದಿ–ಷಿ ಕಾರ್ಯಕ್ರಮ

* ಶುಕ್ರವಾರ ಬೆಳಿಗ್ಗೆ ತಮಿಳುನಾಡು ಸಂಪ್ರದಾಯದ ಪ್ರಕಾರ ಷಿಗೆ ಸ್ವಾಗತ

* ಚೆನ್ನೈನ ‘ಐಟಿಸಿ ಗ್ರ್ಯಾಂಡ್ ಚೋಳ’ ಪಂಚತಾರಾ ಹೋಟೆಲ್‌ಗೆ ತೆರಳುವ ಷಿ 

* ಮಾಮಲ್ಲಪುರಂನಲ್ಲಿ ಸಂಜೆ 5 ಗಂಟೆಗೆ ಷಿ ಅವರನ್ನು ಸ್ವಾಗತಿಸಲಿರುವ ಮೋದಿ

* ಕಲ್ಲಿನ ಸ್ಮಾರಕಗಳನ್ನು ವೀಕ್ಷಿಸಲಿರುವ ಉಭಯ ನಾಯಕರು

* ಅರ್ಜುನನ ಪ್ರಾಯಶ್ಚಿತ್ತ ಸ್ಮಾರಕ, ಶೋರ್ ಟೆಂಪಲ್, ಪಂಚರಥಗಳ ಸ್ಮಾರಕ, ಕೃಷ್ಣನ ಬೆಣ್ಣೆಚೆಂಡು ಸ್ಥಳಗಳಿಗೆ ಭೇಟಿ

* ಬಂಗಾಳ ಕೊಲ್ಲಿಯ ಸುಂದರ ಕಡಲತಡಿಯಲ್ಲಿ ವಿಹಾರ 

* ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲಿರುವ ಉಭಯ ನಾಯಕರು

* ಕಲಾಕ್ಷೇತ್ರ ಪ್ರತಿಷ್ಠಾನದ ಪ್ರಸಿದ್ಧ ಕಲಾವಿದರಿಂದ ಕಥಕ್ಕಳಿ, ಭರತನಾಟ್ಯ ಪ್ರದರ್ಶನ, ಗಾಂಧೀಜಿ ಜೀವನ, ರಾಮಾಯಣ ಬಿಂಬಿಸುವ ನೃತ್ಯ ಕಾರ್ಯಕ್ರಮ

* ಚೆನ್ನೈಗೆ ಷಿ ವಾಪಸ್; ತಾಜ್ ಫಿಶರ್‌ಮನ್ಸ್ ಕೋವ್ ರೆಸಾರ್ಟ್‌ನಲ್ಲಿ ಮೋದಿ ವಾಸ್ತವ್ಯ

* ಶನಿವಾರ ಮಧ್ಯಾಹ್ನ 12ಕ್ಕೆ ಮಾಮಲ್ಲಪುರಂನಲ್ಲಿ ಅನೌಚಪಚಾರಿ ಶೃಂಗಸಭೆ

* ಚೆನ್ನೈ ಮೂಲಕ ನೇಪಾಳದ ಕಠ್ಮಂಡುವಿಗೆ ತೆರಳಲಿರುವ ಷಿ, 

* ದೆಹಲಿಯ ಹೊರಗಡೆ ಷಿ ಅವರಿಗೆ ಮೋದಿ ಔತಣ ನೀಡುತ್ತಿರುವುದು ಇದು ಎರಡನೇ ಬಾರಿ. 2014ರಲ್ಲಿ ತವರು ರಾಜ್ಯ ಗುಜರಾತ್‌ನಲ್ಲಿ ಮೋದಿ–ಷಿ ಭೇಟಿಯಾಗಿದ್ದರು. 

ಚರಿತ್ರೆಯ ಪುಟಗಳಲ್ಲಿ ಮಹಾಬಲಿಪುರಂ...

* ಪಲ್ಲವರ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದ ಪ್ರಾಚೀನ ಬಂದರುನಗರಿ ಮಾಮಲ್ಲಪುರಂನ ಹಿಂದಿನ ಹೆಸರು ಮಹಾಬಲಿಪುರಂ

* ಕಾಂಚಿಪುರವು ಪಲ್ಲವರ ರಾಜಧಾನಿಯಾಗಿದ್ದರೂ, 7–9ನೇ ಶತಮಾನದ ಅವಧಿಯಲ್ಲಿ ಮಾಮಲ್ಲಪುರಂ ಪ್ರಮುಖ ಬಂದರು ಆಗಿತ್ತು. 

* ಯುನೆಸ್ಕೊ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಮಾಮಲ್ಲಪುರಂ, ಚೆನ್ನೈನಿಂದ 50 ಕಿ.ಮೀ ದೂರದಲ್ಲಿದೆ

* ಬಂಗಾಳ ಕೊಲ್ಲಿಯ ಸುಂದರ ಕಡಲಿಗೆ ಅಭಿಮುಖವಾಗಿ ಕಲ್ಲಿನಲ್ಲಿ ಅರಳಿ ನಿಂತಿರುವ ಸ್ಮಾರಕಗಳು ಇಲ್ಲಿನ ಆಕರ್ಷಣೆ

* ಇಲ್ಲಿಗೆ ಭೇಟಿ ನೀಡಿದ್ದ ಯುರೋಪ್‌ನ ಮೊದಲ ಪ್ರವಾಸಿಗ ಮಾರ್ಕೊ ಪೋಲೊ 

ಆಕರ್ಷಣೀಯ ಸ್ಮಾರಕಗಳು

ಕಡಲತಡಿಯ ದೇಗುಲ: ಪಲ್ಲವ ದೊರೆ 2ನೇ ನರಸಿಂಹವರ್ಮನ ಅವಧಿಯಲ್ಲಿ ಕಲ್ಲಿನಲ್ಲಿ ನಿರ್ಮಾಣವಾಗಿರುವ ಶೋರ್ ಟೆಂಪಲ್ ಎಂದು ಕರೆಯುವ ದೇಗುಲ ಯುನೆಸ್ಕೊ ಪಟ್ಟಿಗೆ ಸೇರಿದೆ. ಕ್ರಿ.ಶ. 700–728ರ ಅವಧಿಯಲ್ಲಿ ಇದನ್ನು ಕಟ್ಟಲಾಗಿದ್ದು, ಈ ಸಂಕೀರ್ಣದಲ್ಲಿ ಮೂರು ದೇಗುಲಗಳಿವೆ. ದಕ್ಷಿಣ ಭಾರತದ ಅತಿ ಪುರಾತನ ಶಿಲಾ ಸ್ಮಾರಕ ಎಂಬ ಹೆಗ್ಗಳಿಕೆ ಇದರದ್ದು. 

ಪಂಚರಥಗಳು: ಯುನೆಸ್ಕೊ ಪಟ್ಟಿಯ ಮತ್ತೊಂದು ಅದ್ಭುತ ಈ ಪಂಚರಥಗಳ ಸ್ಮಾರಕ. 1ನೇ ನರಸಿಂಹವರ್ಮನ ಅವಧಿಯಲ್ಲಿ ಈ ಐದು ರಥಗಳನ್ನು ಏಕಶಿಲೆಯಲ್ಲಿ ಕೆತ್ತಲಾಗಿದೆ. 

ಕೃಷ್ಣನ ಬೆಣ್ಣೆಚೆಂಡು:  ಪ್ರವಾಸಿಗರ ಆಕರ್ಷಣೆಯ ತಾಣವಾಗಿರುವ 250 ಟನ್ ತೂದಕ ಬೃಹತ್ ಬಂಡೆಯು ಇಳಿಜಾರಿನ ಶಿಲಾಪದರದ ಮೇಲೆ ನೆಲೆನಿಂತಿದೆ. ರಾಜ ನರಸಿಂಹವರ್ಮನು ಇದನ್ನು ಸ್ಥಳಾಂತರಿಸಲು ಯತ್ನಿಸಿ ವಿಫಲವಾಗಿದ್ದ ಎಂದು ಇತಿಹಾಸ ಹೇಳುತ್ತದೆ.  

ಮಾಮಲ್ಲಪುರಂಗೆ ಹೊಸ ಕಳೆ

25 ಸಾವಿರ ಜನಸಂಖ್ಯೆಯ ಮಾಮಲ್ಲಪುರಂನ ಜನರು ತಮ್ಮ ಜೀವನಮಾನದಲ್ಲಿ ನೋಡಿರದಷ್ಟು ಅಭಿವೃದ್ಧಿ ಕೆಲಸಗಳು ಕಳೆದ ಒಂದು ತಿಂಗಳ ಅವಧಿಯಲ್ಲಿ ನಡೆದಿವೆ. ಹೊಸ ರಸ್ತೆಗಳು, ಹೆದ್ದಾರಿಯ ಎರಡೂ ಬದಿಗಳಲ್ಲಿ ಹುಲ್ಲುಹಾಸು, ತಾಜ್ಯ ವಿಲೇವಾರಿ, ರಸ್ತೆಬದಿಯ ಅಂಗಡಿಗಳ ತೆರವು, ಪ್ರಮುಖ ಕಟ್ಟಡಗಳಿಗೆ ಬಣ್ಣ, ಸ್ಮಾರಕಗಳಿಗೆ ಹೊಸ ನೆಲಹಾಸು ಹಾಗೂ ಎಲ್‌ಇಡಿ ದೀಪಗಳನ್ನು ಅಳವಡಿಸಿದ್ದು, ಪಟ್ಟಣ ಸಿಂಗಾರಗೊಂಡಿದೆ. 

ಮಾಮಲ್ಲಪುರಂ ಸುತ್ತಲಿನ 20 ಕಿಲೋಮೀಟರ್ ಅಂತರದಲ್ಲಿ ಜಲಕ್ರೀಡೆಗಳನ್ನು ನಿಷೇಧಿಸಲಾಗಿದ್ದು, ಭದ್ರತಾ ಪಡೆಗಳು ಪಟ್ಟಣವನ್ನು ವಶಕ್ಕೆ ಪಡೆದಿವೆ. ಪ್ರವಾಸಿಗರಿಗೆ ಸ್ಮಾರಕಗಳ ಭೇಟಿ ನಿಷೇಧಿಸಲಾಗಿದೆ. 

ಪಾಕ್–ಚೀನಾ ಬಂಧ ಬಂಡೆಯಷ್ಟು ಗಟ್ಟಿ: ಷಿ

ಬೀಜಿಂಗ್: ಅಂತರರಾಷ್ಟ್ರೀಯ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ಏನೇ ಬದಲಾವಣೆಗಳು ಎದುರಾದರೂ ಪಾಕಿಸ್ತಾನ ಹಾಗೂ ಚೀನಾ ನಡುವಿನ ಸಂಬಂಧ ಬಂಡೆಯಂತೆ ಗಟ್ಟಿಯಾಗಿದ್ದು, ಸ್ನೇಹವನ್ನು ಮುರಿಯಲಾರದು ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಬುಧವಾರ ಹೇಳಿದ್ದಾರೆ.

ಭಾರತಕ್ಕೆ ಬರುವ ಎರಡು ದಿನಗಳ ಮುನ್ನ ಪಾಕ್ ಅಧ್ಯಕ್ಷ ಇಮ್ರಾನ್ ಖಾನ್ ಜತೆ ಬೀಜಿಂಗ್‌ನಲ್ಲಿ ಷಿ ನಡೆಸಿದ ಮಾತುಕತೆ ಮಹತ್ವ ಪಡೆದಿದೆ. ಇಮ್ರಾನ್ ಅಧಿಕಾರ ವಹಿಸಿಕೊಂಡ ಬಳಿಕ ಷಿ ಅವರನ್ನು ಭೇಟಿಯಾಗಿದ್ದು ಇದು ಮೂರನೇ ಬಾರಿ. 

Post Comments (+)