ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರಾ ಜಲಾಶಯದಿಂದ ನದಿಗೆ 1 ಲಕ್ಷ ಕ್ಯುಸೆಕ್‌ ನೀರು

Last Updated 6 ಸೆಪ್ಟೆಂಬರ್ 2019, 9:12 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಾಗಿರುವ ಕಾರಣ ಶುಕ್ರವಾರ ಬೆಳಿಗ್ಗೆಯಿಂದ ನದಿಗೆ 1 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹರಿಸಲಾಗುತ್ತಿದ್ದು, ನದಿ ತೀರದ ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ತಿಳಿಸಿದೆ.

69,700 ಕ್ಯುಸೆಕ್‌ ಒಳಹರಿವು ಇದ್ದರೆ, 1,00,100 ಕ್ಯುಸೆಕ್‌ ಹೊರಹರಿವು– ಈ ಅಂಶ ಸೇರಿಸಿಕೊಳ್ಳಲು ಮನವಿ
ಒಟ್ಟು 33 ಕ್ರಸ್ಟ್‌ ಗೇಟ್‌ಗಳ ಪೈಕಿ 28 ಗೇಟ್‌ಗಳನ್ನು ತೆರೆದು ನದಿಗೆ 1,00,100 ಕ್ಯುಸೆಕ್‌ ನೀರು ಬಿಡಲಾಗುತ್ತಿದೆ. 11,200 ಕ್ಯುಸೆಕ್‌ ನೀರು ಎಡದಂಡೆ, ಬಲದಂಡೆ ಹಾಗೂ ವಿಜಯನಗರ ಕಾಲದ ಉಪ ಕಾಲುವೆಗಳಿಗೆ ಹರಿಸಲಾಗುತ್ತಿದೆ. 69, 986 ಕ್ಯುಸೆಕ್‌ ಒಳಹರಿವು ಇದೆ. ಸಂಜೆ ವೇಳೆಗೆ ಎಲ್ಲ ಕ್ರಸ್ಟ್‌ಗೇಟ್‌ ತೆರೆದು ಒಂದೂವರೆ ಲಕ್ಷ ಕ್ಯುಸೆಕ್‌ಗಿಂತ ಅಧಿಕ ನೀರು ಹೊರಬಿಡುವ ಸಾಧ್ಯತೆ ಇದೆ.

ನದಿ ತೀರದ ಗ್ರಾಮಗಳಾದ ತಾಲ್ಲೂಕಿನ ಹಂಪಿ, ವೆಂಕಟಾಪುರ ಹಾಗೂ ಬುಕ್ಕಸಾಗರದಲ್ಲಿ ಡಂಗುರ ಸಾರಿ, ನದಿ ಪಾತ್ರದ ಜನ ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ. ‘ಒಂದು ಲಕ್ಷ ಕ್ಯುಸೆಕ್‌ಗೂ ಹೆಚ್ಚು ನೀರು ನದಿಗೆ ಹರಿಸಲಾಗುವುದು ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ತಿಳಿಸಿದೆ. ಹಾಗಾಗಿ ನದಿ ಅಂಚಿನ ಗ್ರಾಮಗಳ ಜನರು ಎಚ್ಚರಿಕೆಯಿಂದ ಇರಬೇಕು. ಜಾನುವಾರುಗಳೊಂದಿಗೆ ನದಿ ತೀರಕ್ಕೆ ಹೋಗದಂತೆ ತಿಳಿಸಲಾಗಿದೆ’ ಎಂದು ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಶಿವಮೊಗ್ಗದ ತುಂಗಾ, ಭದ್ರಾ ಮತ್ತು ಹೂವಿನಹಡಗಲಿಯ ಸಿಂಗಟಾಲೂರು ಬ್ಯಾರೇಜ್‌ನಿಂದ ಅಪಾರ ಪ್ರಮಾಣದ ನೀರು ತುಂಗಭದ್ರಾ ಅಣೆಕಟ್ಟೆಗೆ ಹರಿದು ಬರುತ್ತಿದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಕೂಡ ಆಗುತ್ತಿದೆ. ಒಳಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅದನ್ನು ನೋಡಿಕೊಂಡು ನದಿಗೆ ಎಷ್ಟು ಪ್ರಮಾಣದಲ್ಲಿ ನೀರು ಹರಿಸಬೇಕು ಎನ್ನುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ತುಂಗಭದ್ರಾ ಮಂಡಳಿ ಅಧಿಕಾರಿ ತಿಳಿಸಿದ್ದಾರೆ.

ಒಟ್ಟು 133 ಟಿ.ಎಂ.ಸಿ. ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 100.855 ಟಿ.ಎಂ.ಸಿ. ಅಡಿ ನೀರು ಸಂಗ್ರಹವಾಗಿದ್ದು, 32 ಟಿ.ಎಂ.ಸಿ. ಅಡಿಗೂ ಹೆಚ್ಚು ಹೂಳು ತುಂಬಿಕೊಂಡಿದೆ. ಒಳಹರಿವು ತಗ್ಗಿದ್ದರಿಂದ ಆ. 28ರಿಂದ ಕ್ರಸ್ಟ್‌ಗೇಟ್‌ಗಳಿಂದ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT