ಗುರುವಾರ , ಫೆಬ್ರವರಿ 27, 2020
19 °C
10 ವರ್ಷ ಸೇವೆ ಸಲ್ಲಿಸಿದವರಿಗೆ ಕಡ್ಡಾಯ ವರ್ಗಾವಣೆ

ಹತ್ತು ವರ್ಷ ಸೇವೆ: ಶಿಕ್ಷಕರಿಗೆ ಕಡ್ಡಾಯ ವರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರ ಪ್ರದೇಶದ ಶಾಲೆಗಳಲ್ಲಿ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಬೀಡುಬಿಟ್ಟಿದ್ದ ಶಿಕ್ಷಕರು ಹಳ್ಳಿಗಳತ್ತ ತೆರಳುವುದು ಅನಿವಾರ್ಯವಾಗಲಿದೆ.

ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಕಡ್ಡಾಯ ವರ್ಗಾವಣೆ ನಿಯಮವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಗಳು ವಜಾಗೊಂಡಿವೆ. ಅದರ ಬೆನ್ನಲ್ಲೇ, ವರ್ಗಾವಣೆ ಪ್ರಕ್ರಿಯೆಗೆ ಸಿದ್ಧತೆ ನಡೆಸಿರುವ ಇಲಾಖೆ ಇದೇ 6ರಂದು ವೇಳಾಪಟ್ಟಿ ಬಿಡುಗಡೆ ಮಾಡಲಿದೆ.

ವರ್ಗಾವಣೆ ಕೋರಿ ಇಲ್ಲಿಯವರೆಗೆ 55,979 ಅರ್ಜಿಗಳು ಸಲ್ಲಿಕೆಯಾಗಿವೆ. ನಗರ ಪ್ರದೇಶಗಳಲ್ಲಿ ಹತ್ತು ವರ್ಷ (2018ರ ಫೆಬ್ರುವರಿ 28ಕ್ಕೆ) ಪೂರ್ಣಗೊಂಡ ಶಿಕ್ಷಕರನ್ನು ಎತ್ತಂಗಡಿ ಮಾಡಲಾಗುತ್ತದೆ. 

ಈ ಬಾರಿ ವರ್ಗಾವಣೆ ಮಿತಿಯನ್ನು ಶೇ 18ಕ್ಕೆ ನಿಗದಿಪಡಿಸಲಾಗಿದೆ. ಬಹಳ ವರ್ಷಗಳಿಂದ ಕಾಯುತ್ತಿದ್ದ ಶಿಕ್ಷಕರು ತಾವು ಬಯಸಿದ ಸ್ಥಳಗಳಿಗೆ ವರ್ಗಾವಣೆ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

‘ಹೆಚ್ಚುವರಿ ಶಿಕ್ಷಕರ ಮರುನಿಯೋಜನೆ ಪ್ರಕ್ರಿಯೆಯನ್ನು ಮೊದಲು ನಡೆಸಲಾಗುವುದು. ನಂತರ ಕೋರಿಕೆ ವರ್ಗಾವಣೆ, ಕಡ್ಡಾಯ ವರ್ಗಾವಣೆ ಹಾಗೂ ಕೊನೆಯಲ್ಲಿ ಪರಸ್ಪರ ವರ್ಗಾವಣೆ ಪ್ರಕ್ರಿಯೆ ನಡೆಯುತ್ತದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಸಿ.ಜಾಫರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಖಾಲಿಯಿರುವ ಹುದ್ದೆಗಳ ಮಾಹಿತಿಭರ್ತಿ ಮಾಡುವ ವಿಚಾರದಲ್ಲಿ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ತರುತ್ತಿದ್ದೇವೆ. ಖಾಲಿಯಿರುವ ಹುದ್ದೆಗಳ ಬಗ್ಗೆ ಡಿಡಿಪಿಐ ಒಮ್ಮೆ ಮಾಹಿತಿ ದಾಖಲಿಸಿದರೆ, ಕೌನ್ಸೆಲಿಂಗ್‌ ಮುಗಿಯುವವರೆಗೆ ಅದರಲ್ಲಿ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ. ಎಲ್ಲವೂ ಕೇಂದ್ರಿಕೃತ ವ್ಯವಸ್ಥೆಯ ಮೂಲಕ ನಡೆಯುತ್ತದೆ’ ಎಂದು ವಿವರಿಸಿದರು.

ಪತಿ–ಪತ್ನಿ ಪ್ರಕರಣ: ದೃಢೀಕರಣ ಬೇಕಿಲ್ಲ

ಪತಿ–ಪತ್ನಿ ವರ್ಗಾವಣೆ ಪ್ರಕ್ರಿಯೆಯಲ್ಲಿ ಇಲಾಖೆ ಸುಧಾರಣೆ ತಂದಿದೆ. ವರ್ಗಾವಣೆಗೆ ಅರ್ಜಿ ಸಲ್ಲಿಸಿದವರ ಪತಿ ಅಥವಾ ಪತ್ನಿ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ, ಅವರ ಕೆಲಸದ ದೃಢೀಕರಣ ಪತ್ರಕ್ಕಾಗಿ ಶಿಕ್ಷಕರು ಇನ್ನು ಅಲೆದಾಡುವ ಅಗತ್ಯವಿಲ್ಲ ಎಂದು ಜಾಫರ್‌ ಹೇಳಿದರು.

* ಶಿಕ್ಷಕರ ಮಾಹಿತಿಯ ದತ್ತಾಂಶ ಇರುವುದರಿಂದ ತಪ್ಪು ಮಾಹಿತಿ ನೀಡಿ, ಕೌನ್ಸೆಲಿಂಗ್‌ಗೆ ಹಾಜರಾಗಲು ಸಾಧ್ಯವಿಲ್ಲ. ಮಾಹಿತಿಗಳನ್ನು ಪರಿಷ್ಕರಿಸುವ ಕೆಲಸ ನಡೆಯುತ್ತಿದೆ
-ಪಿ.ಸಿ. ಜಾಫರ್, ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)