7
ಪ್ರತಿವರ್ಷ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ

ಸಾವಿರ ಮಕ್ಕಳು ಓದುವ ಸರ್ಕಾರಿ ಶಾಲೆ

Published:
Updated:

ಶಿವಮೊಗ್ಗ: ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದ್ದರೆ, ಈ ಶಾಲೆಯಲ್ಲಿ ಮಾತ್ರ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇಡೀ ರಾಜ್ಯದಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಹಿರಿಮೆಗೂ ಈ ಸರ್ಕಾರಿ ಶಾಲೆ ಪಾತ್ರವಾಗಿದೆ.

ಮಕ್ಕಳ ಕೊರತೆಯಿಂದ ರಾಜ್ಯದಲ್ಲಿ ಈಗಾಗಲೇ ಹಲವು ಸರ್ಕಾರಿ ಶಾಲೆಗಳುಬಾಗಿಲು ಮುಚ್ಚಿವೆ. ಆದರೆ, ಶಿವಮೊಗ್ಗದ ದುರ್ಗಿಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದಕ್ಕೆ ತದ್ವಿರುದ್ಧ. ಸುಮಾರು ಒಂದು ಸಾವಿರ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ರಾಜ್ಯದ ಸರ್ಕಾರಿ ಶಾಲೆಯೊಂದರಲ್ಲಿ ಓದುತ್ತಿರುವ ಮಕ್ಕಳ ಗರಿಷ್ಠ ಸಂಖ್ಯೆ ಇದಾಗಿದೆ.

ಏಕೈಕ ಇಂಗ್ಲಿಷ್ ಮಾಧ್ಯಮ ಶಾಲೆ: ಇಷ್ಟೊಂದು ಸಂಖ್ಯೆಯ ಮಕ್ಕಳು ಈ ಶಾಲೆಗೆ ಸೇರಲು ಕಾರಣ, 1ರಿಂದ 7ನೇ ತರಗತಿವರೆಗೆ ಇಂಗ್ಲಿಷ್‌ ಮಾಧ್ಯಮ ಇರುವ ಏಕೈಕ ಸರ್ಕಾರಿ ಶಾಲೆ ಇದು ಎಂಬುದು. ಉಳಿದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮವಿದ್ದರೂ 6ರಿಂದ 7ನೇ ತರಗತಿವರೆಗೆ ಮಾತ್ರವಷ್ಟೆ. ಹಾಗಾಗಿ ಪೋಷಕರು ಸಾಲಿನಲ್ಲಿ ನಿಂತು ತಮ್ಮ ಮಕ್ಕಳನ್ನು ಈ ಶಾಲೆಗೆ ದಾಖಲಿಸುತ್ತಿದ್ದಾರೆ.

ಏರುತ್ತಲೇ ಇದೆ ಸಂಖ್ಯೆ: ಎಷ್ಟೋ ಮಂದಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಬಿಡಿಸಿ ಈ ಶಾಲೆಗೆ ದಾಖಲು ಮಾಡುತ್ತಿದ್ದಾರೆ. ಪರಿಣಾಮ 2013–14ರಲ್ಲಿ 751, 2014–15ರಲ್ಲಿ 811, 2016–17ರಲ್ಲಿ 911, 2016–17(ಆ ಸಮಯದಲ್ಲಿ 1ರಿಂದ 8ನೇ ತರಗತಿ ಇತ್ತು) 961, 2017–18ರಲ್ಲಿ 922 ಹಾಗೂ ಪ್ರಸ್ತುತ 2018–19ನೇ ಸಾಲಿನಲ್ಲಿ ಈವರೆಗೆ 960 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಈ ಸಂಖ್ಯೆ ಸಾವಿರ ತಲುಪುವ ಸಾಧ್ಯತೆಯಿದೆ ಎನ್ನುತ್ತಾರೆ ಇಲ್ಲಿನ ಶಿಕ್ಷಕರು.

ಪ್ರಸ್ತುತ 24 ಶಿಕ್ಷಕರು ಈ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ಓದಿರುವ ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ ದೊರೆಯುತ್ತಿದೆ.

ಸ್ಥಳಾಭಾವ:‌ ಮಕ್ಕಳ ಸಂಖ್ಯೆ ಅಧಿಕವಿರುವ ಕಾರಣ 1 ಮತ್ತು 2ನೇ ತರಗತಿಗೆ ತಲಾ 2, 3ರಿಂದ 5ರವರೆಗೆ ತಲಾ 3 ಹಾಗೂ 6ಮತ್ತು 7ನೇ ತರಗತಿಗೆ ತಲಾ 4 ವಿಭಾಗಗಳನ್ನು ತೆರೆಯಲಾಗಿದೆ. ಇಷ್ಟಾದರೂ ಶಾಲೆಯು ಕೊಠಡಿಗಳ ಸಮಸ್ಯೆ ಎದುರಿಸುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಪಾಠ ಕೇಳುವ ಪರಿಸ್ಥಿತಿಯಿದೆ.

ದೀರ್ಘ ಇತಿಹಾಸ: ಈ ಶಾಲೆ ಶತಮಾನದ ಹೊಸ್ತಿಲಿನಲ್ಲಿದೆ. 1922ರಲ್ಲಿ ಕನ್ನಡ ಮಾಧ್ಯಮ ಶಾಲೆಯಾಗಿ ಕೇವಲ ಬೆರಳೆಣಿಕೆ ವಿದ್ಯಾರ್ಥಿಗಳಿಂದ ಆರಂಭವಾದ ಈ ಶಾಲೆ ಇದೀಗ ಮೈಲಿಗಲ್ಲು ಸ್ಥಾಪಿಸುವ ಹಾದಿಯಲ್ಲಿದೆ. ಈ ಶಾಲೆಗೆ 1979ರಲ್ಲಿ ಇಂಗ್ಲಿಷ್‌ ಮಾಧ್ಯಮ ಮಾನ್ಯತೆ ದೊರೆಯಿತು.

2012–13ರಲ್ಲಿ ಈ ಶಾಲೆ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಟ್ಟಿದೆ. ಇಲ್ಲಿ ಈ ಹಿಂದೆ ಓದಿರುವ ನೂರಾರು ವಿದ್ಯಾರ್ಥಿಗಳು ರಾಜ್ಯ, ದೇಶ ಹಾಗೂ ಹೊರದೇಶಗಳಲ್ಲಿ ಉತ್ತಮ ಸ್ಥಾನಗಳಲ್ಲಿದ್ದಾರೆ. 

**
ಇಲಾಖೆಯ ಎಲ್ಲಾ ಸೌಲಭ್ಯಗಳನ್ನು ಮಕ್ಕಳಿಗೆ ತಲುಪಿಸುತ್ತಿದ್ದೇವೆ. ಮಕ್ಕಳು ಮತ್ತು ಪೋಷಕರು ನಮ್ಮ ಶಾಲೆಯತ್ತ ಆಕರ್ಷಿತರಾಗುತ್ತಿದ್ದಾರೆ
- ಪಿ.ಎಸ್. ದೀಪು, ಪ್ರಭಾರ ಮುಖ್ಯಶಿಕ್ಷಕ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !