ಭಾನುವಾರ, ಜೂಲೈ 12, 2020
22 °C
‘ಕನ್ನಡ ಕಾವಲುಗಾರರು’ ತಮ್ಮ ಮಕ್ಕಳನ್ನು ಇಂಗ್ಲಿಷ್‌ ಶಾಲೆಗಳಲ್ಲೇ ಕಲಿಸುತ್ತಾರೆ: ಎಚ್‌ಡಿಕೆ

ಸಾವಿರ ಸರ್ಕಾರಿ ಶಾಲೆಗಳಿಗೆ ಇಂಗ್ಲಿಷ್‌ ಶಿಕ್ಷಕರ ಭಾಗ್ಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಒಂದು ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಇಂಗ್ಲಿಷ್‌ ಕೋಚಿಂಗ್‌ ನೀಡಲು ಶೀಘ್ರವೇ ಇಂಗ್ಲಿಷ್‌ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ವಿಧಾನಸೌಧದಲ್ಲಿ ಬುಧವಾರ ನಡೆದ ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ ಅವರು ಈ ವಿಷಯ ಹೇಳಿದರು.

ಈ ಉದ್ದೇಶಕ್ಕಾಗಿ 1,000 ಪರಿಣಿತ ಇಂಗ್ಲಿಷ್‌ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

‘ಬಜೆಟ್‌ನಲ್ಲಿ ಈ ವಿಷಯ ಪ್ರಸ್ತಾಪಿದಾಗ, ಕನ್ನಡದ ಕಾವಲುಗಾರರು ಎಂದು ಹೇಳಿಕೊಳ್ಳುವವರ ದೊಡ್ಡ ದಂಡೇ ನನ್ನ ಬಳಿಗೆ ಬಂದಿತ್ತು. ರೈತರು, ಬಡವರು ಮತ್ತು ಕೆಳ ವರ್ಗದ ಜನ ಇಂಗ್ಲಿಷ್‌ ಕಲಿಯುವುದು ಇವರಿಗೆ ಬೇಕಿಲ್ಲ. ಆದ್ದರಿಂದ, ನಮ್ಮ ಪ್ರಯತ್ನ ವಿರೋಧಿಸುತ್ತಿದ್ದಾರೆ. ಇವರಲ್ಲಿ ಶೇ 90 ಕ್ಕೂ ಹೆಚ್ಚು ಜನ ತಮ್ಮ ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಕಳಿಸುತ್ತಿದ್ದಾರೆ. ಇಂತಹ ವಿರೋಧಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದರು.

‘ಇಂಗ್ಲಿಷ್‌ ಭಾಷೆ ಗೊತ್ತಿದ್ದರೂ ಸಂಭಾಷಣೆ ನಡೆಸುವಾಗ ವ್ಯಾಕರಣ ತಪ್ಪಾಗುತ್ತದೆ ಎಂದುಕೊಂಡು ಧೈರ್ಯದಿಂದ ಇಂಗ್ಲಿಷ್‌ನಲ್ಲಿ ಮಾತನಾಡಲು ನನಗೇ ಹಿಂಜರಿಕೆ ಆಗುತ್ತದೆ. ಇನ್ನು ಬೇರೆಯವರ ಕಥೆ ಏನು. ನಾವು ಎದುರಿಸುವ ಸಮಸ್ಯೆ ಮಕ್ಕಳಿಗೆ ಆಗಬಾರದು. ಧೈರ್ಯದಿಂದ ಇಂಗ್ಲಿಷ್‌ನಲ್ಲಿ ಮಾತನಾಡಲಿ ಎಂಬುದು ನನ್ನ ಕಳಕಳಿ’ ಎಂದು ಹೇಳಿದರು.

‘ದೆಹಲಿ ಮಾದರಿಯಲ್ಲಿ ನಮ್ಮ ರಾಜ್ಯದಿಂದಲೂ ವಿದೇಶಗಳಿಗೆ ತರಬೇತಿ ನೀಡಲು ಕಳುಹಿಸುವ ಚಿಂತನೆ ಇದೆ. ಅಲ್ಲದೆ, ಸರ್ಕಾರಿ ಶಾಲಾ ಶಿಕ್ಷಕರಿಗೆ ಬೋಧನಾ ಕೌಶಲ ಹೆಚ್ಚಿಸುವ ಉದ್ದೇಶದಿಂದ ತಿಂಗಳಿನಲ್ಲಿ ಕೆಲವು ದಿನಗಳು ತಜ್ಞರಿಂದ ತರಬೇತಿ ಕೊಡಿಸುವ ಉದ್ದೇಶ ಇದೆ. ಇದರಿಂದ ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ತರಬಹುದು’ ಎಂದು ಕುಮಾರಸ್ವಾಮಿ ತಿಳಿಸಿದರು.

‘ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಖಾಸಗಿ ಶಾಲೆಗಳ ಗುಣಮಟ್ಟಕ್ಕೆ ಸಮಾನವಾಗಿ ಏರಿಸಬೇಕು ಎಂಬುದು ಸರ್ಕಾರದ ಉದ್ದೇಶ. ಬಡವರಿಗೆ ಒಂದು ರೀತಿಯ ಶಾಲೆ ಮತ್ತು ಉಳ್ಳವರಿಗೆ ಬೇರೆ ರೀತಿಯ ಶಾಲೆ ಎಂಬ ಭಾವನೆ ಹೋಗಬೇಕು. ಈಗ ಉತ್ತಮ ಶಿಕ್ಷಣ ಕೇವಲ ಆರ್ಥಿಕವಾಗಿ ಮುಂದುವರಿದವರಿಗೆ ಮಾತ್ರ ಸಿಗುತ್ತಿದೆ’ ಎಂದರು.

ಖಾಸಗಿ ಶಾಲೆಯವರು ಸಾಲ ಮಾಡಿ ದೊಡ್ಡ ಕಟ್ಟಡ ಕಟ್ಟಿ ಶಾಲೆ ತೆರೆಯುತ್ತಾರೆ. ಅವರ ಹಣಕಾಸಿನ ಸ್ಥಿತಿಗೆ ಅನುಗುಣವಾಗಿ ಶುಲ್ಕ ನಿಗದಿ ಮಾಡುತ್ತಾರೆ. ನಾವು ಖಾಸಗಿ ಶಾಲೆಗಳನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಆದರೆ, ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಬೇಕಾಗಿದೆ ಎಂದು ವಿವರಿಸಿದರು.

ಶಾಲಾ ಅಭಿವೃದ್ಧಿಗೆ ಸಾವಿರ ಕೋಟಿ: ಸರ್ಕಾರಿ ಶಾಲೆಗಳ ಕೊಠಡಿ ಮತ್ತು ಕಟ್ಟಡಗಳ ರಿಪೇರಿಗಾಗಿ ₹ 1,000 ಕೋಟಿ ಖರ್ಚು ಮಾಡಲು ತೀರ್ಮಾನಿಸಿದೆ. ಮೂಲಸೌಕರ್ಯಗಳ ಅಭಿವೃದ್ಧಿಗೆ ಇಷ್ಟು ದೊಡ್ಡ ಮೊತ್ತದ ಹಣ ವೆಚ್ಚ ಮಾಡುತ್ತಿರುವುದು ಇದೇ ಮೊದಲು ಎಂದು ಮುಖ್ಯಮಂತ್ರಿ ವಿವರಿಸಿದರು. ಇದೇ ಸಂದರ್ಭದಲ್ಲಿ 75 ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು