ಜೈಲಿನಲ್ಲೇ ಡಿಗ್ರಿ ಮಾಡಿದ ಮಾಜಿ ಸೈನಿಕ!

7
ಮಹಿಳಾ ಕೈದಿಗಳನ್ನು ಬಿಡುಗಡೆ ಮಾಡದಿದ್ದಕ್ಕೆ ಆಕ್ರೋಶ

ಜೈಲಿನಲ್ಲೇ ಡಿಗ್ರಿ ಮಾಡಿದ ಮಾಜಿ ಸೈನಿಕ!

Published:
Updated:
Deccan Herald

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕುಶಾಲನಗರದ ಗಣೇಶ್ ಮಾಮಾಜಿ, ಜೈಲಿನಲ್ಲಿದ್ದುಕೊಂಡೇ ಪದವಿ ಉತ್ತೀರ್ಣರಾಗಿದ್ದಾರೆ. ಯೋಗ ಹಾಗೂ ವ್ಯಾಯಾಮದಲ್ಲಿ ಪರಿಣಿತರಾಗಿ ಕೈದಿಗಳಿಗೂ ಕಲಿಸಿಕೊಟ್ಟಿದ್ದಾರೆ. ಅವರ ಸನ್ನಡತೆಯನ್ನು ಪರಿಗಣಿಸಿ ಇದೀಗ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 79 ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲಾಯಿತು. ಅದರಲ್ಲಿ ಮಾಜಿ ಸೈನಿಕ ಗಣೇಶ್‌ ಕೂಡ ಒಬ್ಬರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಗಣೇಶ್, ‘ನನಗೀಗ 62 ವರ್ಷ. ಎಸ್ಸೆಸ್ಸೆಲ್ಸಿ ಮುಗಿಯುತ್ತಿದ್ದಂತೆ ಸೇನೆ ಸೇರಿ ಹವಾಲ್ದಾರ್‌ನಾದೆ. ಸೇವಾವಧಿ ಮುಕ್ತಾಯವಾಗಿದ್ದರಿಂದ 1993ರಲ್ಲಿ ವಾಪಸ್‌ ಊರಿಗೆ ಬಂದೆ. ಸ್ಥಳೀಯ ಚುನಾವಣೆಗೆ ಸ್ಪರ್ಧಿಸಿ ತಾಲ್ಲೂಕು ಪಂಚಾಯಿತಿ ಸದಸ್ಯನೂ ಆದೆ. ಕೋಪದ ಕೈಗೆ ಬುದ್ಧಿ ಕೊಟ್ಟು 14 ವರ್ಷ ಕುಟುಂಬದಿಂದ ದೂರವಾಗಿ ಜೈಲುವಾಸ ಅನುಭವಿಸಿದೆ’ ಎಂದರು. 

‘ದೇಶಕ್ಕಾಗಿ ಹೋರಾಡಿದ್ದ ನಾನು, ಜೈಲು ಸೇರಿದಾಗಿನಿಂದ ಮಾನಸಿಕವಾಗಿ ಕುಗ್ಗಿದ್ದೆ. ನಂತರ, ಓದಿನತ್ತ ಗಮನ ಹರಿಸಿದೆ. ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು)ದಲ್ಲಿ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ವಿಷಯದಲ್ಲಿ ಪದವಿ ಪಡೆದೆ. ಈಗ ಪರಿವರ್ತನೆಯಾಗಿ ಹೊರಗೆ ಬಂದಿದ್ದೇನೆ. ಯಾರೊಬ್ಬರೂ ಕೋಪದಲ್ಲಿ ಅಪರಾಧ ಎಸಗಬಾರದು. ತಾಳ್ಮೆಯಿಂದ ವರ್ತಿಸಬೇಕು’ ಎಂದು ಹೇಳಿದರು.

ಇನ್ನೊಬ್ಬ ಕೈದಿ ವಸಂತ್‌ಕುಮಾರ್, ‘ಶಿಕ್ಷೆಯ ಅವಧಿಯಲ್ಲೇ ಸಿನಿಮಾ ಕಥೆ ಹಾಗೂ ಸಂಭಾಷಣೆ ಬರೆದಿಟ್ಟುಕೊಂಡಿದ್ದೇನೆ. ಈಗ ಬಿಡುಗಡೆಯಾಗಿದ್ದು, ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲಿದ್ದೇನೆ’ ಎಂದರು.

ಹೆಸರು ಹೇಳಲಿಚ್ಛಿಸದ ಚಿತ್ರದುರ್ಗದ ಕೈದಿಯೊಬ್ಬರು, ‘ಹಳೇ ವೈಷಮ್ಯದಿಂದಾಗಿ ಕೋಪದಲ್ಲಿ ಒಂದೇ ಕುಟುಂಬದ ಮೂವರನ್ನು ಕುಡುಗೋಲಿನಿಂದ ಹೊಡೆದು ಕೊಂದಿದ್ದೆ. ಜೈಲು, ಸಾಕಷ್ಟು ಪಾಠ ಕಲಿಸಿದೆ. ಈಗ ಕೋಪವಿಲ್ಲ’ ಎಂದರು. 

ಜೈಲಿನಲ್ಲಿ 14 ಸಾವಿರ ಕೈದಿಗಳು: ‘ರಾಜ್ಯದ ಕಾರಾಗೃಹಗಳಲ್ಲಿ ಸುಮಾರು 14 ಸಾವಿರ ಕೈದಿಗಳಿದ್ದಾರೆ. ಕೆಲವರು ಕ್ಷಣದಲ್ಲಾದ ತಪ್ಪಿನಿಂದ ಜೈಲಿಗೆ ಬಂದಿದ್ದಾರೆ. ಇಲ್ಲಿ ತಪ್ಪಿನ ಅರಿವು ಅವರಿಗಾಗಿದೆ. ಅಂಥ ಕೈದಿಗಳ ನಡವಳಿಕೆ ಆಧರಿಸಿ ಬಿಡುಗಡೆ ಮಾಡಿ, ಸಮಾಜದಲ್ಲಿ ಬದುಕಲು ಮತ್ತೊಂದು ಅವಕಾಶವನ್ನು ರಾಜ್ಯ ಸರ್ಕಾರ ಮಾಡಿಕೊಡುತ್ತಿದೆ’ ಎಂದು ಗೃಹ ಸಚಿವ ಜಿ.‍ಪರಮೇಶ್ವರ ಹೇಳಿದರು.

ಮಹಿಳಾ ಕೈದಿಗಳ ಆಕ್ರೋಶ: ಈ ಬಾರಿ 79 ಪುರುಷರನ್ನು ಮಾತ್ರ ಬಿಡುಗಡೆ ಮಾಡಲಾಗಿದ್ದು, ಯಾವೊಬ್ಬ ಮಹಿಳಾ ಕೈದಿಗೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಅದಕ್ಕೆ ಆಕ್ರೋಶಗೊಂಡಿರುವ ಅರ್ಹ ಮಹಿಳಾ ಕೈದಿಗಳು, ಜೈಲಿನಲ್ಲೇ ಪರಮೇಶ್ವರ್‌ ಅವರನ್ನು ತಡೆದು ಪ್ರಶ್ನಿಸಿದರು.

ಜೈಲಿನ ಪ್ರವೇಶ ದ್ವಾರದಲ್ಲಿ ಪರಮೇಶ್ವರ ಬಳಿ ಬಂದಿದ್ದ ಮೂವರು ಮಹಿಳಾ ಕೈದಿಗಳು, ಬಿಡುಗಡೆ ಮಾಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಮಧ್ಯಪ್ರವೇಶಿಸಿದ ಅಧಿಕಾರಿಗಳು, ಮಹಿಳೆಯರನ್ನು ಸಮಾಧಾನಪಡಿಸಿದರು. ಪರಮೇಶ್ವರ, ‘ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದರು.

48 ಕೈದಿಗಳ ಬಿಡುಗಡೆಗೆ ಶಿಫಾರಸು

‘ಸದ್ಯ 79 ಕೈದಿಗಳನ್ನಷ್ಟೇ ಬಿಡುಗಡೆ ಮಾಡಲಾಗಿದೆ. ಇನ್ನೂ 48 ಕೈದಿಗಳನ್ನು ಅಕ್ಟೋಬರ್ 2ರಂದು ಮಹಾತ್ಮ ಗಾಂಧಿ ಜಯಂತಿಯಂದು ಬಿಡುಗಡೆ ಮಾಡುವಂತೆ ಗೃಹ ಇಲಾಖೆಗೆ ಶಿಫಾರಸು ಮಾಡಲಾಗಿದೆ’ ಎಂದು ಕಾರಾಗೃಹ ಇಲಾಖೆಯ ಎಡಿಜಿಪಿ ಎನ್‌.ಎಸ್‌.ಮೇಘರಿಕ್ ತಿಳಿಸಿದರು.

‘48 ಕೈದಿಗಳ ಪಟ್ಟಿಯಲ್ಲಿ ಮಹಿಳೆಯರ ಹೆಸರುಗಳೂ ಇವೆ. ಆ ಪಟ್ಟಿಗೆ ಸಚಿವ ಸಂಪುಟ ಹಾಗೂ ರಾಜ್ಯಪಾಲರಿಂದ ಅನುಮತಿ ಸಿಗುತ್ತಿದ್ದಂತೆ ಕಾರ್ಯಕ್ರಮ ಆಯೋಜಿಸಿ ಕೈದಿಗಳನ್ನು ಬಿಡುಗಡೆ ಮಾಡಲಾಗುವುದು’ ಎಂದರು.

‘ಎನ್‌ಐಎ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ಬಿಡುಗಡೆಗೆ ಸರ್ಕಾರವೇ ಕ್ರಮ ಕೈಗೊಳ್ಳಬೇಕು. ಆ ಬಗ್ಗೆ ಪ್ರತ್ಯೇಕ ನಿಯಮಾವಳಿಗಳಿದ್ದು, ಅದರಡಿ ಬಿಡುಗಡೆ ನಿಯಮಗಳಿಗೆ ತಿದ್ದುಪಡಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದು ಹೇಳಿದರು.

ಬಿಡುಗಡೆಯಾದ ಕೈದಿಗಳು

ಬೆಂಗಳೂರು – 28

ಮೈಸೂರು – 18

ಬೆಳಗಾವಿ – 8

ಕಲಬುರ್ಗಿ – 14

ವಿಜಯಪುರ – 4

ಬಳ್ಳಾರಿ – 5

ಧಾರವಾಡ – 2

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 2

  Sad
 • 1

  Frustrated
 • 2

  Angry

Comments:

0 comments

Write the first review for this !