‘ಲಂಚ ಪ್ರಕರಣ’: ಅಲೆಮಾರಿ ನಿಗಮದ ಜೆ.ಡಿ ವಿಚಾರಣೆ

7

‘ಲಂಚ ಪ್ರಕರಣ’: ಅಲೆಮಾರಿ ನಿಗಮದ ಜೆ.ಡಿ ವಿಚಾರಣೆ

Published:
Updated:

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ‘ಲಂಚ ಪ್ರಕರಣ’ ಸಂಬಂಧ ಅಲೆಮಾರಿ ಅಭಿವೃದ್ಧಿ ನಿಗಮದ ಜಂಟಿ ನಿರ್ದೇಶಕ ಪ್ರದೀಪ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬುಧವಾರ ವಿಚಾರಣೆ ನಡೆಸಿತು.

ಅಲೆಮಾರಿ ಅಭಿವೃದ್ಧಿ ನಿಗಮದ ಆಯುಕ್ತ ವಸಂತ್‌ ಅವರಿಗೇ ವಿಚಾರಣೆಗೆ ಬರುವಂತೆ  ನೋಟಿಸ್‌ ನೀಡಲಾಗಿತ್ತು. ಬಜೆಟ್‌ ಸಿದ್ಧತೆಯಲ್ಲಿ ಬಿಡುವಿಲ್ಲದೆ ತೊಡಗಿರುವುದರಿಂದ ಬರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರಿಂದ ಜಂಟಿ ನಿರ್ದೇಶಕರನ್ನು ವಿಚಾರಣೆ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.

ಕಳೆದ ವಾರ ಅಲೆಮಾರಿ ಅಭಿವೃದ್ಧಿ ನಿಗಮದ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಶೋಧನೆ ನಡೆಸಿ, ಈ ಪ್ರಕರಣ’ಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಜಂಟಿ ನಿರ್ದೇಶಕರ ವಿಚಾರಣೆ ನಡೆಸಲಾಗಿದೆ.

ಅಲೆಮಾರಿ ಸಮುದಾಯದವರು ವಾಸವಿರುವ ಕಾಲೊನಿಗಳಿಗೆ ಕಾಂಕ್ರಿಟ್‌ ರಸ್ತೆ ನಿರ್ಮಾಣ ಮಾಡಲು  ಗುತ್ತಿಗೆದಾರರು ಅನುದಾನ ಬಿಡುಗಡೆ ಮಾಡಿಸಿಕೊಳ್ಳುತ್ತಾರೆ. ಜಿಲ್ಲಾಧಿಕಾರಿಗಳಿಗೆ ಅನುದಾನ ಬಿಡುಗಡೆ ಆಗುತ್ತದೆ. ಬಳಿಕ ಗುತ್ತಿಗೆದಾರರು ತಮಗೇ ಗುತ್ತಿಗೆ ನೀಡುವಂತೆ ಸಚಿವರಿಂದ ಶಿಫಾರಸು ಪತ್ರಗಳನ್ನು ಪಡೆಯುತ್ತಾರೆ. ಸಚಿವ ಪುಟ್ಟರಂಗಶೆಟ್ಟಿ ಅವರೂ ಕೆಲವರಿಗೆ ಶಿಫಾರಸು ಪತ್ರಗಳನ್ನು ನೀಡಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಜಾಮೀನು ಅರ್ಜಿ ಕಾಯ್ದಿರಿಸಿದ ತೀರ್ಪು: ಈ ಮಧ್ಯೆ, ತಮಗೆ ಜಾಮೀನು ನೀಡುವಂತೆ ಕೋರಿ ಪ್ರಮುಖ ಆರೋಪಿ, ಸಚಿವರ ಕಚೇರಿಯ ಟೈಪಿಸ್ಟ್‌ ಎಸ್‌.ಜೆ. ಮೋಹನ್‌ ಕುಮಾರ್‌ ಸಲ್ಲಿಸಿರುವ ಜಾಮೀನು ಅರ್ಜಿ ಮೇಲಿನ ತೀರ್ಪನ್ನು ಇದೇ 18ರಂದು ಶುಕ್ರವಾರಕ್ಕೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಕಾಯ್ದಿರಿಸಿದೆ.

ಪ್ರಕರಣ ಅತ್ಯಂತ ಸೂಕ್ಷ್ಮವಾಗಿದ್ದು, ಇನ್ನೂ ತನಿಖೆ ನಡೆಯುತ್ತಿರುವುದರಿಂದ ಆರೋಪಿಗೆ ಜಾಮೀನು ನೀಡಬಾರದು. ಅಲ್ಲದೆ, ಇನ್ನೂ ಕೆಲವರನ್ನು ಬಂಧಿಸಬೇಕಿರುವುದರಿಂದ ಅರ್ಜಿ ಪುರಸ್ಕರಿಸಬಾರದು ಎಂದು ಪ್ರಾಸಿಕ್ಯೂಷನ್‌ ಪರ ವಕೀಲರು ವಾದಿಸಿದ್ದಾರೆ. 

ಸಚಿವರ ಬಳಿ ಕೆಲಸ ಮಾಡಿಸಿಕೊಡಲು ಮೋಹನ್‌ ಕುಮಾರ್‌ ಅವರಿಗೆ ಹಣ ನೀಡಿದ್ದಾರೆನ್ನಲಾದ ಗುತ್ತಿಗೆದಾರರಾದ ನಂದ, ಶ್ರೀನಿಧಿ, ಅನಂತು ಹಾಗೂ ಕೃಷ್ಣಮೂರ್ತಿ ಇನ್ನೂ ತಲೆಮರೆಸಿಕೊಂಡಿದ್ದು, ಎಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !