ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹3.40 ಕೋಟಿ ಮೌಲ್ಯದ ಚಿನ್ನ ಜಪ್ತಿ

102 ಚಿನ್ನದ ಬಿಸ್ಕತ್‌ ಪತ್ತೆ: ಐವರು ಪ್ರಯಾಣಿಕರು ವಶಕ್ಕೆ
Last Updated 16 ನವೆಂಬರ್ 2018, 17:04 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದ ಆರೋಪದಡಿ ಆರು ಪ್ರಯಾಣಿಕರನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು, ₹3.40 ಕೋಟಿ ಮೌಲ್ಯದ 102 ಚಿನ್ನದ ಬಿಸ್ಕತ್‌ಗಳನ್ನು ಜಪ್ತಿ ಮಾಡಿದ್ದಾರೆ.

‘ಸಿಂಗಾಪುರ ಪ್ರಜೆ ನೂರುಲ್ಲಾಯ್ನೆ, ತಮಿಳುನಾಡಿನ ನಿವಾಸಿಗಳಾದ ಅಲಿ, ಅಬ್ದುಲ್‌ ಖಾದೀರ್, ನಾಗೂರ್‌ ಮೆವನ್, ಸಾಥಿಕ್ ಹಾಗೂ ಶಾಹುಲ್ಲಾ ಹಮೀದ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಬಿಸ್ಕತ್‌ಗಳನ್ನು ಅವರು ಎಲ್ಲಿಂದ ತಂದಿದ್ದರು? ಎಲ್ಲಿಗೆ ತೆಗೆದುಕೊಂಡು ಹೊರಟಿದ್ದರು ಎಂಬುದನ್ನು ತಿಳಿದುಕೊಳ್ಳುತ್ತಿದ್ದೇವೆ’ ಎಂದು ಕಸ್ಟಮ್ಸ್‌ನ ಹೆಚ್ಚುವರಿ ಆಯುಕ್ತ ಹರ್ಷವರ್ಧನ್ ಉಮ್ರೆ ತಿಳಿಸಿದರು.

ಮ್ಯೂಸಿಕ್ ಸ್ಪೀಕರ್‌ನಲ್ಲಿ 92 ಬಿಸ್ಕತ್‌: ‘ಸಿಂಗಾಪುರದಿಂದ ವಿಮಾನದಲ್ಲಿ ನಗರದ ನಿಲ್ದಾಣಕ್ಕೆ ಬಂದಿಳಿದಿದ್ದ ನೂರುಲ್ಲಾಯ್ನೆ, ತಮ್ಮ ಬ್ಯಾಗ್‌ನಲ್ಲೇ ಮ್ಯೂಸಿಕ್‌ ಸ್ಪೀಕರ್‌ಗಳನ್ನು ತಂದಿದ್ದರು. ನಿಲ್ದಾಣದಿಂದ ಹೊರಗೆ ಬರುತ್ತಿದ್ದ ವೇಳೆಯಲ್ಲಿ ಅವರನ್ನು ತಡೆದು ಪರಿಶೀಲಿಸಿದಾಗ ಸ್ಪೀಕರ್‌ಗಳಲ್ಲಿ ತಲಾ 100 ಗ್ರಾಂ ತೂಕದ 92 ಚಿನ್ನದ ಬಿಸ್ಕತ್‌ಗಳು ಪತ್ತೆಯಾದವು’ ಎಂದು ಹರ್ಷವರ್ಧನ್ ತಿಳಿಸಿದರು.

‘ಸ್ಪೀಕರ್‌ನಲ್ಲಿರುವ ಉಕ್ಕಿಗೆ ಚಿನ್ನದ ಬಿಸ್ಕತ್‌ಗಳನ್ನು ಅಂಟಿಸಲಾಗಿತ್ತು. ಅದರ ಸುತ್ತಲೂ ಟೇಪ್‌ ಸುತ್ತಲಾಗಿತ್ತು. ಲೋಹ ಶೋಧಕ ಯಂತ್ರದಲ್ಲಿ ತಪಾಸಣೆ ನಡೆಸಿದಾಗ, ಚಿನ್ನದ ಸುಳಿವು ಸಿಕ್ಕಿತ್ತು. ಸ್ಪೀಕರ್‌ ಬಿಚ್ಚಿ ಬಿಸ್ಕತ್‌ಗಳನ್ನು ಹೊರಗೆ ತೆಗೆಯಲಾಯಿತು’ ಎಂದರು.

ಬಟ್ಟೆಗಳಿಗೆ ಬಿಸ್ಕತ್‌ ಮುಚ್ಚಿಟ್ಟುಕೊಂಡಿದ್ದರು: ‘ಇನ್ನೊಂದು ಪ್ರಕರಣದಲ್ಲಿ ಅಲಿ, ಅಬ್ದುಲ್ ಖಾದೀರ್, ನಾಗೂರ್‌ ಮೆವನ್, ಸಾಥಿಕ್ ಹಾಗೂ ಶಾಹುಲ್ಲಾ ಹಮೀದ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಅವರೆಲ್ಲರೂ ತಾವು ಧರಿಸಿದ್ದ ಬಟ್ಟೆಯೊಳಗೆ ತಲಾ 2 ಚಿನ್ನದ ಬಿಸ್ಕತ್‌ಗಳನ್ನು ಮುಚ್ಚಿಟ್ಟುಕೊಂಡಿದ್ದರು’ ಎಂದು ಹರ್ಷವರ್ಧನ್ ಹೇಳಿದರು.

‘ಬಹ್ರೇನ್‌ನಿಂದ ವಿಮಾನದಲ್ಲಿ ನಗರದ ನಿಲ್ದಾಣಕ್ಕೆ ಬಂದಿಳಿದಿದ್ದ ಐವರ ಬಳಿ ತಲಾ 233 ಗ್ರಾಂ ತೂಕದ ₹38.35 ಲಕ್ಷ ಮೌಲ್ಯದ 10 ಚಿನ್ನದ ಬಿಸ್ಕತ್‌ಗಳು ಸಿಕ್ಕಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT