ಸಿಎಂ ಮಾತು ತಪ್ಪಿದ ಆರೋಪ: ಸುವರ್ಣಸೌಧ ಆವರಣಕ್ಕೆ ಕಬ್ಬಿನ ಲಾರಿ ನುಗ್ಗಿಸಿ ಆಕ್ರೋಶ

7

ಸಿಎಂ ಮಾತು ತಪ್ಪಿದ ಆರೋಪ: ಸುವರ್ಣಸೌಧ ಆವರಣಕ್ಕೆ ಕಬ್ಬಿನ ಲಾರಿ ನುಗ್ಗಿಸಿ ಆಕ್ರೋಶ

Published:
Updated:

ಬೆಳಗಾವಿ: ಕಬ್ಬು ಬೆಳೆಗಾರರ ಸಮಸ್ಯೆ ಅಲಿಸಲು ‌ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬೆಳಗಾವಿಗೆ ಬರಬೇಕು ಎಂದು ಆಗ್ರಹಿಸಿ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ.

ಗುರುವಾರದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ್ದ ರೈತ ಮುಖಂಡರು, ಮುಖ್ಯಮಂತ್ರಿ ಭರವಸೆ ಮೇರೆಗೆ ಧರಣಿ ಕೈಬಿಟ್ಟಿದ್ದರು.

‘ನವೆಂಬರ್‌ 19ರಂದು ಬೆಳಗಾವಿಗೆ ಬರುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಹೀಗಾಗಿ, ಪ್ರತಿಭಟನೆ ಕೈಬಿಡಲಾಗಿದೆ’ ಎಂದು ರೈತರು ತಿಳಿಸಿದ್ದರು. ‘ಆದರೆ, ಮುಖ್ಯಮಂತ್ರಿ ಮಾತು ತಪ್ಪಿದ್ದಾರೆ. ಅವರು ಬರುವ ಬದಲಿಗೆ, ನಮ್ಮನ್ನೇ ಬೆಂಗಳೂರಿಗೆ ಬರುವಂತೆ ಹೇಳಿಕೆ ನೀಡಿದ್ದಾರೆ. ಈ ಮೂಲಕ ರೈತ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಹೀಗಾಗಿ, ಅವರು ಇಲ್ಲಿಗೆ ಬರುವವರೆಗೂ ಪ್ರತಿಭಟನೆ ಮುಂದುವರಿಸಲಾಗುವುದು’ ಎಂದು ಮುಖಂಡರು ತಿಳಿಸಿದರು.

ಸದ್ಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ಮುಂದುವರಿದಿದೆ.

ಈ ನಡುವೆ, ರೈತ ಮುಖಂಡ ಅಶೋಕ ಯಮಕನಮರಡಿ ನೇತೃತ್ವದಲ್ಲಿ ಕೆಲವು ರೈತರು ಕಬ್ಬು ತುಂಬಿದ ಐದು ಲಾರಿಗಳನ್ನು ಸುವರ್ಣ ವಿಧಾನಸೌಧದ ಆವರಣಕ್ಕೆ ನುಗ್ಗಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿದ್ದ ಲಾರಿಗಳನ್ನು ತಡೆದು ಅವುಗಳನ್ನು ಸುವರ್ಣ ವಿಧಾನಸೌಧಕ್ಕೆ ನುಗ್ಗಿಸಿದ್ದಾರೆ. ಇದನ್ನು ತಡೆಯಲು ಮುಂದಾದ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು.

ಕೆಲವರು ಲಾರಿಯಲ್ಲಿದ್ದ ಕೆಲವು ಕಬ್ಬಿನ ಕಂತೆಗಳನ್ನು ಕೆಳಗೆ ಬಿಸಾಡಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಕೆಲವರು, ಕಬ್ಬಿನ ಲಾರಿಗಳನ್ನು ತಡೆಯುತ್ತಿದ್ದಾರೆ.

ಅರೆಬೆತ್ತಲೆ ಧರಣಿ

ಅಥಣಿ ತಾಲ್ಲೂಕಿನ ಮುರಗುಂಡಿಯಲ್ಲಿ ರೈತರು ಉರುಳುಸೇವೆ, ಅರೆಬೆತ್ತಲೆ ಧರಣಿ ನಡೆಸುತ್ತಿದ್ದಾರೆ. ಕಳೆದ ಹಂಗಾಮಿನಲ್ಲಿ ಕಬ್ಬು ಪೂರೈಸಿದವರಿಗೆ ಬಾಕಿ ಕೊಡಿಸಬೇಕು. ಈ ಬಾರಿಯ ಕಬ್ಬು ದರ ನಿಗದಿಪಡಿಸಿದ ನಂತರವಷ್ಟೇ ಕಬ್ಬು ಅರೆಯಲು ಅವಕಾಶ ನೀಡಬೇಕು. ಅಲ್ಲಿವರೆಗೂ ಕಾರ್ಖಾನೆಗಳನ್ನು ಬಂದ್ ಮಾಡಿಸಬೇಕು ಎನ್ನುವುದು ರೈತರ ಆಗ್ರಹವಾಗಿದೆ.

ಗೇಟಿಗೆ ಬೀಗ ಹಾಕಲು ಹೋದಾಗ ಪೊಲೀಸರು ನನ್ನ ಕೊರಳಿಗೆ ಸರಪಳಿ ಹಾಕಿದ್ದಾರೆ ಎಂದು ರೈತ ಸಂಘದ ಜಯಶ್ರೀ ಗುರಣ್ಣವರ ಆರೋಪಿಸಿದರು. ಈ ಸರಪಳಿಯನ್ನು ನಾನು ಹಾಕಿಕೊಂಡೇ ಇರುತ್ತೇನೆ ಎಂದು ತಿಳಿಸಿದರು. ಕಣ್ಣೀರು ಹಾಕಿ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಉತ್ತರ ಕರ್ನಾಟಕವನ್ನು ಕಡೆಗಣಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !