ಆನಂದ್‌ಸಿಂಗ್‌, ನಾಗೇಂದ್ರ ಕೋರ್ಟ್‌ಗೆ ಹಾಜರು

7
ಬೇಲೆಕೇರಿ ಅದಿರು ಅಕ್ರಮ ಸಾಗಣೆ ಹಗರಣ

ಆನಂದ್‌ಸಿಂಗ್‌, ನಾಗೇಂದ್ರ ಕೋರ್ಟ್‌ಗೆ ಹಾಜರು

Published:
Updated:

ಬೆಂಗಳೂರು: ಉತ್ತರ ಕನ್ನಡದ ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ ಮಾಡಿದ ಆರೋಪಕ್ಕೊಳಗಾಗಿರುವ ಕಾಂಗ್ರೆಸ್‌ ಶಾಸಕರಾದ ಆನಂದ್‌ ಸಿಂಗ್‌ (ವಿಜಯನಗರ– ಹೊಸಪೇಟೆ), ಶಾಸಕ ಬಿ. ನಾಗೇಂದ್ರ (ಬಳ್ಳಾರಿ ಗ್ರಾಮೀಣ) ಅವರು ಗುರುವಾರ ಇಲ್ಲಿನ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಶೇಷ ವಿಚಾರಣಾ ನ್ಯಾಯಾಲಯದಲ್ಲಿ ಹಾಜರಾದರು.

ಸತತವಾಗಿ ಎರಡು ಸಲ ವಿಚಾರಣೆಗೆ ಗೈರುಹಾಜರಾಗಿದ್ದರಿಂದ ಬುಧವಾರ ಕೋರ್ಟ್‌ ವಾರೆಂಟ್‌ ಹೊರಡಿಸಿತ್ತು. ಸಂವಹನ ಕೊರತೆಯಿಂದಾಗಿ ನ್ಯಾಯಾಲಯಕ್ಕೆ ಗೈರು ಹಾಜರಾಗಿದ್ದು, ವಿಚಾರಣೆಗೆ ಎಲ್ಲ ರೀತಿಯ ಸಹಕಾರ ಕೊಡುವುದಾಗಿ ಶಾಸಕರಿಬ್ಬರೂ ಮುಚ್ಚಳಿಕೆ ಬರೆದು ಕೊಟ್ಟ ಬಳಿಕ ಪ್ರಕರಣ ಮುಂದೂಡಲಾಯಿತು.  

ಬೇಲೆಕೇರಿ ಅದಿರು ಕಳ್ಳಸಾಗಣೆ ಪ್ರಕರಣದಲ್ಲಿ ಸಿಬಿಐ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಕೋರ್ಟ್‌ ಪ್ರತಿದಿನ ವಿಚಾರಣೆ ನಡೆಸುತ್ತಿದೆ. ಶಾಸಕರಿಬ್ಬರ ಮೇಲೆ ದೋಷಾರೋಪ ಹೊರಿಸುವ ಪ್ರಕ್ರಿಯೆ ಆರಂಭವಾಗಬೇಕಿದೆ. 

ಆನಂದ್‌ ಸಿಂಗ್‌ ಬೇಲೆಕೇರಿ ಬಂದರಿನಿಂದ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡಿ, ಎರಡು ಕಂಪನಿಗಳಿಗೆ ಮಾರಿದ್ದ ಆರೋಪ ಹೊತ್ತಿದ್ದಾರೆ. ಈ ಕಂಪನಿಗಳು ಅದಿರನ್ನು ಎಸ್‌.ಬಿ. ಮಿನರಲ್ಸ್‌ಗೆ ಮಾರಿದ್ದವು ಎಂದೂ ಹೇಳಲಾಗಿದೆ. ಈ ಪ್ರಕರಣದ ಸಂಬಂಧ ಸಿಂಗ್‌ ಅವರನ್ನು ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳ 2013ರ ಅಕ್ಟೋಬರ್‌ನಲ್ಲಿ ಬಂಧಿಸಿತ್ತು. 2015ರ ಏಪ್ರಿಲ್‌ನಲ್ಲಿ ಲೋಕಾಯುಕ್ತ ವಿಶೇಷ ತನಿಖಾ ತಂಡ (ಎಸ್ಐಟಿ) ಇವರನ್ನು ಬಂಧಿಸಿತ್ತು.

ಬಳ್ಳಾರಿ ಮೂಲದ ಈಗಲ್‌ಟನ್‌ ಟ್ರೇಡರ್ಸ್‌ ‍‍ಪಾಲುದಾರರಾದ ನಾಗೇಂದ್ರ ಅವರೂ ಇದೇ ಬಂದರಿನಿಂದ ಅಕ್ರಮವಾಗಿ ಅದಿರನ್ನು ಸಾಗಿಸಿದ ಆರೋಪ ಎದುರಿಸುತ್ತಿದ್ದಾರೆ. 2013ರ ಅಕ್ಟೋಬರ್‌ನಲ್ಲಿ ಇವರನ್ನೂ ಸಿಬಿಐ ಬಂಧಿಸಿತ್ತು. ಆನಂತರ, ಲೋಕಾಯುಕ್ತ ಎಸ್‌ಐಟಿ 2015ರ ಮಾರ್ಚ್‌ನಲ್ಲಿ ಬಂಧಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !