ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತಕುಮಾರ್ ನೆನಪು: ವಾಣಿಜ್ಯ ನಗರಿಯಲ್ಲಿ ‘ಅನಂತ’ ಹೆಜ್ಜೆ

ಅಮ್ಮನ ಸ್ವಭಾವ ಹೊತ್ತಿದ್ದ ಮಗನಿಂದಲೂ ಸಮಾಜ ಸೇವೆ
Last Updated 13 ನವೆಂಬರ್ 2018, 9:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆರು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ಮತ್ತು ಬಿಜೆಪಿಯಲ್ಲಿ ಹಲವಾರು ಉನ್ನತ ಜವಾಬ್ದಾರಿ ನಿಭಾಯಿಸಿದ ಅನಂತಕುಮಾರ್‌ ಪ್ರಾಥಮಿಕ ಹಂತದಿಂದ ಪದವಿವರೆಗಿನ ಶಿಕ್ಷಣವನ್ನು ವಾಣಿಜ್ಯ ನಗರಿಯಲ್ಲಿ ಪಡೆದಿದ್ದರು.

ಕಾರವಾರ ರಸ್ತೆಯ ಎಂಟಿಎಸ್‌ ಕಾಲೊನಿಯಲ್ಲಿದ್ದ ರೈಲ್ವೆ ಶಾಲೆಯಲ್ಲಿ ಒಂದರಿಂದ ಆರನೇ ತರಗತಿ ತನಕ ಓದಿದ್ದರು. ಏಳನೇ ತರಗತಿಯನ್ನು ಬಾಸೆಲ್‌ ಮಿಷನ್‌ ಶಾಲೆಯಲ್ಲಿ ಓದಿದರು.

ಅನಂತಕುಮಾರ್ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆ ಸೋಮವಾರ ಅವರ ಸ್ನೇಹಿತರು ಶಾಲೆಗೆ ಬಂದು ನೆನಪುಗಳನ್ನು ಹಂಚಿಕೊಂಡರು. ಶಾಲೆಯ ಪಕ್ಕದಲ್ಲಿಯೇ ಇರುವ ಶಿಕ್ಷಕರ ಮನೆಗಳಿಗೆ ತೆರಳಿ ‘ಅನಂತ’ ನೆನಪುಗಳನ್ನು ಮೆಲುಕು ಹಾಕಿದರು.

ಅವರ ತಂದೆ ನಾರಾಯಣಶಾಸ್ತ್ರಿ ರೈಲ್ವೆಯಲ್ಲಿ ವರ್ಕ್‌ಶಾಪ್‌ ಲೆಕ್ಕಾಧಿಕಾರಿಯಾಗಿದ್ದರು. ಲ್ಯಾಮಿಂಗ್ಟನ್‌ ಶಾಲೆಯಲ್ಲಿ ಹೈಸ್ಕೂಲು ಶಿಕ್ಷಣ ಪೂರ್ಣಗೊಳಿಸಿದರು.

ಪಿ.ಸಿ. ಜಾಬಿನ ವಿಜ್ಞಾನ ಕಾಲೇಜಿನಲ್ಲಿ ಎರಡು ವರ್ಷ ಓದಿ, ನಂತರ ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ಕಲಾ ವಿಷಯದಲ್ಲಿ ಪದವಿ ಪಡೆದರು. ಸಕ್ರಿ ಜೆಎಸ್‌ಎಸ್‌ ಕಾನೂನು ವಿದ್ಯಾಲಯ ಸೇರಿಕೊಂಡರು. ನಗರದಲ್ಲಿ ನಡೆದ ಅನೇಕ ವಿದ್ಯಾರ್ಥಿ ಹಾಗೂ ರಾಜಕೀಯ ಹೋರಾಟಗಳ ಜೊತೆ ತಮ್ಮನ್ನು ಗುರುತಿಸಿಕೊಂಡರು. ಅವರ ತಾಯಿ ಗಿರಿಜಮ್ಮ ಶಾಸ್ತ್ರಿ ಅವರು 1985ರಿಂದ 86ರ ವರೆಗೆ ಇಲ್ಲಿ ಮಹಾನಗರ ಪಾಲಿಕೆಗೆ ಉಪಮೇಯರ್‌ ಆಗಿದ್ದರು. ಆದ್ದರಿಂದ ಎಸ್‌ಬಿಐ ರಸ್ತೆಗೆ ಗಿರಿಜಮ್ಮ ಅವರ ಹೆಸರು ಇಡಲಾಗಿದೆ.

‘ಎಂಟಿಎಸ್‌ ಶಾಲೆಯ ಸಮೀಪದ ರೈಲ್ವೆ ಕ್ವಾಟ್ರರ್ಸ್‌ನಲ್ಲಿ ಅನಂತ ಕುಮಾರ್‌ ಬಾಲ್ಯದ ದಿನಗಳನ್ನು ಕಳೆದಿದ್ದರು. ಅವರ ಮನೆಯವರೆಲ್ಲ ಮೊದಲಿನಿಂದಲೂ ಜಾತಿ, ಮತದ ಭೇದ ಮಾಡದೇ ಎಲ್ಲರನ್ನೂ ಒಂದೇ ರೀತಿ ನಡೆಸಿಕೊಳ್ಳುತ್ತಿದ್ದರು’ ಎಂದು ಆ ಆ ಶಾಲೆಯ ಶಿಕ್ಷಕಿಯಾಗಿದ್ದ ಪಿ.ಡಿ. ನಡುಗಡ್ಡಿ‌ ನೆನಪಿಸಿಕೊಂಡರು.

‘ಗಿರಿಜಮ್ಮ ಅವರಿಗೆ ಸಮಾಜ ಸೇವೆ ಮಾಡಬೇಕು, ಜನರ ಕಷ್ಟಗಳಿಗೆ ಮಿಡಿಯಬೇಕು ಎನ್ನುವ ಆಸೆಯಿತ್ತು. ಆದ್ದರಿಂದ ಎಲ್ಲರ ಸಮಸ್ಯೆಗಳಿಗೂ ಸ್ಪಂದಿಸುತ್ತಿದ್ದರು. ತಾಯಿಯ ಗುಣವೇ ಮಗನಿಗೂ ಬಳುವಳಿಯಾಗಿ ಬಂದಿತ್ತು’ ಎಂದರು.

ಈದ್ಗಾ ಹೆಜ್ಜೆ ಗುರುತು

1992ರ ಆಗಸ್ಟ್‌ 15 ರಂದು ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸುವ ಹೋರಾಟದಲ್ಲಿ ಅನಂತಕುಮಾರ್‌ ಭಾಗಿಯಾಗಿದ್ದರು. 1993 ಜನವರಿ 26 ರಂದು ನಡೆದ ಹೋರಾಟದಲ್ಲಿಯೂ ಭಾಗಿಯಾಗಿದ್ದ ಅವರೂ ಸೇರಿದಂತೆ 56 ಜನರನ್ನು ಏಳು ದಿನಗಳ ಕಾಲ ಬಳ್ಳಾರಿ ಜೈಲಿನಲ್ಲಿರಿಸಲಾಗಿತ್ತು.

1994 ಆಗಸ್ಟ್‌ 15 ರಂದು ನಡೆದ ರಾಷ್ಟ್ರ ಧ್ವಜ ಹಾರಿಸುವ ಹೋರಾಟ ಸಂದರ್ಭದಲ್ಲಿ ಗೋಲಿಬಾರ್‌ ನಡೆದಿತ್ತು. ಲಾಠಿ ಪ್ರಹಾರದಲ್ಲಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ಸೇರಿಸುವ ಕಾರ್ಯ ಮಾಡಿದ್ದರು. 1997ರಲ್ಲಿ ಸುಪ್ರೀಂ ಕೋರ್ಟ್‌ ಪ್ರವೇಶದ ನಂತರ ರಾಷ್ಟ್ರ ಧ್ವಜವನ್ನು ಸಾಂಕೇತಿಕವಾಗಿ ಹಾರಿಸಲಾಯಿತು.

ಹುಬ್ಬಳ್ಳಿಗೆ ಮಂಜೂರಾಗಿದ್ದ ನೈರುತ್ಯ ರೈಲ್ವೆ ವಲಯ ಬೆಂಗಳೂರಿಗೆ ವರ್ಗಾಯಿಸಿದಾಗ ಮರಳಿ ಹುಬ್ಬಳ್ಳಿಗೆ ತರುವಲ್ಲಿ ಯಶಸ್ವಿಯಾಗಿದ್ದರು. ಧಾರವಾಡ ಐಐಟಿ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ವಾಣಿಜ್ಯೋದ್ಯಮಿಗಳ ನೆರವಾಗುವ ‘ಸಿಪೆಟ್‌’ ಕೇಂದ್ರ ಮಂಜೂರಾತಿ ಮಾಡಿಸಿಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT