ಭಾನುವಾರ, ಅಕ್ಟೋಬರ್ 20, 2019
22 °C

ಪುಟಾಣಿ ಸ್ಟಾರ್‌ ಅಂಕಿತಾ ಜೈರಾಮ್‌

Published:
Updated:
Prajavani

ಅರಳು ಹುರಿದಂತೆ ಮಾತನಾಡುವ ಅಂಕಿತಾ ಜೈರಾಮ್‌ ಸ್ಯಾಂಡಲ್‌ವುಡ್‌ನ ಪುಟಾಣಿ ಸ್ಟಾರ್‌. ಕಿರಿಕ್‌ ಕೀರ್ತಿ ಅಭಿನಯದ ‘ಸಿಲಿಂಡರ್‌ ಸತೀಶ’ ಸಿನಿಮಾದ ಮೂಲಕ ಹಿರಿತೆರೆಗೆ ಎಂಟ್ರಿ ಕೊಟ್ಟ ಈ ನಟಿಯ ಕೈಯಲ್ಲಿ ಈಗ ಕನ್ನಡದ ಪ್ರಮುಖ ಸ್ಟಾರ್ ನಟರ ಏಳೆಂಟು ಚಿತ್ರಗಳು ಇವೆ.

‘ಸಿಲಿಂಡರ್‌ ಸತೀಶ’ ಸಿನಿಮಾದಲ್ಲಿ ಕಿರಿಕ್‌ ಕೀರ್ತಿಯ ತಮ್ಮ, ಅಂಕಿತಾಳನ್ನು ಆಗಾಗ ರೇಗಿಸುತ್ತಿರುತ್ತಾನೆ. ಶಾಲೆಯಿಂದ ಬರುವಾಗ, ಹೋಗುವಾಗ ಅಂಕಿತಾಳನ್ನು ಮಾತಿಗೆ ಎಳೆಯುತ್ತಾನೆ. ಈ ಪಾತ್ರದಲ್ಲಿ ಅಂಕಿತಾಳ ನಟನೆ ಹಾಗೂ ಆಕೆಯ ಮುಗ್ಧತೆಯನ್ನು ಸಿನಿ ಅಭಿಮಾನಿಗಳು ಮೆಚ್ಚಿಕೊಂಡರು. ಆ ನಂತರ ಅವಳಿಗೆ ಅವಕಾಶಗಳು ಹೆಚ್ಚಿದವು.

‘ಕರುನಾಡ ಕಂದ ರಾಜಕುಮಾರ’, ಶ್ರೀಮುರಳಿ ಅಭಿನಯದ ‘ಭರಾಟೆ’, ಪುನೀತ್ ರಾಜ್‌ಕುಮಾರ್ ಅಭಿನಯದ ‘ಯುವರತ್ನ’, ಜಗ್ಗೇಶ್ ಅವರ ‘ಕಾಳಿದಾಸ ಕನ್ನಡ ಮೇಷ್ಟ್ರು’, ನೀನಾಸಂ ಸತೀಶ್ ಅವರ ‘ಬ್ರಹ್ಮಚಾರಿ’ ಸೇರಿದಂತೆ ಇನ್ನೂ ಸ್ಕ್ರಿಪ್ಟಿಂಗ್ ಹಂತದಲ್ಲಿರುವ ‘ಅಂಜು’, ‘ರಂಗನಾಯಕಿ’, ಸಿನಿಮಾಗಳು ಅಂಕಿತಾ ಕೈಯಲ್ಲಿವೆ. ಅಜಯ್‌ ರಾವ್‌ ಅವರ ಹೆಸರಿಡದ ಸಿನಿಮಾವೊಂದರಲ್ಲಿ ಕೂಡ ಅಂಕಿತಾ ಅಭಿನಯಿಸಲಿದ್ದಾರೆ.

‘ಭರಾಟೆ’ ಸಿನಿಮಾ ಅಂಕಿತಾಳ ಅಭಿನಯವನ್ನು ಒರೆಹಚ್ಚಲಿದೆ. ನಟ ಅವಿನಾಶ್ ಅವರ ಮುದ್ದಿನ ಮಗಳ ಪಾತ್ರದಲ್ಲಿ ಕಂಗೊಳಿಸಲಿದ್ದಾಳೆ. ಇದು ಅವಳ ಸಿನಿ ಜರ್ನಿಯಲ್ಲಿ ಮುಖ್ಯವಾದ ಸಿನಿಮಾ. ಪುನೀತ್ ಅವರ ‘ಯುವರತ್ನ’ ಸಿನಿಮಾದಲ್ಲಿ ವಿದ್ಯಾರ್ಥಿನಿಯ ಪಾತ್ರ ಮಾಡುತ್ತಿದ್ದಾಳೆ’ ಎನ್ನುತ್ತಾರೆ ಆಕೆಯ ತಂದೆ ಜೈರಾಮ್‌.

‘ನಾನು ಶಾಲೆಯನ್ನು ಎಂದಿಗೂ ತಪ್ಪಿಸುವುದಿಲ್ಲ, ವಾರಾಂತ್ಯದಲ್ಲಿ ಮಾತ್ರ ಶೂಟಿಂಗ್ ಮಾಡುತ್ತೇನೆ. ಈಗ ಒಟ್ಟಿಗೆ ನಾಲ್ಕೈದು ಸಿನಿಮಾಗಳಲ್ಲಿ ಅಭಿನಯಿಸುವುದು ಖುಷಿ ಕೊಟ್ಟಿದೆ. ಚಿಕ್ಕವಳಿದ್ದಾಗಿನಿಂದಲೂ ನಾನು ಪುನೀತ್ ರಾಜ್‌ಕುಮಾರ್ ಹಾಗೂ ಶಿವಣ್ಣ ಅವರ ಸಿನಿಮಾಗಳನ್ನು ನೋಡಿಕೊಂಡೇ ಬೆಳೆದೆ. ಅವರಂತೆಯೇ ಅಭಿನಯಿಸಿ ದೊಡ್ಡ ನಟಿಯಾಗಬೇಕು ಎಂಬ ಕನಸಿದೆ’ಎನ್ನುತ್ತಾಳೆ ಅಂಕಿತಾ.

‘ನನಗೆ ಡಾನ್ಸ್ ಎಂದರೆ ಅಚ್ಚುಮೆಚ್ಚು. ಬಿಡುವಿನ ಸಮಯದಲ್ಲಿ ನೃತ್ಯ ಮಾಡುತ್ತೇನೆ. ದೊಡ್ಡ ನಟರ ಜೊತೆ ಅಭಿನಯಿಸಲು ಖುಷಿಯಾಗುತ್ತದೆ’ ಎನ್ನುವುದು ಅಂಕಿತಾ ಮಾತು.

ಫೇಸ್‌ಬುಕ್‌ ಸ್ಟಾರ್‌: ಅಂಕಿತಾ ಸಿನಿಮಾದಲ್ಲಿ ಮಾತ್ರ ಅಲ್ಲ. ಸಾಮಾಜಿಕ ಜಾಲತಾಣದಲ್ಲೂ ಸ್ಟಾರ್‌. ಆಕೆಯ ಫೇಸ್‌ಬುಕ್‌ ಪೇಜ್‌ನಲ್ಲಿ ಒಂದು ಫೋಟೊ ಹಾಕಿದರೆ ಲಕ್ಷಾಂತರ ಲೈಕ್‌ ಗಿಟ್ಟಿಸುತ್ತದೆ. ‘ಕ್ರೀಮ್‌ ಬಿಸ್ಕೇಟ್‌’ ವೆಬ್‌ ಸೀರಿಸ್‌ನಲ್ಲೂ ಅಂಕಿತಾ ನಟಿಸುತ್ತಿದ್ದಾಳೆ.

Post Comments (+)