ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ ಬೆತ್ತಲೆ ಮೆರವಣಿಗೆ ಪ್ರಕರಣ: ‘ಜಾತಿ ಕಾರಣಕ್ಕಾಗಿಯೇ ಹಲ್ಲೆ’

ಗುಂಡ್ಲುಪೇಟೆ ಬೆತ್ತಲೆ ಮೆರವಣಿಗೆ ಪ್ರಕರಣ
Last Updated 16 ಜುಲೈ 2019, 20:15 IST
ಅಕ್ಷರ ಗಾತ್ರ

ಚಾಮರಾಜನಗರ: ‘ನನ್ನ ಜಾತಿಯ ಕಾರಣಕ್ಕಾಗಿಯೇ ಬೆತ್ತಲೆ ಮೆರವಣಿಗೆ ಮಾಡಿ ಹಲ್ಲೆ ಮಾಡಲಾಗಿದೆ. ಪ್ರತಿರೋಧ ತೋರಿದ್ದರೆ ಕೊಂದೇ ಬಿಡುತ್ತಿದ್ದರು’ ಎಂದು ಗುಂಡ್ಲುಪೇಟೆಯ ಕಬ್ಬೆಕಟ್ಟೆಯಲ್ಲಿ ನಡೆದ ಬೆತ್ತಲೆ ಮೆರವಣಿಗೆ ಪ್ರಕರಣದ ಸಂತ್ರಸ್ತ ಎಸ್‌.ಪ್ರತಾಪ್‌ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಮಂಗಳವಾರ ಹೇಳಿಕೆ ನೀಡಿದರು.

‘ಐಎಎಸ್‌ ಅಧಿಕಾರಿಯಾಗಬೇಕೆಂಬ ಎಂಬ ಆಸೆ ಇದೆ. ದೇವರ ವಿಗ್ರಹಗಳನ್ನು ನಾನು ಧ್ವಂಸ ಮಾಡಿದ್ದೇನೆ ಎಂದು ಆರೋಪಿಸಲಾಗುತ್ತಿದೆ. ವಿಗ್ರಹಗಳನ್ನು ಭದ್ರವಾಗಿ ಪ್ರತಿಷ್ಠಾಪಿಸಲಾಗುತ್ತದೆ. ಅದನ್ನು ಕೀಳಲು ಸಾಧ್ಯವೇ? ನಾನು ಶುದ್ಧ ಸಸ್ಯಾಹಾರಿ. ಪ್ರತಿ ದಿನ ವಿಷ್ಣು ಸಹಸ್ರನಾಮ ಓದುತ್ತೇನೆ. ಹನುಮಾನ್‌ ಚಾಲಿಸಾ ಪಠಿಸುತ್ತೇನೆ ಇಂತಹ ಕೃತ್ಯ ಎಂದಿಗೂ ಎಸಗುವುದಿಲ್ಲ’ ಎಂದರು.

‘ಬೆತ್ತಲೆ ಮೆರವಣಿಗೆ ಮಾಡಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ನನ್ನ ಮಾನ ಮರ್ಯಾದೆ ತೆಗೆದಿದ್ದಾರೆ. ಇನ್ನು ನನಗೆ ಯಾರು ಹುಡುಗಿ ಕೊಡುತ್ತಾರೆ?’ ಎಂದು ಅಳಲು ತೋಡಿಕೊಂಡರು.

‘ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಗೆ ಬರೆಯಲು ಸಾಧ್ಯವಾಗದೆ ಇದ್ದುದಕ್ಕೆ ಬೇಸರವಾಯಿತು. ತಂದೆ, ತಾಯಿಗೆ ಮುಖ ತೋರಿಸಲು ಸಾಧ್ಯವಾಗದೆ, ಊರಿಗೆ ಹೊರಟೆ. ರಾಘವಾಪುರದಲ್ಲಿ ನನ್ನ ಸ್ಕೂಟರ್‌ ಅಡ್ಡಗಟ್ಟಿ ದರೋಡೆ ಮಾಡಲಾಯಿತು. ಅಲ್ಲಿಂದ ನಡೆದುಕೊಂಡು ಕಬ್ಬೆಕಟ್ಟೆ ಶನೇಶ್ವರ ದೇವಸ್ಥಾನಕ್ಕೆ ತೆರಳಿ, ವಿಶ್ರಾಂತಿ ಪಡೆಯಲು ಕುಳಿತೆ. ಅಲ್ಲಿ ಈ ಘಟನೆ ನಡೆಯಿತು’ ಎಂದು ನ್ಯಾಯಾಧೀಶ ಜಿ.ಬಸವರಾಜ ಅವರಿಗೆ ತಿಳಿಸಿದರು.

ಪ್ರತಾಪ್‌ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಆರೋಪಿಗಳ ಪರ ವಕೀಲರಾದ ಶ್ರುತಿ, ‘ದೇವಸ್ಥಾನಕ್ಕೆ ಬರುವಾಗಲೇ ಪ್ರತಾಪ್‌ ಮೈಮೇಲೆ ಬಟ್ಟೆ ಇರಲಿಲ್ಲ. ಖಿನ್ನತೆಗೆ ಒಳಗಾಗಿದ್ದ ಅವರು ವಿಗ್ರಹಗಳನ್ನು ಧ್ವಂಸ ಮಾಡಿದ್ದಾರೆ. ಅವರ ಕೈಗೆ ಹಗ್ಗ ಕಟ್ಟಿಕೊಂಡು ಕರೆದುಕೊಂಡು ಬರುತ್ತಿದ್ದ ವ್ಯಕ್ತಿಯೂ ದಲಿತ ಸಮುದಾಯಕ್ಕೆ ಸೇರಿದವರು ಎಂದು ವಾದಿಸಿದರು.

ಜಾಮೀನು ಅರ್ಜಿ ಆದೇಶ ಬುಧವಾರಕ್ಕೆ ಮುಂದೂಡಲಾಯಿತು.

‘ಕರಾಳ ಅಧ್ಯಾಯ ಎಂದು ಮರೆಯುತ್ತೇನೆ’

‘ಈಗ ಆಗಿರುವ ಘಟನೆಯನ್ನು ಜೀವನದ ಕರಾಳ ಅಧ್ಯಾಯ ಎಂದು ಮರೆಯುತ್ತೇನೆ. ಆದರೆ, ಇಂತಹ ಕೃತ್ಯ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಪ್ರತಾಪ್‌ ಆಗ್ರಹಿಸಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ನಾನು ದಲಿತ ಅನ್ನುವ ವಿಷಯ ಬಿಡಿ. ಒಬ್ಬ ವ್ಯಕ್ತಿಗೆ ಈ ರೀತಿ ಮಾಡಬಹುದೇ? ನನಗೆ ಮಾನಸಿಕ ಕಾಯಿಲೆ ಇದೆ ಎಂದು ಹೇಳುತ್ತಿದ್ದಾರೆ. ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕು ಎಂದು ಓದುತ್ತಿದ್ದೇನೆ. ದೆಹಲಿಯಲ್ಲಿ ಆರು ತಿಂಗಳು ತರಬೇತಿ ಪಡೆದಿದ್ದೇನೆ. ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಮೂರು ವರ್ಷ ಕೆಲಸವನ್ನೂ ಮಾಡಿದ್ದೇನೆ. ಇಷ್ಟೆಲ್ಲ ಮಾಡಿದವನು ಮಾನಸಿಕ ಅಸ್ವಸ್ಥನಾಗಿರಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT