ಪೃಥಿಕಾಳ ಯಶೋಪಥ

7

ಪೃಥಿಕಾಳ ಯಶೋಪಥ

Published:
Updated:
Deccan Herald

ಆಕೆ ಎಂಜಿನಿಯರಿಂಗ್ ಪದವೀಧರೆ. ಅಪಘಾತದಿಂದ ಜೀವನದ ಸ್ವರೂಪವೇ ಬದಲಾಗಿತ್ತು. ನಾಲ್ಕು ತಿಂಗಳು ಆಸ್ಪತ್ರೆಯಲ್ಲೇ ಇದ್ದ ಅವರಿಗೆ 4 ಸರ್ಜರಿಗಳನ್ನು ಮಾಡಲಾಗಿತ್ತು. ಇದರಿಂದ ಅವರ ತೂಕ ಒಮ್ಮೆಲೆ 20 ಕೆ.ಜಿಯಷ್ಟು ಹೆಚ್ಚಿತ್ತು. ಮುಖ ಹಾಗೂ ಮೈ ತುಂಬೆಲ್ಲ 100ಕ್ಕೂ ಹೆಚ್ಚು ಗಾಯಗಳಾಗಿದ್ದವು. ಗಾಯವೆಲ್ಲಾ ವಾಸಿಯಾದ ಮೇಲೆ ಕಲೆ ಹಾಗೆ ಉಳಿದುಕೊಂಡಿತ್ತು. ಆದರೆ ಇಂದು ಅವರನ್ನು ನೋಡಿದರೆ ಇಷ್ಟೊತ್ತು ನಾವು ಹೇಳಿದ್ದು ಇವರ ಬಗ್ಗೆನಾ! ಎನ್ನುವಷ್ಟು ಬದಲಾಗಿದ್ದಾರೆ. ಅಪಘಾತವಾಗಿ ಗಾಯಗೊಂಡ ಕುರುಹುಗಳು ಕಾಣುವುದಿಲ್ಲ. ಅದಕ್ಕೆಲ್ಲಾ ಕಾರಣ ಅವರ ತಾಯಿ ನೀಡಿದ ಆಯುರ್ವೇದ ಚಿಕಿತ್ಸೆ. ಅದು ಅವರೇ ತಯಾರಿಸಿ ಹಚ್ಚಿದ ಔಷಧಿಗಳು.

ಹೀಗೆ ತಾಯಿ ನೀಡಿದ ಔಷಧಿಗಳಿಂದ ತಾನೇ ಆಶ್ಚರ್ಯಗೊಳ್ಳು
ವಷ್ಟು ಬದಲಾದ ಮಗಳು ತಾನು ಆಯುರ್ವೇದವನ್ನು ಕಲಿತು ಅದರಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ಮುಂದೆ ಅಮೆರಿಕಕ್ಕೆ ತೆರಳಿ, ‘ಅರೋಮಾ ಥೆರಪಿ’ ಕೋರ್ಸ್ ಮುಗಿಸಿಕೊಂಡು ಈಗ ‘ಎವಿಎ’ (ಆಯುರ್, ವೇದ, ಆರೋಮಾ) ಎಂಬ ಆಯುರ್ವೇದ ಉತ್ಪನ್ನಗಳ ಸಂಸ್ಥೆಯೊಂದನ್ನು ಆರಂಭಿಸಿದ್ದಾರೆ. ಅವರೇ ಬೆಂಗಳೂರಿನ ಪೃಥಿಕ ಪಾರ್ಥಸಾರಥಿ.

‌‌‘ನನಗೆ ಮೊದಲು ಆಯರ್ವೇದ ಉತ್ಪನ್ನಗಳ ಮೇಲೆ ಅಷ್ಟೊಂದು ಒಲವಿರಲಿಲ್ಲ. ನನ್ನ ತಾಯಿ ಶಶಿರೇಖಾ ಸಿದ್ಧ (ಆಬಹರ್ವೇದ ವೈದ್ಯಪದ್ಧತಿ) ವೈದ್ಯೆ. ಕಳೆದ 20 ವರ್ಷಗಳಿಂದ ಅವರು ಆಯುರ್ವೇದ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು. ಆದರೆ ನಾನೇ ಸ್ವತಃ ಇದರ ‍ಪ್ರಯೋಜನ ಪಡೆದು ಗುಣಮುಖಳಾದ ಮೇಲೆ ಇದರ ಮೇಲೆ ಒಲವು ಜಾಸ್ತಿ ಆಯ್ತು. ಇದರಲ್ಲೇ ಉದ್ಯೋಗ ಕಂಡುಕೊಳ್ಳಬೇಕು ಎಂದು ನಿರ್ಧರಿಸಿ ಕೋರ್ಸ್ ಮಾಡಿ ನನ್ನದೇ ಆದ ಸಂಸ್ಥೆಯೊಂದನ್ನು ಆರಂಭಿಸಿದೆ’ ಎಂದು ಎವಿಎ ಸಂಸ್ಥೆ ಹುಟ್ಟಿನ ಬಗ್ಗೆ ವಿವರಿಸುತ್ತಾರೆ ಪೃಥಿಕ.

‌‌ದೆಹಲಿಯಲ್ಲಿರುವ ಕಾರ್ಖಾನೆಯಲ್ಲಿ ಉತ್ಪನ್ನಗಳನ್ನು ತಯಾರಿಸುವ ಇವರು ಹೃಷಿಕೇಶ ಹಾಗೂ ಕೇರಳದ ಕೆಲ ಕಾಡುಗಳಿಂದ ಗಿಡಮೂಲಿಕೆಗಳನ್ನು ತರುತ್ತಾರೆ. ‘ನಮ್ಮ ಉತ್ಪನ್ನಗಳಲ್ಲಿ ಯಾವುದೇ ರಾಸಾಯನಿಕ ಅಂಶಗಳು ಇರುವುದಿಲ್ಲ. ಕೇವಲ ಗಿಡಮೂಲಿಕೆಗಳನ್ನಷ್ಟೇ ಬಳಸುವ ನಮ್ಮ ಬಳಿ ಸೋಪು, ಶ್ಯಾಂಪು, ಲಿಪ್‌ಕೇರ್, ಷವರ್ ಜೆಲ್, ಚಿಕ್ಕ ಮಕ್ಕಳಿಗಾಗಿ ಬೇಬಿ ಕಿಟ್ ಕೂಡ ಇದೆ’ ಎನ್ನುತ್ತಾರೆ.

2017ರಲ್ಲಿ ನಗರದ ಒನ್‌ ಎಂ.ಜಿ ಮಾಲ್‌ನಲ್ಲಿ ಮಳಿಗೆಯೊಂದನ್ನು ತೆರೆದಿರುವ ಇವರ ಬಳಿ 50ಕ್ಕೂ ಹೆಚ್ಚು ಚರ್ಮರಕ್ಷಣೆ ಹಾಗೂ ಕೂದಲಿಗೆ ಸಂಬಂಧಿಸಿದ ಉತ್ಪನ್ನಗಳಿವೆ.

‘ಜನರು ಆಯುರ್ವೇದ ಉತ್ಪನ್ನಗಳನ್ನು ತುಂಬಾ ಇಷ್ಟಪಡುತ್ತಾರೆ. ಕಾರಣ ಅದರಿಂದ ತುಂಬಾ ನಿಧಾನವಾಗಿ ಪರಿಣಾಮ ಕಂಡರೂ ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ. ಗಿಡಮೂಲಿಕೆಗಳ ಮಿಶ್ರಣದಿಂದ ಪರಿಮಳವೂ ಮನಸ್ಸಿಗೆ ಇಷ್ಟವಾಗುತ್ತದೆ. ಆ ಕಾರಣಕ್ಕೆ ನಾವು ಜನರಿಗೆ ಇಷ್ಟವಾಗುವ ರೀತಿಯಲ್ಲಿ ಉತ್ಪನ್ನಗಳನ್ನು ತಯಾರಿಸುತ್ತೇವೆ, ಜನರು ನಮ್ಮ ಉತ್ಪನ್ನಗಳನ್ನು ಕೊಂಡ ಮೇಲೆ ಖುಷಿಪಡಬೇಕೇ ಹೊರತು, ಅಯ್ಯೋ ಇವರ ಬಳಿ ಯಾಕಾದರೂ ಖರೀದಿಸಿದೇನೋ ಎಂಬ ಭಾವನೆ ಬರಬಾರದು. ಆ ಕಾರಣಕ್ಕೆ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ’ ಎಂದು ತಮ್ಮ ಸಂಸ್ಥೆಯ ಉದ್ದೇಶವನ್ನು ವಿವರಿಸುತ್ತಾರೆ.

ಅನೇಕ ಹೋಟೆಲ್ ಹಾಗೂ ಖಾಸಗಿ ಸಂಸ್ಥೆಗಳಿಗೆ ಇವರ ಉತ್ಪನ್ನಗಳನ್ನು ಕಿಟ್ ರೂಪದಲ್ಲಿ ನೀಡುತ್ತಾರೆ. ಜೆಡ್ಲ್ಯೂ ಮಾರಿಯೇಟ್, ದಿ ರಿಜ್ಡ್ ಕಾರ್ಟನ್, ಲಿಂಕ್ಡ್ ಇನ್, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕೊಲಂಬಿಯಾ ಏಷ್ಯಾ ಆಸ್ಪತ್ರೆ ಸೇರಿದಂತೆ ಇನ್ನೂ ಅನೇಕ ಸಂಸ್ಥೆಗಳಿಗೆ ಸೋಪು, ಶ್ಯಾಂಪೂ, ಹ್ಯಾಂಡ್ ವಾಷ್‌ನಂತಹ ಉತ್ಪನ್ನಗಳ ಕಿಟ್‌ಗಳನ್ನು ನೀಡುತ್ತಾರೆ.

ಎವಿಎ ಕಂಪನಿಯ ಮೊದಲ ಉತ್ಪನ್ನ ಸೋಪು. ಮೊದಲು ಸ್ಟಾಲ್‌ಗಳಲ್ಲಿ ಮಾರಾಟ ಮಾಡುತ್ತಿದ್ದರು. ಆಗ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಮುಂದೆ ಉತ್ಪನ್ನಗಳ ವ್ಯಾಪ್ತಿಯನ್ನು ಹೆಚ್ಚಿಸಿ ಎವಿಎ ಸಂಸ್ಥೆಯನ್ನು ಆರಂಭಿಸಿದರು. ಆಸ್ಪತ್ರೆಗಳಿಗೆ ಬಾಣಂತಿ ಕಿಟ್ ಕೂಡ ನೀಡುವ ಇವರು ಚಿಕ್ಕ ಮಕ್ಕಳಿಗಾಗಿ ತಯಾರಿಸುವ ಉತ್ಪನ್ನಗಳಲ್ಲಿ ತೆಂಗಿನೆಣ್ಣೆ ಹಾಗೂ ವೆನಿಲ್ಲಾ ಎಣ್ಣೆಗಳನ್ನು ಬಳಸುತ್ತಾರೆ. ತೆಂಗಿನೆಣ್ಣೆ ಎಲ್ಲಾ ಚರ್ಮ ವ್ಯಾಧಿಗಳಿಗೂ ಉತ್ತಮ ಔಷಧಿ ಎನ್ನುವುದು ಪೃಥಿಕ ಅವರ ಅನುಭವದ ಮಾತು.

ಫೇಸ್‌ಬುಕ್ ಪೇಜ್: facebook.com/AVASkincareindia

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !