ಭಾನುವಾರ, ನವೆಂಬರ್ 17, 2019
24 °C

ಅಯೋಧ್ಯೆ ತೀರ್ಪಿನಿಂದ ಶಾಂತಿಗೆ ಭಂಗ ತಂದರೆ ಉಪವಾಸ ಸತ್ಯಾಗ್ರಹ: ಪೇಜಾವರ ಶ್ರೀ

Published:
Updated:

ಉಡುಪಿ: ರಾಮಮಂದಿರ ನಿರ್ಮಾಣ ವಿಚಾರವಾಗಿ ಸುಪ್ರೀಂಕೋರ್ಟ್‌ ತೀರ್ಪಿಗೆ ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳು ಬದ್ಧವಾಗಿರಬೇಕು. ಸಾರ್ವಜನಿಕವಾಗಿ ವಿಜಯೋತ್ಸವ, ಪ್ರತಿಭಟನೆ ಮಾಡಬಾರದು. ಶಾಂತಿಗೆ ಭಂಗವಾದರೆ ಉಪವಾಸ ಕೂರುವುದಾಗಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.

ಪೇಜಾವರ ಮಠದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೀರ್ಪು ಹಿಂದೂಗಳ ಪರವಾಗಿ ಬರುವ ವಿಶ್ವಾಸವಿದೆ. ಆದರೆ, ನಿಶ್ಚಿತವಾಗಿ ಹೇಳಲಾಗುವುದಿಲ್ಲ. ಹಿಂದೂಗಳ ಪರವಾಗಿ ಬಂದರೆ ಬೀದಿಗಿಳಿದು ವಿಜಯೋತ್ಸವ, ಮೆರವಣಿಗೆ ಮಾಡಬಾರದು. ಮುಸ್ಲಿಮರ ಪರವಾಗಿ ಬಂದರೂ ಪ್ರತಿಭಟನೆ ಮಾಡಬಾರದು. ಇದು ವಿಶ್ವಹಿಂದೂ ಪರಿಷತ್‌ ಹಾಗೂ ಸಾಧು–ಸಂತರ ನಿಲುವು ಎಂದು ಘೋಷಿಸಿದರು.

ಪ್ರಕರಣ ಸುಧೀರ್ಘ ವಿಚಾರಣೆ ನಡೆದಿದ್ದು, ನ.15ರೊಳಗೆ ತೀರ್ಪು ಬರುವ ವಿಶ್ವಾಸವಿದೆ. ಸುಪ್ರೀಂಕೋರ್ಟ್‌ ಹಾಗೂ ಸಂವಿಧಾನಕ್ಕೆ ಎಲ್ಲರೂ ಗೌರವ ಕೊಡಬೇಕು. ಹಿಂದೂಗಳು ಸಂಭ್ರಮಿಸಬೇಕಾದರೆ ಮಠ, ದೇವಸ್ಥಾನಗಳಲ್ಲಿ ಭಜನೆ, ಪೂಜೆ ಸಲ್ಲಿಸಬೇಕು ಎಂದು ಸ್ವಾಮೀಜಿ ಹೇಳಿದರು.

ರಾಮಮಂದಿರ ನಿರ್ಮಾಣ ಬೇಡ ಎಂದು ಮುಸ್ಲಿ ಸಮುದಾಯ ಪಟ್ಟು ಹಿಡಿದಿಲ್ಲ. ಈಚೆಗೆ ಮುಸ್ಲಿ ಮುಖಂಡರ ಜತೆ ರವಿಶಂಕರ ಗುರೂಜಿ ನಡೆಸಿದ ಸಂಧಾನ ಯಶಸ್ವಿಯಾಗಿದೆ. ಹಾಗಾಗಿ, ತೀರ್ಪು ಯಾವುದೇ ಬಂದರೂ ಮುಸ್ಲಿಮರು ವಿರೋಧ ಮಾಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.

‘ಟಿಪ್ಪುವಿನ ಎರಡೂ ಮುಖ ದಾಖಲಾಗಲಿ’

ಟಿಪ್ಪು ಸುಲ್ತಾನ್‌ ಒಳ್ಳೆಯದನ್ನೂ ಮಾಡಿದ್ದಾನೆ. ಕೆಟ್ಟ ಕೆಲಸವನ್ನೂ ಮಾಡಿದ್ದಾನೆ. ಹಾಗಾಗಿ ಟಿಪ್ಪುವಿನ ಎರಡೂ ಮುಖಗಳು ಪಠ್ಯದಲ್ಲಿ ದಾಖಲಾಗಬೇಕು. ಟಿಪ್ಪು ಉತ್ತಮ ಆಡಳಿತ ಕೊಟ್ಟಿದ್ದಾನೆ. ಆಡಳಿತದಲ್ಲಿ ಸುಧಾರಣೆ ತಂದಿದ್ದಾನೆ. ಹಾಗೆಯೇ ವಿವಾದಿತ ವ್ಯಕ್ತಿ ಕೂಡ. ಕೊಡಗಿನವರ ಹಾಗೂ ಕ್ರೈಸ್ತರ ಹತ್ಯಾಕಾಂಡ ನಡೆಸಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಹಾಗಾಗಿ, ಟಿಪ್ಪುವಿನ ಎರಡೂ ಮುಖಗಳನ್ನು ಪಠ್ಯದಲ್ಲಿ ದಾಖಲಿಸಬೇಕು. ಇತಿಹಾಸದಲ್ಲಿ ಸತ್ಯಾಂಶ ಇರಬೇಕೇ ಹೊರತು, ಅತಿಶಯೋಕ್ತಿ ಇರಬಾರದು ಎಂದು ಪೇಜಾವರ ಶ್ರೀಗಳು ಅಭಿಪ್ರಾಯಪಟ್ಟರು.‌

ಜೈಲಿನಿಂದ ಬಿಡುಗಡೆ ಮಾಡುವಂತೆ ಬ್ರಿಟಿಷರಿಗೆ ಸಾವರ್ಕರ್‌ ಕ್ಷಮಾಪಣಾ ಪತ್ರ ಬರೆದಿದ್ದು ತಪ್ಪು. ಆದರೆ, ಪತ್ರ ಬರೆದ ಉದ್ದೇಶ ಬೇರೆ ಇತ್ತು. ಸಾಯುವವರೆಗೂ ಜೈಲಿನಲ್ಲಿ ಕೊಳೆಯುವ ಬದಲು ಬಿಡುಗಡೆಯಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವುದು ಸಾರ್ವರ್ಕರ್‌ ಉದ್ದೇಶವಾಗಿತ್ತು ಎಂದು ಶ್ರೀಗಳು ಸಮರ್ಥನೆ ನೀಡಿದರು.

ಪ್ರತಿಕ್ರಿಯಿಸಿ (+)