ಮಂಗಳವಾರ, ಮಾರ್ಚ್ 9, 2021
31 °C

ವಿಶ್ವವಿಖ್ಯಾತ ತಾಣವಾಗಿ ಬಾದಾಮಿ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರತಿನಿಧಿಸುವ ಬಾಗಲಕೋಟೆ ಜಿಲ್ಲೆ ಬಾದಾಮಿ ಕ್ಷೇತ್ರ ವ್ಯಾಪ‍್ತಿಯ ಬಾದಾಮಿ ಪಟ್ಟಣವನ್ನು ವಿಶ್ವವಿಖ್ಯಾತ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವುದಾಗಿ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಈ ಉದ್ದೇಶಕ್ಕಾಗಿ ₹25 ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದರು.

ಹಂಪಿ ಮತ್ತು ಮೈಸೂರಿನ ಪ್ರವಾಸಿತಾಣಗಳ ವೀಕ್ಷಣೆಗಾಗಿ ಪ್ರವಾಸಿಗರಿಗೆ ಲಂಡನ್ ಬಿಗ್‌ ಬಸ್ ಮಾದರಿಯ ಆರು ಡಬ್ಬಲ್ ಡೆಕ್ಕರ್ ಬಸ್‌ಗಳನ್ನು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಪ್ರಾರಂಭಿಸಲಾಗುತ್ತದೆ. ಇದಕ್ಕಾಗಿ ₹5 ಕೋಟಿ ಅನುದಾನ ನೀಡಲಾಗಿದೆ.

ಪ್ರವಾಸೋದ್ಯಮವನ್ನು ಉತ್ತೇಜಿಸಿ ದೇಶ–ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಲು ಕರ್ನಾಟಕ ಅಂತರರಾಷ್ಟ್ರೀಯ ಪ‍್ರವಾಸೋದ್ಯಮ ಪ್ರದರ್ಶನ ಏರ್ಪಡಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದಕ್ಕೆ ₹2 ಕೋಟಿ ಅನುದಾಣ ಒದಗಿಸಲಾಗಿದೆ.

ವಿಶ್ವವಿಖ್ಯಾತ ಐತಿಹಾಸಿಕ ಹಂಪಿ ಪ್ರವಾಸಿ ತಾಣದಲ್ಲಿ ಹಂಪಿ ವ್ಯಾಖ್ಯಾನ ಕೇಂದ್ರವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಸ್ತಾಪಿಸಲಾಗಿದೆ. ಈ ಉದ್ದೇಶಕ್ಕಾಗಿ ₹ 1 ಕೋಟಿ ನೀಡಲಾಗಿದೆ.

ವಿಜಯಪುರ ವ್ಯಾಖ್ಯಾನ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಈ ಸಾಲಿನಲ್ಲಿ ₹1 ಕೋಟಿ ಅನುದಾನ ಕೊಡಲಾಗಿದೆ. 

ಕೌನ್ಸೆಲಿಂಗ್ ಮೂಲಕವೇ ವರ್ಗಾವಣೆ: ಇತ್ತೀಚಿನ ದಿನಗಳಲ್ಲಿ ವರ್ಗಾವಣೆ ಸಂಬಂಧದ ವಿಷಯಗಳಲ್ಲಿ ಬಹಳಷ್ಟು ಟೀಕೆಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಆಡಳಿತ ಸುಧಾರಣೆಯಲ್ಲಿ ಹಾಗೂ ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ಪಾರದರ್ಶಕತೆ ತರಲು ಎಲ್ಲ ಇಲಾಖೆಗಳಲ್ಲಿನ  ಸಿ ಹಾಗೂ ಡಿ ವೃಂದದ ನೌಕರರ ವರ್ಗಾವಣೆಗಳನ್ನು ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮೂಲಕ ನಡೆಸಲು ಹೊಸ ಕಾಯ್ದೆ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಪ್ರಸ್ತಾಪಿಸಿದ್ದಾರೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಇನ್‌ಫೋನೊಮಿಕ್ಸ್‌ ಶಾಖೆ ಪ‍್ರಾರಂಭಿಸಿ ಉದಯೋನ್ಮುಖ ಕಂಪನಿ ಹಾಗೂ ಸಮಸ್ಥೆಗಳಿಗೆ ಸಮಂಜಸವಾದ ದರಕ್ಕೆ ಅಗತ್ಯವಾದ ಮಾಹಿತಿ ಒದಗಿಸುವ ಮೂಲಕ ಜನಸಾಮಾನ್ಯರು ಹಾಗೂ ಕೃಷಿಕ ಸಮಾಜಕ್ಕೆ ಉಪಯೋಗವಾಗುವ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡಲಾಗುವುದು ಎಂದು ಬಜೆಟ್‌ನಲ್ಲಿ ಪ್ರತಿಪಾದಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು