ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ ಕಾಳ್ಗಿಚ್ಚು: ಮೈಮರೆತರೇ ಅಧಿಕಾರಿಗಳು?

ಪೂರ್ವಸಿದ್ಧತೆ, ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ, ಸ್ಥಳೀಯರೊಂದಿಗೆ ಹದಗೆಟ್ಟ ಬಾಂಧವ್ಯ
Last Updated 26 ಫೆಬ್ರುವರಿ 2019, 19:21 IST
ಅಕ್ಷರ ಗಾತ್ರ

ಬಂಡೀಪುರ: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಳ್ಗಿಚ್ಚು ಉಂಟಾಗಲು ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೇ.ಇಂತಹದೊಂದು ಪ್ರಶ್ನೆ ಈಗ ಉದ್ಭವವಾಗಿದೆ.

ಕಳೆದ ವರ್ಷ ಬಂಡೀಪುರದಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿರಲಿಲ್ಲ. ಇಡೀ ಪ್ರದೇಶವನ್ನು ‘ಶೂನ್ಯ ಬೆಂಕಿ’ (ಝೀರೊ ಫೈರ್‌) ವಲಯ ಎಂದು ಘೋಷಿಸಲಾಗಿತ್ತು.

2017ರ ಫೆಬ್ರುವರಿಯಲ್ಲಿ 7 ದಿನಗಳ ಕಾಲ ಬಂಡೀಪುರದ ಕಾಡು ಹೊತ್ತಿ ಉರಿದಿತ್ತು. ಆಗಲೂ ಅಂದಾಜು 10 ಸಾವಿರ ಎಕರೆಯಷ್ಟು ಅರಣ್ಯ ನಾಶವಾಗಿತ್ತು.

ಇದರಿಂದ ಎಚ್ಚೆತ್ತುಕೊಂಡಿದ್ದ ಅಧಿಕಾರಿಗಳು ಕಳೆದ ವರ್ಷ ಕಾಳ್ಗಿಚ್ಚು ತಡೆಗೆ ಬೆಂಕಿ ರೇಖೆ ನಿರ್ಮಾಣ, ಡ್ರೋಣ್ ಕಾರ್ಯಾಚರಣೆ ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು. ಇದರ ಜೊತೆಗೆ, ಮುಂಗಾರು ಪೂರ್ವ ಮಳೆ ಫೆಬ್ರುವರಿ ಕೊನೆಯ ಭಾಗದಲ್ಲೇ ಆರಂಭವಾಗಿತ್ತು. ಹಾಗಾಗಿ ಕಾಳ್ಗಿಚ್ಚು ಕಂಡು ಬಂದಿರಲಿಲ್ಲ.

ಪೂರ್ವ ಸಿದ್ಧತೆ ಕಡಿಮೆ: ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಬಂಡೀಪುರದಲ್ಲಿ ಕಾಳ್ಗಿಚ್ಚು ತಡೆಗೆ ಅಧಿಕಾರಿಗಳು ಹೆಚ್ಚು ಪೂರ್ವ ಸಿದ್ಧತೆಗಳನ್ನು ಮಾಡಿರಲಿಲ್ಲ ಎಂದು ಹೇಳಲಾಗುತ್ತಿದೆ.

ವಾರ್ಷಿಕವಾಗಿ ಮಾಡುವ ಬೆಂಕಿ ರೇಖೆ (ಫೈರ್ ಲೈನ್) ನಿರ್ಮಾಣ ಕೆಲಸ ಬಿಟ್ಟರೆ ಬೇರೇನೂ ಮಾಡಿಲ್ಲ. ಬೆಂಕಿ ರೇಖೆಯನ್ನೂ ಕೆಲವು ಕಡೆ ಸರಿಯಾಗಿ ಮಾಡಿಲ್ಲ ಎಂಬ ಆರೋಪವೂ ಇದೆ.ಬೆಂಕಿ ವಾಚರ್‌ಗಳನ್ನು ನೇಮಕ ಮಾಡಿಕೊಂಡಿದ್ದರೂ ಸಾಕಷ್ಟು ಪ್ರಮಾಣದಲ್ಲಿ ನೇಮಕಾತಿ ಮಾಡಿಲ್ಲ ಎಂದು ಹೇಳಲಾಗುತ್ತಿದೆ.

ಸಿದ್ಧತೆಗಳ ಬಗ್ಗೆ ‘ಪ್ರಜಾವಾಣಿ’ಗೆ ಸ್ಪಷ್ಟನೆ ನೀಡಿರುವ ಬಂಡೀಪುರ ಹುಲಿಯೋಜನೆ ನಿರ್ದೇಶಕ ಅಂಬಾಡಿ ಮಾಧವ್‌, ‘ಪ್ರತಿ ವರ್ಷದಂತೆ ಈ ಬಾರಿಯೂ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ.
ಅದರಲ್ಲಿ ಯಾವುದೇ ಲೋಪವಾಗಿಲ್ಲ' ಎಂದರು.

ಸಮನ್ವಯ ಕೊರತೆ: ಬಂಡೀಪುರ ರಾಷ್ಟ್ರೀಯ ಉದ್ಯಾನದ ಉನ್ನತ ಅಧಿಕಾರಿಗಳ ನಡುವೆ ಸಂವಹನ ಮತ್ತು ಸಮನ್ವಯದ ಕೊರತೆಯೂ ಇತ್ತು ಎಂದು ಎನ್ನಲಾಗಿದೆ.

ಅಂಬಾಡಿ ಮಾಧವ್ ಅವರು ಎರಡು ತಿಂಗಳ ಹಿಂದೆ ಮೈಸೂರು ವೃತ್ತಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಬಡ್ತಿ ಪಡೆದ ನಂತರ ಸಂವಹನ ಮತ್ತು ಸಮನ್ವಯದ ಕೊರತೆ ಮತ್ತಷ್ಟು ಹೆಚ್ಚಾಯಿತು. ನಿರ್ದೇಶಕರು ಒಂದು ದಿಕ್ಕಿನಲ್ಲಿ ಯೋಚಿಸಿದರೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತೊಂದು ದಿಕ್ಕಿನಲ್ಲಿ ಯೋಚಿಸುತ್ತಿದ್ದರು ಎಂದು ಹೇಳುತ್ತವೆ ಇಲಾಖೆ ಮೂಲಗಳು.

'ಹುದ್ದೆಗೆ ಬೇರೆ ಯಾರನ್ನೂ ನೇಮಿಸಿರಲಿಲ್ಲ. ಖಾಲಿಯಾಗುವ ಹುದ್ದೆಯ ಬಗ್ಗೆ ಒಂದು ತಿಂಗಳ‌ ಮೊದಲೇ ನಾವು ಸರ್ಕಾರಕ್ಕೆ ಮಾಹಿತಿ ನೀಡುತ್ತೇವೆ' ಎಂದು ಅರಣ್ಯ ಪಡೆಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಪುನಟಿ ಶ್ರೀಧರ್ ಹೇಳಿದರು.

ಹದಗೆಟ್ಟ ಬಾಂಧವ್ಯ: ‘ಅರಣ್ಯ ರಕ್ಷಣೆ ವಿಚಾರದಲ್ಲಿ ಸ್ಥಳೀಯರನ್ನು ವಿಶ್ವಾಸಕ್ಕೆ‌ ತೆಗೆದುಕೊಳ್ಳುವುದು ಮುಖ್ಯ. ಆದರೆ, ಬಂಡೀಪುರದ ಅಧಿಕಾರಿಗಳು ಕಾಡಂಚಿನ ಪ್ರದೇಶದ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿಲ್ಲ’ ಎಂಬುದು ವನ್ಯಪ್ರೇಮಿಗಳ ಆರೋಪ.

‘ಬೇಸಿಗೆಗೆ ಮುಂಚಿತವಾಗಿ ಕಾಡಂಚಿನ ಜನರೊಂದಿಗೆ ಸಭೆ ನಡೆಸಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಈ ವರ್ಷ ಆಗಿಲ್ಲ.

ಜನವರಿ ಮೊದಲ ವಾರ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಸಣ್ಣ ಪುಟ್ಟ‌ ಬೆಂಕಿ ಪ್ರಕರಣಗಳು ವರದಿಯಾಗಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಬಂಡೀಪುರ ಹಾನಿ: ಸಿ.ಎಂ ವೈಮಾನಿಕ ಸಮೀಕ್ಷೆ

ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಕಾಳ್ಗಿಚ್ಚಿನಿಂದ ಸುಟ್ಟುಹೋಗಿರುವ ಅರಣ್ಯ ಪ್ರದೇಶಗಳ ಪರಿಸ್ಥಿತಿಯ ವೈಮಾನಿಕ ಸಮೀಕ್ಷೆಯನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಡೆಸಲಿದ್ದಾರೆ.

ಬುಧವಾರ ಬೆಳಿಗ್ಗೆ 10ಗಂಟೆಗೆ ಬೆಂಗಳೂರಿನ ಎಚ್ಎಎಲ್‌ ವಿಮಾನ ನಿಲ್ದಾಣದಿಂದ ಹೊರಡಲಿರುವ ಅವರು, ಬಂಡೀಪುರ ಹುಲಿ ಯೋಜನೆ ಪ್ರದೇಶದ ಕರಡಿಕಲ್ಲು, ಗೋಪಾಲಸ್ವಾಮಿ ಬೆಟ್ಟಗಳಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುವರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT