ರಾತ್ರಿ ಸಂಚಾರ ನಿಷೇಧ ತೆರವಿಗೆ ಕೇಂದ್ರದ ಒತ್ತಡ

7
ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ

ರಾತ್ರಿ ಸಂಚಾರ ನಿಷೇಧ ತೆರವಿಗೆ ಕೇಂದ್ರದ ಒತ್ತಡ

Published:
Updated:

ಬೆಂಗಳೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸಬೇಕು ಎಂದು ಕೇಂದ್ರ ಸರ್ಕಾರದ ರಸ್ತೆ ಮತ್ತು ಸಾರಿಗೆ ಮಂತ್ರಾಲಯವು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದೆ.

ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಮಂತ್ರಾಲಯದ ಕಾರ್ಯದರ್ಶಿ ವೈ.ಎಸ್. ಮಲಿಕ್‌ ಅವರು ಇತ್ತೀಚೆಗೆ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರದ ವನ್ಯಜೀವಿ ಮಂಡಳಿಯ ಸದಸ್ಯ ಸಂಜಯ್‌ ಗುಬ್ಬಿ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಬುಧವಾರ ಭೇಟಿ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬಾರದು ಎಂದು ಒತ್ತಾಯಿಸಿತು.

ರಾಷ್ಟ್ರೀಯ ಹೆದ್ದಾರಿ 212 ಮತ್ತು 67ರಲ್ಲಿ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6ರ ವರೆಗೆ ವಾಹನಗಳ ಸಂಚಾರ ನಿರ್ಬಂಧ ವಿಧಿಸಿ ಚಾಮರಾಜನಗರ ‌ಜಿಲ್ಲಾ ಆಡಳಿತ 2009ರಲ್ಲಿ ಆದೇಶ ಹೊರಡಿಸಿತ್ತು. ವಾಹನಗಳ ಸಂಚಾರ ನಿರ್ಬಂಧವನ್ನು ರದ್ದುಪಡಿಸದಂತೆ ಹೈಕೋರ್ಟ್‌ 2010ರ ಮಾರ್ಚ್‌ 9ರಂದು ಆದೇಶಿಸಿತ್ತು. ನಿರ್ಬಂಧ ತೆರವುಗೊಳಿಸಬೇಕು ಎಂದು 2010ರಿಂದಲೇ ಕೇರಳದ ಜನಪ್ರತಿನಿಧಿಗಳು ರಾಜ್ಯದ ಮೇಲೆ ಒತ್ತಡ ಹೇರಿದ್ದರು. ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್‌.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಜಗದೀಶ ಶೆಟ್ಟರ್‌, ಸಿದ್ದರಾಮಯ್ಯ ಅವರು ಇದಕ್ಕೆ ಒಪ್ಪಿರಲಿಲ್ಲ. 

ಕರ್ನಾಟಕ ಹಾಗೂ ಕೇರಳ ಮುಖ್ಯಮಂತ್ರಿಗಳ ನಡುವೆ 2018ರ ಏಪ್ರಿಲ್‌ 15ರಂದು ಸಭೆ ನಡೆದಿತ್ತು. ತಜ್ಞರ ಸಮಿತಿ ರಚಿಸಿ ಕಾನೂನು ಸಲಹೆ ಪಡೆಯಬೇಕು ಎಂದು ಕೇರಳದ ಮುಖ್ಯಮಂತ್ರಿ ಮಾಡಿದ್ದರು. ತಜ್ಞರಾದ ಪ್ರೊ.ಸುಕುಮಾರ್, ಅಜಯ್‌ ದೇಸಾಯಿ, ಸಂಜಯ್‌ ಗುಬ್ಬಿ ಅವರನ್ನು ಒಳಗೊಂಡ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿತ್ತು.  ‘ಪರಿಸರ ಸಂರಕ್ಷಣೆಯ ಅಂಶಗಳನ್ನು ಗಮನಿಸಿ ಮತ್ತು ಬದಲಿ ರಸ್ತೆಯ ವ್ಯವಸ್ಥೆ ಇರುವುದರಿಂದ ಪ್ರಸ್ತುತ ಸ್ಥಿತಿಯನ್ನು ಮುಂದುವರಿಸಬೇಕು. ಸಾಧ್ಯವಾದರೆ ರಾತ್ರಿ ಸಂಚಾರ ನಿಷೇಧವನ್ನು ಸಂಜೆ 6ರಿಂದ ಬೆಳಿಗ್ಗೆ 9ರ ವರೆಗೆ ವಿಸ್ತರಿಸಬೇಕು’ ಎಂದು ಸಮಿತಿ ವರದಿ ನೀಡಿತ್ತು.

‘ಈ ಪ್ರಕರಣ ಸುಪ್ರೀಂ ಕೋರ್ಟ್‌ನ ವಿಚಾರಣೆಯ ಹಂತದಲ್ಲಿದ್ದರೂ, ಕರ್ನಾಟಕದ ಮೇಲೆ ಈ ರೀತಿ ಒತ್ತಡ ಹೇರುವ ಪ್ರಯತ್ನ ಮಾಡಲಾಗುತ್ತಿದೆ. ಇದು ನ್ಯಾಯಾಲಯದ ನಿಂದನೆಯಾಗಿದೆ. ಜತೆಗೆ, ಹುಲಿ ಸಂರಕ್ಷಣಾ ಪ್ರಾಧಿಕಾರದ ವರದಿಯನ್ನೂ ಕಡೆಗಣಿಸಲಾಗಿದೆ. ಸಂಚಾರ ನಿಷೇಧದಿಂದ ಯಾವುದೇ ಸಾರಿಗೆ ವ್ಯವಸ್ಥೆಗೆ ತೊಂದರೆಯಾಗುವುದಿಲ್ಲ ಮತ್ತು ರಾತ್ರಿ ಹೊತ್ತು ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳ ದಟ್ಟಣೆ ಇರುವುದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿತ್ತು’ ಎಂದು ಸಂಜಯ್‌ ಗುಬ್ಬಿ ತಿಳಿಸಿದ್ದಾರೆ.

‘ಈ ಹೆದ್ದಾರಿಯ ಪರ್ಯಾಯ ರಸ್ತೆಯನ್ನು (ಹುಣಸೂರು-ಗೋಣಿಕೊಪ್ಪ-ಕುಟ್ಟ-ಮಾನಂತವಾಡಿ) ಕರ್ನಾಟಕ ಸರ್ಕಾರವು ₹75 ಕೋಟಿ ವ್ಯಯಿಸಿ ಅಭಿವೃದ್ಧಿಪಡಿಸಿದೆ. ಈ ರಸ್ತೆಯಲ್ಲಿ ಸಂಚರಿಸಿದರೆ ಹೆಚ್ಚು ಇಂಧನ ಖರ್ಚಾಗುತ್ತದೆ ಎಂದು ಮಂತ್ರಾಲಯದ ಕಾರ್ಯದರ್ಶಿ ಬಾಲಿಶ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಅವರು ರಾಜ್ಯದ ಹಿತಾಸಕ್ತಿಯನ್ನು ಬಲಿಕೊಡುವುದಿಲ್ಲ ಎಂಬ ವಿಶ್ವಾಸ ಇದೆ’ ಎಂದಿದ್ದಾರೆ.

ಯಥಾಸ್ಥಿತಿ ಮುಂದುವರಿಕೆ: ಸಿ.ಎಂ

‘ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಹೀಗಾಗಿ ಯಥಾಸ್ಥಿತಿ ಮುಂದುವರಿಯಲಿದೆ. ರಾಜ್ಯದ ಹಿತ ಬಲಿಕೊಡಲು ಸಾಧ್ಯವಿಲ್ಲ. ಕೇಂದ್ರ ಸಾರಿಗೆ ಸಚಿವರಿಗೂ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ’ ಎಂದು ಎಚ್‌.ಡಿ.ಕುಮಾರಸ್ವಾಮಿ ಅವರು ನಿಯೋಗಕ್ಕೆ ಭರವಸೆ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !