ಪಂಚಮಸಾಲಿ ಪೀಠಗಳ ಒಗ್ಗೂಡಿಕೆಗೆ ಅಭ್ಯಂತರವಿಲ್ಲ

7
ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯಂಜಯ ಸ್ವಾಮೀಜಿ

ಪಂಚಮಸಾಲಿ ಪೀಠಗಳ ಒಗ್ಗೂಡಿಕೆಗೆ ಅಭ್ಯಂತರವಿಲ್ಲ

Published:
Updated:
Deccan Herald

ದಾವಣಗೆರೆ: ‘ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಮತ್ತು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠಗಳ ಒಗ್ಗೂಡುವಿಕೆಗೆ ನನ್ನ ಅಭ್ಯಂತರವಿಲ್ಲ’ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದ ಹೊರವಲಯದಲ್ಲಿರುವ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಶುಕ್ರವಾರ ಕಾಯಕ ದಾಸೋಹ ಮಂಟಪ ಏರ್ಪಡಿಸಿದ್ದ 135ನೇ ಬಸವಸಂಗಮ ಹಾಗೂ ಮಡಿವಾಳ ಮಾಚಿದೇವ ಜಯಂತ್ಯುತ್ಸವದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಸಮಾಜದ ಬಹುಜನರು ಪೀಠಗಳು ಒಂದಾಗಬೇಕು ಎಂಬ ಆಶಯ ಹೊಂದಿದ್ದಾರೆ. ಮಾನಸಿಕವಾಗಿ ನಾವು ಒಂದಾಗಿಯೇ ಇದ್ದೇವೆ. ಜನರಲ್ಲಿ, ಸ್ವಾಮೀಜಿಗಳಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಆದರೆ, ಮಠಗಳ ಆಡಳಿತ ಮಂಡಳಿಗಳ ಅಭಿಪ್ರಾಯಗಳಲ್ಲಿ ವ್ಯತ್ಯಾಸಗಳಿವೆ. ಅವನ್ನು ಸರಿಪಡಿಸಿ ಪೀಠಗಳನ್ನು ಒಗ್ಗೂಡಿಸುವುದಕ್ಕಾಗಿ ಸಮಾಜದ ಮುಖಂಡ ಮುರುಗೇಶ್ ನಿರಾಣಿ ನೇತೃತ್ವದಲ್ಲಿ ಸಭೆಗಳು ನಡೆದಿವೆ. ಮುಂದೆ ಸಮಾಜದ ಹಿರಿಯರು ಕೈಗೊಳ್ಳುವ ನಿರ್ಧಾರಕ್ಕೆ ಪೀಠ ಬದ್ಧ’ ಎಂದರು.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಿಂದ ಲಿಂಗಾಯತರ ಜನಸಂಖ್ಯೆ 80 ಲಕ್ಷ ಇದೆ ಎಂದು ಗೊತ್ತಾಗಿದೆ ಎಂಬುದು ಊಹಾಪೋಹ. ಸಮೀಕ್ಷೆಯ ವರದಿ ಇನ್ನೂ ಬಹಿರಂಗಗೊಂಡಿಲ್ಲ. ಆದರೆ, ರಾಜ್ಯದಲ್ಲಿ 2 ಕೋಟಿಗೂ ಹೆಚ್ಚು ಲಿಂಗಾಯತರ ಸಂಖ್ಯೆ ಇದೆ ಎಂಬ ಮಾಹಿತಿಯಿದೆ ಎಂದು ಹೇಳಿದರು.

ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯ ಪ್ರಸ್ತಾವ ಪರಿಶೀಲನೆಯ ಹಂತದಲ್ಲಿದೆ ಎಂದು ಕೇಂದ್ರ ಸರ್ಕಾರದ ಅಡ್ವೊಕೇಟ್‌ ಜನರಲ್‌ ತಿಳಿಸಿದ್ದಾರೆ. ಕೇಂದ್ರ ಸರ್ಕಾರ, ರಾಜ್ಯದ ಶಿಫಾರಸನ್ನು ಅನುಷ್ಠಾನಕ್ಕೆ ತರುವುದು ತಡವಾದರೆ ಸುಪ್ರೀಂ ಕೋರ್ಟ್‌ ಮೊರೆಹೋಗಲಾಗುವುದು. ಕಾನೂನು ಹೋರಾಟದ ಮೂಲಕ ನ್ಯಾಯ ಪಡೆಯಲಾಗುವುದು ಎಂದು ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !