ಗುರುವಾರ , ಡಿಸೆಂಬರ್ 12, 2019
25 °C

ನಾಯಕರ ನಿರುತ್ಸಾಹ: ಮಂಕು ಕವಿದ ಸುವರ್ಣಸೌಧ

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

ಬೆಳಗಾವಿ: ಆಡಳಿತ ನಡೆಸುತ್ತಿರುವ ನಾಯಕರ ನಿರುತ್ಸಾಹದಿಂದಾಗಿ ವಿಧಾನಮಂಡಲ ಅಧಿವೇಶನ ನೆಪದಲ್ಲಿ ವರ್ಷಕ್ಕೊಮ್ಮೆ ನಡೆಯುತ್ತಿದ್ದ 15 ದಿನಗಳ ಸಂಭ್ರಮಾಚರಣೆ‌ಗೆ ಈ ಬಾರಿ ಮಂಕು ಕವಿದಿದೆ.

ಬೆಳಗಾವಿ ಮೇಲೆ ಹಿಡಿತ ಸಾಧಿಸಿ, ಅದನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಮಹಾರಾಷ್ಟ್ರ ಏಕೀಕರಣ ಸಮಿತಿಯ ಬೇಡಿಕೆಗೆ ಸಡ್ಡುಹೊಡೆದು, ಸಮಗ್ರ ಕರ್ನಾಟಕದ ಸಾರ್ವಭೌಮತೆ ಹಾಗೂ ಅಸ್ಮಿತೆಯನ್ನು ಎತ್ತಿಹಿಡಿಯಲು ಅಧಿವೇಶನ ನಡೆಸುವ ಪರಂಪರೆ ಆರಂಭವಾಯಿತು. ಬೆಳಗಾವಿ ಕನ್ನಡನಾಡಿನ ಅವಿಭಾಜ್ಯ ಅಂಗವೆಂದು ಸಾರಲು ಇದು ವೇದಿಕೆಯೂ ಆಯಿತು. ಹೀಗಾಗಿ, ಈ ಭಾಗದ ಜನರು ಅಧಿವೇಶನವನ್ನು ಹಬ್ಬದಂತೆ, ಸರ್ಕಾರವನ್ನು ಎಚ್ಚರಿಸುವ ಹೋರಾಟದ ವೇದಿಕೆಯಂತೆ ಭಾವಿಸುತ್ತಲೇ ಬಂದಿದ್ದಾರೆ.

ಅಧಿವೇಶನಕ್ಕೆ ಮುನ್ನವೇ ತಮ್ಮ ದಂಡು ದರ್ಬಾರಿನೊಂದಿಗೆ ಬರುತ್ತಿದ್ದ ಆಳುವ ಪಕ್ಷದ ನಾಯಕರು, ಇಂತಹ ಸಡಗರಕ್ಕೆ ತಯಾರಿ ನಡೆಸುತ್ತಿದ್ದರು. ಅಧಿವೇಶನ ಆರಂಭವಾಗುವ ಮುನ್ನ ‘ಕುಂದಾ ನಗರಿ’ ನಳನಳಿಸುತ್ತಿತ್ತು.

ಬೇಡವಾದ ಕೂಸು: ಬೆಳಗಾವಿಯ ರಾಜಕಾರಣ ಅನೇಕ ಬಾರಿ ಮೈತ್ರಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದೆ. ಸಮ್ಮಿಶ್ರ ಸರ್ಕಾರದ ನೇತಾರ ಎಚ್.ಡಿ. ಕುಮಾರಸ್ವಾಮಿ, ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದ್ದಾರೆ ಎಂಬ ಭಾವನೆಯೂ ಈ ಭಾಗದಲ್ಲಿದೆ. ಬಿಜೆಪಿ ನಾಯಕರೂ ಈ ವಾದಕ್ಕೆ ಧ್ವನಿಗೂಡಿಸಿದ್ದಾರೆ.

ಅಧಿವೇಶನಕ್ಕೆ ಸಿದ್ಧಗೊಳ್ಳಬೇಕಿದ್ದ ಸುವರ್ಣಸೌಧದಲ್ಲಿ ಭಾನುವಾರ ಮಂಕು ಕವಿದಿತ್ತು. ಅಧಿವೇಶನ ಆರಂಭವಾಗುವ ಹಿಂದಿನ ದಿನ ಸಭಾಧ್ಯಕ್ಷರು, ಸಭಾಪತಿಗಳು ಸುವರ್ಣಸೌಧಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸುವುದು ವಾಡಿಕೆ. 10 ದಿನಗಳ ಕಲಾಪ ಹೇಗೆ ನಡೆಯುತ್ತಿದೆ, ಯಾವ ವಿಷಯಗಳು ಚರ್ಚೆಗೆ ಬರಲಿವೆ, ಮಂಡನೆಯಾಗಲಿರುವ ಮಸೂದೆಗಳ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮುನ್ನೋಟ ಬೀರುವ ಪರಂಪರೆಯೂ ಇತ್ತು.

ಆದರೆ, ಈ ಬಾರಿ ಸಭಾಧ್ಯಕ್ಷ ಕೆ.ಆರ್. ರಮೇಶ್‌ ಕುಮಾರ್ ಅವರು ಅಧಿವೇಶನಕ್ಕೆ ಮುನ್ನಾದಿನ ಬೆಳಗಾವಿಗೆ ಬಂದೇ ಇಲ್ಲ. ಹಂಗಾಮಿ ಸಭಾಪತಿಯಾಗಿರುವ ಬಸವರಾಜ ಹೊರಟ್ಟಿ ಅವರಿಗೆ ಹುದ್ದೆ ಇರುತ್ತದೆಯೋ ಇಲ್ಲವೋ ಎಂಬುದು ಗೊತ್ತಿಲ್ಲ. ಹೀಗಾಗಿ ಅವರು ಹೆಚ್ಚು ಆಸಕ್ತಿ ವಹಿಸಿಲ್ಲ.

ಸರ್ಕಾರದಲ್ಲಿ ಕುಮಾರಸ್ವಾಮಿ ಎಡ–ಬಲದಲ್ಲಿ ನಿಲ್ಲುವ ಸಚಿವರಾದ ಎಚ್.ಡಿ.ರೇವಣ್ಣ ಹಾಗೂ ಡಿ.ಕೆ. ಶಿವಕುಮಾರ್ ಅವರು ಇತ್ತ ತಲೆ ಹಾಕಿಲ್ಲ. 

ವಿಧಾನಸಭೆ ಆಡಳಿತ ಪಕ್ಷದ ಮುಖ್ಯ ಸಚೇತಕ ಗಣೇಶ ಹುಕ್ಕೇರಿ, ವಿಧಾನಪರಿಷತ್ತಿನ ವಿರೋಧ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ  ಇಬ್ಬರೂ ಬೆಳಗಾವಿ ಜಿಲ್ಲೆಯವರು. ಇವರು ಕೂಡ ಸುವರ್ಣಸೌಧದ ಮುಖ ನೋಡಿಲ್ಲ.

ಸರ್ಕಾರ ನಡೆಸುವವರು, ವಿಧಾನಸಭೆ, ಪರಿಷತ್ತಿನ ಸಚಿವಾಲಯದ ಪ್ರಮುಖರು ಅನಾಸಕ್ತಿ ತೋರಿರುವುದರಿಂದ ಅಧಿಕಾರಿಗಳು ಕೂಡ ಅಧಿವೇಶನದ ಸಿದ್ಧತೆಯತ್ತ ತಲೆ ಕೆಡಿಸಿಕೊಂಡಿಲ್ಲ. 

ಭಾನುವಾರ ಮಧ್ಯಾಹ್ನವಷ್ಟೇ ಸುವರ್ಣಸೌಧವನ್ನು ಸ್ವಚ್ಛಗೊಳಿಸುವ, ಆಲಂಕಾರಿಕ ಗಿಡಗಳನ್ನು ತಂದಿಟ್ಟು ಸಿಂಗರಿಸುವ ಚಟುವಟಿಕೆ ಶುರುವಾಗಿತ್ತು.

ಅಧಿಕಾರಿಗಳ ಗೊಂದಲ: ವಿಧಾನಸಭೆ ಕಲಾಪವನ್ನು ಯಾರು ಮುನ್ನಡೆಸಬೇಕು ಎಂಬ ಗೊಂದಲ ಸಚಿವಾಲಯದಲ್ಲಿ ಮೂಡಿದೆ.

ಕಾರ್ಯದರ್ಶಿ ಎಸ್. ಮೂರ್ತಿ ಅವರಿಗೆ ಶಿಷ್ಟಾಚಾರ ಪಾಲನೆಯ ಅಧಿಕಾರವನ್ನು ಮಾತ್ರ ನೀಡಿದ್ದು, ಉಳಿದೆಲ್ಲ ಅಧಿಕಾರಗಳನ್ನು ಸಚಿವಾಲಯದ ನಿರ್ದೇಶಕಿ ಎಂ.ಕೆ. ವಿಶಾಲಾಕ್ಷಿ ಅವರಿಗೆ ನೀಡಲಾಗಿದೆ. ಹೀಗಾಗಿ, ಕಾರ್ಯದರ್ಶಿ ಸ್ಥಾನದಲ್ಲಿ ಕುಳಿತು ಕಲಾಪ ನಡೆಸುವವರು ಯಾರು ಎಂಬ ಜಿಜ್ಞಾಸೆ ಸಚಿವಾಲಯದ ಅಧಿಕಾರ ವೃಂದದಲ್ಲಿ ಮೂಡಿದೆ. 

ಸದನದೊಳಗಿನ ಸಾಧನಗಳು ನಾಪತ್ತೆ

ವಿಧಾನಸಭೆಯ ಸಭಾಂಗಣದೊಳಗೆ ಸಚಿವರು, ಶಾಸಕರು ಮಾತನಾಡಲು ವ್ಯವಸ್ಥೆ ಮಾಡಿದ್ದ ಮೈಕ್‌ಗಳು ಹಾಗೂ ಕೇಳಿಸಿಕೊಳ್ಳಲು ಇರಿಸಿದ್ದ ಹೆಡ್ ಫೋನ್‌ಗಳೇ ನಾಪತ್ತೆಯಾಗಿವೆ.

‘2017ರ ಅಧಿವೇಶನದ ವೇಳೆ ಎಲ್ಲವೂ ವ್ಯವಸ್ಥಿತವಾಗಿತ್ತು. ಈ ಬಾರಿ ಅಧಿವೇಶನಕ್ಕೆ ಮುನ್ನ ಸಭಾಂಗಣದ ವ್ಯವಸ್ಥೆ ನೋಡಲು ಹೋದಾಗ ಅಚ್ಚರಿ ಕಾದಿತ್ತು. ಶಾಸಕರಿಗೆ ಮೀಸಲಾದ ಕುರ್ಚಿಗಳ ಎದುರಿನ ಮೇಜಿನ ಮೇಲೆ ಅಳವಡಿಸಲಾಗಿದ್ದ ಮೈಕ್‌ಗಳು ಇರಲಿಲ್ಲ. ಹೀಗಾಗಿ ಹೊಸ ಮೈಕ್‌ಗಳನ್ನು ತರಿಸಲಾಗಿದೆ’ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

ಸೌಧದತ್ತ ಮುಖ ಹಾಕದ ಸಚಿವ ಜಾರಕಿಹೊಳಿ

ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಗೈರಾಗಿ ಪದೇ ಪದೇ ಸುದ್ದಿಗೆ ಕಾರಣವಾಗುತ್ತಿದ್ದ ಪೌರಾಡಳಿತ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅಧಿವೇಶನದ ಹಿಂದಿನ ದಿನದವರೆಗೂ ಸುವರ್ಣಸೌಧದತ್ತ ಮುಖ ಹಾಕಿಲ್ಲ.

ಹಿಂದೆಲ್ಲ ಉಸ್ತುವಾರಿ ಸಚಿವರಾದವರು ಅಧಿವೇಶನದ ಪೂರ್ವ ತಯಾರಿಯ ಜವಾಬ್ದಾರಿಯನ್ನು ವಹಿಸಿಕೊಂಡು, ಅಧಿಕಾರಿಗಳ ಸಭೆ ನಡೆಸಿ ಸೂಚನೆ ಕೊಡುವ ಪರಿಪಾಟ ಇತ್ತು. ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಮುನಿಸಿಕೊಂಡಿರುವ ಸಚಿವ ಜಾರಕಿಹೊಳಿ, ಅಧಿವೇಶನದ ಪೂರ್ವ ಸಿದ್ಧತೆಯತ್ತ ಲಕ್ಷ್ಯವನ್ನೇ ವಹಿಸಿಲ್ಲ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿದೆ.

ವಿಧಾನಮಂಡಲ ಕಲಾಪದಿಂದ ದೂರ ಉಳಿಯುವ ಮೂಲಕ ತಮ್ಮ ಭಿನ್ನಮತವನ್ನು ಅವರು ಪ್ರದರ್ಶಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು