ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿಯಾಗದ ಮಾದರಿ

Last Updated 7 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಹಿಂದೆ ವಾರಾಣಸಿಯಲ್ಲಿ ಬ್ರಹ್ಮದತ್ತ ರಾಜ್ಯವಾಳುತ್ತಿದ್ದಾಗ ಬೋಧಿಸತ್ವ ತಪಸ್ವಿಯಾಗಿ ಹಿಮಾಲಯದಲ್ಲಿದ್ದ.

ಬ್ರಹ್ಮದತ್ತ ರಾಜನಿಗೆ ಕುದುರೆಗಳೆಂದರೆ ಪಂಚಪ್ರಾಣ. ಪ್ರಪಂಚದ ಬೇರೆ ಬೇರೆ ದೇಶಗಳಿಂದ ಶ್ರೇಷ್ಠ ಕುದುರೆಗಳನ್ನು ತರಿಸಿಕೊಳ್ಳುತ್ತಿದ್ದ. ಅವನ ಬಳಿ ಈಗಾಗಲೇ ಐದುನೂರು ಒಳ್ಳೆಯ ಕುದುರೆಗಳಿದ್ದವು. ಒಂದು ಬಾರಿ ಅರಬಸ್ಥಾನದಿಂದ ಕುದುರೆಗಳ ಮಾರಾಟಗಾರರು ಬಂದು ತಮ್ಮ ಬಳಿ ಇದ್ದ ಅಶ್ವಗಳ ಪ್ರದರ್ಶನ ಮಾಡಿದರು. ಅದರಲ್ಲಿ ಒಂದು ಕುದುರೆ ರಾಜನ ಮನಸೆಳೆಯಿತು. ಏನದರ ರೂಪ ! ಏನದರ ಗತ್ತು! ಅದರ ನಡೆಯುವ ಠೀವಿ, ಕಣ್ಣುಗಳ ಮಿಂಚು ತುಂಬ ಅಪರೂಪದ್ದು. ಹೆಚ್ಚು ಹಣ ಕೊಟ್ಟು ಆ ಕುದುರೆಯನ್ನು ರಾಜ ಕೊಂಡುಕೊಂಡ.

ಅದನ್ನು ಪಡೆದ ಮೇಲಂತೂ ಅದರ ಬಗೆಗಿನ ಮೋಹ ಇನ್ನೂ ಹೆಚ್ಚಾಯಿತು. ತಾನೇ ಅದರ ಮೈತೊಳೆಯುತ್ತಿದ್ದ, ಅದಕ್ಕೆ ಶ್ರೇಷ್ಠ ಆಹಾರ ನೀಡುವ ಕೆಲಸವೂ ಅವನದೇ. ಅದಕ್ಕೆ ಬಣ್ಣ ಬಣ್ಣದ ಥಡಿಯನ್ನು ಹಾಕಿ ಲಗಾಮು ಹಿಡಿದು ಅದರ ಬೆನ್ನೇರಿ ಕುಳಿತರೆ ಅವನಿಗೆ ಇಂದ್ರನ ಐರಾವತದ ಮೇಲೆ ಕುಳಿತಂತೆ ಭಾಸವಾಗುತ್ತಿತ್ತು. ಆ ಕುದುರೆಗೆ ಪಂಡವ ಎಂಬ ಹೆಸರಿಟ್ಟು ಅದನ್ನು ಮಂಗಲಾಶ್ವವನ್ನಾಗಿ ಮಾಡಿದ. ಅದರ ವಿಶೇಷ ತರಬೇತಿಗೆ ಗಿರಿದತ್ತನೆಂಬ ತರಬೇತಿದಾರನನ್ನು ನಿಯಮಿಸಿದ.

ಒಂದಷ್ಟು ಕಾಲದ ಮೇಲೆ ರಾಜ ಗಮನಿಸಿದ, ಪಂಡವ ಕುದುರೆ ಕುಂಟುತ್ತಿದೆ! ಅವನಿಗೆ ಭಾರೀ ಆಘಾತವಾಯಿತು. ಇಂಥ ರಾಜಲಕ್ಷಣಗಳಿರುವ ಕುದುರೆ, ತನ್ನ ಅತ್ಯಂತ ನೆಚ್ಚಿನ ಕುದುರೆ ಕುಂಟುತ್ತಿದೆ! ತಕ್ಷಣವೇ ರಾಜವೈದ್ಯರನ್ನು ಕರೆದು ಪರೀಕ್ಷಿಸಲು ಹೇಳಿದ. ಅವರು ತಮಗೆ ತಿಳಿದ ಪರೀಕ್ಷೆಗಳನ್ನೆಲ್ಲ ಮಾಡಿದರು. ಅವರು ಹೇಳಿದರು, ‘ಮಹಾರಾಜಾ, ಕುದುರೆಯ ಆರೋಗ್ಯ ತುಂಬ ಚೆನ್ನಾಗಿದೆ, ಯಾವ ದೋಷವೂ ಇಲ್ಲ. ಆದರೆ ಅದು ಕುಂಟುವ ಕಾರಣ ಮಾತ್ರ ತಿಳಿಯುತ್ತಿಲ್ಲ’. ರಾಜ ಬ್ರಹ್ಮದತ್ತ ಬೇರೆ ಬೇರೆ ಪಶುವೈದ್ಯರನ್ನು ಕರೆಸಿದ. ಅವರದೂ ಅದೇ ತೀರ್ಮಾನ- ಕುದುರೆಯಲ್ಲಿ ಯಾವ ದೋಷವೂ ಇಲ್ಲ. ಆದರೆ ಕುಂಟುವುದೇಕೆಂದು ತಿಳಿಯುವುದಿಲ್ಲ. ರಾಜನಿಗೆ ಒಂದು ರೀತಿಯಲ್ಲಿ ಹುಚ್ಚೇ ಹಿಡಿದಂತಾಯಿತು. ದೂತರನ್ನು ಕಳುಹಿಸಿ ಅರಬಸ್ಥಾನದಿಂದ ಪಶುವೈದ್ಯರನ್ನು ಕರೆಸಿದ. ಅವರ ದೇಶದ ಕುದುರೆ, ಅವರಿಗೇ ತಿಳಿದೀತು ಎಂದು ಭಾವಿಸಿದ. ಊಹೂಂ ಅವರದೂ ಅದೇ ತೀರ್ಮಾನ. ಕುದುರೆ ಕುಂಟುವ ಕಾರಣ ಮಾತ್ರ ತಿಳಿಯಲಿಲ್ಲ.

ಆ ಸಮಯದಲ್ಲಿ ಬೋಧಿಸತ್ವ ವಾರಾಣಸಿಗೆ ಬಂದ. ಅವನನ್ನು ಕಂಡೊಡನೆ ರಾಜನಿಗೆ ತುಂಬ ಸಂತೋಷವಾಯಿತು. ‘ಭಂತೇ, ತಮಗೆ ಇಂಥ ಲೌಕಿಕ ಪ್ರಶ್ನೆ ಕೇಳಬಾರದು. ಆದರೆ ಏನು ಮಾಡಲಿ ? ನನ್ನ ಪ್ರೀತಿಯ ಕುದುರೆ ಕುಂಟುತ್ತಿದೆ. ಅದರ ಕಾರಣವೇ ತಿಳಿಯುತ್ತಿಲ್ಲ. ತಾವಾದರೂ ಅದಕ್ಕೆ ಪರಿಹಾರ ಸೂಚಿಸುತ್ತೀರಿ ಎಂದು ನಂಬಿದ್ದೇನೆ’ ಎಂದು ಬೇಡಿಕೊಂಡ. ಬೋಧಿಸತ್ವ ನಕ್ಕು ಮರುದಿನ ಅದನ್ನು ಪರೀಕ್ಷಿಸುವುದಾಗಿ ಹೇಳಿದ. ಮಾರನೆಯ ದಿನ ಬೋಧಿಸತ್ವ ಕುದುರೆಯ ಜೊತೆಗೇ ಕಳೆದ. ಅದರ ಮರುದಿನ ದರ್ಬಾರಿಗೆ ಬೋಧಿಸತ್ವ ಬಂದ.

ರಾಜ ಅತ್ಯಂತ ಕುತೂಹಲದಿಂದ ಕೇಳಿದ, ‘ಭಂತೇ, ಕುದುರೆ ಯಾಕೆ ಕುಂಟುತ್ತಿದೆ ತಿಳಿಯಿತೇ?’ ಬೋಧಿಸತ್ವ ನಿಧಾನವಾಗಿ ಹೇಳಿದ, ‘ರಾಜಾ, ಕುದುರೆಯ ಆರೋಗ್ಯ ತುಂಬ ಚೆನ್ನಾಗಿದೆ, ಅದಕ್ಕೆ ಯಾವ ದೋಷವೂ ಇಲ್ಲ’ ರಾಜ ನಿರಾಸೆಯಿಂದ ಹೇಳಿದ, ‘ಎಲ್ಲರೂ ಹೀಗೆಯೇ ಹೇಳುತ್ತಾರೆ. ಆದರೆ ಕುಂಟುವ ಕಾರಣವನ್ನು ಮಾತ್ರ ಹೇಳುತ್ತಿಲ್ಲ’. ಬೋಧಿಸತ್ವ ಶಾಂತವಾಗಿರುವಂತೆ ಸನ್ನೆ ಮಾಡಿ ಹೇಳಿದ, ‘ಅದಕ್ಕೂ ಪರಿಹಾರವಿದೆ ರಾಜಾ, ಆತಂಕ ಬೇಡ. ನಾನು ಹೇಳಿದಂತೆ ಕುದುರೆಗೆ ಯಾವ ರೋಗವೂ ಇಲ್ಲ. ಕುದುರೆಯ ತರಬೇತಿದಾರ ಗಿರಿದತ್ತನಿದ್ದಾನಲ್ಲ, ಅವನನ್ನು ಬದಲಿಸಿಬಿಡು. ಆತ ಕುಂಟುತ್ತಾನೆ. ಅವನನ್ನು ನೋಡಿ ನೋಡಿ ಅದೇ ಸರಿಯಾದದ್ದು ಎಂದುಕೊಂಡು ಅದೂ ಕುಂಟುತ್ತಿದೆ’. ರಾಜ ಗಿರಿದತ್ತನನ್ನು ಬದಲಾಯಿಸಿದ, ಕುದುರೆಯ ಕುಂಟುವಿಕೆ ನಿಂತಿತು.

ಬದುಕಿನಲ್ಲಿ ನಾಯಕರಾದವರು, ಗುರುಗಳಾದವರು ತುಂಬ ಎಚ್ಚರಿಕೆಯಿಂದಿರಬೇಕು. ಜನ ಅವರನ್ನು ನೋಡುತ್ತಾರೆ, ಅನುಸರಿಸುತ್ತಾರೆ. ಅವರು ಕುಂಟಿದರೆ ಸಮಾಜ ಕುಂಟುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT