ರೈಲು ತಡೆ, ಗಡಿಯಲ್ಲಿ ಬಸ್ ಸಂಚಾರ ವ್ಯತ್ಯಯ

7
ಉತ್ತರ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ

ರೈಲು ತಡೆ, ಗಡಿಯಲ್ಲಿ ಬಸ್ ಸಂಚಾರ ವ್ಯತ್ಯಯ

Published:
Updated:
Deccan Herald

ಹುಬ್ಬಳ್ಳಿ: ಧಾರವಾಡ, ಬಾಗಲಕೋಟೆ, ಗದಗ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಭಾರತ್‌ಬಂದ್‌ಗೆ ಉತ್ತಮ ಸ್ಪಂದನೆ ದೊರೆಯಿತು. ವಿಜಯಪುರ, ಬೆಳಗಾವಿ, ಉತ್ತರ ಕನ್ನಡ ಹಾಗೂ ಹಾವೇರಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಹುಬ್ಬಳ್ಳಿಯಲ್ಲಿ, ಸಂಸದ ಪ್ರಹ್ಲಾದ ಜೋಶಿ ಅವರ ಕಚೇರಿಗೆ ನುಗ್ಗಲು ಯತ್ನಿಸಿದ ಜೆಡಿಎಸ್‌ ಕಾರ್ಯಕರ್ತರ ವಿರುದ್ಧ ಬಿಜೆಪಿ ದೂರು ನೀಡಿದೆ.

ಕಾರವಾರದಲ್ಲಿ ಕ್ಯಾಂಟೀನ್ ಬಾಗಿಲಿಗೆ ಕಲ್ಲು ಎಸೆದಿದ್ದು, ಕಾಜುಬಾಗ್‌ನ ಹಾರ್ಡ್‌ವೇರ್‌ ಮಳಿಗೆಯೊಂದರ ಕಾರ್ಮಿಕನ ಮೇಲೆ ಹಲ್ಲೆ ನಡೆದಿದೆ. ಅಂಕೋಲಾ ತಾಲ್ಲೂಕಿನ ಅಂಬಾರಕೊಡ್ಲದಲ್ಲಿ ಬೇಕರಿಯನ್ನು ತೆರೆದು ವ್ಯಾಪಾರ ನಡೆಸಿದ್ದಕ್ಕೆ ಅಂದಾಜು 3 ಕೆ.ಜಿ ಸಿಹಿ ತಿಂಡಿಯನ್ನು ಪ್ರತಿಭಟನಾಕಾರರು ರಸ್ತೆಗೆ ಎಸೆದಿದ್ದಾರೆ.

ಗೋವಾದ ಕದಂಬ ಸಾರಿಗೆ ಸಂಸ್ಥೆಯ ಬಸ್‌ಗಳು ರಾಜ್ಯದ ಒಳಗೆ ಪ್ರವೇಶಿಸದೇ ಗಡಿಯಲ್ಲೇ ಪ್ರಯಾಣಿಕರನ್ನು ಬಿಟ್ಟು ತೆರಳಿದವು. ಇದರಿಂದಾಗಿ ಹುಬ್ಬಳ್ಳಿ, ಗದಗಕ್ಕೆ ತೆರಳಬೇಕಿದ್ದ ಪ್ರಯಾಣಿಕರು ಕಾರವಾರದಿಂದ 13 ಕಿ.ಮೀ. ದೂರದ ಗಡಿಯಲ್ಲೇ ಸಂಜೆಯವರೆಗೆ ಬಸ್‌ಗಾಗಿ ಕಾಯಬೇಕಾಗಿ ಬಂತು.

ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು, ಬೆಂಗಳೂರಿನಿಂದ ಬೆಳಿಗ್ಗೆ ಬಂದ ಅಮರಾವತಿ ಎಕ್ಸ್‌ಪ್ರೆಸ್‌ ರೈಲನ್ನು ತಡೆದು ಪ್ರತಿಭಟಿಸಿದರು. ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ಬಂದ್‌ ಬೆಂಬಲಿಸದಂತೆ ಮನವಿ ಮಾಡಿ, ವ್ಯಾಪಾರಸ್ಥರಿಗೆ ಗುಲಾಬಿ ನೀಡಲಾಯಿತು.

ಬಂದ್‌ ಬೆಂಬಲಿಸದ ವ್ಯಾಪಾರಸ್ಥರಿಗೆ ಗುಲಾಬಿ: ವಿಜಯಪುರದಲ್ಲಿ ಬಂದ್ ಬೆಂಬಲಿಸದ ವ್ಯಾಪಾರಸ್ಥರಿಗೆ ಗುಲಾಬಿ ನೀಡುವ ಮೂಲಕ ಬಿಜೆಪಿ ಕಾರ್ಯಕರ್ತರು ಧನ್ಯವಾದ ಹೇಳಿದರು.(ಕಲಬುರ್ಗಿ ವರದಿ ): ಬಂದ್‌ಗೆ ಕಲಬುರ್ಗಿ, ರಾಯಚೂರಿನಲ್ಲಿ ಉತ್ತಮ, ಬೀದರ್, ಯಾದಗಿರಿಯಲ್ಲಿ ನೀರಸ ಹಾಗೂ ಕೊಪ್ಪಳದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ರಸ್ತೆ ಮೇಲೆ ಅಡುಗೆ: ಶಾಸಕಿ ಕನ್ನೀಜ್ ಫಾತಿಮಾ ನೇತೃತ್ವದಲ್ಲಿ ಜಿಲ್ಲಾ ಮಹಿಳಾ ಘಟಕದ ಕಾಂಗ್ರೆಸ್ ಕಾರ್ಯಕರ್ತೆಯರು ಹಳೆ ಚೌಕ್ ಪೊಲೀಸ್ ಠಾಣೆ ವೃತ್ತದಲ್ಲಿ ರಸ್ತೆ ಮೇಲೆ ಚಪಾತಿ ಲಟ್ಟಿಸುವ ಮೂಲಕ ಗಮನ ಸೆಳೆದರು.

ಹೋರಾಟಗಾರ್ತಿ ನೀಲಾ ಕೆ. ಹಾಗೂ ಸಂಗಡಿಗರು ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ರಸ್ತೆ ಮೇಲೆ ಅಡುಗೆ ಮಾಡಿದರು.

‘ಬೆಲೆ ಏರಲೇಬೇಕು’ ಎಂದಿದ್ದಕ್ಕೆ ಕಪಾಳಮೋಕ್ಷ!
ಬೆಳಗಾವಿ: ಬೆಲೆ ಏರಿಕೆ ವಿರೋಧಿಸಿ ಇಲ್ಲಿ ಆಮ್‌ ಆದ್ಮಿ ಪಕ್ಷದಿಂದ ಸೋಮವಾರ ನಡೆದ ಪ್ರತಿಭಟನೆ ವೇಳೆ, ‘ಬೆಲೆ ಏರಲೇಬೇಕು’ ಎಂದು ಕೂಗಿದ ಕಾರ್ಯಕರ್ತರೊಬ್ಬರಿಗೆ ಮುಖಂಡ ಸದಾನಂದ ಬಾಮನೆ ಕಪಾಳಮೋಕ್ಷ ಮಾಡಿದರು.

ಪ್ರತಿಭಟನೆಯಲ್ಲಿ ಐದು ಮಂದಿಯಷ್ಟೇ ಪಾಲ್ಗೊಂಡಿದ್ದರು. ಘೋಷಣೆ ಕೂಗುವಾಗ ಈ ಪ್ರಸಂಗ ನಡೆಯಿತು. ‘ಬೆಲೆ ಇಳಿಯಲೇಬೇಕು ಎಂದು ನಾವು ಪ್ರತಿಭಟಿಸುತ್ತಿದ್ದರೆ, ನೀನು ಏರಲೇಬೇಕು ಎನ್ನುತ್ತಿದ್ದೀಯಲ್ಲಾ?’ ಎಂದು ಮುಖಂಡ ಸಿಟ್ಟಾದರು. ಇದರಿಂದ ಮುಜುಗರಗೊಂಡ ಅವರೆಲ್ಲರೂ ಕೆಲವೇ ನಿಮಿಷಗಳಲ್ಲಿ ಅಲ್ಲಿಂದ ತೆರಳಿದರು. ಈ ವಿಡಿಯೊ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿಯೂ ಹರಿದಾಡಿತು.

ಪಕೋಡ, ಚಹಾ ವಿತರಿಸಿ ಆಕ್ರೋಶ
ಚಿಕ್ಕಮಗಳೂರಿನಲ್ಲಿ ಪ್ರತಿಭಟನಾಕಾರರು ನಗರದ ಹನುಮಂತಪ್ಪ ವೃತ್ತದಲ್ಲಿ ಪಕೋಡ ಮಾಡಿ ಜನರಿಗೆ ಹಂಚಿ, ಚಹಾ ವಿತರಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಾಳೆಹೊನ್ನೂರು ಪಟ್ಟಣದ ಅಪೂರ್ವ ಸೌಹಾರ್ದ ಸಹಕಾರಿ ಸಂಘದ ಕಚೇರಿಗೆ ಕಾಂಗ್ರೆಸ್‌ ಕಾರ್ಯಕರ್ತರು ನುಗ್ಗಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ದಾಂದಲೆ ನಡೆಸಿರುವುದಾಗಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಸುಧೀಂದ್ರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅನೇಕ ವರ್ಷಗಳ ಬಳಿಕ ಖರ್ಗೆ ಭಾಗಿ

ಕಲಬುರ್ಗಿಯ ಎಸ್‌ವಿಪಿ ವೃತ್ತದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಂಡಿದ್ದರು. ಅಲ್ಲದೆ, ಹಳೆ ಚೌಕ್ ಪೊಲೀಸ್ ಠಾಣೆ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಮೆರವಣಿಗೆಯಲ್ಲಿ ಕಾರಿನಲ್ಲಿ ಬಂದ ಖರ್ಗೆ ಕಾರ್ಯಕರ್ತರಲ್ಲಿ ಹುರುಪು ತುಂಬಿದರು.

‘ಕಲಬುರ್ಗಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಖರ್ಗೆ ಅವರು ಅನೇಕ ವರ್ಷಗಳ ನಂತರ ಪಾಲ್ಗೊಂಡಿದ್ದಾರೆ’ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !