ಬಂದ್‌: ರಾಜ್ಯದಾದ್ಯಂತ ಸರ್ಕಾರಿ ಸಾರಿಗೆ ಸಂಪೂರ್ಣ ಸ್ಥಗಿತ, ಜನರ ಪರದಾಟ

7

ಬಂದ್‌: ರಾಜ್ಯದಾದ್ಯಂತ ಸರ್ಕಾರಿ ಸಾರಿಗೆ ಸಂಪೂರ್ಣ ಸ್ಥಗಿತ, ಜನರ ಪರದಾಟ

Published:
Updated:

ಬೆಂಗಳೂರು: ಪೆಟ್ರೋಲ್‌ ಮತ್ತು ಡಿಸೇಲ್‌ ದರ ಏರಿಕೆ ಖಂಡಿಸಿ ಕಾಂಗ್ರೆಸ್‌ ನೇತೃತ್ವದಲ್ಲಿ ಸೋಮವಾರ ನಡೆಸುತ್ತಿರುವ ‘ಭಾರತ್‌ ಬಂದ್‌’ಗೆ ರಾಜ್ಯದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. 

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಮತ್ತು ವಾಯವ್ಯ ನಿಗಮಗಳ ನೌಕರರ ಸಂಘಟನೆಗಳು, ಓಲಾ– ಉಬರ್ ಹಾಗೂ ಐಟಿ–ಬಿಟಿ ಕಂಪನಿಗಳ ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರು ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ. ಆದ್ದರಿಂದ, ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದ್ದು, ಜನರು ತೊಂದರೆ ಅನುಭವಿಸಿದರು. 

ರಾಯಚೂರು: ಭಾರತ್‌ ಬಂದ್ ಕರೆಯಿಂದ ಸರ್ಕಾರಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದು, ಖಾಸಗಿ ವಾಹನಗಳ ಓಡಾಟ ಎಂದಿನಂತೆ ಆರಂಭವಾಗಿದೆ.

ರಾಯಚೂರು ನಗರ, ಸಿಂಧನೂರು ನಗರ ಮತ್ತು ಮಾನ್ವಿ ಪಟ್ಟಣದಲ್ಲಿ ಭಾಗಶಃ ಅಂಗಡಿ‌ ಮುಂಗಟ್ಟುಗಳು ಸ್ವಯಂ ಬಂದ್ ಮಾಡಿಕೊಂಡಿವೆ. ಮಾರುಕಟ್ಟೆಯಲ್ಲಿ ಜನಸಂದಣಿ ಎಂದಿನಂತಿಲ್ಲ.

ಸರ್ಕಾರಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಖಾಸಗಿ ಕಾಲೇಜುಗಳು ಆರಂಭವಾಗಿದ್ದರೂ ವಿದ್ಯಾರ್ಥಿಗಳಿಲ್ಲದೆ ಭಣಗುಡುತ್ತಿವೆ.‌ 

ದೇವದುರ್ಗ ಮತ್ತು ಲಿಂಗಸುಗೂರು ಪಟ್ಟಣದಲ್ಲಿ  ಶ್ರಾವಣ ಮಾಸದ ಕೊನೆಯ ಸೋಮವಾರ ಕೆಲವು ಕಡೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಜನರು ಖಾಸಗಿ ವಾಹನಗಳ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ.

*


ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಚಿಕ್ಕಬಳ್ಳಾಪುರ: ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಕರೆ ನೀಡಿರುವ ‘ಭಾರತ್ ಬಂದ್‌’ ಗೆ ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ.

ಕೆಎಸ್ಆರ್‌ಟಿಸಿ ಬಸ್, ಖಾಸಗಿ ವಾಹನಗಳ ಸಂಚಾರ ಸ್ಥಗಿತಗೊಂಡಿದ್ದು, ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿವೆ. ಆಟೊಗಳ ಸಂಚಾರ ಎಂದಿನಂತಿದೆ.

ನಗರದಲ್ಲಿ ಅರ್ಧ ಅಂಗಡಿಗಳು ಬಾಗಿಲು ತೆರೆದಿವೆ. ಕಾಂಗ್ರೆಸ್ ಮುಖಂಡರು ಮುಖ್ಯ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಅಂಬೇಡ್ಕರ್ ವೃತ್ತದಲ್ಲಿ ಚಿಕ್ಕ ಸಿಲಿಂಡರ್ ಹೊತ್ತುಕೊಂಡು ಪ್ರತಿಭಟಿಸಿದರು. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

*
 


ಮೈಸೂರಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನಾ ರ‍್ಯಾಲಿ ನಡೆಸಿದರು.

ಮೈಸೂರು:  ಭಾರತ್ ಬಂದ್ ಪ್ರಯುಕ್ತ ನಗರದ ಬಹುತೇಕ ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿದೆ. ವಿವಿಧ ಸಂಘಟನೆಗಳು ವಿಭಿನ್ನ ರೀತಿಯ ಪ್ರತಿಭಟನೆಗಳನ್ನು ಆರಂಭಿಸಿವೆ.

*

ಮಂಡ್ಯ: ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರವಿಲ್ಲದೆ ನಗರದ ಸಾರಿಗೆ ಬಸ್‌ ನಿಲ್ದಾಣ ಬಿಕೋ ಎನ್ನುತ್ತಿದೆ. ಪ್ರಮುಖ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನವನ್ನು ರದ್ದುಪಡಿಸಲಾಗಿದೆ.  

*

ಶಿರಸಿ: ತೈಲೋತ್ಪನ್ನಗಳ ಬೆಲೆ ಏರಿಕೆ ವಿರೋಧಿಸಿ ನಡೆಯುತ್ತಿರುವ‌ ಬಂದ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕವು ನಡು ರಸ್ತೆಯಲ್ಲಿ ಅಡುಗೆ ಮಾಡಿ ಪ್ರತಿಭಟಿಸಿತು. 

ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ಸೇರಿದ್ದ ನೂರಾರು ಕಾಂಗ್ರೆಸ್‌ ಕಾರ್ಯಕರ್ತರು, ರಸ್ತೆ ಮಧ್ಯೆ ಸಿಲಿಂಡರ್ ಇಟ್ಟು ಚಹಾ ಮಾಡಿ ಕುಡಿದರು. ತರಕಾರಿ ತಂದು ಅಡುಗೆ ಪ್ರಾರಂಭಿಸಿದರು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.

***
ಹಾಸನ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ದೇಶವ್ಯಾಪಿ ನಡೆಸುತ್ತಿರುವ ಬಂದ್ ಹಿನ್ನೆಲೆ, ಜಿಲ್ಲೆಯಲ್ಲಿ ಸಾರಿಗೆ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !