ಶುದ್ಧ ಸಾಹಿತ್ಯದಲ್ಲಿ ಮಾತ್ರ ನಂಬಿಕೆ; ಎಸ್.ಎಲ್‌. ಭೈರಪ್ಪ

7
ಚಳವಳಿ ಸಾಹಿತ್ಯದ ಮೇಲೆ ಹರಿಹಾಯ್ದ ಸಾಹಿತಿ ಎಸ್.ಎಲ್‌. ಭೈರಪ್ಪ

ಶುದ್ಧ ಸಾಹಿತ್ಯದಲ್ಲಿ ಮಾತ್ರ ನಂಬಿಕೆ; ಎಸ್.ಎಲ್‌. ಭೈರಪ್ಪ

Published:
Updated:
Prajavani

ಮೈಸೂರು: ‘ನನಗೆ ನಂಬಿಕೆಯಿರುವುದು ಶುದ್ಧ ಸಾಹಿತ್ಯದಲ್ಲಿ ಮಾತ್ರ. ಚಳವಳಿ ಸಾಹಿತ್ಯ, ಸ್ಲೋಗನ್‌ ಸಾಹಿತ್ಯದಲ್ಲಿ ನಂಬಿಕೆಯಿಲ್ಲ. ಸಾಹಿತ್ಯದಿಂದ ಸಮಾಜದಲ್ಲಿ ಬದಲಾವಣೆ ತರಲೂ ಸಾಧ್ಯವಿಲ್ಲ’ ಎಂದು ಸಾಹಿತಿ ಎಸ್‌.ಎಲ್‌.ಭೈರಪ್ಪ ಭಾನುವಾರ ಒತ್ತಿ ಹೇಳಿದರು.

ಎಸ್‌.ಎಲ್‌.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ವತಿಯಿಂದ ಮೈಸೂರಿನಲ್ಲಿ ಆಯೋಜಿಸಿದ್ದ ‘ಎಸ್.ಎಲ್‌.ಭೈರಪ್ಪ ಸಾಹಿತ್ಯೋತ್ಸವ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾಷಣದ ಉದ್ದಕ್ಕೂ ಚಳವಳಿ ಸಾಹಿತ್ಯಕಾರರ ಮೇಲೆ ಚಾಟಿ ಬೀಸಿದರು.

ಶುದ್ಧ ಸಾಹಿತ್ಯ ಏನೆನ್ನುವುದು ಬಹಳ ಮಂದಿಗೆ ಗೊತ್ತಿಲ್ಲ. ಚಳವಳಿ ಸಾಹಿತ್ಯ ಮತ್ತು ಶುದ್ಧ ಸಾಹಿತ್ಯದ ನಡುವಿನ ವ್ಯತ್ಯಾಸವನ್ನೂ ತಿಳಿದುಕೊಂಡಿಲ್ಲ. ಚಳವಳಿ ಸಾಹಿತ್ಯದ ಗದ್ದಲಗಳ ನಡುವೆ ಶುದ್ಧ ಸಾಹಿತ್ಯ ಮರೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

‘ಒಬ್ಬ ಸೃಜನಶೀಲ ಬರಹಗಾರ ಎಲ್ಲ ಚಳವಳಿಗಳಿಂದ ದೂರ ಇರಬೇಕು. ಇಲ್ಲದಿದ್ದರೆ ನನಗೆ ಇಷ್ಟೊಂದು ಬರೆಯಲು ಆಗುತ್ತಿರಲಿಲ್ಲ. ಚಳವಳಿ ಸಾಹಿತ್ಯದಲ್ಲಿ ಗುರುತಿಸಿದರೆ, ಏನಾದರೂ ಹೇಳಿಕೆ ಕೊಡಬೇಕು. ಆಗ ಇನ್ನೊಬ್ಬ ಅದಕ್ಕೆ ವಿರುದ್ಧವಾದ ಹೇಳಿಕೆ ಕೊಡುತ್ತಾನೆ. ಆ ಮೂಲಕ ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಾನೆ. ಪ್ರಚಾರ ಗಿಟ್ಟಿಸಿಕೊಳ್ಳಲು ಆಸಕ್ತಿ ವಹಿಸಿದರೆ ಸಾಹಿತ್ಯ ಹೇಗೆ ಬೆಳೆಯಲು ಸಾಧ್ಯ’ ಎಂದು ಕುಟುಕಿದರು.

ರಾಜಕೀಯ ಮತ್ತು ಸಾಮಾಜಿಕ ಚಿಂತನೆಗಳಿಗೆ ಪೂರಕವಾಗಿ ಚಳವಳಿ ಸಾಹಿತ್ಯ ಹುಟ್ಟುತ್ತದೆ. ನವ್ಯ, ಪ್ರಗತಿಪರ, ಸ್ತ್ರೀವಾದಿ, ಬಂಡಾಯ, ದಲಿತ ಚಳವಳಿಗಳು ಬಂದವು. ನಮ್ಮ ಚಿಂತನೆಗಳಿಗೆ ಅನುಗುಣವಾಗಿ ಬರೆದರೆ ಮಾತ್ರ ನಿಮ್ಮನ್ನು ಒಪ್ಪಿಕೊಳ್ಳುತ್ತೇವೆ. ಇಲ್ಲದಿದ್ದರೆ ಗುಂಪಿನಿಂದ ಹೊರಹಾಕುತ್ತೇವೆ ಎಂಬುದು ಚಳವಳಿ ಸಾಹಿತ್ಯದ ನಿಲುವು ಎಂದು ಟೀಕಿಸಿದರು.

ಸಮಾಜದಲ್ಲಿ ಆಗುತ್ತಿರುವ ಅನ್ಯಾಯವನ್ನು ತಿಳಿಯಲು ಸಾಹಿತ್ಯ ಓದಬೇಕು ಎನ್ನುವರು. ಆ ಅನ್ಯಾಯವನ್ನು ನೀವು ಅನುಭವಿಸುತ್ತಾ ಇರುವಾಗ ಕಾದಂಬರಿ ಏಕೆ ಓದಬೇಕು? ಸಾಹಿತ್ಯವು ಅನ್ಯಾಯವನ್ನು ಹೋಗಲಾಡಿಸುವ ರೀತಿಯಲ್ಲಿರಬೇಕು ಎಂಬುದು ಕೆಲವರ ವಾದ. ಕಥೆ, ಕಾದಂಬರಿ ಬರೆಯುವುದರಿಂದ ಯಾವುದೇ ಅನ್ಯಾಯ ಹೋಗದು ಎಂದರು.

ರಾಜಸ್ತಾನದ ನಾಟಕಕಾರ, ವಿಮರ್ಶಕ ಡಾ.ನಂದಕಿಶೋರ್‌ ಆಚಾರ್ಯ ಮಾತನಾಡಿ, ‘ಸಾಹಿತ್ಯವು ಮನುಷ್ಯನ ಆತ್ಮವನ್ನು ಅನ್ವೇಷಣೆ ಮಾಡುತ್ತದೆ. ಭೈರಪ್ಪ ಅವರ ಕಾದಂಬರಿಗಳಿಗೆ ಅಂತಹ ಶಕ್ತಿಯಿದೆ. ಅವರು ಕನ್ನಡ ಸಾಹಿತ್ಯ ಮಾತ್ರವಲ್ಲ, ಅಧುನಿಕ ಭಾರತದ ಸಾಹಿತ್ಯ ಲೋಕದ ಅಪ್ರತಿಮ ಕಾದಂಬರಿಕಾರ’ ಎಂದು ಬಣ್ಣಿಸಿದರು.

‘ಮಾಂಸಾಹಾರ ವರ್ಜಿಸಿ’

‘ಗೋಮಾಂಸ ತಿನ್ನಬಾರದು ಎನ್ನುವವರು ಬೇರೆ ಮಾಂಸವನ್ನೂ ತಿನ್ನಬಾರದು. ಗೋವುಗಳು ಮಾತ್ರವಲ್ಲ, ಇತರ ಪ್ರಾಣಿಗಳನ್ನೂ ಹಿಂಸಿಸಬಾರದು’ ಎಂದು ಎಸ್.ಎಲ್‌.ಭೈರಪ್ಪ ಹೇಳಿದರು.

‘ಪ್ರಾಣಿಗಳು ಇರುವುದು ಆಹಾರಕ್ಕಾಗಿ ಎಂಬ ನಂಬಿಕೆ ಪಾಶ್ಚಾತ್ಯರದ್ದು. ಆದರೆ, ಭಾರತದಲ್ಲಿ ಹುಟ್ಟಿದ ಎಲ್ಲ ಧರ್ಮಗಳೂ ಪುನರ್ಜನ್ಮದ ಮೇಲೆ ನಂಬಿಕೆ ಇರಿಸಿವೆ. ಮುಂದಿನ ಜನ್ಮದಲ್ಲಿ ಪ್ರಾಣಿಗಳಾಗಿ ಹುಟ್ಟಿಬರಬಹುದು ಎಂಬ ನಂಬಿಕೆ ನಮ್ಮದು’ ಎಂದು ಹೇಳಿದರು.

ಮಾಂಸ ವರ್ಜಿಸಬೇಕು ಎಂಬ ನಂಬಿಕೆ ಆದಿ ಕಾಲದಿಂದಲೂ ಇತ್ತು. ಆದರೆ, ಅದಕ್ಕೆ ಬಿಗಿಯಾದ ಚೌಕಟ್ಟು ಒದಗಿಸಿದ್ದು ಜೈನ ಧರ್ಮ. ಇದರಿಂದಾಗಿ ಹೋಮ ಮತ್ತು ಯಜ್ಞಗಳಲ್ಲಿ ಪ್ರಾಣಿಬಲಿ ಕೊಡುವುದನ್ನು ನಿಲ್ಲಿಸಲಾಗಿತ್ತು ಎಂದು ಹೇಳಿದರು.

* ಚಳವಳಿ ಸಾಹಿತ್ಯ ಬೆಳೆಸುವವರು ಅವರ ದಾರಿಗೆ ಅಡ್ಡ ಬರುವವರನ್ನು ಟೀಕಿಸಲೇಬೇಕಾಗುತ್ತದೆ. ಅವರ ಬಗ್ಗೆ ನನಗೆ ಕನಿಕರ ಇದೆ

-ಎಸ್‌.ಎಲ್‌.ಭೈರಪ್ಪ, ಸಾಹಿತಿ

ಬರಹ ಇಷ್ಟವಾಯಿತೆ?

 • 14

  Happy
 • 2

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !