ವಿಧಾನಸಭೆ ಸಂಖ್ಯಾಬಲದ ಲೆಕ್ಕಾಚಾರದಲ್ಲಿ ಬಿಜೆಪಿ

7

ವಿಧಾನಸಭೆ ಸಂಖ್ಯಾಬಲದ ಲೆಕ್ಕಾಚಾರದಲ್ಲಿ ಬಿಜೆಪಿ

Published:
Updated:

ಬೆಂಗಳೂರು: ವಿಧಾನಸಭೆಯಲ್ಲಿ ಒಟ್ಟು ಸದಸ್ಯರ ಸಂಖ್ಯೆ 224. ಸಮ್ಮಿಶ್ರ ಸರ್ಕಾರದ ಈಗಿನ ಬಲ– 120 (ಕಾಂಗ್ರೆಸ್‌ – 80, ಜೆಡಿಎಸ್‌– 37, ಬಿಎಸ್‌ಪಿ–1, ಪಕ್ಷೇತರ–2). ಬಿಜೆಪಿಯ 104 ಸದಸ್ಯರಿದ್ದಾರೆ.

ಮೈತ್ರಿ ಕೂಟದಲ್ಲಿರುವ ಇಬ್ಬರು ಪಕ್ಷೇತರರು (ಆರ್‌. ಶಂಕರ್‌ ಮತ್ತು ನಾಗೇಶ್‌) ಈಗಾಗಲೇ ಬಿಜೆಪಿ ಕಡೆ ವಾಲಿದ್ದಾರೆ. ಅವರು ಬೆಂಬಲ ವ್ಯಕ್ತಪಡಿಸಿದರೆ ಬಿಜೆಪಿ ಬಲ 106 ಏರಲಿದೆ. ಇದರಿಂದ ಮೈತ್ರಿ ಸರ್ಕಾರದ ಬಲ 118ಕ್ಕೆ ಇಳಿಯಲಿದೆ.

ಬಿಜೆಪಿಯ ಆಪರೇಷನ್‌ ಕಮಲ ಯಶಸ್ವಿಯಾಗಿ 13 ಶಾಸಕರು ರಾಜೀನಾಮೆ ನೀಡಿದರೆ ಮೈತ್ರಿಕೂಟ ಸಂಖ್ಯಾ ಬಲ 105ಕ್ಕೆ ಕುಸಿಯಲಿದ್ದು, ಆಗ ದೋಸ್ತಿ ಸರ್ಕಾರ ಬಹುಮತ ಕಳೆದುಕೊಳ್ಳಲಿದೆ. ಈಗಾಗಲೇ ಕಾಂಗ್ರೆಸ್‌ನ 10ಕ್ಕೂ ಹೆಚ್ಚು ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದು, ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಿ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ ಎಂದು ಮೂಲಗಳು ಹೇಳಿವೆ.

ರಾಜ್ಯಕ್ಕೆ ವೇಣುಗೋಪಾಲ್‌: ಅತೃಪ್ತ ಶಾಸಕರು ಬಿಜೆಪಿಯ ‘ಆಪರೇಷನ್‌ ಕಮಲ’ದ ಬಲೆಗೆ ಬೀಳುವ ಖಚಿತ ಮಾಹಿತಿ ಸಿಗುತ್ತಿದ್ದಂತೆ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಸೋಮವಾರ ರಾತ್ರಿ ನಗರಕ್ಕೆ ದೌಡಾಯಿಸಿದ್ದಾರೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತು ಸಚಿವ ಡಿ.ಕೆ. ಶಿವಕುಮಾರ್‌ ಜೊತೆ ಮಂಗಳವಾರ ಬೆಳಿಗ್ಗೆ ಅವರು ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 5

  Amused
 • 1

  Sad
 • 0

  Frustrated
 • 4

  Angry

Comments:

0 comments

Write the first review for this !