ಸರ್ಕಾರ ಉರುಳಿಸಲು ಬಿಜೆಪಿ ಪ್ರಯತ್ನ: ದಿನೇಶ್ ಗುಂಡೂರಾವ್

7

ಸರ್ಕಾರ ಉರುಳಿಸಲು ಬಿಜೆಪಿ ಪ್ರಯತ್ನ: ದಿನೇಶ್ ಗುಂಡೂರಾವ್

Published:
Updated:

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದೇ13 ರಂದು ಬೀದರ್‌ನಲ್ಲಿ ನಡೆಯಲಿರುವ ಜನಧ್ವನಿ ಕಾರ್ಯಕ್ರಮದಲ್ಲಿ  ಭಾಗವಹಿಸಲಿದ್ದು, ಇದು ಲೋಕಸಭಾ ಚುನಾವಣೆಯ ಧ್ವನಿ ಕೂಡ ಆಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಮೂರು ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, ಕಾರ್ಯಕ್ರಮದಲ್ಲಿ ಅವರು ಮೋದಿ ಸರ್ಕಾರ ಲೋಪ ದೋಷಗಳನ್ನು ಬಿಚ್ಚಿಡಲಿದ್ದಾರೆ. ನಂತರ ರಾಹುಲ್ ತೆಲಂಗಾಣಕ್ಕೆ ತೆರಳಲಿದ್ದಾರೆ ಎಂದು ಹೇಳಿದರು. 

ಆಗಸ್ಟ್ 9 ಕ್ವೀಟ್ ಇಂಡಿಯಾ ಚಳುವಳಿ ದಿನದ ಅಂಗವಾಗಿ ಜಿಲ್ಲಾ ಕೇಂದ್ರಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಚಳುವಳಿಯಲ್ಲಿ ಭಾಗವಹಿಸಿದವರನ್ನು ಕಾರ್ಯಕ್ರಮಕ್ಕೆ ಅಹ್ವಾನಿಸುತ್ತೇವೆ ಎಂದರು.

ರಾಜ್ಯದ ಹಿತಸಾಕ್ತಿ ಕಾಪಾಡುವಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ವಿಫಲರಾಗಿದ್ದಾರೆ. ಕರ್ನಾಟಕದಿಂದಲೇ ಪ್ರತಿನಿಧಿಯಾದರೂ ರಾಜ್ಯಕ್ಕೆ ಪ್ರಯೋಜನವಾಗುವ ಕೆಲಸ ಮಾಡಲಿಲ್ಲ..ರಾಜ್ಯಕ್ಕೆ 15 ಹಣಕಾಸು ಆಯೋಗದಲ್ಲಿರದ ಕೆಲವು ನಿಯಮಗಳನ್ನು ಬದಲಿಸಿ ರಾಜ್ಯಕ್ಕೆ ಅನುಕೂಲ ಮಾಡಬೇಕು ಎಂದು ಒತ್ತಾಯಿಸಿದರು.

ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ನೀಡಲು ಒತ್ತಾಯ
ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆಯಬೇಕಾಗಿರುವುದರಿಂದ ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ. ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಬರೆಯುವರಿಗೆ ಅನುಕೂಲವಾಗುತ್ತಿದೆ. ಹಳೆಯ ನಿಯಮದ ರೀತಿಯಲ್ಲಿ ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು‌. ಇದರ ಬಗ್ಗೆ ನಿರ್ಮಲಾ ಸೀತಾರಾಮನ್ ಧ್ವನಿ ಎತ್ತುತ್ತಿಲ್ಲ ಎಂದು ದಿನೇಶ್ ಟೀಕಿಸಿದರು.

ಏರೋ ಇಂಡಿಯಾ ಶೋ ಬೆಂಗಳೂರಿನಲ್ಲಿ ನಡೆಯುತ್ತಿತ್ತು. ವಿಶ್ವದ ಮೂಲೆ ಮೂಲೆಗಳಿಂದ ಜನರು ಆಗಮಿಸುತ್ತಿದ್ದರು. ಆದರೆ ಶೋ ಲಖನೌದಲ್ಲಿ ನಡೆಸಲು ಚಿಂತನೆ ನಡೆದಿದೆ. ಕರ್ನಾಟಕಕ್ಕೆ ಬಂದಾಗಲೂ ಇದರ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನಮ್ಮ ರಾಜ್ಯದ ಹಿತಾಸಕ್ತಿಯನ್ನು ನೀವು ಹೇಗೆ ಕಾಪಾಡ್ತೀರಾ? ನಮ್ಮ ರಾಜ್ಯದಿಂದ ಆಯ್ಕೆಯಾಗಿ ಹೋಗಿದ್ದು ಯಾವ ಪುರುಷಾರ್ಥಕ್ಕೆ ಎಂದು ದಿನೇಶ್ ವಾಗ್ದಾಳಿ ನಡೆಸಿದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದರು.

ಸರ್ಕಾರ ರಚನೆ ಬಳಿಕ ಸಮನ್ವಯ ಸಮಿತಿ ರಚನೆಯಾಗಿದೆ. ಜೆಡಿಎಸ್ ನೂತನ ರಾಜ್ಯ ಅಧ್ಯಕ್ಷ ಎಚ್. ವಿಶ್ವನಾಥ್ ಸಮನ್ವಯ ಸಮಿತಿಗೆ ಸೇರುವ ವಿಷಯ ಜೆಡಿಎಸ್ ಗೆ ಬಿಟ್ಟದ್ದು. ಅದು ಜೆಡಿಎಸ್ ಆಂತರಿಕ ವಿಚಾರ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಸಚಿವ ಸಂಪುಟ ವಿಸ್ತರಣೆ
ದೆಹಲಿಗೆ ತೆರಳಿದವರೆಲ್ಲ ನಮ್ಮ ಪಕ್ಷದ ಕಟ್ಟಾಳುಗಳು. ಆದರೆ ಅವರು ಯಡಿಯೂರಪ್ಪ ಜೊತೆಯಲ್ಲಿ ಹೋಗಿದ್ದಾರೆ ಅನ್ನೋದು ಸುಳ್ಳು.

ಬಿಜೆಪಿಯಿಂದ ಸರ್ಕಾರ ಉರುಳಿಸುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಕಾಂಗ್ರೆಸ್‌ನ 80 ಶಾಸಕರನ್ನು ಸಂಪರ್ಕ ಮಾಡಿದ್ದಾರೆ. ಶಾಸಕರಿಗೆ ಆಮಿಷ ಒಡ್ಡುವ ಕೆಲಸ ಬಿಜೆಪಿಯಿಂದ ನಡೆಯುತ್ತಿದೆ..

ಬಿಜೆಪಿಯವರಿಗೆ ಅಧಿಕಾರದ ದಾಹ ಇದೆ. ಸರ್ಕಾರ ಕೆಡವಲು ಇಲ್ಲಸಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಅನೈತಿಕ ಕೆಲಸಕ್ಕೆ ಬಿಜೆಪಿಯವರು ಕೈಹಾಕುತ್ತಿದ್ದಾರೆ. ಅವರು ಇದನ್ನೆಲ್ಲ ಬಿಟ್ಟು ಜನರ ಸಮಸ್ಯೆ ಬಗ್ಗೆ ಗಮನ ಹರಿಸಲಿ ಎಂದು ಬಿಜೆಪಿ ನಾಯಕರ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !