ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಸುಕಿನಲ್ಲೇ ‘ಕಾಲ್ಕೀಳುವ’ ಓಡುಗರು!

Last Updated 3 ಮೇ 2018, 19:30 IST
ಅಕ್ಷರ ಗಾತ್ರ

ಬೆಳಿಗ್ಗೆ 5 ಗಂಟೆಯಾಗುತ್ತಿದ್ದಂತೆ ಹತ್ತಾರು ಮಂದಿ ಗುಂಪುಗೂಡುತ್ತಾರೆ. ಎಂದಿನಂತೆ ಗುಂಪಿನಲ್ಲಿ ಕೂಡಿಕೊಳ್ಳಬೇಕಾದವರಿಗಾಗಿ ಕೆಲಹೊತ್ತು ಕಾಯುತ್ತಾರೆ. ಸರಿಯಾಗಿ 5.15ಕ್ಕೆ ಅವರೆಲ್ಲರೂ ನಿಧಾನವಾಗಿ ಓಡತೊಡಗುತ್ತಾರೆ. ಜಯನಗರ, ವಿಜಯನಗರ, ಇಂದಿರಾನಗರ, ಎಚ್‌ಎಸ್‌ಆರ್‌ ಬಡಾವಣೆ, ಕನಕಪುರ ರಸ್ತೆ, ವೈಟ್‌ಫೀಲ್ಡ್‌, ಹೆಬ್ಬಾಳದಲ್ಲಿ ವಾರಕ್ಕೆ ಮೂರು ದಿನ ಕಾಣಸಿಗುವ ‘ಜಯನಗರ ಜಾಗ್ವಾರ್ಸ್‌’ ಎಂಬ ಕೂಟದ ಸದಸ್ಯರು ಇವರು.

ತಮ್ಮ ತಮ್ಮ ಮನೆಗಳಿಗೆ ಸಮೀಪವಿರುವ ಬಡಾವಣೆಗಳಲ್ಲಿನ ಶಾಖೆಗಳಲ್ಲಿ ಅವರು ಸಕ್ರಿಯರಾಗಿರುತ್ತಾರೆ. ಬೆಳಿಗ್ಗೆ 6.45ರ ವರೆಗೆ ಓಡಿ, ನಂತರ ಸ್ವಲ್ಪ ವ್ಯಾಯಾಮ ಮಾಡುತ್ತಾರೆ. ಬಳಿಕ ತಮ್ಮ ಮನೆಗಳಿಗೆ ಹಿಂದಿರುಗಿ, ನಿತ್ಯ ಕಾಯಕದಲ್ಲಿ ತೊಡಗುತ್ತಾರೆ. ಈ ಒಂದು ಮುಕ್ಕಾಲು ಗಂಟೆ ಅವಧಿಯಲ್ಲಿ ಕೆಲವರು 3 ಕಿ.ಮೀ, 6 ಕಿ.ಮೀ, 9, 10, 12 ಕಿ.ಮೀ ಹೀಗೆ ಓಡಿರುತ್ತಾರೆ. ಅದು ವಯಸ್ಸು ಮತ್ತು ಸಾಮರ್ಥ್ಯದ ಮೇಲೆ ನಿರ್ಧರಿತವಾಗಿರುತ್ತದೆ. ವೈದ್ಯರು, ಎಂಜಿನಿಯರ್‌ಗಳು, ವಿಜ್ಞಾನಿಗಳು, ಕೆಲ ಖಾಸಗಿ ಕಂಪೆನಿಗಳ ಸಿಇಒಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳು, ವಿದ್ಯಾರ್ಥಿಗಳು, ಸಹೋದರರು, ಗೃಹಿಣಿಯರು, ಹಿರಿಯ ನಾಗರಿಕರು, ವಿವಿಧ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರೂ ಈ ಗುಂಪಿನಲ್ಲಿದ್ದಾರೆ.

‘ಓಡುವುದು ಅಥ್ಲೀಟ್, ಕ್ರೀಡಾಪಟುಗಳಿಗೆ ಮಾತ್ರ ಸೀಮಿತವಲ್ಲ. ಪ್ರತಿಯೊಬ್ಬರೂ ಓಡಬಹುದು. ಓಟವನ್ನು ಹವ್ಯಾಸವನ್ನಾಗಿಸಿಕೊಳ್ಳಬೇಕು. ಫಿಟ್‌ನೆಸ್‌, ಆರೋಗ್ಯ, ಸಂತೋಷ, ಉಲ್ಲಾಸ, ಉತ್ಸಾಹದಿಂದ ಇರುವುದಕ್ಕಾಗಿ ಓಡಬೇಕು’ ಎಂಬುದು ‘ಜಯನಗರ ಜಾಗ್ವಾರ್ಸ್‌’ ಗುಂಪಿನ ಮೂಲ ಉದ್ದೇಶ. ಸದ್ಯಕ್ಕೆ ಬೆಂಗಳೂರಿನ ಏಳು ಬಡಾವಣೆಗಳಲ್ಲಿ ಶಾಖೆಗಳನ್ನು ಹೊಂದಿರುವ ಈ ಗುಂಪಿನಲ್ಲಿ 18 ವರ್ಷದಿಂದ 78 ವರ್ಷದವರೆಗಿನ ಸದಸ್ಯರಿದ್ದಾರೆ.

10 ವರ್ಷದ ಹಿಂದೆ ಆರಂಭವಾದ ಈ ಓಡುಗರ ಗುಂಪು ನಾಲ್ಕು ವರ್ಷದಿಂದೀಚೆಗೆ ಹೆಚ್ಚು ಸಕ್ರಿಯವಾಗಿದೆ. ಆರಂಭದಲ್ಲಿ ಕೇವಲ 20 ಜನರಿದ್ದ ಗುಂಪಿನಲ್ಲೀಗ 600ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಇದರಲ್ಲಿ 240 ಮಹಿಳೆಯರು ಎಂಬುದು ವಿಶೇಷ. ಈ ಗುಂಪಿನಲ್ಲಿರುವ ಹಲವರು 5 ಕಿ.ಮೀ, 10 ಕಿ.ಮೀ, ಅರ್ಧ ಮ್ಯಾರಥಾನ್‌, ಮ್ಯಾರಥಾನ್‌ ಸ್ಪರ್ಧೆಗಳಲ್ಲಿ (ಮುಕ್ತ) ಭಾಗವಹಿಸಿ ಗಮನ ಸೆಳೆದಿದ್ದಾರೆ. ಗೆಲ್ಲುವುದಕ್ಕಿಂತ ಸ್ಪರ್ಧೆಗಳಲ್ಲಿ ಭಾಗವಹಿಸಿ, ನಿಗದಿತ ಓಟವನ್ನು ಪೂರ್ಣಗೊಳಿಸಬೇಕು ಎಂಬುದು ಈ ಗುಂಪಿನ ಧ್ಯೇಯ.

ವ್ಯವಸ್ಥಿತ ತರಬೇತಿ
‘ವ್ಯವಸ್ಥಿತ ಮತ್ತು ಯೋಜಿತ ತರಬೇತಿ ಕಾರ್ಯಕ್ರಮವನ್ನು ಇಲ್ಲಿ ನೀಡಲಾಗುತ್ತಿದೆ. ಓಡುವುದನ್ನು ಹವ್ಯಾಸವಾಗಿಸಿಕೊಳ್ಳಲು ಈ ಗುಂಪು ಸೇರಿದ ಹಲವರು ವೃತ್ತಿಪರ ಓಟಗಾರರಂತೆ ಪಳಗಿದ್ದಾರೆ. ವಯೋಮಿತಿಗೆ ತಕ್ಕಂತೆ ಇಲ್ಲಿ ವೈಜ್ಞಾನಿಕ ತರಬೇತಿ ನೀಡಲಾಗುತ್ತಿದೆ. 18 ವರ್ಷ, 40 ವರ್ಷ, 70 ವರ್ಷ ಮೀರಿದವರಿಗೆ ವಿಭಿನ್ನ ರೀತಿಯ ತರಬೇತಿ ಇದೆ. ಓಡಲು ಬಾರದವರಿಗೆ ಮೊದಲು ನಿಯಮಿತವಾಗಿ ನಡೆಯುವುದನ್ನು, ಕ್ರಮೇಣ ನಡಿಗೆಯ ಜತೆಗೆ ‘ಜಾಗ್‌’ ಮಾಡುವುದನ್ನು, ಜಾಗಿಂಗ್‌ ಜತೆಗೆ ನಿಗದಿತ ವೇಗದಲ್ಲಿ ಓಡುವುದನ್ನು ಕಲಿಸಲಾಗುತ್ತಿದೆ’ ಎನ್ನುತ್ತಾರೆ ಗುಂಪಿನ ಮುಖ್ಯ ಕೋಚ್‌ ಪ್ರಮೋದ್‌ ದೇಶಪಾಂಡೆ.

‘ಜೀವನದಲ್ಲಿ 50 ಮೀಟರ್‌, 100 ಮೀಟರ್‌ ಓಟವನ್ನೂ ಓಡದೇ ಇದ್ದವರು, ಈ ಗುಂಪಿನ ಸದಸ್ಯರಾದ ಮೇಲೆ ವೈಜ್ಞಾನಿಕ ತರಬೇತಿ ಪಡೆದು 10 ವಾರದಲ್ಲಿ ದಿನಕ್ಕೆ 10 ಕಿ.ಮೀ ಓಡುವ ಸಾಮರ್ಥ್ಯ ಬೆಳೆಸಿಕೊಂಡಿದ್ದಾರೆ. ಅಲ್ಲದೆ ನಿತ್ಯ ಅವರು ತಮ್ಮ ಓಡುವ ವೇಗವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಕೆಲವರು ಅರ್ಧ ಮ್ಯಾರಥಾನ್‌ (21.1 ಕಿ.ಮೀ), ಮ್ಯಾರಥಾನ್‌ (42.2 ಕಿ.ಮೀ), ಅಲ್ಟ್ರಾ ಮ್ಯಾರಥಾನ್‌ (50 ಕಿ.ಮೀ, 72 ಕಿ.ಮೀ) ಸ್ಪರ್ಧೆಗಳಲ್ಲಿ ಓಡುವಷ್ಟು ಸಾಮರ್ಥ್ಯ ವೃದ್ಧಿಸಿಕೊಂಡಿದ್ದಾರೆ. ಇನ್ನೂ ಕೆಲವರು ಗುಡ್ಡಗಾಡು ಪ್ರದೇಶಗಳಲ್ಲಿ ಓಡುತ್ತಾರೆ. ಕೆಲ ಆಯ್ದ ಸ್ಪರ್ಧೆಗಳಲ್ಲಿ ಮಾತ್ರ ಪಾಲ್ಗೊಳ್ಳುವ ಈ ಗುಂಪಿನ ಸದಸ್ಯರು, ಅದಕ್ಕೆ ಬೇಕಾದ ಸಿದ್ಧತೆಯನ್ನು ನಿತ್ಯ ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ ಓಟಗಾರ ದರ್ಶನ್‌ ಜೈನ್‌.

‘ಸ್ಪರ್ಧೆಗಳಲ್ಲಿ ಗೆಲ್ಲುವುದು ಮುಖ್ಯವಲ್ಲ. ಇಲ್ಲಿ ನಮಗೆ ನಾವೇ ಪ್ರತಿಸ್ಪರ್ಧಿಗಳು. ನಮ್ಮ ಹಳೆ ವೇಗವನ್ನು ಹೆಚ್ಚಿಸಿಕೊಳ್ಳಲು ಮೊದಲು ಗಮನ ನೀಡುತ್ತೇವೆ. ವೇಗ ಹೆಚ್ಚಾದರೆ ನಾವು ಗೆದ್ದಂತೆಯೇ. ನಾನು 2013ರಲ್ಲಿ ಜಯನಗರ ಜಾಗ್ವಾರ್ಸ್‌ ಸೇರಿದೆ. ನಿಗದಿತ ತರಬೇತಿಯ ನಂತರ ಆರಂಭದಲ್ಲಿ 10 ಕಿ.ಮೀ ಓಡಲು 1 ಗಂಟೆ 15 ನಿಮಿಷ ತೆಗೆದುಕೊಳ್ಳುತ್ತಿದ್ದೆ. 2014ರಲ್ಲಿ ಈ ವೇಗ 1 ಗಂಟೆ 9 ನಿಮಿಷಕ್ಕೆ ಇಳಿಯಿತು. 2015ರಲ್ಲಿ 59 ನಿಮಿಷ ಸಾಕಾಯಿತು. ಹೀಗೆ ವರ್ಷದಿಂದ ವರ್ಷಕ್ಕೆ ನನ್ನ ಓಡುವ ವೇಗ ಹೆಚ್ಚುತ್ತಲೇ ಸಾಗಿದೆ’ ಎಂದು ಅವರು ವಿವರಿಸುತ್ತಾರೆ. 2018ರ ಜನವರಿಯಲ್ಲಿ ಮುಂಬೈನಲ್ಲಿ ನಡೆದಿದ್ದ ಮ್ಯಾರಥಾನ್‌ನಲ್ಲಿ ಜಯನಗರ ಜಾಗ್ವಾರ್ಸ್‌ನ 186 ಜನ ಭಾಗವಹಿಸಿದ್ದರು. ಇದರಲ್ಲಿ 18 ವರ್ಷದಿಂದ 77 ವರ್ಷದವರಿಗಿನವರಿದ್ದರು. ದೇಶದ ಯಾವುದೇ ನಗರ ಅಥವಾ ಕೂಟದಿಂದ ಇಷ್ಟೊಂದು ಸಂಖ್ಯೆಯ ಓಟಗಾರರು ಅಲ್ಲಿಗೆ ಬಂದಿರಲಿಲ್ಲ. ಇದು ಬೆಂಗಳೂರು ಮತ್ತು ನಮಗೆ ಹೆಮ್ಮೆಯ ವಿಷಯ ಎನ್ನುತ್ತಾರೆ ಅವರು.‌

ಆತ್ಮವಿಶ್ವಾಸ ಹೆಚ್ಚುತ್ತದೆ
ಬೆಳಿಗ್ಗೆಯ ಹೊತ್ತಿನ ಆಹ್ಲಾದಕರ ವಾತಾವರಣದ ಜತೆಗೆ ತಣ್ಣನೆಯ ಗಾಳಿ ಇರುತ್ತದೆ. ಶುದ್ಧ ಗಾಳಿಯ ಸೇವನೆಯೂ ಆಗುತ್ತದೆ. ಓಡುತ್ತಾ ಓಡುತ್ತಾ ಸೂರ್ಯೋದಯ ನೋಡಬಹುದು. ಸೂರ್ಯನ ಕಿರಣಗಳು ನಮ್ಮನ್ನು ತಲುಪುತ್ತಿದ್ದಂತೆ ಏನೋ ಒಂದು ರೀತಿಯ ಉಲ್ಲಾಸ, ಉತ್ಸಾಹ, ಚೈತನ್ಯ ಮೂಡುತ್ತದೆ. ಅಷ್ಟು ಹೊತ್ತಿಗೆ ಸಾಕಷ್ಟು ಬೆವರು ಸುರಿದಿರುತ್ತದೆ. ಓಡುವುದರ ಜತೆಗೆ ಆತ್ಮವಿಶ್ವಾಸ, ಜೀವನೋಲ್ಲಾಸ, ಲವಲವಿಕೆಯೂ ಹೆಚ್ಚುತ್ತದೆ. ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ದೇಹದ ಫಿಟ್‌ನೆಸ್‌ ಕಾಯ್ದುಕೊಳ್ಳಲು ಓಟ ನೆರವಾಗುತ್ತದೆ. ಅಸ್ತಮಾ, ಮಧುಮೇಹ, ಆಟಿಸಂನಿಂದ ಬಳಲುತ್ತಿದ್ದ ಕೆಲವರು ಅವುಗಳಿಂದ ಹೊರಬರಲು ಈ ಓಟವು ವರವಾಗಿದೆ. ಜಯನಗರ ಜಾಗ್ವಾರ್ಸ್‌ನಲ್ಲಿ ಈ ರೀತಿಯ ಕೆಲವು ನಿದರ್ಶನಗಳಿವೆ ಎಂದು ದರ್ಶನ್‌ ವಿವರಿಸುತ್ತಾರೆ.

ವಾರದಲ್ಲಿ ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ ಓಟ ಇರುತ್ತದೆ. ಉಳಿದಂತೆ ಮನೆ ಬಳಿಯ ಜಿಮ್‌ಗಳಲ್ಲಿ ವಾರಕ್ಕೆ ಎರಡು ದಿನ ಸದಸ್ಯರು ಕಸರತ್ತು ಮಾಡಿಕೊಳ್ಳುತ್ತಾರೆ. ಶನಿವಾರ ಓಟ ಮುಗಿದ ನಂತರ ಆಯಾ ಗುಂಪಿನ ಸದಸ್ಯರು ಒಟ್ಟಾಗಿ ಸಮೀಪದ ಹೋಟೆಲ್‌ನಲ್ಲಿ ಬೆಳಿಗ್ಗೆಯ ಉಪಾಹಾರ ಸವಿಯುತ್ತಾರೆ. ಈ ವೇಳೆ ಗುಂಪಿನ ಎಲ್ಲ ಸದಸ್ಯರ ಪರಿಚಯ ಎಲ್ಲರಿಗೂ ಆಗುತ್ತದೆ. ಸ್ನೇಹ, ಬಾಂಧವ್ಯವೂ ಬೆಳಯುತ್ತದೆ ಓಟಗಾರ ಅಖಿಲೇಶ್‌ ಕಾಮತ್‌.

ಸಮಾಜಮುಖಿ ಕೆಲಸ
ಇದಲ್ಲದೆ ಜಯನಗರ ಜಾಗ್ವಾರ್ಸ್‌ ಸಮಾಜ ಮುಖಿ ಕೆಲಸಗಳಲ್ಲಿಯೂ ತೊಡಗಿದೆ. ಸರ್ಜಾಪುರ ರಸ್ತೆಯ ಬಳಿಯಿರುವ ‘ತಾಯಿಮನೆ’ ಅನಾಥಾಶ್ರಮಕ್ಕೆ ಆಹಾರ ಪದಾರ್ಥ ಒದಗಿಸುತ್ತಿದೆ. ವಿವಿಧೆಡೆ ಸ್ವಚ್ಛತಾ ಅಭಿಯಾನ ಕೈಗೊಂಡಿದೆ. ಆರ್ಥಿಕವಾಗಿ ದುರ್ಬಲರಾಗಿರುವ ಕೆಲ ಓಟಗಾರರಿಗೆ ಉಚಿತವಾಗಿ ತರಬೇತಿ ನೀಡುತ್ತಿರುವುದರ ಜತೆಗೆ, ಅವರಿಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ನೋಂದಣಿ ಶುಲ್ಕ, ಪ್ರಯಾಣ ಭತ್ಯೆ, ಪೌಷ್ಟಿಕ ಆಹಾರ ಸೇವನೆಗೆ ಹಣ ವಿನಿಯೋಗಿಸುತ್ತಿದೆ. ಕೆಲ ವಿದ್ಯಾರ್ಥಿಗಳ ವ್ಯಾಸಂಗಕ್ಕೂ ನೆರವಾಗುತ್ತಿದೆ ಎನ್ನುತ್ತಾರೆ ಕೋಚ್‌ ಪ್ರಮೋದ್‌ ದೇಶಪಾಂಡೆ.

*


ಅಸ್ತಮಾ ಗೆದ್ದ ವೈದ್ಯ
ಮಕ್ಕಳ ದಂತ ತಜ್ಞ ಮತ್ತು ಎಂ.ಎಸ್‌.ರಾಮಯ್ಯ ದಂತ ವೈದ್ಯಕೀಯ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಜಿ. ಧನಂಜಯ (41) ತೀವ್ರ ಅಸ್ತಮಾದಿಂದ ಬಳಲುತ್ತಿದ್ದರು. ವಿದ್ಯಾರ್ಥಿಯಾಗಿದ್ದಾಗ ಯಾವಾಗಲೋ ಕ್ರಿಕೆಟ್‌ ಆಡಿದ್ದು ಬಿಟ್ಟರೆ ಮತ್ಯಾವುದೇ ಆಟ, ಓಟದಲ್ಲಿ ಅವರು ಇರಲೇ ಇಲ್ಲ. ಓಡಿದರೆ ಎದೆಬಡಿತ ಹೆಚ್ಚಾಗಿ ಎಲ್ಲಿ ಉಸಿರಾಟದ ಸಮಸ್ಯೆಯಾಗುತ್ತದೆಯೋ ಎಂದು ಹೆದರುತ್ತಿದ್ದ ಅವರು 50 ಮೀಟರ್‌ ಓಡಲು ಹಿಂಜರಿಯುತ್ತಿದ್ದರು. ಆದರೆ ಎರಡು ವರ್ಷದ ಹಿಂದೆ ಸ್ನೇಹಿತರ ಮಾತು ಕೇಳಿ ಜಯನಗರ ಜಾಗ್ವಾರ್ಸ್‌ನ ವಿಜಯನಗರ ಗುಂಪಿನ ಸದಸ್ಯರಾದರು. ಈಗ ಅವರು 10 ಕಿ.ಮೀ ಸಲೀಸಾಗಿ ಓಡಬಲ್ಲರು. ಅಲ್ಲದೆ ಅರ್ಧ ಮ್ಯಾರಥಾನ್‌ ಸ್ಪರ್ಧೆಗಳಲ್ಲಿಯೂ ಭಾಗವಹಿಸಿದ್ದಾರೆ.

‘ಅಸ್ತಮಾ ನನ್ನನ್ನು ಎಷ್ಟೋ ಸಂದರ್ಭದಲ್ಲಿ ಹಾಸಿಗೆಯಲ್ಲಿಯೇ ಇರುವಂತೆ ಮಾಡಿತ್ತು. ಆದರೆ ಓಡಲು ಆರಂಭಿಸಿದ ಮೇಲೆ ಶೇ 80ರಷ್ಟು ಅಸ್ತಮಾವನ್ನು ಗೆದ್ದಿದ್ದೇನೆ. ಇದನ್ನು ವೈದ್ಯನಾಗಿ ಹೇಳುತ್ತಿದ್ದೇನೆ. ತರಬೇತಿ ಆರಂಭದಲ್ಲಿ ನಡೆಯುವಾಗ, ‘ಜಾಗ್‌’ ಮಾಡುವಾಗ, ಮಿತ ವೇಗದಲ್ಲಿ ಓಡುವಾಗ ನಡುವೆ ಸುಗಮ ಉಸಿರಾಟಕ್ಕಾಗಿ ಇನ್‌ಹೇಲರ್‌ ಬಳಸಿಕೊಳ್ಳುತ್ತಿದ್ದೆ. ಆದರೆ ಈಗ ಇನ್‌ಹೇಲರ್‌ ಬಳಸದೆ 10 ಕಿ.ಮೀ ಓಡಬಲ್ಲೆ. ಓಡುವುದರಿಂದ ಶ್ವಾಸಕೋಶಗಳು ಹಿಗ್ಗಿ, ಹೆಚ್ಚು ಆಮ್ಲಜನಕವನ್ನು ಒಳಗೆ ತೆಗೆದುಕೊಳ್ಳುತ್ತದೆ. ಇದು ಅಸ್ತಮಾದಿಂದ ಹೊರಬರಲು ನೆರವಾಗುತ್ತದೆ. ನನ್ನಿಂದ ಪ್ರೇರಣೆ ಪಡೆದ ಹಲವರು ಓಡುವುದರಲ್ಲಿ ತೊಡಗಿದ್ದಾರೆ. ಈ ಎರಡು ವರ್ಷದಲ್ಲಿ ನನಗೆ ಜೀವನದಲ್ಲಿ ಉತ್ಸಾಹ, ಹೊಸ ಹುರುಪು ಬಂದಿದೆ’ ಎನ್ನುತ್ತಾರೆ ಡಾ. ಜಿ. ಧನಂಜಯ.

*


‘ಆಟಿಸಂ’ ನಿಂದ ಹೊರಬಂದ ಯುವತಿ
‘ನನ್ನ ಮಗಳಿಗೆ 26 ವರ್ಷ. ಹೆಸರು ಪ್ರೇಕ್ಷಾ. ಆಟಿಸಂನಿಂದ ಬಳಲುತ್ತಿದ್ದ ಮಗಳಿಗೆ ಓಟ ಹೊಸ ಜೀವನ ನೀಡಿದೆ. ಆಟಿಸಂನಿಂದ ಬಳಲುವವರು ಸಾಮಾನ್ಯವಾಗಿ ಜನರ ಜತೆ ಬೆರೆಯುವುದಿಲ್ಲ. ತಮ್ಮದೇ ಲೋಕದಲ್ಲಿ ಇರುತ್ತಾರೆ. ಹೆಚ್ಚು ಜನರನ್ನು ಕಂಡರೆ ಹೆದರುತ್ತಾರೆ. ಇವೆಲ್ಲವೂ ಮೊದಲಿಗೆ ನನ್ನ ಮಗಳಲ್ಲೂ ಇತ್ತು. ಆದರೆ ಈಗ ನಿತ್ಯ ಓಟದಲ್ಲಿ ತಲ್ಲೀನಳಾಗಿರುವ ಮಗಳು ಎಲ್ಲರೊಡನೆ ಬೆರೆಯುತ್ತಾಳೆ. ಜಯನಗರದ ಗುಂಪಿನಲ್ಲಿರುವ 250 ಸದಸ್ಯರ ಹೆಸರು, ಹಲವರ ಕಾರು ಸಂಖ್ಯೆಗಳನ್ನು ಹೇಳುವಷ್ಟು ಬುದ್ಧಿಶಕ್ತಿ ಬೆಳೆಸಿಕೊಂಡಿದ್ದಾಳೆ. ಅಲ್ಲದೆ ದಿನಕ್ಕೆ 10 ಕಿ.ಮೀ ಸಲೀಸಾಗಿ ಓಡುತ್ತಾಳೆ. ಮೂರು ತಿಂಗಳಿಂದ ತಾನು ಓಡಿದ ಪ್ರತಿ ರಸ್ತೆಯ ಮಾರ್ಗವನ್ನು ನೆನಪಿನಲ್ಲಿಟ್ಟುಕೊಂಡಿದ್ದಾಳೆ. ಜಯನಗರ ಜಾಗ್ವಾರ್ಸ್‌ಗಾಗಿ ‘ಆ್ಯಪ್‌’ ರೂಪಿಸಿರುವ ಕಂಪೆನಿಯಲ್ಲಿಯೇ ಕೆಲಸಕ್ಕೂ ಹೋಗುತ್ತಿದ್ದಾಳೆ. ಇಷ್ಟು ಬದಲಾವಣೆಗೆ ಓಟವೇ ಕಾರಣ’ ಎನ್ನುತ್ತಾರೆ ಅವರ ತಾಯಿ ವಾಣಿ ರಾಜೇಂದ್ರ.

ಓಟಕ್ಕೊಂದು ಆ್ಯಪ್‌ 
‘ಜಯನಗರ ಜಾಗ್ವಾರ್ಸ್‌’ನ ಏಳು ಶಾಖೆಗಳ ಸದಸ್ಯರನ್ನು ಸಂಪರ್ಕಿಸಲು, ಅವರಿಗೆ ಓಟದ ಕುರಿತ ದೈನಂದಿನ ಯೋಜನೆಗಳನ್ನು ತಿಳಿಸಲು ‘ONCA Run’ ಎಂಬ ಆ್ಯಪ್‌ ಸಿದ್ಧಪಡಿಸಿದೆ. ಇದರ ಮೂಲಕ ಎಲ್ಲ ಓಟಗಾರರಿಗೆ ಆಯಾ ದಿನದ ಓಟದ ವೇಳಾಪಟ್ಟಿ, ಮಾರ್ಗ, ವೇಗದ ಕುರಿತು ಮಾಹಿತಿ ದೊರೆಯುತ್ತದೆ. ONCA ಎಂಬುದು ಜಾಗ್ವಾರ್‌ನ ವೈಜ್ಞಾನಿಕ ಹೆಸರು.

ಅಲ್ಲದೆ, ಓಟಗಾರರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ತಜ್ಞರು, ವೈದ್ಯರಿಂದ ಕಾಲ ಕಾಲಕ್ಕೆ ಉಪನ್ಯಾಸಗಳನ್ನು ಏರ್ಪಡಿಸುತ್ತಿದೆ. ನ್ಯೂಟ್ರಿಷಿಯನ್‌ ತಜ್ಞರಿಂದ ಕಾರ್ಯಾಗಾರಗಳನ್ನು ನಡೆಸಿ ಓಟಗಾರರಿಗೆ ಅಗತ್ಯ ಮಾಹಿತಿ ಒದಗಿಸಲಾಗುತ್ತಿದೆ.

16 ವರ್ಷ ದಾಟಿದವರು ‘ಜಯನಗರ ಜಾಗ್ವಾರ್ಸ್‌’ ಸದಸ್ಯರಾಗಬಹುದು. ಮೂರು ತಿಂಗಳು ಓಟದ ತರಬೇತಿ. ಆಸಕ್ತರು ಮುಂದುವರೆಯಬಹುದು. ಮೂರು ತಿಂಗಳ ಕೋರ್ಸ್‌ಗೆ ₹2,500 ಶುಲ್ಕ ಪಾವತಿಸಬೇಕು. ಹೆಚ್ಚಿನ ಮಾಹಿತಿಗೆ ಮೊಬೈಲ್‌–98450 55414.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT