ವ್ಯವಸ್ಥೆಗೆ ನಲುಗಿದ ಅಂಧ ಕುಟುಂಬ

7
ಕಟ್ಟಡ ನಿರ್ಮಿಸಲು ಪರವಾನಗಿ ನೀಡದ ಚಿರಡೋಣಿ ಗ್ರಾಮ ಪಂಚಾಯಿತಿ

ವ್ಯವಸ್ಥೆಗೆ ನಲುಗಿದ ಅಂಧ ಕುಟುಂಬ

Published:
Updated:
ಕೊಠಡಿ ನಿರ್ಮಿಸಲು ಗ್ರಾಮ ಪಂಚಾಯಿತಿ ಪರವಾನಗಿ ನೀಡದೇ ಇರುವುದರಿಂದ ತೊಂದರೆಗೊಳಗಾದ ಚನ್ನಗಿರಿ ತಾಲ್ಲೂಕಿನ ಚಿರಡೋಣಿ ಗ್ರಾಮದ ಅಂಧ ಕೆ.ಎನ್‌. ಮಂಜಪ್ಪ ಕುಟುಂಬ

ದಾವಣಗೆರೆ: ಸಂಗೀತ ತರಗತಿ ನಡೆಸಲಿಕ್ಕಾಗಿ ಕೊಠಡಿ ನಿರ್ಮಿಸಿಕೊಳ್ಳಲು ಗ್ರಾಮ ಪಂಚಾಯಿತಿ ಅನುಮತಿ ನೀಡದೇ ಪೀಡಿಸುತ್ತಿರುವ ಆಡಳಿತದ ವ್ಯವಸ್ಥೆಯಿಂದ ಚನ್ನಗಿರಿ ತಾಲ್ಲೂಕಿನ ಚಿರಡೋಣಿ ಗ್ರಾಮದ ಅಂಧರಾದ ಕೆ.ಎನ್‌. ಮಂಜಪ್ಪ ಕುಟುಂಬ ನಲುಗಿದೆ.

ತಮ್ಮ ಜಾಗದಲ್ಲೇ ಕೊಠಡಿ ಕಟ್ಟಲು ಗ್ರಾಮದ ಉಪ್ಪಾರಹಟ್ಟಿಯವರು ಅಡ್ಡಿಪಡಿಸುತ್ತಿರುವುದು ಹಾಗೂ ಗ್ರಾಮ ಪಂಚಾಯಿತಿ ಅಸಹಕಾರ ನೀಡುತ್ತಿರುವ ಬಗ್ಗೆ ಮಂಜಪ್ಪ ಕುಟುಂಬ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌. ಅಶ್ವತಿ ಎದುರು ಸೋಮವಾರ ಅಳಲು ತೋಡಿಕೊಂಡಿತು.

ಮಂಜಪ್ಪ ಅವರ ಪುತ್ರ ನರೇಂದ್ರಕುಮಾರ್‌ ಹಾಗೂ ಮೊಮ್ಮಕ್ಕಳಾದ ಚಿನ್ಮಯ ಹಾಗೂ ತ್ರಿವೇಣಿ ಸಹ ಅಂಧರಾಗಿದ್ದಾರೆ. ತಾವು ಕಲಿತ ಸಂಗೀತ ವಿದ್ಯೆಯಿಂದಲೇ ಬದುಕು ಕಟ್ಟಿಕೊಳ್ಳಲು ಮುಂದಾಗಿರುವ ಈ ಅಂಧ ಕುಟುಂಬಕ್ಕೆ ಸ್ಥಳೀಯರು ಅಡ್ಡಗಾಲು ಹಾಕುತ್ತಿದ್ದಾರೆ.

‘ನಮ್ಮ ಪುಟ್ಟ ಮನೆಯ ಪಕ್ಕದಲ್ಲಿರುವ 12x14 ಅಡಿ ಅಳತೆಯ ಜಾಗ ಅಜ್ಜ ನಿರ್ವಾಣಪ್ಪ ಅವರ ಹೆಸರಿನಲ್ಲಿದ್ದ ಬಗ್ಗೆ ಗ್ರಾಮ ಪಂಚಾಯಿತಿಯ 1968ರ ದಾಖಲೆಯಲ್ಲಿದೆ. ಹೀಗಿದ್ದರೂ ಭಗೀರಥ ಸಮಾಜದ ಕೆಲವರು ನಮ್ಮ ಜಾಗ ಪಂಚಾಯಿತಿಗೆ ಸೇರಿದ್ದು, ಅಲ್ಲಿಯೇ ಸ್ವಸಹಾಯ ಸಂಘಗಳ ಸಭೆ ನಡೆಸಲು ಕಟ್ಟಡ ಕಟ್ಟಬೇಕು ಎಂದು ಪಟ್ಟು ಹಿಡಿದಿದ್ದಾರೆ. ಊರಿನಲ್ಲಿ ಬೇರೆ ಕಡೆ ಜಾಗವಿದ್ದರೂ ನಮ್ಮ ಜಾಗದ ಮೇಲೆಯೇ ಕೆಲವರಿಗೆ ಕಣ್ಣು ಬಿದ್ದಿದೆ. ನಮ್ಮ ಸಮಾಜದವೇ ಕಿರುಕುಳ ಕೊಡುತ್ತಿರುವುದಕ್ಕೆ ತುಂಬಾ ಬೇಸರವಾಗುತ್ತಿದೆ’ ಎಂದು ನರೇಂದ್ರಕುಮಾರ್‌ ‘ಪ್ರಜಾವಾಣಿ’ ಎದುರು ಕಣ್ಣೀರಿಟ್ಟರು.

‘2000ರಲ್ಲೇ ಕೊಠಡಿ ಕಟ್ಟಲು ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದೆವು. ಹಟ್ಟಿಯ ಕೆಲವರ ಒತ್ತಡಕ್ಕೆ ಮಣಿದು ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ನಮಗೆ ಸಹಕಾರ ನೀಡುತ್ತಿಲ್ಲ. ಕೇಳಿದಾಗಲೆಲ್ಲ ಕಟ್ಟಡ ಕಟ್ಟಿಕೊಳ್ಳಿ ಎಂದು ಮೌಖಿಕವಾಗಿ ಹೇಳುತ್ತಿದ್ದಾರೆಯೇ ಹೊರತು, ಲಿಖಿತವಾಗಿ ಪರವಾನಗಿ ನೀಡುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

‘ಗದುಗಿನ ಪುಟ್ಟರಾಜ ಗವಾಯಿ ಸಂಗೀತ ಶಾಲೆಗೆ ಹೋಗಿ ಸಂಗೀತ ಕಲಿತಿದ್ದೆ. ನನ್ನ ಇಬ್ಬರು ಮಕ್ಕಳಿಗೂ ಕಣ್ಣು ಕಾಣುತ್ತಿಲ್ಲ. ನಮಗೆ ಕಲಿತ ಸಂಗೀತ ವಿದ್ಯೆಯೇ ಆಸರೆ. ಗ್ರಾಮದಲ್ಲಿ ಸಂಗೀತ ತರಗತಿ ಆರಂಭಿಸಬೇಕು ಎಂಬ ನಮ್ಮ ಕನಸಿಗೆ ಸ್ಥಳೀಯರು ಅಡ್ಡಿಪಡಿಸುತ್ತಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸಿಇಒ ಭರವಸೆ ನೀಡಿದ್ದಾರೆ. ಏನಾಗುತ್ತದೆಯೋ ನೋಡಬೇಕು’ ಎಂದು ಹೇಳುವಾಗ ನರೇಂದ್ರಕುಮಾರ್‌ ಕಣ್ಣಾಲಿ ಒದ್ದೆಯಾದವು.

‘ಬಸವಾಪಟ್ಟಣದ ಹಾಲಸ್ವಾಮಿ ಮಠಕ್ಕೆ ತೆರಳಿ ಈ ಅಂಧ ಕುಟುಂಬ ಸಂಗೀತ ಕಾರ್ಯಕ್ರಮ ನೀಡುತ್ತವೆ. ಸಂಗೀತ ಕಾರ್ಯಕ್ರಮ ನೀಡಿದ್ದರಿಂದ ಬಂದ ಅಲ್ಪ–ಸ್ವಲ್ಪ ಹಣದಲ್ಲಿ ಬದುಕು ಸಾಗಿಸುತ್ತಿದೆ. ಇವರಿಗೆ ನ್ಯಾಯ ಒದಗಿಸಿಕೊಡಬೇಕು’ ಎಂದು ಗ್ರಾಮದ ರಾಯಪ್ಪ ಒತ್ತಾಯಿಸಿದರು.

ಮಂಜಪ್ಪ ಅವರ ಪತ್ನಿ ಮಲ್ಲಮ್ಮ ಹಾಗೂ ನರೇಂದ್ರಕುಮಾರ್‌ ಪತ್ನಿ ಮಮತಾ ಹಾಗೂ ಇಬ್ಬರು ಮಕ್ಕಳು ಸಹ ದೂರು ನೀಡಲು ಬಂದಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !