ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರ ಕಟ್ಟಿಯೇ ತೀರುತ್ತೇವೆ: ಬಿ.ಎಲ್.ಸಂತೋಷ್

ಭಾರತಾಂಬೆಯ ಕಿರೀಟ ಕಾಶ್ಮೀರ-370ನೇ ವಿಧಿ ರದ್ದತಿ ಕುರಿತ ಉಪನ್ಯಾಸ
Last Updated 24 ಆಗಸ್ಟ್ 2019, 1:36 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ಹುಟ್ಟಿದ್ದೇ ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಲು, ಬೆಳೆದಿದ್ದೇ ರಾಮ ಮಂದಿರ ನಿರ್ಮಾಣಕ್ಕಾಗಿ. ಈ ಎರಡರಲ್ಲಿ ಒಂದು ಕೆಲಸ ಆಗಿದೆ. ಇನ್ನೊಂದನ್ನು ಮಾಡಿಯೇ ತೀರುತ್ತೇವೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಹೇಳಿದರು.

ಜನಮನ ಸಂಸ್ಥೆ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಭಾರತಾಂಬೆಯ ಕಿರೀಟ ಕಾಶ್ಮೀರ-370ನೇ ವಿಧಿ ರದ್ಧತಿ’ ಕುರಿತ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದ ಅವರು, ‘ರಾಮಮಂದಿರ ನಿರ್ಮಾಣ ಮಾಡಬೇಕೇ ಬೇಡವೇ ಎಂಬ ಪ್ರಶ್ನೆಯೇ ಇಲ್ಲ. ಇದರಲ್ಲಿ ಮುಚ್ಚುಮರೆ ಯಾವುದೂ ಇಲ್ಲ. ಯಾವಾಗ ಎಂಬುದಷ್ಟೇ ನಮ್ಮ ಮುಂದಿರುವ ಪ್ರಶ್ನೆ’ ಎಂದರು.

‘ಒಂದು ದೇಶದಲ್ಲಿ ಒಂದೇ ಸಂವಿಧಾನ, ಒಂದೇ ಧ್ವಜ, ಒಂದೇ ಪ್ರಧಾನಿ ಇರಬೇಕು ಎಂಬುದನ್ನು 1951ರಿಂದ ಪ್ರತಿಪಾದಿಸಿಕೊಂಡು ಬಂದಿದ್ದೇವೆ. 370ನೇ ವಿಧಿ ರದ್ದು, ರಾಮಮಂದಿರ ಮತ್ತು ಏಕರೂಪ ನಾಗರಿಕ ಸಂಹಿತೆ ಕುರಿತು ಅಲ್ಲಿಂದ ಇಲ್ಲಿವರೆಗೆ ಭಾರತೀಯ ಜನಸಂಘದ ವಿವಿಧ ಸಭೆಗಳಲ್ಲಿ 73 ಬಾರಿ ನಿರ್ಣಯ ಕೈಗೊಂಡಿದ್ದೇವೆ. ಎಲ್ಲಾ ಲೋಕಸಭೆ ಚುನಾವಣೆಯ ಪ್ರಣಾಳಿಕೆಗಳಲ್ಲೂ ಈ ವಿಷಯಗಳನ್ನು ಪ್ರಸ್ತಾಪಿಸಿದ್ದೇವೆ. ಈ ಯಾವ ವಿಷಯಗಳನ್ನು ಏಕಾಏಕಿ ಮುನ್ನೆಲೆ ತಂದಿಲ್ಲ’ ಎಂದು ಹೇಳಿದರು.

‘ಅಂಬೇಡ್ಕರ್ ಬರೆದ ಸಂವಿಧಾನ ಕಾಶ್ಮೀರಕ್ಕೆ ಅನ್ವಯ ಆಗುತ್ತಿರಲಿಲ್ಲ. ಅಲ್ಲಿಯೂ ಜಾರಿ ಮಾಡಿ ಎಂದು ಯಾರೊಬ್ಬರೂ ಹೋರಾಟ ಮಾಡಿದ್ದನ್ನು ನಾನು ನೋಡಲಿಲ್ಲ. ಅಲ್ಲಿನ ಪ‍ರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ಇರಲಿಲ್ಲ. ಇದನ್ನೂ ಯಾರೂ ಕೇಳಲಿಲ್ಲ. ನೆಹರೂ ಮಾಡಿದ್ದ ತಪ್ಪನ್ನು ಮೋದಿ ಸರಿಪಡಿಸಿದ್ದಾರೆ. ಕಾಶ್ಮೀರದ ಪರಿಶಿಷ್ಟರು ಇನ್ನು ಮುಂದೆ ಎಲ್ಲ ರೀತಿಯ ಮೀಸಲಾತಿ ‍ಪಡೆದುಕೊಳ್ಳಲಿದ್ದಾರೆ’ ಎಂದು ಅವರು ಹೇಳಿದರು.

‘ದೇಶದ ಜನಸಂಖ್ಯೆಯಲ್ಲಿ ಶೇ 1ರಷ್ಟು ಜನ ಕಾಶ್ಮೀರದಲ್ಲಿದ್ದಾರೆ. ಆ ಭಾಗಕ್ಕೆ ಶೇ 11.25ರಷ್ಟು ಅನುದಾನ ನೀಡಲಾಗುತ್ತಿತ್ತು. ಆದರೆ, ಅದು ಅಲ್ಲಿನ ಜನರಿಗೂ ತಲುಪದೆ ಎರಡೇ ಎರಡು ಕುಟುಂಬದ ಪಾಲಾಗುತ್ತಿತ್ತು. ಅಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅನ್ವಯ ಆಗದ ಕಾರಣಕ್ಕೆ ಅದನ್ನು ತಡೆಯಲೂ ಆಗುತ್ತಿರಲಿಲ್ಲ. ಈ ಎಲ್ಲಾ ಸಮಸ್ಯೆಗಳಿಗೂ ಮೋದಿ ಮತ್ತು ಅಮಿತ್ ಶಾ ಜೋಡಿ ಪೂರ್ಣ ವಿರಾಮ ಹಾಕಿದೆ’ ಎಂದು ಹೇಳಿದರು.

‘ಮುಂದೊಂದು ದಿನ ಗಡಿ ನಿಯಂತ್ರಣಾ ರೇಖೆಯ ಆಚೆ ಇರುವ ಕಾಶ್ಮೀರದ ಭಾಗವೂ ಭಾರತಕ್ಕೆ ಸೇರಲಿದೆ. ಅದು ಗೊತ್ತಿದ್ದ ಕಾರಣದಿಂದಲೇ ಕಾಂಗ್ರೆಸ್ ಹೊರತುಪಡಿಸಿ ಉಳಿದೆಲ್ಲಾ ರಾಜಕೀಯ ಪಕ್ಷಗಳು ನಮ್ಮ ನಿರ್ಧಾರವನ್ನು ಬೆಂಬಲಿಸಿವೆ. ಕಾಶ್ಮೀರದ ಭವಿಷ್ಯ ಉಜ್ವಲವಾಗಲಿದೆ’ ಎಂದರು.

‘ಹುಸಿ ಜಾತ್ಯತೀತ ರಾಜಕಾರಣವನ್ನು ದೇಶದ ತಲೆಯ ಮೇಲೆ ಕಾಂಗ್ರೆಸ್ ಹೇರಿಕೊಂಡು ಬಂದಿತ್ತು. ರಾಷ್ಟ್ರೀಯತೆಯ ಅಜೆಂಡಾ ಹುಟ್ಟು ಹಾಕಿದ ಬಳಿಕ ಜನರಿಗೆ ಅದರ ಬಗ್ಗೆ ಜಾಗೃತಿ ಮೂಡಿದೆ. ಬ್ರಾಹ್ಮಣರು ಹಾಗೂ ನಗರ ಪ್ರದೇಶದವರಿಗೆ ಮಾತ್ರ ಬಿಜೆಪಿ ಎಂಬ ಕಾಲ ಮುಗಿದುಹೋಯಿತು. ದೇಶವನ್ನು ಹಂತ–ಹಂತವಾಗಿ ಸರಿಪಡಿಸುತ್ತೇವೆ’ ಎಂದು ಅವರು ಪ್ರತಿಪಾದಿಸಿದರು.

ಭಾಷಣಕ್ಕೆ ಕಿಕ್ಕಿರಿದು ಸೇರಿದ್ದ ಜನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕವಾದ ಬಳಿಕ ಮೊದಲ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ಸಂತೋಷ್ ಭಾಷಣ ಕೇಳಲು ಕಿಕ್ಕಿರಿದು ಜನ ಸೇರಿದ್ದರು.

ಗಾಂಧಿ ಭವನದ ಸಭಾಂಗಣ‌ ತುಂಬಿ ಹೊರಭಾಗದಲ್ಲಿ ಹಾಕಿದ್ದ ಪರದೆಯ ಮೂಲಕವೂ ಉಪನ್ಯಾಸ ಕೇಳಿದರು. ಸಚಿವರಾದ ಸಿ.ಸಿ. ಪಾಟೀಲ, ಸಿ.ಟಿ. ರವಿ, ಶಾಸಕರಾದಕೆ.ಜಿ. ಬೋಪಯ್ಯ, ಪ್ರೀತಂಗೌಡ ಅವರು ಸಾರ್ವಜನಿಕರ ಜೊತೆ ಕುಳಿತು ಸಂತೋಷ್‌ ಅವರ ಮಾತನ್ನು ಆಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT