‘ರಾಜಧಾನಿಯಲ್ಲಿಯೇ ಜೀತಪದ್ಧತಿ ಜೀವಂತ’

7

‘ರಾಜಧಾನಿಯಲ್ಲಿಯೇ ಜೀತಪದ್ಧತಿ ಜೀವಂತ’

Published:
Updated:
Deccan Herald

ಬೆಂಗಳೂರು: ‘ಆಧುನಿಕ ಕಾಲಕ್ಕೆ ತಕ್ಕಂತೆ ಚಹರೆ ಬದಲಿಸಿಕೊಂಡಿರುವ ಜೀತ ಪದ್ಧತಿ ರಾಜಧಾನಿ ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿಯೇ ಹೆಚ್ಚು ಜೀವಂತವಾಗಿದೆ!’
–ಇಂಟರ್‌ನ್ಯಾಷನಲ್‌ ಜಸ್ಟೀಸ್‌ ಮಿಷನ್‌ (ಐಜೆಎಂ) ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಜೀತ ಮತ್ತು ಗುಲಾಮ ಪದ್ಧತಿ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ವ್ಯಕ್ತವಾದ ಸಾಮಾನ್ಯ ಅಭಿಪ್ರಾಯವಿದು.

ಐಜೆಎಂ ನಡೆಸಿದ ಸಮೀಕ್ಷೆ ಪ್ರಕಾರ ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರದಲ್ಲಿ ಒಟ್ಟು 16.70 ಲಕ್ಷ ಕಾರ್ಮಿಕರಿದ್ದಾರೆ. ಅವರಲ್ಲಿ 5.58 ಲಕ್ಷ ಮಂದಿ ಜೀತದಾಳುಗಳಾಗಿದ್ದಾರೆ. ಇಲ್ಲಿಯವರೆಗೆ 58,348 ಮಂದಿಯನ್ನು ರಕ್ಷಿಸಲಾಗಿದೆ.

ಭೂರಹಿತ ಕೃಷಿ ಕಾರ್ಮಿಕರು, ದಲಿತರು ಹಾಗೂ ಆದಿವಾಸಿಗಳು ಸಾಮಾನ್ಯವಾಗಿ ಈ ಜೀತಪದ್ಧತಿಯ ವಿಷ ವರ್ತುಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಇಟ್ಟಿಗೆಗೂಡು, ಕಲ್ಲು ಗಣಿ, ಹೋಟೆಲ್, ಗ್ಯಾರೇಜ್‌, ಮನೆ­ಗೆಲಸ, ರೇಷ್ಮೆ ಉದ್ಯಮ ಮುಂತಾದ ವಲಯಗಳಲ್ಲಿ ಈ ಕೆಟಟ ಸಂಪ್ರದಾಯ ಬೇರುಬಿಟ್ಟಿದೆ ಎಂಬ ವಿಷಯವೂ ಸಮೀಕ್ಷೆಯಲ್ಲಿ ಪ್ರಸ್ತಾಪಿತವಾಗಿದೆ.

‘ಕಾರ್ಮಿಕ ಇಲಾಖೆಯಿಂದ ನಡೆಸಿದ ಸಮೀಕ್ಷೆ ಪ್ರಕಾರ ರಾಜ್ಯದ 30 ಜಿಲ್ಲೆಗಳಲ್ಲಿ 20 ಜಿಲ್ಲೆಗಳು ಜೀತಪದ್ಧತಿಯಿಂದ ಮುಕ್ತವಾಗಿವೆ. ಎರಡೆರಡು ಬಾರಿ ಸಮೀಕ್ಷೆಯನ್ನು ಪರಿಶೀಲಿಸಲಾಗಿದೆ. ಬೆಂಗಳೂರು ನಗರ, ರಾಮನಗರ ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಜೀತದಾಳುಗಳು ಇದ್ದಾರೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಜೀತ ಕಾರ್ಮಿಕ ರಕ್ಷಣೆ ವಿಭಾಗದ ನೋಡಲ್‌ ಅಧಿಕಾರಿ ಕೆ.ಕೃಷ್ಣಪ್ಪ ಮಾಹಿತಿ ನೀಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿದ ಜೀತಪದ್ಧತಿ ನಿರ್ಮೂಲನೆಯಲ್ಲಿ ಕೆಲಸ ಮಾಡುತ್ತಿರುವ ವೆಂಕಟೇಶ್‌, ‘ಸರ್ಕಾರ 2013–14ರಲ್ಲಿ ಸಮೀಕ್ಷೆ ನಡೆಸಿದೆ. ಆ ಸಮೀಕ್ಷೆ ಹಿಡಿದುಕೊಂಡೇ 20 ಜಿಲ್ಲೆಗಳು ಜೀತಮುಕ್ತವಾಗಿವೆ ಎಂದು ಹೇಳುತ್ತಿದೆ. ನಾಲ್ಕು ವರ್ಷಗಳಲ್ಲಿ ಅಂಕಿ–ಸಂಖ್ಯೆಗಳು ಬದಲಾಗಿರುತ್ತವೆ. ಈ ಪದ್ಧತಿ ತನ್ನ ಸ್ವರೂಪ ಬದಲಿಸಿಕೊಂಡು ಇನ್ನೂ ಜೀವಂತವಾಗಿಯೇ ಇದೆ’ ಎಂದು ಹೇಳಿದರು.

‘ಜೀತ ಪ್ರಕರಣಗಳ ಸಮೀಕ್ಷೆಗೆ ವಿಶೇಷ ತರಬೇತಿ ಪಡೆದ ಸಿಬ್ಬಂದಿ ನಿಯೋಜನೆಯಾಗುವುದೂ ಅಗತ್ಯ. ಹಾಗಾದಾಗ ಮಾತ್ರ ಉತ್ತರ ಕರ್ನಾಟಕದ ಜಿಲ್ಲೆಗಳೂ ಸೇರಿದಂತೆ ರಾಜ್ಯ­ದಲ್ಲಿ ಅಸ್ತಿತ್ವದಲ್ಲಿರುವ ಜೀತ ಪ್ರಕರಣಗಳು ಹಾಗೂ ಅವುಗಳ ಸ್ವರೂಪ­ಗಳನ್ನು ಕುರಿತಂತೆ ಸಮಗ್ರ ಚಿತ್ರಣ ದೊರೆಯುವುದು ಸಾಧ್ಯ’ ಎಂದು ಪ್ರತಿಪಾದಿಸಿದರು.

ಯುನಿಸೆಫ್‌ನ ಮಕ್ಕಳ ರಕ್ಷಣಾ ತಂಡದ ಸೋನಿಕುಟ್ಟಿ ಜಾರ್ಜ್‌, ‘ಖಾಸಗಿ ಮಾಹಿತಿಗಳು ಈಗ ಸುಲಭವಾಗಿ ದೊರೆಯುತ್ತಿದೆ. ಇದರಿಂದ ಮಕ್ಕಳ ಕಳ್ಳಸಾಗಣೆ ಪ್ರಮಾಣ ಹೆಚ್ಚಾಗಿದೆ. 1976ರಲ್ಲೇ ರಾಜ್ಯದಲ್ಲಿ ಜೀತ ಪದ್ಧತಿ ನಿಷೇಧಿಸಲಾಗಿದೆ. ಹೀಗಿದ್ದೂ ಅದು ಇನ್ನೂ ಅಸ್ತಿತ್ವದಲ್ಲಿರುವುದು ಪ್ರಜಾಪ್ರ­ಭುತ್ವಕ್ಕೆ ಕಳಂಕ. ಪ್ರಕರಣಗಳ ಗುರುತಿಸುವಿಕೆಯಲ್ಲಿ ಆಗುತ್ತಿರುವ ವಿಳಂಬ, ಈ ಅನಿಷ್ಟ ಪದ್ಧತಿ ನಿರ್ಮೂಲನೆಗೆ ದೊಡ್ಡ ಅಡ್ಡಿ’ ಎಂದು ಅಭಿಪ್ರಾಯಪಟ್ಟರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !