ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬ್‌ ರಿಜಿಸ್ಟ್ರಾರ್ ಕಚೇರಿ: ದಲ್ಲಾಳಿ ಹಾವಳಿ

ಸದನದಲ್ಲೇ ಒಪ್ಪಿಕೊಂಡ ಕಂದಾಯ ಸಚಿವ ಆರ್.ಅಶೋಕ
Last Updated 23 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿ ಇರುವುದು ನಿಜ’ ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.

ವಿಧಾನಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ ಪ್ರಶ್ನೆಗೆ ಉತ್ತರಿಸಿ, ‘ದಲ್ಲಾಳಿಗಳ ಹಾವಳಿಯನ್ನು ನಿಯಂತ್ರಿಸಲು ಆನ್‌ಲೈನ್‌ ಸೇವೆ ಆರಂಭಿಸಲಾಗಿದೆ. ಶೀಘ್ರದಲ್ಲಿ ಎಲ್ಲ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಿಗೆ ಈ ಸೇವೆಯನ್ನು ವಿಸ್ತರಿಸುತ್ತೇವೆ’ ಎಂದು ಹೇಳಿದರು.

ಜೆಡಿಎಸ್‌ನ ಎ.ಟಿ.ರಾಮಸ್ವಾಮಿ, ‘ಬೆಂಗಳೂರಿನ 40 ಸಬ್‌ ರಿಜಿಸ್ಟ್ರಾರ್‌ಗಳು ನಗರದಲ್ಲೇ ಗಿರಕಿ ಹೊಡೆಯುತ್ತಿದ್ದಾರೆ. ಮೊದಲು ಅವರನ್ನು ನಗರದಿಂದ ಹೊರಕ್ಕೆ ವರ್ಗಾವಣೆ ಮಾಡಿ. ಆಗ ಬಹುತೇಕ ಸಮಸ್ಯೆ ಬಗೆಹರಿಯುತ್ತದೆ’ ಎಂದು ಸಲಹೆ ನೀಡಿದರು.

ಜೆಡಿಎಸ್‌ನ ಡಾ.ಕೆ.ಅನ್ನದಾನಿ, ‘ನಮ್ಮ ಕಂದಾಯ ಸಚಿವರ ಬಳಿ ಎಂತಹ ಕಾರು ಇದೆ ಎಂಬುದು ಗೊತ್ತಿಲ್ಲ. ಆದರೆ, ಈ ದಲ್ಲಾಳಿಗಳು ಬಿಎಂಡಬ್ಲ್ಯು, ಆಡಿ ಕಾರುಗಳಲ್ಲೇ ಸಂಚಾರ ಮಾಡುತ್ತಾರೆ’ ಎಂದರು.ಬಿಜೆಪಿಯ ಬೆಳ್ಳಿ ಪ್ರಕಾಶ್‌, ‘ವಿಧಾನಸೌಧ ಹಾಗೂ ವಿಕಾಸಸೌಧದ ಸಚಿವಾಲಯಗಳಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ಮೊದಲು ಅವರನ್ನು ಮಟ್ಟ ಹಾಕಿ’ ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ನ ಎಚ್‌.ಕೆ.‍ಪಾಟೀಲ, ‘ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈಗ ಸಬ್‌ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಆನ್‌ಲೈನ್‌ ಸೇವೆ ಒದಗಿಸಲು ಸಕಾಲ. ಬಳಿಕ ಅದನ್ನು ಕಡ್ಡಾಯಗೊಳಿಸಿ’ ಎಂದು ಕಿವಿಮಾತು ಹೇಳಿದರು.

ಬಗರ್‌ ಹುಕುಂ: ಅವಧಿ ವಿಸ್ತರಣೆ

94–ಸಿ, 93–ಸಿಸಿ ಅಡಿ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.

ವಿಧಾನಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಕೆ.ವೈ.ನಂಜೇಗೌಡ ಪ್ರಶ್ನೆಗೆ ಉತ್ತರಿಸಿ, ‘ಅರ್ಜಿ ಸಲ್ಲಿಕೆ ಅವಧಿಯನ್ನು ಈಗಾಗಲೇ 9 ಸಲ ವಿಸ್ತರಿಸಲಾಗಿದೆ. ಮತ್ತೊಮ್ಮೆ ಅವಧಿ ವಿಸ್ತರಿಸುವುದು ಕಷ್ಟ’ಎಂದರು.

ಸಚಿವರ ಮಾತಿಗೆ ಹಲವು ಸಲ ಆಕ್ಷೇಪ ವ್ಯಕ್ತಪಡಿಸಿ, ‘ಅರ್ಜಿ ಸಲ್ಲಿಕೆಗೆ ಇನ್ನಷ್ಟು ಕಾಲಾವಕಾಶ ನೀಡಬೇಕು’ ಎಂದು ಒತ್ತಾಯಿಸಿದರು. ‘ಕಾಲಾವಕಾಶ ವಿಸ್ತರಿಸಲಾಗುವುದು. ಎಷ್ಟು ದಿನ ಎಂಬುದನ್ನು ಅಧಿಕಾರಿಗಳ ಜತೆಗೆ ಸಮಾಲೋಚಿಸಿ ಪ್ರಕಟಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT