ಶುಕ್ರವಾರ, ಡಿಸೆಂಬರ್ 6, 2019
21 °C
ಯಶವಂತಪುರ ಕ್ಷೇತ್ರದ ಅಭ್ಯರ್ಥಿ ಎಸ್.ಟಿ. ಸೋಮಶೇಖರ್‌ ಪರ ಮುಖ್ಯಮಂತ್ರಿ ಪ್ರಚಾರ

ವಿಶ್ವಾಸದ್ರೋಹ ಎಂದರೆ ಎಚ್‌ಡಿಕೆ: ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜರಾಜೇಶ್ವರಿನಗರ: ‘ಜೆಡಿಎಸ್‌ ನಾಯಕರಾದ ಎಚ್.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರು ನಂಬಿಕೆ, ವಿಶ್ವಾಸದ್ರೋಹ ಹಾಗೂ ವಂಚನೆಗೆ ಮತ್ತೊಂದು ಹೆಸರು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಪರವಾಗಿ ಉಲ್ಲಾಳುವಿನಲ್ಲಿ ಪ್ರಚಾರ ಮಾಡಿದ ಅವರು, ‘ಮಾತಿಗೆ ತಪ್ಪುವ ನಯವಂಚಕರು ನನಗೂ ಮೋಸಮಾಡಿ ಅಧಿಕಾರ ಸಿಗದಂತೆ ನೋಡಿಕೊಂಡರು. ರೈತರ ಹೆಸರು ಹೇಳಿಕೊಂಡು ಕಣ್ಣೀರು ಸುರಿಸುವ ನಾಟಕ ಮಾಡುತ್ತಾರೆ’ ಎಂದರು.

‘ಕ್ಷೇತ್ರದಲ್ಲಿ ಜೆಡಿಎಸ್‌ ಯಾವುದೇ ಕಾರಣಕ್ಕೂ ಗೆಲ್ಲುವುದಿಲ್ಲ. ಎರಡು ವರ್ಷಗಳಲ್ಲಿ ಯಶವಂತಪುರ ಕ್ಷೇತ್ರವನ್ನು ಸಂಪೂರ್ಣ ಅಭಿವೃದ್ಧಿ ಮಾಡಲು ಮತದಾರರು ಶಕ್ತಿ ನೀಡಬೇಕು’ ಎಂದು ಮನವಿ ಮಾಡಿದರು.

ಎಸ್.ಟಿ.ಸೋಮಶೇಖರ್ ಮಾತನಾಡಿ, ‘ಚುನಾವಣೆ ಬಂದಾಗ ಮಾತ್ರ ಟಿ.ಎನ್.ಜವರಾಯಿಗೌಡ ಜನರ ಬಳಿಗೆ ಬರುತ್ತಾರೆ’ ಎಂದು
ವ್ಯಂಗ್ಯವಾಡಿದರು.

ಸಂಸದೆ ಶೋಭಾ ಕರಂದ್ಲಾಜೆ, ‘ಜೆಡಿಎಸ್ ನಾಯಕರು ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಜಾತಿ ರಾಜಕಾರಣದಲ್ಲಿ ತೊಡಗಿದ್ದಾರೆ’ ಎಂದರು.

ಸೋಮಣ್ಣ, ಜಗ್ಗೇಶ್‌ ಪ್ರಚಾರ: ವಸತಿ ಸಚಿವ ವಿ.ಸೋಮಣ್ಣ ಮತ್ತು ನಟ ಜಗ್ಗೇಶ್‌ ಶಿವಾಜಿನಗರ ಕ್ಷೇತ್ರದ ಜಯಮಹಲ್‌ನಲ್ಲಿ ಚುನಾವಣಾ ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿ ಸೋಮಣ್ಣ, ‘ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರದಿಂದ ಬೇಸತ್ತು ಜನತೆ ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಸಮ್ಮಿಶ್ರ ಸರ್ಕಾರ ನಾಯಕರ ವರ್ತನೆ ಮತ್ತು ನಡವಳಿಕೆಯಿಂದ ನೊಂದು 15 ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಇವರೆಲ್ಲರೂ ಉಪಚುನಾವಣೆಯಲ್ಲಿ ಗೆಲ್ಲುವುದು ಖಚಿತ’ ಎಂದು ಹೇಳಿದರು.

ಜಗ್ಗೇಶ್‌ ಮಾತನಾಡಿ, ‘ಜನ ಈಗ ಬುದ್ಧಿವಂತರಾಗಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯ ಎಂಬುದು ಚೆನ್ನಾಗಿ ಗೊತ್ತಿದೆ. ಮತ್ತೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅನ್ನು ಗೆಲ್ಲಿಸುವುದರಿಂದ ಪ್ರಯೋಜನ ಇಲ್ಲ ಎಂಬ ಅರಿವೂ ಇದೆ. ಆದ್ದರಿಂದ ಯೋಚಿಸಿ ಮತದಾನ ಮಾಡಬೇಕು’ ಎಂದು ಮನವಿ ಮಾಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು