ರಾಜ್ಯದಲ್ಲಿ ತುಘಲಕ್ ದರ್ಬಾರ್: ಬಿಎಸ್‌ವೈ

7

ರಾಜ್ಯದಲ್ಲಿ ತುಘಲಕ್ ದರ್ಬಾರ್: ಬಿಎಸ್‌ವೈ

Published:
Updated:

ಹಾವೇರಿ: ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದರು.

ಇಲ್ಲಿ ಸೋಮವಾರ ನಡೆದ ಪಕ್ಷದ ಶಕ್ತಿ ಕೇಂದ್ರಗಳ ಮೇಲ್ಪಟ್ಟ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ತಿಂಗಳಾದರೂ, ಲೋಕೋಪಯೋಗಿ, ನೀರಾವರಿ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ಕೆಲಸಗಳೇ ನಡೆಯುತ್ತಿಲ್ಲ. ಸರ್ಕಾರ ಅನುದಾನವೂ ಬಿಡುಗಡೆ ಮಾಡಿಲ್ಲ ಎಂದ ಅವರು, ಈ ಅನಿಷ್ಠ ಸರ್ಕಾರ ಯಾವಾಗ ತೊಲಗುತ್ತದೆ ಎಂದು ಸಾಮಾನ್ಯ ಜನತೆಯೂ ಕಾಯುತ್ತಿದ್ದಾರೆ ಎಂದರು.

ಪರಸ್ಪರ, ‘ಬಣ್ಣಬಯಲು ಮಾಡುತ್ತೇವೆ’ ಎಂದವರೇ ಈಗ ಸರ್ಕಾರ ನಡೆಸುತ್ತಿದ್ದಾರೆ. ವಿಧಾನ ಸೌಧದಲ್ಲಿ ಭ್ರಷ್ಟಾಚಾರ, ವರ್ಗಾವಣೆ ದಂಧೆ ನಡೆಯುತ್ತಿದ್ದು, ಅಲ್ಲಿಗೆ ಮಾಧ್ಯಮಗಳ ಪ್ರವೇಶ ನಿಷೇಧಿಸಿದ್ದಾರೆ. ಆದರೆ, ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ 104 ಸದಸ್ಯರನ್ನು ಹೊಂದಿದ ವಿರೋಧ ಪಕ್ಷವಿದೆ. ನಮ್ಮದೇ ಕೆಲವು ತಪ್ಪಿನಿಂದ ನಮಗೆ ಅಧಿಕಾರ ತಪ್ಪಿರಬಹುದು. ಆದರೆ, ನಾವು ಜನರ ಪರವಾಗಿ ಹೋರಾಡುತ್ತೇವೆ ಎಂದರು.

ಇದಕ್ಕೂ ಮೊದಲು ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿಗೆ ಪಂಥಾಹ್ವಾನ ನೀಡುವ ಬದಲಾಗಿ, ತಮ್ಮ ಪಕ್ಷದ ಗತಿ ಏನಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೋಡಿ ಕೊಳ್ಳಲಿ’ ಎಂದರು.

‘ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ’ ಎಂದು ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡರು ಈ ಹಿಂದೆ ಹೇಳಿದ್ದರು. ಈಗ ಆ ಪಕ್ಷದ ಜೊತೆ ಮಗನನ್ನು ಕಳುಹಿಸಿದ್ದಾರೆ’ ಎಂದು ಲೇವಡಿ ಮಾಡಿದರು.

‘ನೀವು ರೈತರ ಜಮೀನಿಗೆ ಹೋಗಿ ನಾಟಿ ಮಾಡಲು ಸಿ.ಎಂ. ಆಗಿಲ್ಲ. ಬೀದರ್ ಸೇರಿದಂತೆ ರಾಜ್ಯದ ಎಲ್ಲ ಭಾಗಗಳಲ್ಲಿ ರೈತರ ಸ್ಥಿತಿ ಏನಾಗಿದೆ ಎಂದು ನೋಡಿ’ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು.

‘ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಹಾವೇರಿಯಲ್ಲಿ ಸಂಸದ ಶಿವಕುಮಾರ ಉದಾಸಿ ಗೆಲ್ಲುತ್ತಾರೆ’ ಎಂದು ಭವಿಷ್ಯ ನುಡಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !