ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಗಿಲಯೋಗಿಯ ನೊಗಕ್ಕೆ ‘ಕುಮಾರ’ ಹೆಗಲು

ಕೃಷಿ ಉದ್ಧಾರಕ್ಕೆ ಹತ್ತಾರು ದಾರಿ
Last Updated 5 ಜುಲೈ 2018, 19:22 IST
ಅಕ್ಷರ ಗಾತ್ರ

ಬೆಂಗಳೂರು: ಆರ್ಥಿಕ ಮತ್ತು ತಂತ್ರಜ್ಞಾನ ಶಕ್ತಿ ತುಂಬುವ ಮೂಲಕ ಕೃಷಿ ಕ್ಷೇತ್ರವನ್ನು ಆಂತರಿಕವಾಗಿ ಬಲಪಡಿಸಲು ಸರ್ಕಾರ ನಿರ್ಧರಿಸಿದೆ.

ಚುನಾವಣೆ ಸಂದರ್ಭದಲ್ಲಿ ಪದೇ ಪದೇ ಪ್ರಸ್ತಾಪಿಸಿದ್ದ ಇಸ್ರೇಲ್ ಮಾದರಿ ಕೃಷಿ ಅನುಸರಿಸಲು ಅಗ್ರ ಮನ್ನಣೆ ನೀಡಲಾಗಿದೆ. ಆದರೆ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.

ವಿಶೇಷವಾಗಿ ಕೃಷಿ ವಲಯದ ಚಟುವಟಿಕೆಗಳಲ್ಲಿ ರೈತರ ಸಹಭಾಗಿತ್ವಕ್ಕೆ ಒತ್ತು ನೀಡಲಾಗಿದೆ. ಈ ಮೂಲಕ ರೈತರ ಸಲಹೆ– ಸೂಚನೆಗಳನ್ನೇ ಪಡೆದು ಕಾರ್ಯಕ್ರಗಳ ಅನುಷ್ಠಾನಕ್ಕೆ ಅನುಕೂಲವಾಗುತ್ತದೆ.ಪ್ರತಿ ಜಿಲ್ಲೆಯ ಇಬ್ಬರು ರೈತರನ್ನು ಒಳಗೊಂಡ ಕರ್ನಾಟಕ ರಾಜ್ಯ ರೈತರ ಸಲಹಾ ಸಮಿತಿ ರಚನೆಯನ್ನು ಪ್ರಸ್ತಾಪಿಸಲಾಗಿದೆ.

ಕೃಷಿ ವಲಯದ ವಿವಿಧ ಇಲಾಖೆಗಳ ಸಮನ್ವಯ ಸಾಧಿಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಕೃಷಿ ಸಮನ್ವಯ ಉನ್ನತ ಸಮಿತಿ ರಚಿಸಲಾಗುವುದು. ರೈತರ ಸಂಕಷ್ಟವನ್ನು ನಿವಾರಿಸುವ ನಿಟ್ಟಿನಲ್ಲಿ ಇದು ಉಪಯುಕ್ತವಾಗಲಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಸಮಿತಿ ಸಭೆ ಸೇರಿ ಕೃಷಿ ಮತ್ತು ಇತರ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಣೆಯ ಬಗ್ಗೆ ಪರಿಶೀಲನೆ ನಡೆಸಲಿದೆ.

ಆಂಧ್ರಪ್ರದೇಶದ ಮಾದರಿಯಲ್ಲಿ ಶೂನ್ಯ ಬಂಡವಾಳ ಸಹಜ ಕೃಷಿಗೆ ಆದ್ಯತೆ ನೀಡಲು ಸರ್ಕಾರ ಉದ್ದೇಶಿಸಿದೆ. ಯಾವುದೇ ರಾಸಾಯನಿಕಗಳನ್ನೂ ಬಳಸದೇ ಆಹಾರ ಧಾನ್ಯಗಳನ್ನು ಬೆಳೆಸಲಾಗುವುದು.

ಸಾರ್ವಜನಿಕರಿಗೆ ಶುದ್ಧ ಖಾದ್ಯ ಎಣ್ಣೆ ಪೂರೈಕೆ ಮಾಡುವ ಉದ್ದೇಶದಿಂದ ಸಣ್ಣ ಸಣ್ಣ ಯಂತ್ರಚಾಲಿತ ಎಣ್ಣೆ ಗಾಣಗಳಿಗೆ ಪ್ರೋತ್ಸಾಹ ನೀಡಲು ಮುಂದಾಗಿದೆ.

ಇದಕ್ಕಾಗಿ ₹ 5 ಕೋಟಿ ನಿಗದಿ ಮಾಡಿದ್ದು, ಪರಂಪರಾಗತವಾಗಿ ಎಣ್ಣೆ ಗಾಣಗಳನ್ನು ನಡೆಸುವವರಿಗೆ ಇದರಿಂದ ಪ್ರಯೋಜನವಾಗಲಿದೆ. ಬಹು
ರಾಷ್ಟ್ರೀಯ ಕಂಪನಿಗಳಿಂದ ಹೊಡೆತಕ್ಕೆ ಸಿಕ್ಕಿರುವ ಎಣ್ಣೆ ತೆಗೆಯುವವರಿಗೆ ಪ್ರಯೋಜನ ಆಗಲಿದೆ.

ಕೃಷಿ ಪೂರಕ ತಂತ್ರಜ್ಞಾನ ಆವಿಷ್ಕಾರ ಮಾಡುವ ನವೋದ್ಯಮಗಳಿಗೆ ಉತ್ತೇಜನ ನೀಡಲು ₹5 ಕೋಟಿ ನಿಗದಿ ಮಾಡಲಾಗಿದೆ. ರಾಜ್ಯದಲ್ಲಿ ಸಾಕಷ್ಟು ನವೋದ್ಯಮಿಗಳು ಅದ್ವಿತೀಯ ಎನಿಸುವ ಸಾಧನಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅವುಗಳ ತಯಾರಿಕೆ, ಬಳಕೆಗೆ ಒತ್ತು ಸಿಗಲಿದೆ.

**

ರೋಬಾಟ್‌, ಡ್ರೋಣ್ ಬಳಕೆ

ಕೃಷಿ ಕ್ಷೇತ್ರದಲ್ಲಿ ರೋಬಾಟ್‌ ಮತ್ತು ಡ್ರೋಣ್‌ ಬಳಕೆಗೆ ಉತ್ತೇಜನ ನೀಡಲು ಸರ್ಕಾರ ಉದ್ದೇಶಿಸಿದೆ. ಬೆಳೆ ಪರಿಸ್ಥಿತಿ ತಿಳಿದುಕೊಳ್ಳಲು ಡ್ರೋಣ್‌ಗಳ ಬಳಕೆ, ನೀರಾವರಿಯಲ್ಲಿ ಸೆನ್ಸರ್‌ ಬಳಕೆ ಮಾಡಿ ನೀರಿನ ಅವಶ್ಯಕತೆ ತಿಳಿಯಬಹುದಾಗಿದೆ.

ಹತ್ತಿಯ ಹೊಲಗಳಲ್ಲಿ ಹತ್ತಿಯನ್ನು ಹೆಕ್ಕುವ ರೋಬಾಟ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಸಾಧನಗಳನ್ನು ಇನ್ನಷ್ಟು ಸುಧಾರಿಸಿ, ರೈತರ ಹೊಲಗಳಲ್ಲಿ ಬಳಕೆ ಮಾಡಲಾಗುವುದು.

**

ಸರಬರಾಜು ಸರಪಳಿ

ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ರೈತರ ಬೆಳೆಗಳ ಉತ್ಪಾದಕತೆ ಹೆಚ್ಚಿಸುವ ಉದ್ದೇಶದಿಂದ ಹೊಸ ತಾಂತ್ರಿಕತೆ ಪರಿಚಯಿಸಲು, ಮೌಲ್ಯ ವರ್ಧನೆ ಮಾಡಲು ಕೃಷಿ ಸರಬರಾಜು ಸರಪಳಿ ಕಲ್ಪಿಸಲಾಗುವುದು. ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಮಾರ್ಗಸೂಚಿಯಂತೆ ಇದನ್ನು ರೂಪಿಸಲಾಗುವುದು.

ಈ ಯೋಜನೆಯಲ್ಲಿ ಸಿರಿಧಾನ್ಯ, ಬೇಳೆಕಾಳು, ಎಣ್ಣೆಕಾಳು, ಮುಸುಕಿನ ಜೋಳ ಇತ್ಯಾದಿಗಳಿಗೆ ಆದ್ಯತೆ.

**

ಅಂಟುವಾಳ ಮರ; ₹10 ಕೋಟಿ

ಸಾಬೂನು ಮತ್ತು ಡಿಟೆರ್ಜೆಂಟ್‌ಗಳ ಅಧಿಕ ಬಳಕೆಯಿಂದ ಬೆಂಗಳೂರಿನ ಕೆರೆಗಳಲ್ಲಿ ನೊರೆ ಬರುತ್ತಿರುವುದು, ಬೆಂಕಿ ಹತ್ತಿಕೊಳ್ಳುತ್ತಿರುವುದು ಗಂಭೀರ ಸಮಸ್ಯೆ. ಇದರ ನಿವಾರಣೆಗೆಂದು ಅಂಟವಾಳ ಬಳಸಿ ಸಾಬೂನು ತಯಾರಿಕೆ ಉತ್ತೇಜನ ನೀಡಲು ಸರ್ಕಾರ ನಿರ್ಧರಿಸಿದೆ.

ಇದಕ್ಕಾಗಿ ರಾಜ್ಯದಲ್ಲಿ ವ್ಯಾಪಕ ಪ್ರಮಾಣದಲ್ಲಿ ಅಂಟುವಾಳ ಕಾಯಿ ಮರಗಳನ್ನು ಬೆಳೆಸಲು ಪ್ರೋತ್ಸಾಹ.

**

ಇಸ್ರೇಲ್‌ ಮಾದರಿ

ರಾಜ್ಯ ಒಣ ಬೇಸಾಯವನ್ನು ಅವಲಂಬಿಸಿರುವ ಜಿಲ್ಲೆಗಳಾದ ಕೋಲಾರ, ಚಿತ್ರದುರ್ಗ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ತಲಾ 5000 ಹೆಕ್ಟೇರ್‌ ಖುಷ್ಕಿ ಜಮೀನುಗಳಿಗೆ ಇಸ್ರೇಲ್‌ ಮಾದರಿ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು.

**

ಲಾಭದಾಯಕ ಉದ್ದಿಮೆ

ರಾಜ್ಯದ 10 ಕೃಷಿ ಹವಾಮಾನ ವಲಯಗಳ ಬೆಳೆ ಪದ್ಧತಿಗೆ ಅನುಗುಣವಾಗಿ ಬೆಳೆ ಯೋಜನೆ ರೂಪಿಸಿ, ಕೃಷಿ ಉತ್ಪಾದನೆ ಮತ್ತು ಮಾರುಕಟ್ಟೆಯಲ್ಲಿ ಬೆಲೆ ಸುಸ್ಥಿರತೆ ಕಾಪಾಡುವ ಮೂಲಕ ಕೃಷಿಯನ್ನು ಲಾಭದಾಯಕ ಉದ್ದಿಮೆಯಾಗಿಸುವ ಗುರಿ ಹಾಕಿಕೊಳ್ಳಲಾಗಿದೆ.

**

ತೋಟಗಾರಿಕೆ

ಇಸ್ರೇಲ್‌ ಮಾದರಿ ನೀರಾವರಿ ವ್ಯವಸ್ಥೆ:ರೈತರ ಬದುಕನ್ನು ಹಸನು ಮಾಡುವ ಮತ್ತು ಅವರ ಬಾಳಿನಲ್ಲಿ ಆರ್ಥಿಕ ಚೈತನ್ಯ ತುಂಬಲು ಇಸ್ರೇಲ್‌ ಮಾದರಿ ನೀರಾವರಿ ವ್ಯವಸ್ಥೆ ಅನುಷ್ಠಾನ

ಕಾರವಾರ, ತುಮಕೂರು, ಯಾದಗಿರಿ, ಹಾವೇರಿ ಜಿಲ್ಲೆ;ನಾಲ್ಕೂ ಜಿಲ್ಲೆಗಲ್ಲಿ ತಲಾ 5000 ಹೆಕ್ಟೇರ್‌ ಜಮೀನಿನಲ್ಲಿ ಇಸ್ರೇಲ್‌ ಮಾದರಿ ನೀರಾವರಿ ಸೌಲಭ್ಯ ಒದಗಿಸಲು ₹150 ಕೋಟಿ ನಿಗದಿ

ಸುಸಜ್ಜಿತ ಮಾರುಕಟ್ಟೆ:ರಾಜ್ಯದ ಪ್ರಮುಖ ನಗರಗಳನ್ನುಸಂಪರ್ಕಿಸುವ ಹೆದ್ದಾರಿ, ರಸ್ತೆಗಳಲ್ಲಿ ಗುರುತಿಸಲಾಗುವ 10 ಸ್ಥಾಲಗಳಲ್ಲಿ ಎಪಿಎಂಸಿ ವತಿಯಿಂದ ಅಥವಾ ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ಮಾರುಕಟ್ಟೆ ಶುಲ್ಕ ಆದಾಯ ಹಂಚಿಕೆ ಮಾದರಿಯಲ್ಲಿ ಸುಸಜ್ಜಿತ ಮಾರುಕಟ್ಟೆ ಅಭಿವೃದ್ಧಿ

ನೇರ ಮಾರಾಟ:ರೈತರು ಬೆಳೆದ ಸಿರಿಧಾನ್ಯ,ಸಾವಯವ ಉತ್ಪನ್ನ, ಹಣ್ಣು, ತರಕಾರಿಯನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಅವಕಾಶ

ಸಂಸ್ಕರಣೆ–ದಾಸ್ತಾನು:ಟೊಮ್ಯಾಟೊ ಮತ್ತು ಮಾವಿನ ಹಣ್ಣುಗಳಂತಹ ಬೇಗ ಕೊಳೆಯುವ ತೋಟಗಾರಿಕಾ ಬೆಳೆ ಮತ್ತು ಅವುಗಳ ಉತ್ಪನ್ನ ಸಂಸ್ಕರಣೆ ಹಾಗೂ ದಾಸ್ತಾನು ವ್ಯವಸ್ಥೆಗೆ ಆದ್ಯತೆ

ಸಹಾಯಧನ: 2017ರ ಬೇಸಿಗೆ ಬರಗಾಲದಿಂದ ಸಂಪೂರ್ಣವಾಗಿ ಒಣಗಿ ಅನುತ್ಪಾದಕವಾಗಿರುವ 44 ಲಕ್ಷಕ್ಕೂ ಹೆಚ್ಚು ತೆಂಗಿನ ಮರಗಳ ರೈತರ ಹಿತರಕ್ಷಣೆಗೆ ₹190 ಕೋಟಿ ಸಹಾಯಧನ

ಪರ್ಯಾಯ ಬೆಳೆ:ಒಣಗಿರುವ ತೆಂಗಿನ ತೋಟಗಳಲ್ಲಿ ಮಾವು, ಗೋಡಂಬಿ, ಹುಣಸೆ, ಸೀತಾಫಲ, ನೇರಳೆ ಇತ್ಯಾದಿ ಪರ್ಯಾಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ

ಉತ್ಕೃಷ್ಟ ಕೇಂದ್ರ:ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅಡಿ ಇಂಡೋ–ಇಸ್ರೇಲ್‌ ಸಹಭಾಗಿತ್ವದಲ್ಲಿ ಸ್ಥಾಪಿಸಲಾದ ಆರು ಉತ್ಕೃಷ್ಟ ಕೇಂದ್ರಗಳ ಅಭಿವೃದ್ಧಿ

**

ಪಶು ಸಂಗೋಪನೆ

₹3 ಕೋಟಿ:ಪ್ರಸಕ್ತ ಸಾಲಿನಲ್ಲಿ ಪ್ರಾಯೋಗಿಕವಾಗಿ ಜಲಕೃಷಿ ವಿಧಾನದಿಂದ ಹಸಿರು ಮೇವು ಉತ್ಪಾದನಾ ಘಟಕಗಳ ಸ್ಥಾಪನೆಗೆ ಅನುದಾನ

₹2.25:‌ಧಾರವಾಡ, ಕಲಬುರಗಿ ಮತ್ತು ಮೈಸೂರಿನಲ್ಲಿ ಮೂರು ಘನೀಕೃತ ವೀರ್ಯನಳಿಕೆಗಳ ವಿತರಣಾ ಕೇಂದ್ರ ಸ್ಥಾಪನೆ

₹50 ಕೋಟಿ:ಹಾಸನ ಹಾಲು ಒಕ್ಕೂಟದ ಹಾಲಿನ ಸಂಗ್ರಹ ಸಾಮರ್ಥ್ಯವನ್ನು 10 ಲಕ್ಷ ಲೀಟರ್‌ಗಳಿಂದ 15 ಲಕ್ಷ ಲೀಟರ್‌ಗೆ ಹೆಚ್ಚಿಸುವ ಮೂಲಕ ಮೆಗಾ ಡೈರಿ ಸ್ಥಾಪನೆಗೆ ಕೋಟಿ ಅನುದಾನ

**

ಸಣ್ಣ ನೀರಾವರಿ

₹70 ಕೋಟಿ:ಹೇಮಾವತಿ ನದಿಯಿಂದ ಹಾಸನ ತಾಲ್ಲೂಕು ದುದ್ಧ ಮತ್ತು ಶಾಂತಿಗ್ರಾಮ ಹೋಬಳಿ ವ್ಯಾಪ್ತಿಯ 160 ಕೆರೆಗಳನ್ನು ತುಂಬಿಸುವ ಯೋಜನೆ

₹30 ಕೋಟಿ :* ಮಂಡ್ಯ ತಾಲ್ಲೂಕಿಗೆ ಕುಡಿಯುವ ನೀರು ಒದಗಿಸಲು ಮತ್ತು ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ

₹100 ಕೋಟಿ:ಚಿಕ್ಕೋಡಿ ತಾಲೂಕಿನ ಜಮೀನುಗಳ ನೀರಾವರಿ ಸೌಲಭ್ಯಕ್ಕಾಗಿ ಕೃಷ್ಣಾ ನದಿಯಿಂದ ಏತ ನೀರಾವರಿ

**

ಮೀನುಗಾರಿಕೆ

* ಒಳನಾಡು ಮೀನು ಉತ್ಪಾದನೆ ಉತ್ತೇಜಿಸಲು ಮೀನುಗಾರರ ಸಹಕಾರ ಸಂಘಗಳ ಮೂಲಕ ಮೀನುಮರಿಗಳ ಉಚಿತ ಸಾಕಾಣಿಕೆ

* 4 ಕೋಟಿ ಮೀನು ಮರಿಗಳ ಸಾಕಾಣಿಕೆ ಗುರಿ

* ಒಳನಾಡು ಮೀನು ಕೃಷಿ ಪ್ರೋತ್ಸಾಹ ಯೋಜನೆ ಅಡಿ ₹4 ಕೋಟಿ ಅನುದಾನ

**

ಸಹಕಾರ

ಆದಾಯ ಹೆಚ್ಚಿಸಲು ’ಕಾಯಕ’

* ಸ್ವಸಹಾಯ ಗುಂಪುಗಳ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ, ಸ್ವ ಉದ್ಯೋಗಕ್ಕೆ ಪ್ರೋತ್ಸಾಹಿಸಿ ಆದಾಯ ಹೆಚ್ಚಿಸಲು ‘ಕಾಯಕ‘ ಎಂಬ ಹೊಸ ಯೋಜನೆ ಆರಂಭ

* ಕಾಯಕ ಯೋಜನೆ ಅಡಿ ಸ್ವಸಹಾಯ ಗುಂಪುಗಳು ಸಮೂಹವಾಗಿ ಅಥವಾ ವೈಯಕ್ತಿಕವಾಗಿ ಸ್ವಂತ ಉದ್ಯೋಗ ಆರಂಭಿಸಲು ಸಹಕಾರ ಸಂಸ್ಥೆಗಳ ಮೂಲಕ ಪ್ರತಿಗುಂಪಿಗೆ ₹10 ಲಕ್ಷದವರೆಗೆ ಸಾಲ‌

* ₹5 ಲಕ್ಷದವರೆಗಿನ ಸಾಲಕ್ಕೆ ಶೂನ್ಯ ಬಡ್ಡಿ,₹5ರಿಂದ ₹10 ಲಕ್ಷ ಸಾಲದವರೆಗೆ ಶೇ 4ರಷ್ಟು ಬಡ್ಡಿ ದರ ನಿಗದಿ.

* ಸ್ವಂತ ಉದ್ಯೋಗ ಆರಂಭಿಸಲು 3000 ಸ್ವಸಹಾಯ ಗುಂಪುಗಳಿಗೆ ಸಾಲ ಒದಗಿಸಲು ₹5 ಕೋಟಿ ಅನುದಾನ

* ರಾಜ್ಯದ ಐದು ನಗರ ಪ್ರದೇಶಗಳ ಬೀದಿ ಬದಿಯ ವ್ಯಾಪಾರಿಗಳು/ಸಣ್ಣ ವ್ಯಾಪಾರಿಗಳಿಗೆ ಕಿರು ಹಣಕಾಸು ಸಾಲ ಸೌಲಭ್ಯ ಒದಗಿಸಲು ‘ಬಡವರ ಬಂಧು’ ಸಂಚಾರಿ ಸೇವೆ ಆರಂಭ

**

ರೇಷ್ಮೆ ಗೂಡು ಮಾರುಕಟ್ಟೆ ಸ್ಥಾಪನೆ

* ಮೈಸೂರು ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ಸ್ಥಳೀಯ ಮಾರುಕಟ್ಟೆ ಒದಗಿಸಲು ₹3 ಕೋಟಿ ವೆಚ್ಚದಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ಸ್ಥಾಪನೆ

* 2018–19ನೇ ಸಾಲಿನಲ್ಲಿ ₹1 ಕೋಟಿ ಅನುದಾನ

* 1970ರಲ್ಲಿ ಬೆಂಗಳೂರು ಬಳಿಯ ತಲಘಟ್ಟಪುರದಲ್ಲಿ ವಿಶ್ವಬ್ಯಾಂಕ್‌ ನೆರವಿನೊಂದಿಗೆ ಸ್ಥಾಪಿಸಲಾದ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಪುನಶ್ಚೇತನಕ್ಕೆ ₹5 ಕೋಟಿ ಅನುದಾನ

* ರೇಷ್ಮೆ ಉಪ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ₹2 ಕೋಟಿ ಅನುದಾನ

* ಚನ್ನಪಟ್ಟಣದ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮ (ಕೆಎಸ್‌ಐಸಿ) ಘಟಕದ ಪುನಶ್ಚೇತನಕ್ಖಾಗಿ ₹5 ಕೋಟಿ ಆರ್ಥಿಕ ನೆರವು

**

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

ಕುಡಿಯುವ ನೀರು ಶುದ್ಧೀಕರಣಕ್ಕೆ ‘ಜಲಧಾರೆ’

* ಗ್ರಾಮೀಣ ಪ್ರದೇಶ ಕುಡಿಯುವ ನೀರಿನ ಶುದ್ಧೀಕರಣ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ‘ಜಲಧಾರೆ’ ಯೋಜನೆ ಘೋಷಣೆ

* ಐದು ವರ್ಷಗಳಲ್ಲಿ ಹಂತ, ಹಂತವಾಗಿ ₹53,000 ಕೋಟಿ ಅಂದಾಜು ವೆಚ್ಚದ ಜಲಧಾರೆ ಯೋಜನೆ ಅನುಷ್ಠಾನ

**
ಜಲಸಂಪನ್ಮೂಲ

ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಕೆಆರ್‌ಎಸ್‌ ಅಭಿವೃದ್ಧಿ

*ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಮೈಸೂರಿನ ಕೃಷ್ಣರಾಜಸಾಗರದ ಅಣೆಕಟ್ಟೆಯ (ಕೆಆರ್‌ಎಸ್‌) ಬೃಂದಾವನ ಅಭಿವೃದ್ಧಿ ಪಡಿಸುವ ಕಾರ್ಯಯೋಜನೆಗೆ ₹5 ಕೋಟಿ ಅನುದಾನ* ಯೋಜನೆಗೆ ಬಂಡವಾಳ ಹೂಡಲು ಜಾಗತಿಕ ಉದ್ಯಮಿಗಳ ಆಸಕ್ತಿ

* ಮೇಕೆದಾಟು ಯೋಜನೆಯ ಪೂರ್ವ ಕಾರ್ಯಸಾಧ್ಯತಾ ವರದಿ ಪ್ರಸ್ತಾವನೆಗೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದು ಯೋಜನೆ ಕಾರ್ಯಗತ

* ಆಗಸ್ಟ್‌ 2018ರಲ್ಲಿ ಹೊರಬೀಳಲಿರುವ ಮಹದಾಯಿ ನದಿ ವಿವಾದದ ನ್ಯಾಯಾಧೀಕರಣದ ತೀರ್ಪಿನ ಅನ್ವಯ ಕಾಮಗಾರಿ ಕೈಗೆತ್ತಿಕೊಳ್ಳಲು ತೀರ್ಮಾನ

* ತ್ವರಿತಗತಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಪುನರ್ವಸತಿ ಮತ್ತು ಪುನರ್‌ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲು ತೀರ್ಮಾನ

* ಆಲಮಟ್ಟಿ ಜಲಾಶಯದಲ್ಲಿ ಹೆಚ್ಚುವರಿ ನೀರು ಸಂಗ್ರಹಕ್ಕೆ ಅಗತ್ಯ ಕ್ರಮ

* ಮುಂದಿನ 5 ವರ್ಷಗಳಲ್ಲಿ ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸಲು ಕ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT