ಕೆರೆಗಳ ಬಫರ್‌ ವಲಯ ಮಿತಿ: ತೀರ್ಪು ಕಾದಿರಿಸಿದ ‘ಸುಪ್ರೀಂ’

7
ವಿಚಾರಣೆ ಅಂತ್ಯ

ಕೆರೆಗಳ ಬಫರ್‌ ವಲಯ ಮಿತಿ: ತೀರ್ಪು ಕಾದಿರಿಸಿದ ‘ಸುಪ್ರೀಂ’

Published:
Updated:

ನವದೆಹಲಿ: ಬೆಂಗಳೂರಿನ ಕೆರೆಗಳು ಮತ್ತು ರಾಜ ಕಾಲುವೆಗಳ ಬಫರ್ ವಲಯದ ಮಿತಿ ಹೆಚ್ಚಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನೀಡಿರುವ ಆದೇಶದ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಯ ವಿಚಾರಣೆಯನ್ನು ಗುರುವಾರ ಪೂರ್ಣ
ಗೊಳಿಸಿದ ಸುಪ್ರೀಂ ಕೋರ್ಟ್, ಈ ಕುರಿತ ತೀರ್ಪನ್ನು ಕಾಯ್ದಿರಿಸಿತು.

ಸ್ವಯಂ ಸೇವಾ ಸಂಸ್ಥೆ ಫಾರ್ವರ್ಡ್‌ ಫೌಂಡೇಷನ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಎನ್‌ಜಿಟಿ, ಬೆಂಗಳೂರಿನ ಕೆರೆಗಳ ಬಫರ್‌ ವಲಯದ ಮಿತಿಯನ್ನು 75 ಮೀಟರ್‌ಗೆ ಹೆಚ್ಚಿಸಿ 2016ರಲ್ಲಿ ಆದೇಶ ನೀಡಿತ್ತು. ಇದರ ಸಿಂಧುತ್ವ ಪ್ರಶ್ನಿಸಿ ರಾಜ್ಯ ಸರ್ಕಾರ ಹಾಗೂ ರಿಯಲ್‌ ಎಸ್ಟೇಟ್‌ ಕಂಪನಿಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದವು.

ಎನ್‌ಜಿಟಿ ಆದೇಶದಂತೆ ಬಫರ್‌ ವಲಯದ ವ್ಯಾಪ್ತಿಯನ್ನು ಹೆಚ್ಚಿಸಿದಲ್ಲಿ ಶೇ 95ರಷ್ಟು ಕಟ್ಟಡಗಳನ್ನು ನೆಲಸಮ ಮಾಡಬೇಕಾಗುತ್ತದೆ. ರಾಜ್ಯ ಸರ್ಕಾರವು ₹ 3 ಲಕ್ಷ ಕೋಟಿ ಪರಿಹಾರ ವಿತರಣೆಯ ಹೊರೆ ಹೊರಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ಪೀಠದೆದುರು ರಾಜ್ಯ ಸರ್ಕಾರದ ಅಡ್ವೋಕೇಟ್‌ ಜನರಲ್‌ ಉದಯ್‌ ಹೊಳ್ಳ ವಾದ ಮಂಡಿಸಿದರು.

ಶಾಸನಸಭೆ ರೂಪಿಸಿರುವ ಕಾಯ್ದೆಯ ವಿರುದ್ಧ ಎನ್‌ಜಿಟಿಯು ಯಾವುದೇ ರೀತಿಯ ಆದೇಶ ಜಾರಿಗೊಳಿಸುವಂತಿಲ್ಲ. ಈಗಾಗಲೇ ಬೆಂಗಳೂರಿನ ಕೆರೆಗಳ ಸುತ್ತಲಿನ 30 ಮೀಟರ್‌ ವ್ಯಾಪ್ತಿಯನ್ನು ಬಫರ್‌ ವಲಯ ಎಂದು ಘೋಷಿಸಿ ಪರಿಷ್ಕೃತ ಮಾಸ್ಟರ್‌ ಪ್ಲಾನ್‌ ರೂಪಿಸಿದೆ ಎಂದೂ ಅವರು ಹೇಳಿದರು.

ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಎನ್‌ಜಿಟಿಯು ಕಾಯ್ದೆ ಅಡಿ ಈ ರೀತಿಯ ಆದೇಶ ನೀಡಿದೆ. ಸರ್ಕಾರವು ಎನ್‌ಜಿಟಿ ಆದೇಶವನ್ನು ಪೂರ್ವಾನ್ವಯ ಆಗದಂತೆ ಜಾರಿಗೊಳಿಸಿ ಕೆರೆಗಳ ರಕ್ಷಣೆಗೆ ಮುಂದಾಗಬಹುದಾಗಿದೆ ಎಂದು ಸ್ವಯಂ ಸೇವಾ ಸಂಸ್ಥೆ ಫಾರ್ವರ್ಡ್‌ ಫೌಂಡೇಷನ್‌ ಪರ ವಕೀಲ ಸಜನ್‌ ಪೂವಯ್ಯ ಅವರು ನ್ಯಾಯಮೂರ್ತಿಗಳಾದ ಎಸ್‌.ಅಬ್ದುಲ್‌ ನಜೀರ್‌ ಹಾಗೂ ಎಂ.ಆರ್‌. ಶಾ ಅವರನ್ನು ಒಳಗೊಂಡ ನ್ಯಾಯಪೀಠಕ್ಕೆ ತಿಳಿಸಿದರು.

ರಿಯಲ್‌ ಎಸ್ಟೇಟ್‌ ಕಂಪನಿಗಳಾದ ಮಂತ್ರಿ ಟೆಕ್‌ ಝೋನ್‌ ಹಾಗೂ ಕೋರ್‌ ಮೈಂಡ್‌ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಮುಕುಲ್‌ ರೋಹಟ್ಗಿ, ಎನ್‌.ಕೆ. ಕೌಲ್‌, ಮಣಿಂದರ್‌ ಸಿಂಗ್‌ ಹಾಗೂ ಆರ್‌. ವೆಂಕಟರಮಣಿ ಅವರು, ನಿರ್ಮಾಣ ಕಾಮಗಾರಿಗಾಗಿ ಕಾನೂನಿನಡಿ ಅನುಮತಿ ನೀಡಿರುವುದನ್ನು ಎನ್‌ಜಿಟಿ ಕಡೆಗಣಿಸಿದೆ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !