ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿಗೆ ದೊರೆಯದ ‘ರಿಸ್ಕ್‌’ ಭತ್ಯೆ

ಕಟ್ಟಡ ದುರಂತ: ಗಮನ ಸೆಳೆದ ಅಗ್ನಿಶಾಮಕ ದಳದ ಕಾರ್ಯಾಚರಣೆ
Last Updated 24 ಮಾರ್ಚ್ 2019, 20:34 IST
ಅಕ್ಷರ ಗಾತ್ರ

ಧಾರವಾಡ: ಅಗ್ನಿ ಅನಾಹುತ, ಕಟ್ಟಡ ದುರಂತ, ಭೂಕಂಪ ಸೇರಿದಂತೆ ಹಲವು ಪ್ರಾಕೃತಿಕ ಹಾಗೂ ಮಾನವ ನಿರ್ಮಿತ ವಿಕೋಪಗಳಲ್ಲಿ ಜೀವದ ಹಂಗು ತೊರೆದು ನೆರವಿಗೆ ಧಾವಿಸುವ ಅಗ್ನಿಶಾಮಕ ಸಿಬ್ಬಂದಿಗೇ ಅಪಾಯ ನಿರ್ವಹಣಾ ಭತ್ಯೆ (ರಿಸ್ಕ್‌ ಅಲೊಯನ್ಸ್‌) ಭಾಗ್ಯ ಇಲ್ಲವಾಗಿದೆ.

ಪೊಲೀಸರಿಗೆ ಮಾತ್ರ ರಿಸ್ಕ್‌ ಅಲೊಯನ್ಸ್‌ ನೀಡಿರುವ ಸರ್ಕಾರ, ತಮ್ಮನ್ನು ಮರೆತಿರುವುದು ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಎನ್ನುವಂತಿದೆ ಎಂಬುದು ಅವರ ಆರೋಪ.

‘ಕಟ್ಟಡ ದುರಂತ, ಅವಶೇಷ ತೆರವು ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ತಮ್ಮ ಪ್ರಾಣ ಒತ್ತೆ ಇಟ್ಟು ಸಂತ್ರಸ್ತರನ್ನು ರಕ್ಷಿಸುತ್ತಾರೆ.ಇಂಥ ಕಾರ್ಯಾಚರಣೆಗಳಲ್ಲಿ ಕೆಲವೊಮ್ಮೆ ದೈಹಿಕವಾಗಿ ಊನಗೊಳ್ಳುವ ಸಾಧ್ಯತೆಯೂ ಇರುತ್ತವೆ. ಅಗ್ನಿ ಅನಾಹುತ ಕಾರ್ಯಾಚರಣೆಯಂತೂ ತೀರಾ ಕಠಿಣವಾಗಿರುತ್ತದೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಸಿಬ್ಬಂದಿಗೆ ‘ಜೀವ ರಕ್ಷಣೆ’ಯೇ ಮೊದಲ ಆದ್ಯತೆ ಆಗಿರುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ಅಪಾಯ ನಿರ್ವಹಣಾ ಭತ್ಯೆ ನೀಡಲು ಕ್ರಮ ಕೈಗೊಳ್ಳಬೇಕು’ ಎಂಬುದು ಅವರ ಆಗ್ರಹ.

‘6ನೇ ವೇತನ ಆಯೋಗದ ವರದಿ ಜಾರಿಯಾದ ಬಳಿಕ, ಪೊಲೀಸರಿಗೆ ರಿಸ್ಕ್‌ ಅಲೊಯನ್ಸ್‌ ಅನ್ನು ₹2000 ಹೆಚ್ಚಿಸಲಾಗಿದೆ. ಈ ಸೌಲಭ್ಯವನ್ನು ಅಗ್ನಿಶಾಮಕ ಸಿಬ್ಬಂದಿಗೂ ನೀಡಬೇಕು ಎಂದು ಹಲವು ಸಲ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ, ಬೇಡಿಕೆ ಈಡೇರಿಲ್ಲ’ ಎನ್ನುತ್ತಾರೆ ಧಾರವಾಡದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಯೊಬ್ಬರು.

ರಕ್ಷಣಾ ವಾಹನಗಳ ಕೊರತೆ: ಜಿಲ್ಲಾ ಕೇಂದ್ರದಲ್ಲಿ, ರಕ್ಷಣಾ ಕಾರ್ಯಾಚರಣೆಗೆ ಬೇಕಾದ ಸಲಕರಣೆ ಹೊಂದಿರುವ ವಾಹನದ (ರೆಸ್ಕ್ಯೂ ವ್ಯಾನ್‌) ಸೌಲಭ್ಯವಿದೆ. ಆದರೆ, ತಾಲ್ಲೂಕು ಮಟ್ಟದಲ್ಲಿ ಅವಘಡ ಸಂಭವಿಸಿದರೆ, ಜಿಲ್ಲಾ ಕೇಂದ್ರದಿಂದ ಆ ವಾಹನ ಬರುವವರೆಗೂ ಕಾಯಬೇಕು. ಅಲ್ಲಿ ಕೇವಲ ವಾಟರ್‌ ಟೆಂಡರ್‌(ನೀರಿನ ವಾಹನ) ಇರುತ್ತವೆ. ತುರ್ತು ಸಂದರ್ಭಗಳಲ್ಲಿ ಅತ್ಯಾಧುನಿಕ ರಕ್ಷಣಾ ಸಲಕರಣೆಗಳಿಲ‍್ಲದೇ ಪರಿತಪಿಸಬೇಕಾಗುತ್ತದೆ. ರಕ್ಷಣಾ ಕಾರ್ಯಾಚರಣೆಗೆ ಇದರಿಂದ ಹಿನ್ನಡೆಯಾಗಲಿದೆ ಎಂದು ಕೆಲವರು ಹೇಳಿದರು.

‘ಧಾರವಾಡದ ಕಟ್ಟಡ ದುರಂತ ಕಾರ್ಯಾಚರಣೆಯಲ‍್ಲಿ ನಮ್ಮ ಸಿಬ್ಬಂದಿಯ ಕಾರ್ಯಶೈಲಿ, ದಕ್ಷತೆ ಏನೆಂಬುದು ಎಲ್ಲರಿಗೂ ತಿಳಿದಿದೆ. ನಾವೂ ರಿಸ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತೇವೆ ಎಂಬುದನ್ನು ಪರಿಗಣಿಸಿ ನಷ್ಟ ಪರಿಹಾರ ಭತ್ಯೆ ನೀಡಬೇಕು’ ಎಂದು ಜಿಲ‍್ಲಾ ಅಗ್ನಿಶಾಮಕ ಅಧಿಕಾರಿ ಚಂದ್ರಶೇಖರ ಭಂಡಾರಿ ಆಗ್ರಹಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು ಪಶ್ಚಿಮ ವಿಭಾಗದ ಮುಖ್ಯ ಅಗ್ನಿಶಾಮಕ ಅಧಿಕಾರಿ(ಸಿಎಫ್‌ಒ) ಜೆ.ಎಚ್‌.ರವಿಶಂಕರ್‌, 'ಅಗ್ನಿಶಾಮಕ ಸಿಬ್ಬಂದಿಗೆ ವಿಶೇಷ ಭತ್ಯೆ ಕೊಡಲಾಗುತ್ತಿದೆ. ಆರೋಗ್ಯ ಭಾಗ್ಯ ಯೋಜನೆ ಇದೆ. ಶೀಘ್ರವೇ ಅಪಾಯ ನಿರ್ವಹಣಾ ಭತ್ಯೆ ಸೌಲಭ್ಯ ಜಾರಿಯಾಗಲಿದೆ’ ಎಂದು ಹೇಳಿದರು.

***

ಮುಖ್ಯಮಂತ್ರಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಅಂದುಕೊಂಡಂತೆ ಆದರೆ ಏ.1ರಿಂದ 4025 ಮಂದಿಗೆ ಮಾಸಿಕ ವೇತನದಲ್ಲಿ ಅಪಾಯ ನಿರ್ವಹಣಾ ಭತ್ಯೆ ಸಿಗಲಿದೆ

-ವರದರಾಜನ್‌,ಉಪನಿರ್ದೇಶಕ, ಅಗ್ನಿಶಾಮಕ ಮತ್ತು ತುರ್ತು ಸೇವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT