ಭಾನುವಾರ, ಆಗಸ್ಟ್ 18, 2019
25 °C
ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ; ಕೇಂದ್ರದ ಮೇಲೆ ಒತ್ತಡ

‘ಉಡಾನ್‌ ಇಂಟರ್‌ನ್ಯಾಷನಲ್‌’ಗೆ ಅವಕಾಶ

Published:
Updated:
Prajavani

ಬೆಳಗಾವಿ: ತಾಲ್ಲೂಕಿನ ಸಾಂಬ್ರಾದಲ್ಲಿರುವ ವಿಮಾನನಿಲ್ದಾಣವನ್ನು ಕೇಂದ್ರದ ‘ಉಡಾನ್‌ ಅಂತರರಾಷ್ಟ್ರೀಯ ಯೋಜನೆ’ಯಡಿ ತರುವಂತೆ ಆಗ್ರಹಿಸಿ ಟ್ವಿಟರ್, ಫೇಸ್‌ಬುಕ್‌ ಮೊದಲಾದ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ಅಭಿಯಾನ ಆರಂಭಿಸಿದ್ದಾರೆ.

#BelagaviFliesInternational ಹ್ಯಾಷ್‌ಟ್ಯಾಗ್ ಮೂಲಕ ಅಭಿಯಾನ ನಡೆಸಲಾಗುತ್ತಿದೆ. ನೂರಾರು ಮಂದಿ ಬೆಂಬಲ ಸೂಚಿಸಿದ್ದಾರೆ. ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸುತ್ತಿದ್ದಾರೆ.

‘ಉಡಾನ್‌’ ಯೋಜನೆಯಡಿ ಆಯ್ಕೆ ಆಗಿರುವುದರಿಂದಾಗಿ ಈ ಏರ್‌ಪೋರ್ಟ್‌ನಲ್ಲಿ ಜೀವ ಕಳೆ ಬಂದಿದೆ. ಇಲ್ಲಿಂದ ದೇಶದ ವಿವಿಧ ನಗರಗಳಿಗೆ ವಿಮಾನಗಳು ಹಾರಾಡುತ್ತಿವೆ. ಇನ್ನೂ ಹಲವು ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕ ದೊರೆಯುವ ಸಾಧ್ಯತೆಯೂ ಇದೆ. ಈ ನಡುವೆ, ‘ಉಡಾನ್‌ ಅಂತರರಾಷ್ಟ್ರೀಯ ಯೋಜನೆ’ಗೆ ಸೇರ್ಪಡೆಯಾದರೆ ಇಲ್ಲಿಂದ ವಿದೇಶಗಳಿಗೆ ವಿಮಾನಗಳು ಹಾರಾಡಲಿವೆ. ಅಲ್ಲದೇ, ಕಡಿಮೆ ವೆಚ್ಚದಲ್ಲಿ ಇಲ್ಲಿನವರು ವಿದೇಶಗಳಿಗೆ ಹೋಗಿ ಬರಲು ಅವಕಾಶ ಸಿಕ್ಕಂತಾಗುತ್ತದೆ. ದುಬೈ, ಸಿಂಗಾಪುರ ಮೊದಲಾದ ಕಡೆಗಳಿಗೆ ಸುಲಭ ಮತ್ತು ಕಡಿಮೆ ಖರ್ಚಿನಲ್ಲಿ ಹೋಗಿ ಬರಬಹುದಾಗಿದೆ.

ಅಭಿಯಾನಕ್ಕೆ ‍ಪೂರಕ:

ಕೇಂದ್ರ ಸರ್ಕಾರವು ಶೀಘ್ರವೇ ಉಡಾನ್‌ (ಉಡೇ ದೇಶ್‌ ಕಾ ಆಮ್‌ ನಾಗರಿಕ್‌) ಯೋಜನೆಯ 3ನೇ ಹಂತದಲ್ಲಿ ಅಂತರರಾಷ್ಟ್ರೀಯ ವಾಯು ಮಾರ್ಗಗಳ ಪಟ್ಟಿ ಅಂತಿಮಗೊಳಿಸಲಿದೆ. ಸರ್ಕಾರ 2016ರಲ್ಲಿ ಉಡಾನ್‌ ಯೋಜನೆ ಪ್ರಾರಂಭಿಸಿತು. ಈ ಯೋಜನೆಯ ಉದ್ದೇಶ ಸಾಮಾನ್ಯ ಜನರನ್ನು ವಾಯುಯಾನದೊಂದಿಗೆ ಸಂಪರ್ಕಿಸುವುದಾಗಿದೆ. ಆರಂಭದಲ್ಲಿ, ಸಣ್ಣ ನಗರಗಳನ್ನು ಇದರಲ್ಲಿ ಸೇರಿಸಲಾಗಿದೆ ಮತ್ತು ಸಬ್ಸಿಡಿ ನಂತರ, ಟಿಕೆಟ್‌ನ ಗರಿಷ್ಠ ಶುಲ್ಕ ₹ 2500 ನಿಗದಿಪಡಿಸಲಾಗಿದೆ. ಉಡಾನ್‌ ಯೋಜನೆಯಲ್ಲಿ ಬೆಳಗಾವಿಯನ್ನು ಸೇರಿಸುವುದಕ್ಕಾಗಿಯೂ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡಮಟ್ಟದ ಅಭಿಯಾನವೇ ನಡೆದಿತ್ತು. ಉದ್ಯಮಿಗಳೂ ದನಿಗೂಡಿಸಿದ್ದರು. ಈಗ, ಉಡಾನ್‌–3ಯಲ್ಲಿ ಯೋಜನೆಯಲ್ಲಿ ಅಂತರರಾಷ್ಟ್ರೀಯ ಮಾರ್ಗ ಒಳಗೊಳ್ಳುವುದಕ್ಕೆ ಬೆಳಗಾವಿಗೂ ಅವಕಾಶವಿದೆ. ಇದಕ್ಕೆ ಬೇಕಾದ ಎಲ್ಲ ರೀತಿಯ ಮೂಲಸೌಲಭ್ಯಗಳೂ ಇಲ್ಲಿರುವುದು ಅಭಿಯಾನಕ್ಕೆ ಪೂರಕವಾಗಲಿದೆ.

ಪ್ರಾಧಿಕಾರಕ್ಕೆ ಪ್ರಸ್ತಾವ:

ಈ ವಿಮಾನನಿಲ್ದಾಣ ಈಗ ಮಧ್ಯಮ ದರ್ಜೆಯದಾಗಿದೆ. ಪ್ರಯಾಣಿಕರ ದಟ್ಟಣೆ ಇರುವುದರಿಂದ ಮತ್ತೊಂದು ಟರ್ಮಿನಲ್‌ ನಿರ್ಮಿಸುವಂತೆ ವಿಮಾನನಿಲ್ದಾಣ ಪ್ರಾಧಿಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಉಡಾನ್‌ಗೆ ಆಯ್ಕೆಯಾದ ನಂತರ ಇಲ್ಲಿಂದ ವಿವಿಧ ಮಾರ್ಗಗಳ ಮಧ್ಯೆ ಅನೇಕ ವಿಮಾನ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಂಡಿವೆ. ಆ ಪ್ರಕಾರ ವಿಮಾನಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪ್ರಯಾಣಿಕರ ಪ್ರಮಾಣದಲ್ಲೂ ಏರಿಕೆ ಕಂಡುಬರುತ್ತಿದೆ. ಪ್ರಸ್ತುತ ಈ ನಿಲ್ದಾಣ 300 ಪೀಕ್‌ಅವರ್‌ (ಒಂದು ಗಂಟೆಯ ಸಂಚಾರ ದಟ್ಟಣೆ) ಸಾಮರ್ಥ್ಯ‌ ಹೊಂದಿದೆ. ಅದನ್ನು ಹೆಚ್ಚಿಸುವಂತೆ ಕೋರಲಾಗಿದೆ. ಜತೆಗೆ 3 ಏರ್‌ಬಸ್‌ ವಿಮಾನ ನಿಲ್ಲಲು ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗುತ್ತಿದೆ.

ಇಲ್ಲಿಂದ ಬೆಂಗಳೂರು, ಹೈದರಾಬಾದ್, ಅಹಮದಾಬಾದ್‌, ಪುಣೆ, ಮುಂಬೈ ನಡುವೆ ಒಟ್ಟು 9 ವಿಮಾನಗಳು ಟೇಕ್‌ಅಪ್‌ ಆಗುತ್ತಿವೆ; ಅಷ್ಟೇ ವಿಮಾನಗಳು ಇಳಿಯುತ್ತಿವೆ.

Post Comments (+)