ಗುರುವಾರ , ಡಿಸೆಂಬರ್ 3, 2020
19 °C
ಕಾವೇರಿ ನೀರು ನಿಯಂತ್ರಣ ಸಮಿತಿ ರಚನೆ

‘ಕಾವೇರಿ ಸಮಿತಿ ರಚನೆ: ಸರ್ಕಾರ ತಪ್ಪು ಹೆಜ್ಜೆ ಇರಿಸಿದೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕಾವೇರಿ ನೀರು ನಿಯಂತ್ರಣ ಸಮಿತಿಯಲ್ಲಿ ರಾಜ್ಯದ ಪ್ರತಿನಿಧಿಯನ್ನು ನಾಮನಿರ್ದೇಶನ ಮಾಡದೇ ಸರ್ಕಾರ ತಪ್ಪು ಹೆಜ್ಜೆ ಇರಿಸಿದೆ. ಇದರಿಂದ ಸಮಿತಿಯು ಭವಿಷ್ಯದಲ್ಲಿ ಕೈಗೊಳ್ಳುವ ನಿರ್ಧಾರಕ್ಕೆರಾಜ್ಯ ಬದ್ಧವಾಗಿರಬೇಕಾದ ಸನ್ನಿವೇಶ ಎದುರಾದರೆ ಹೇಗೆ’ ಎಂದುಕಾನೂನು ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರವು ಶುಕ್ರವಾರವಷ್ಟೇ (ಜೂ.22) ಕಾವೇರಿ ನೀರು ನಿಯಂತ್ರಣ ಸಮಿತಿ ರಚನೆ ಮಾಡಿ ಆದೇಶ ಹೊರಡಿಸಿದೆ. ಈ ಆದೇಶದಲ್ಲಿ, ‘ಈ ತನಕ ಕರ್ನಾಟಕ ರಾಜ್ಯ ಸರ್ಕಾರ ತನ್ನ ಪ್ರತಿನಿಧಿಯ ನಾಮ ನಿರ್ದೇಶನ ಮಾಡಿ ಎಂದು ಕೇಳಿಲ್ಲ’ ಎಂದು ತಿಳಿಸಲಾಗಿದೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಹಿರಿಯ ವಕೀಲ ಬಿ.ವಿ.ಆಚಾರ್ಯ, ‘ಸರ್ಕಾರ ತನ್ನ ಪ್ರತಿನಿಧಿಯನ್ನು ನಾಮನಿರ್ದೇಶನ ಮಾಡದೆ ಭಾರಿ ದೊಡ್ಡ ತಪ್ಪು ಹೆಜ್ಜೆ ಇರಿಸಿದೆ’ ಎಂದು ಅಭಿಪ್ರಾಯಪಟ್ಟರು.

‘ಈ ಬಗ್ಗೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ರಾಜ್ಯ ಸರ್ಕಾರ ಶನಿವಾರ (ಜೂ.23) ಹೇಳಿರುವುದಾಗಿ ಕೇಳಿದೆ. ಆದರೆ, ಹೇಗೆ ಈ ಹೋರಾಟ ಮಾಡುತ್ತಾರೆಯೊ ಅರ್ಥವಾಗದು. ಒಂದೊಮ್ಮೆ ಸಮಿತಿ ಏನಾದರೂ ತಪ್ಪು ನಿರ್ಧಾರ ಕೈಗೊಂಡರೆ ಅದನ್ನು ಸರಿಪಡಿಸಿಕೊಳ್ಳುವುದು ಹೇಗೆ’ ಎಂದು ಅವರು ಪ್ರಶ್ನಿಸಿದ್ದಾರೆ.

ಮತ್ತೊಬ್ಬ ಹಿರಿಯ ವಕೀಲ ಎಂ.ಆರ್.ನಾಯಕ್, ‘ಸಂಸತ್‌ನಲ್ಲಿ ಸ್ಕೀಂ ರೂಪಿಸುವ ತನಕ ನಾವು ನಿರ್ದೇಶನ ಮಾಡುವುದಿಲ್ಲ ಎಂದು ಹೇಳಿದ್ದೆವು. ಆದರೆ, ಕೇಂದ್ರ ಸಮಿತಿ ರಚನೆ ಮಾಡಿಬಿಟ್ಟಿದೆ. ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ನಡೆಯಾಗಿದೆ’ ಎಂದು ಟೀಕಿಸಿದರು.

ಹಿರಿಯ ವಕೀಲ ಅಶೋಕ ಹಾರನಹಳ್ಳಿ, ‘ಸಮಿತಿಯಲ್ಲಿ ನಮ್ಮ ರಾಜ್ಯದ ಪ್ರತಿನಿಧಿಯೇ ಇಲ್ಲ ಎಂದರೆ ಏನರ್ಥ, ಇದು ರಾಜ್ಯದ ಹಿತಾಸಕ್ತಿಗೆ ಸಂಪೂರ್ಣ ವಿರುದ್ಧವಾಗಿದೆ. ಹೀಗಾದರೆ ಮುಂದೆ ಸಮಿತಿ ಹೇಳಿದಂತೆ ನಾವು ಕೇಳಬೇಕಾಗುತ್ತದೆ. ಅವರು ನೀರಿಲ್ಲ ಬಿಡಿ ಎಂದಾಗ ನಾವು ಏನು ಮಾಡಬೇಕು’ ಎಂದು ಪ್ರಶ್ನಿಸಿದರು.

ಕಾವೇರಿ ನ್ಯಾಯಕ್ಕಾಗಿ ಕೇಂದ್ರಕ್ಕೆ ಮತ್ತೊಮ್ಮೆ ಪತ್ರ: ಕುಮಾರಸ್ವಾಮಿ 

‘ಕಾವೇರಿ ನೀರು ನಿಯಂತ್ರಣ ಮಂಡಳಿ ರಚನೆಯಿಂದ ರಾಜ್ಯಕ್ಕೆ ಅನ್ಯಾಯವಾಗಿದ್ದು, ನಮ್ಮ ಹಕ್ಕು ಕಿತ್ತುಕೊಳ್ಳಲಾಗಿದೆ. ಈ ವಿಷಯದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಪತ್ರ ಬರೆಯುತ್ತೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಲ ವಿವಾದಗಳನ್ನು ನಿರ್ವಹಿಸಲು ನೀರಾವರಿ ತಜ್ಞರನ್ನು ನೇಮಕ ಮಾಡಿಕೊಂಡಿದ್ದೇನೆ. ಅವರು ವಿಷಯದ ಕುರಿತು ಅಧ್ಯಯನ ಮಾಡುತ್ತಿದ್ದಾರೆ. ಅಡ್ವೊಕೇಟ್‌ ಜನರಲ್‌ ಅವರ ಸಭೆ ಕರೆದಿದ್ದು, ಚರ್ಚೆ ಮಾಡಿ ಕಾನೂನು ಹೋರಾಟ ಮಾಡುತ್ತೇವೆ’ ಎಂದರು.

‘ಕೇಂದ್ರ ಜಲಸಂಪನ್ಮೂಲ ಸಚಿವರ ಗಮನವನ್ನೂ ಸೆಳೆದಿದ್ದೇನೆ. 15 ದಿನ ಬಿಟ್ಟು ಭೇಟಿಗೆ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ. ಲೋಪ ಸರಿಪಡಿಸಲು ಕೋರಿದ್ದೇನೆ’ ಎಂದರು.

‘ಒಕ್ಕೂಟ ವ್ಯವಸ್ಥೆಯಲ್ಲಿ ನಮಗೆ ಸಾಕಷ್ಟು ಅನ್ಯಾಯ ಆಗಿದೆ. ಆದರೂ, ನಾವು ಗೌರವ ಕೊಟ್ಟಿದ್ದೇವೆ. ಇದು ನಮ್ಮ ದೌರ್ಬಲ್ಯ ಅಲ್ಲ. ರಾಜ್ಯ ಯಾವತ್ತೂ ಕಾನೂನು ಉಲ್ಲಂಘನೆ ಮಾಡಿ‌ಲ್ಲ. ಜಲ ವಿವಾದದಿಂದಾಗಿ ಜನರು ಹಲವು ರೀತಿಯ ಸಮಸ್ಯೆ ಎದುರಿಸಿದ್ದಾರೆ’ ಎಂದರು.

‘ಅಂತರರಾಜ್ಯ ಜಲವಿವಾದ ಕಾಯ್ದೆಯನ್ನು ತಿರುಚಲಾಗಿತ್ತು. ಅದರ ಅನುಷ್ಠಾನದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಅದನ್ನು ಸರಿಪಡಿಸಬೇಕಿದೆ’ ಎಂದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು