ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನದಂಡ ಸರಿಪಡಿಸಿ: ದೇಶಪಾಂಡೆ

ಕೇಂದ್ರ ಬರ ಅಧ್ಯಯನ ತಂಡದಿಂದ ವಿಚಾರ ವಿನಿಮಯ
Last Updated 19 ನವೆಂಬರ್ 2018, 20:24 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಬರಪೀಡಿತ ಜಿಲ್ಲೆಗಳಲ್ಲಿ ಮೂರು ದಿನ ಅಧ್ಯಯನ ನಡೆಸಿದ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿ ಅಮಿತಾಭ್ ಗೌತಮ್ ನೇತೃತ್ವದ ತಂಡ, ಮುಖ್ಯಮಂತ್ರಿ
ಎಚ್.ಡಿ. ಕುಮಾರಸ್ವಾಮಿ
ಮತ್ತು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಜೊತೆ ವಿಧಾನಸೌಧದಲ್ಲಿ ಸೋಮವಾರ ವಿಚಾರ ವಿನಿಮಯ ನಡೆಸಿತು.

ಅಧ್ಯಯನ ಪ್ರವಾಸದ ವೇಳೆ ಬರಪೀಡಿತ ಜಿಲ್ಲೆಗಳಲ್ಲಿ ಸ್ಥಿತಿಗತಿ, ಬೆಳೆಗಳಿಗೆ ಆಗಿರುವ ನಷ್ಟ, ಕುಡಿಯುವ ನೀರಿನ ಕೊರತೆ, ಮೇವಿನ ಕೊರತೆ ಮುಂತಾದ ವಿಚಾರಗಳಿಗೆ ಸಂಬಂಧಿಸಿದ ಮಾಹಿತಿ, ಅಂಕಿಅಂಶಗಳನ್ನು ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರ ಜೊತೆ ಅಮಿತಾಭ್ ಗೌತಮ್‌ ಹಂಚಿಕೊಂಡರು.

ಅಧ್ಯಯನ ತಂಡಕ್ಕೆ ಬರ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ದೇಶಪಾಂಡೆ, ಮಾಹಿತಿ ನೀಡಿದರು. ಅಲ್ಲದೆ, ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‍ಡಿಆರ್‍ಎಫ್) ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‍ಡಿಆರ್‍ಎಫ್) ಮಾನದಂಡಗಳ ಹಾಗೂ ಬರ ಕೈಪಿಡಿಯಲ್ಲಿ ಆಗಿರುವ ಕೆಲವು ವ್ಯತ್ಯಾಸಗಳನ್ನು ಸರಿಪಡಿಸಬೇಕಾದ ಅಗತ್ಯದ ಬಗ್ಗೆಯೂ ಅವರು ವಿವರಿಸಿದರು.

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ದೇಶಪಾಂಡೆ ಮತ್ತು ಕೃಷಿ ಸಚಿವ ಶಿವಶಂಕರ ರೆಡ್ಡಿ ಸೆ. 30ರಂದು ನವದೆಹಲಿಯಲ್ಲಿ ಭೇಟಿ ಮಾಡಿ, ರಾಜ್ಯದಲ್ಲಿ ಬರದಿಂದ ಆಗಿರುವ ನಷ್ಟವನ್ನು ವಿವರಿಸಿ ₹ 2,434 ಕೋಟಿ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದ್ದರು.

ಅಧಿಕಾರಿಗಳೇ ಹೊಣೆ: ಬಳಿಕ ಸಂಪುಟ ಉಪಸಮಿತಿ ಸಭೆ ನಡೆಸಿದ ದೇಶಪಾಂಡೆ, ‘ಬರ ಪೀಡಿತ ಜಿಲ್ಲೆಗಳಲ್ಲಿ ಕುಡಿಯುವ ನೀರು ಮತ್ತು ಮೇವಿನ ಕೊರತೆ ಆಗದಂತೆ ನೋಡಿಕೊಳ್ಳುವುದು ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಹೊಣೆಯಾಗಿದೆ. ಇದರ ಜತೆಗೆ ಜನರು ಗುಳೆ ಹೋಗದಂತೆ ಉದ್ಯೋಗ ಸೃಷ್ಟಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಬರ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ನಿರಂತರ ವಿಡಿಯೋ ಸಂವಾದ ನಡೆಸಲಾಗುವುದು. ಅಭಿವೃದ್ಧಿ ಆಯುಕ್ತರು ಬರ ಪರಿಹಾರ ಕಾಮಗಾರಿಗಳ ಬಗ್ಗೆ ಪಶು ಸಂಗೋಪನಾ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಜೊತೆ ಸಮಾಲೋಚನೆ ನಡೆಸಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT