ಆದಿತ್ಯ- ಚಂದ್ರಯಾನಕ್ಕೆ ಮುಹೂರ್ತ ನಿಗದಿ !

7
2019 ಜನವರಿ 3 ಕ್ಕೆ ಚಂದ್ರಯಾನ–2, ಡಿಸೆಂಬರ್‌ನಲ್ಲಿ ಆದಿತ್ಯ–1

ಆದಿತ್ಯ- ಚಂದ್ರಯಾನಕ್ಕೆ ಮುಹೂರ್ತ ನಿಗದಿ !

Published:
Updated:

ಬೆಂಗಳೂರು: ಸೂರ್ಯ ಮತ್ತು ಚಂದ್ರ ಭಾರತೀಯರ ಪರಂಪರೆ ಜತೆಗೆ ಹಾಸು ಹೊಕ್ಕಾಗಿದೆ. ಪುರಾಣ, ಕಲೆ, ಕಾವ್ಯ ಮತ್ತು ತತ್ವಶಾಸ್ತ್ರಗಳಲ್ಲೂ ಗಾಢವಾದ ಅನುಬಂಧ ಹೊಂದಿವೆ. ಬಾಹ್ಯಾಕಾಶ ವಿಜ್ಞಾನದಲ್ಲಿ ದಾಪುಗಾಲಿಡುತ್ತಿರುವ ಭಾರತ ವಿಶ್ವದ ಪ್ರಬಲ ರಾಷ್ಟ್ರಗಳೊಂದಿಗೆ ಅಂತರ ಗ್ರಹಯಾನ ಕ್ಷೇತ್ರದಲ್ಲಿ ಪೈಪೋಟಿಗೆ ಇಳಿದಿದೆ. 2019 ರಲ್ಲಿ ಚಂದ್ರ (ಉಪಗ್ರಹ) ಮತ್ತು ಸೂರ್ಯನ(ನಕ್ಷತ್ರ) ಬಳಿ ಬಾಹ್ಯಾಕಾಶ ನೌಕೆ ಕಳುಹಿಸಲಿದೆ.

ಜನವರಿ 3 ಕ್ಕೆ ‘ಚಂದ್ರಯಾನ–2’ ಮತ್ತು ಡಿಸೆಂಬರ್‌ನಲ್ಲಿ ‘ಆದಿತ್ಯ–1’ ಬಾಹ್ಯಾಕಾಶ ನೌಕೆಗಳನ್ನು ಉಡಾವಣೆ ಮಾಡುವುದಾಗಿ ಇಸ್ರೊ ಅಧ್ಯಕ್ಷ ಕೆ.ಶಿವನ್‌ ಭಾನುವಾರ ಪ್ರಕಟಿಸಿದರು. 

ಚಂದ್ರಯಾನ–2:

* ಇದೇ ಆಗಸ್ಟ್‌ನಲ್ಲಿ ಉಡಾವಣೆ ಆಗಬೇಕಿತ್ತು ಆದರೆ, ತಾಂತ್ರಿಕ ಕಾರಣಗಳಿಂದ ಮುಂದೂಡಲಾಗಿತ್ತು. ಚಂದ್ರನ ಅಂಗಳದಲ್ಲಿ ಲ್ಯಾಂಡರ್‌ ಇಳಿಸುವಾಗ ಎದುರಾಗಬಹುದಾದ ತಾಂತ್ರಿಕ ಸಮಸ್ಯೆಗಳು ಮತ್ತು ಇಂಧನ ಕ್ಷಮತೆಯ ಬಗ್ಗೆ ಕೆಲವು ಸಮಸ್ಯೆಗಳಿದ್ದವು.  ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲಾಗಿದೆ. 

* ಇದಕ್ಕಾಗಿ ಲ್ಯಾಂಡಿಂಗ್‌ಗೆ ಸಂಬಂಧಿಸಿದ ಸಂಪೂರ್ಣ ಯೋಜನೆಯನ್ನೇ ಹೊಸದಾಗಿ ರೂಪಿಸಲಾಗಿದೆ. ಇದಕ್ಕಾಗಿ ಲ್ಯಾಂಡರ್‌ ಅನ್ನು ಮರುವಿನ್ಯಾಸಗೊಳಿಸಲಾಗಿದೆ.

* ಬಾಹ್ಯಾಕಾಶ ನೌಕೆ ಉಡಾವಣೆ ಮಾಡಿ 30– 35 ದಿನಗಳಲ್ಲಿ ಚಂದ್ರನ ಕಕ್ಷೆಗೆ ತಲುಪುತ್ತದೆ.

* ಬಾಹ್ಯಾಕಾಶ ನೌಕೆ ಕಕ್ಷೆಗಾಮಿ(ಆರ್ಬಿಟರ್‌), ಲ್ಯಾಂಡರ್‌ ಮತ್ತು ರೋವರ್‌ಗಳನ್ನು ಒಯ್ಯಲಿದೆ.

* ಚಂದ್ರನ ಕಕ್ಷೆಗೆ ತಲುಪಿದ ಬಳಿಕ ನೌಕೆಯಿಂದ ರೋವರ್‌ ಅನ್ನು ಹೊತ್ತ ಲ್ಯಾಂಡರ್‌ ಪ್ರತ್ಯೇಕಗೊಂಡು, ಮೊದಲೇ ಗೊತ್ತು ಮಾಡಿದ ಸ್ಥಳದಲ್ಲಿ ನೆಲ ಸ್ಪರ್ಶ ಮಾಡಲಿದೆ.

* ಆರು ಗಾಲಿಗಳ ರೋವರ್‌ ಚಲಿಸಿ ಚಂದ್ರನ ಮೇಲ್ಮೈನ ಮಾಹಿತಿ ಸಂಗ್ರಹಿಸಿ ಭೂಮಿಗೆ ಕಳುಹಿಸುತ್ತದೆ. ಇದು ಅರೆ ಸ್ವಯಂ ಚಾಲಿತ. ಅಲ್ಲದೆ, ಭೂಮಿಯಿಂದಲೇ ಕಮಾಂಡ್‌ ನೀಡಿ ನಿಯಂತ್ರಿಸಲಾಗುತ್ತದೆ. 

* 3290 ಕೆ.ಜಿ ತೂಕದ ನೌಕೆ ರೋವರ್‌ ಇಳಿಸುವುದಕ್ಕೆ ಮೊದಲು ಚಂದ್ರನಿಗೆ ಏಳು ದಿನಗಳ ಕಾಲ ಸುತ್ತು ಹಾಕುತ್ತದೆ. ಅಲ್ಲಿನ ವಾತಾವರಣದ ಬಗ್ಗೆ ದೂರಸಂವೇದಿ ಸೆನ್ಸರ್‌ಗಳ ಮೂಲಕ ಮಾಹಿತಿ ಸಂಗ್ರಹಿಸುತ್ತದೆ. ಮೇಲ್ಮೈ ಸ್ಥಳ ವಿವರಣೆ, ಖನಿಜ, ನೀರಿನ ಕುರುಹುಗಳು ಮತ್ತು ಬಾಹ್ಯಗೋಳದ ಬಗ್ಗೆ ಅಧ್ಯಯನ.

**

ಆದಿತ್ಯ–1:

* ನೌಕೆ ಸೂರ್ಯನ ಹೊರ ಪದರದಲ್ಲಿ ನೆಲೆ ನಿಂತು ಅಧ್ಯಯನ ನಡೆಸುತ್ತದೆ. ವಿಶೇಷವಾಗಿ ಸೂರ್ಯ ಮಂಡಲ ವೀಕ್ಷಿಸಿ, ಅದರ ಒಡಲಲ್ಲಿ ಏನೇನು ಸಂಭವಿಸುತ್ತದೆ, ಸೌರ ಮಾರುತ ಮತ್ತು ಅದರಿಂದ ಭೂಮಿಯ ಮೇಲೆ ಆಗುವ ಪರಿಣಾಮಗಳ ಅಧ್ಯಯನ. ಅಲ್ಟ್ರಾವಯೊಲೆಟ್‌ ಇಮೇಜರ್‌ನಿಂದ ಇವೆಲ್ಲ ವಿದ್ಯಮಾನಗಳನ್ನು ಗ್ರಹಿಸಬಹುದು.

* ಐದು ಪೇಲೋಡ್‌ಗಳು ಎಂದರೆ, ಅಧ್ಯಯನದ ಸಾಧನಗಳನ್ನು ಒಯ್ಯಲಿದೆ.

* ಸೂರ್ಯ ಭೂಮಿಯನ್ನು ಹೇಗೆ ಪ್ರಭಾವಿಸುತ್ತದೆ ಎಂಬುದೇ ಅಧ್ಯಯನದ ಮುಖ್ಯ ಉದ್ದೇಶ.

 * ಈವರೆಗೆ ಈ ಸಾಹಸಕ್ಕೆ ಕೈ ಹಾಕಿರುವ ಏಜೆನ್ಸಿಗಳೆಂದರೆ ‘ಯುರೋಪ್ ಸ್ಪೇಸ್ ಏಜೆನ್ಸಿ’ ಮತ್ತು ಅಮೆರಿಕದ ‘ನಾಸಾ’. ಭಾರತ  ‘ಸೂರ್ಯ ಕೂಟ’ಕ್ಕೆ ಹೊಸ ಸದಸ್ಯ ರಾಷ್ಟ್ರವಾಗಿ ಸೇರಲಿದೆ.

ವಿಜ್ಞಾನಕ್ಕಾಗಿ ‘ಇಸ್ರೊ ಟಿವಿ’:  ವಿಜ್ಞಾನಕ್ಕಾಗಿಯೇ ಮೀಸಲಾದ ಟೆಲಿವಿಷನ್‌ ಚಾನೆಲ್‌ ‘ಇಸ್ರೊ ಟಿವಿ’ ಆರಂಭಿಸಲಿದೆ. ದೇಶದ ಎಲ್ಲ ಸ್ಥಳೀಯ ಭಾಷೆಗಳಲ್ಲಿ ವಿಜ್ಞಾನದ ಕಾರ್ಯಕ್ರಮಗಳನ್ನು ಈ ಚಾನೆಲ್‌ ಪ್ರಸಾರ ಮಾಡಲಿದೆ. ಹಳ್ಳಿ–ಹಳ್ಳಿಗೂ ವಿಜ್ಞಾನದ ವಿಷಯಗಳು ತಲುಪಬೇಕು ಎಂಬುದು ಇದರ ಮುಖ್ಯ ಉದ್ದೇಶ. ವಿದ್ಯಾರ್ಥಿಗಳು ಡಿಸ್ಕವರಿ, ಹಿಸ್ಟರಿ ಚಾನೆಲ್‌ಗಳನ್ನು ನೋಡುತ್ತಾರೆ.  ನಾಲ್ಕು–ಐದು ತಿಂಗಳಲ್ಲಿ ಆರಂಭಿಸಲಾಗುತ್ತದೆ ಎಂದು ಶಿವನ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !