ಗುರುವಾರ , ಆಗಸ್ಟ್ 22, 2019
27 °C
2016ರಲ್ಲಿ ಕಾಮಗಾರಿಗೆ ಭೂಮಿಪೂಜೆ, ನೀರಾವರಿ ನಿಗಮದ ಅಧಿಕಾರಿಗಳಿಂದ ನಿರ್ಲಕ್ಷ್ಗ್ಯ ಆರೋಪ

ಪಾಳು ಬಿದ್ದ ಚಿಕ್ಕಹೊಳೆ ಜಲಾಶಯ ಉದ್ಯಾನ

Published:
Updated:
Prajavani

ಚಾಮರಾಜನಗರ: ತಾಲ್ಲೂಕಿನ ಚಿಕ್ಕಹೊಳೆ ಹಾಗೂ ಸುವರ್ಣಾವತಿ ಜಲಾಶಯಗಳಲ್ಲಿ ಉದ್ಯಾನ ಅಭಿವೃದ್ಧಿಗಾಗಿ ₹ 85 ಲಕ್ಷ ಬಿಡುಗಡೆಯಾಗಿತ್ತು. 2016ರಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಸುವರ್ಣಾವತಿ ಜಲಾಶಯದ ಉದ್ಯಾನ ತಕ್ಕಮಟ್ಟಿಗೆ ಇದೆ. ಆದರೆ, ಚಿಕ್ಕಹೊಳೆ ಜಲಾಶಯದ ಉದ್ಯಾನ ನಿರ್ವಹಣೆ ಇಲ್ಲದೆ ಸೊರಗಿದೆ.

ಚಿಕ್ಕಹೊಳೆ ಜಲಾಶಯದ ವ್ಯಾಪ್ತಿಯ ಸುತ್ತಲೂ ತಂತಿಬೇಲಿ ಇರುವುದರಿಂದ ಉದ್ಯಾನ ಸ್ಥಳವು ಕುರಿ, ಮೇಕೆಗಳನ್ನು ಮೇಯಲು ಬಿಡುವ ಸ್ಥಳವಾಗಿ ಬದಲಾಗಿದೆ. ಉದ್ಯಾನದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಉದ್ಯಾನದ ವಿನ್ಯಾಸ ಆಕರ್ಷಕವಾಗಿದೆ. ಆದರೆ, ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. 

ಅಲಂಕಾರಿಕ ಗಿಡಗಳು, ಹಸಿರಾದ ಹುಲ್ಲು ಹಾಸಿನೊಂದಿಗೆ ಉದ್ಯಾನ ಗಮನ ಸೆಳೆಯುತ್ತಾದರೂ ಈಗ ಎಲ್ಲೆಡೆ ಮುಳ್ಳಿನಗಿಡಗಳು ಬೆಳೆದುಕೊಂಡಿವೆ. ನಡೆಯಲು ಸಾಧ್ಯವಾಗದ ಪರಿಸ್ಥಿತಿ ಇದೆ.

ಚಾಮರಾಜನಗರದಿಂದ 16 ಕಿ.ಮೀ ದೂರವಿರುವ ಈ ಎರಡೂ ಜಲಾಶಯಗಳು ಪ್ರವಾಸಿ ತಾಣವಾಗಿವೆ. ಜಲಾಶಯಗಳ ಪ್ರದೇಶದಲ್ಲಿ ಉದ್ಯಾನ ನಿರ್ಮಾಣ ಕಾಮಗಾರಿ ಭರದಿಂದ ಸಾಗಿ ಸುವರ್ಣಾವತಿ ಜಲಾಶಯದ ಉದ್ಯಾನ ಬಹುಪಾಲು ಮುಗಿದು ಒಂದು ಹಂತಕ್ಕೆ ಬಂದಿದೆ. ಆದರೆ, ಚಿಕ್ಕಹೊಳೆ ಜಲಾಶಯದ ಉದ್ಯಾನದ ಅಭಿವೃದ್ಧಿಗೆ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎನ್ನುವುದು ಸ್ಥಳೀಯರ ಆರೋಪ.

‘ಈಗ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ರಸ್ತೆ ವಿಸ್ತರಿಸುವ ಕಾಮಗಾರಿಗಳು ಸಾಗುತ್ತಿದೆ. ಪೂರ್ಣಗೊಂಡ ಬಳಿಕ ಪ್ರವಾಸಿಗರು ಮತ್ತಷ್ಟು ಹೆಚ್ಚುತ್ತಾರೆ. ಈ ವೇಳೆ ಪ್ರವಾಸಿಗರ ಕಣ್ಣಿಗೆ ಹಬ್ಬವಾಗಿ ಈ ಉದ್ಯಾನಗಳು ಕಂಗೊಳಿಸಲಿವೆ. ಪ್ರಸ್ತುತ ಜಲಾಶಯಗಳಲ್ಲಿ ನೀರಿನ ಮಟ್ಟ ತಳಭಾಗಕ್ಕೆ ತಲುಪಿದೆ. ಮುಂದಿನ ದಿನಗಳಲ್ಲಿ ಮಳೆಯಾದಾಗ ಜಲಾಶಯ ಭರ್ತಿಯಾದಾಗ ಪ್ರವಾಸಿಗರು ಲಗ್ಗೆ ಇಡುತ್ತಾರೆ. ಈ ಸಂದರ್ಭದಲ್ಲಿ ಉದ್ಯಾನವಿದ್ದರೆ ಜಲಾಶಯ ಇನ್ನಷ್ಟು ಆಕರ್ಷಣೀಯ ಕೇಂದ್ರವಾಗಲಿದೆ’ ಎನ್ನುವುದು ಸ್ಥಳೀಯರ ನಿಲುವು.

‘ಸುವರ್ಣಾವತಿ ಜಲಾಶಯ ಪ್ರದೇಶದ ಉದ್ಯಾನ ಆಕರ್ಷಕವಾಗಿದೆ. ಚಿಕ್ಕಹೊಳೆ ಉದ್ಯಾನವನ್ನು ನಿರ್ವಹಣೆ ಮಾಡಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕು’ ಎನ್ನುತ್ತಾರೆ ಅಟ್ಟುಗುಳಿಪುರ ನಿವಾಸಿ ಕಾಂತರಾಜು.

ಹದಗೆಟ್ಟ ವೀಕ್ಷಣಾ ಗೋಪುರ: ಪ್ರವಾಸಿಗರು ಸುಂದರ ತಾಣವನ್ನು ಎತ್ತರದಿಂದ ವೀಕ್ಷಿಸಲು ಅನುಕೂಲವಾಗುವಂತೆ ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ಆದರೆ ಗೋಪುರದ ಮೆಟ್ಟಿಲು ಮುರಿದು ಹೋಗಿದೆ. ಕಾಲಿಟ್ಟರೆ ನೆಲಕ್ಕೆ ಕುಸಿಯಬಹುದು ಎಂಬ ಭಯವಾಗುತ್ತದೆ. ಯಾವುದೇ ಮೆಟ್ಟಿಲು ಸಮರ್ಪಕವಾಗಿಲ್ಲ. ಗೋಡೆಗಳು ಬಿರುಕು ಬಿಟ್ಟಿವೆ. 

ನಾಮಫಲಕ ಅಳವಡಿಸಬೇಕು: ಚಾಮರಾಜನಗರದಿಂದ ಅಂಕನಶೆಟ್ಟಿಪುರದ ಮಾರ್ಗವಾಗಿ ಚಿಕ್ಕಹೊಳೆ ಚೆಕ್‌ಪೋಸ್ಟ್‌ನಲ್ಲಿ ಈ ಜಲಾಶಯಕ್ಕೆ ಭೇಟಿ ನೀಡಲು ಬಲಭಾಗಕ್ಕೆ ತಿರಗಬೇಕು. ಈ ತಿರುವಿನಲ್ಲಿ ‘ಚಿಕ್ಕಹೊಳೆ ಜಲಾಶಯ’ ನಾಮಫಲಕ ಅಳವಡಿಸಿದರೆ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎನ್ನುವುದು ಸಾರ್ವಜನಿಕರ ಒತ್ತಾಯ. 

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕಾವೇರಿ ನೀರಾವರಿ ಕಾರ್ಯಪಾಲಕ ಎಂಜಿನಿಯರ್‌ ರಾಜೇಂದ್ರ ಪ್ರಸಾದ್‌ ಅವರಿಗೆ ಕರೆ ಮಾಡಲು ಯತ್ನಿಸಿದರೂ ಸಂಪರ್ಕಕ್ಕೆ ಸಿಗಲಿಲ್ಲ. 

ಕುಡಿಯುವ ನೀರು, ಶೌಚಾಲಯ ಸಮಸ್ಯೆ

ಜಲಾಶಯವನ್ನು ಕಣ್ತುಂಬಿಕೊಳ್ಳಲು ಆಗಮಿಸುವ ಪ್ರವಾಸಿಗರು ಹಾಗೂ ಜಲಾಶಯ ರಕ್ಷಣೆಗೆಂದು ಇರುವ ಪೊಲೀಸ್‌ ಸಿಬ್ಬಂದಿಗೆ ಕುಡಿಯುವ ನೀರು, ಶೌಚಾಲಯದ ಸಮಸ್ಯೆ ಎದುರಾಗಿದೆ.

‘15 ದಿನಗಳಿಗೊಮ್ಮೆ ಒಬ್ಬರು ಪೊಲೀಸರಂತೆ ಕಣ್ಗಾವಲಿಗೆ ಇರಿಸುತ್ತಾರೆ. ಕೊಠಡಿ ಇದೆ. ಆದರೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕುಡಿಯುವ ನೀರಿಗಾಗಿ ಚೆಕ್‌ಪೋಸ್ಟ್‌ಗಳಲ್ಲಿರುವ ಹೋಟೆಲ್‌ನಲ್ಲಿ ನೀರು ಸಂಗ್ರಹಿಸಿಕೊಂಡು ಬರುತ್ತೇವೆ. ಶೌಚವನ್ನು ಬಯಲಲ್ಲೇ ವಿಸರ್ಜಿಸುತ್ತಿದ್ದೇವೆ’ ಎಂದು ಇಲ್ಲಿನ ಪೊಲೀಸ್‌ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ಹೇಳಿದರು.

ಓವರ್ ಹೆಡ್‌ ಟ್ಯಾಂಕ್‌ ಅಗತ್ಯ: ‘ಸುವರ್ಣಾವತಿ ಜಲಾಶಯದಲ್ಲಿ ಓವರ್‌ ಹೆಡ್‌ ಟ್ಯಾಂಕ್‌ ಇಡಲಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೆ, ಚಿಕ್ಕಹೊಳೆ ಜಲಾಶಯದಲ್ಲಿ ನೀರಿನ ಸಮಸ್ಯೆ ಹೇಳ ತೀರದು. ಕುಡಿಯುವ ನೀರು ಹಾಗೂ ಶೌಚಾಲಯ ಸಮಸ್ಯೆ ನಿವಾರಣೆಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕಿದೆ’ ಎನ್ನುತ್ತಾರೆ ಅವರು. 

‘ವಾರಕ್ಕೊಮ್ಮೆಯಾದರೂ ಸ್ನೇಹಿತರೊಟ್ಟಿಗೆ ಜಲಾಶಯಕ್ಕೆ ಭೇಟಿ ನೀಡುತ್ತೇನೆ. ಮೂರು ವರ್ಷಗಳ ಹಿಂದೆ ಉದ್ಯಾನ ಕಾಮಗಾರಿ ಆರಂಭಿಸಲಾಗಿದೆ ಎಂದು ತಿಳಿಯಿತು. ಆದರೆ ಇಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ’ ಉಡಿಗಾಲದಿಂದ ಬಂದಿದ್ದ ಸಂತೋಷ್ ‘ಪ್ರಜಾವಾಣಿ’ಗೆ ಹೇಳಿದರು.

Post Comments (+)