ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಐಡಿ ಕೈಗೂ ಸಿಗದ ಐಎಂಎ!

‘ಕೆಪಿಐಡಿ’ ಅಡಿ ಕ್ರಮ ಸಾಧ್ಯವಿಲ್ಲ ಎಂದಿದ್ದ ಅಧಿಕಾರಿಗಳು
Last Updated 11 ಜುಲೈ 2019, 20:14 IST
ಅಕ್ಷರ ಗಾತ್ರ

ಬೆಂಗಳೂರು: ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಐಎಂಎ (ಐ ಮಾನಿಟರಿ ಅಡ್ವೈಸರಿ) ಕಂಪನಿಗೆ ಜಿಲ್ಲಾಧಿಕಾರಿ ಬಿ.ಎಂ. ವಿಜಯಶಂಕರ್‌ ‘ಕ್ಲೀನ್‌ ಚಿಟ್‌’ ಕೊಡುವ ಮೊದಲೇ ‘ಕರ್ನಾಟಕ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ’ಯಡಿ (ಕೆಪಿಐಡಿ) ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಸಿಐಡಿ ವರದಿ ಕೊಟ್ಟು ಕೈತೊಳೆದುಕೊಂಡಿರುವ ಸಂಗತಿ ಬಯಲಾಗಿದೆ.

ಐಎಂಎ ಸಾರ್ವಜನಿಕರಿಂದ ಅನಧಿಕೃತವಾಗಿ ಠೇವಣಿ ಸಂಗ್ರಹಿಸುತ್ತಿರುವ ಸಂಬಂಧ ಸಕ್ಷಮ ಪ್ರಾಧಿಕಾರ ಕ್ರಮ ಕೈಗೊಳ್ಳಬೇಕು ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ‌ 2017ರ ಅಕ್ಟೋಬರ್‌ 17ರಂದು ಸಲ್ಲಿಸಿದ್ದ ಮನವಿ ಆಧರಿಸಿ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಸಿಐಡಿ, ಆರ್ಥಿಕ ಅಪರಾಧಗಳ ವಿಭಾಗದ ಐಜಿ ಹೇಮಂತ್‌ ನಿಂಬಾಳ್ಕರ್‌ 2019ರ ಜನವರಿ 18ರಂದು ಸರ್ಕಾರಕ್ಕೆ ಈ ಸಂಬಂಧ ವರದಿ ನೀಡಿದ್ದರು.

‘ಐಎಂಎ ಸಮೂಹ ಕಂಪನಿ ಹಣಕಾಸಿನ ಸಂಸ್ಥೆಯಾಗಿರುವುದಿಲ್ಲ. ಯಾರೂ ಇದೊಂದು ಹಣಕಾಸು ಸಂಸ್ಥೆ ಎಂದು ಭಾವಿಸಿ ಹಣ ಹೂಡಿಕೆ ಮಾಡಿಲ್ಲ. ಹೆಚ್ಚು ಬಡ್ಡಿ ಅಥವಾ ಲಾಭ ನೀಡುವ ಭರವಸೆ ಕೊಟ್ಟು ಜನರಿಂದ ಹಣ ಸಂಗ್ರಹಿಸಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಇರುವುದಿಲ್ಲ. ಐಎಂಎ ಪ್ರತಿ ವರ್ಷ ಆದಾಯ ತೆರಿಗೆ ಇಲಾಖೆಗೆ ವಿವರ ಸಲ್ಲಿಸಿದೆ. ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್‌ ಖಾನ್‌ ಅವರ ಬ್ಯಾಲೆನ್ಸ್‌ ಶೀಟ್‌ಗಳಲ್ಲೂ ನ್ಯೂನತೆ ಕಂಡುಬಂದಿಲ್ಲ. ಕಂಪನಿ ವಂಚನೆ ಮಾಡಿದೆ ಎಂದು ಯಾರೂ ದೂರು ಕೊಡಲು ಮುಂದೆ ಬಂದಿಲ್ಲ. ಹೀಗಾಗಿ,ಕೆಪಿಐಡಿ ಕಾಯ್ದೆ ಸೆಕ್ಷನ್‌ 9 ಮತ್ತು 3ರ ಅಡಿ ಕ್ರಮ ಜರುಗಿಸಲು ಬರುವುದಿಲ್ಲ’ ಎಂದು ನಿಂಬಾಳ್ಕರ್‌ ವರದಿಯಲ್ಲಿ ಹೇಳಿದ್ದರು.

‘ಕಂಪನಿ ಚಿನ್ನ– ಬೆಳ್ಳಿ ವಹಿವಾಟು ನಡೆಸುತ್ತಿದೆ. ರಿಜಿಸ್ಟ್ರಾರ್‌ ಆಫ್‌ ಕಂಪನೀಸ್‌ ಕಾಯ್ದೆ‘ ಅಡಿ ‘ಎಲ್‌ಎಲ್‌ಪಿ ಕಂಪನಿ’ ನೋಂದಣಿ ಮಾಡುವಾಗ ಘೋಷಿಸಿಕೊಂಡಿರುವ ಉದ್ದೇಶಗಳಿಗೆ ಅನುಗುಣವಾಗಿ ಕಂಪನಿ ನಡೆಯುತ್ತಿದೆ. ಪಾಲುದಾರರಿಂದ ಪಾರದರ್ಶಕವಾಗಿ ಠೇವಣಿ ಪಡೆದಿದೆ’ ಎಂದೂ ವರದಿಯಲ್ಲಿ ವಿವರಿಸಿದ್ದರು. ಇದರ ಬೆನ್ನಲ್ಲೇ, ಫೆ.8ರಂದು ಜಿಲ್ಲಾಧಿಕಾರಿ ವಿಜಯಶಂಕರ್‌ ಐಎಂಎಗೆ ಕ್ಪೀನ್‌ ಚಿಟ್‌ ನೀಡಿದ್ದರು.

ಸೀಮಿತ ವರದಿ: ಸ್ಪಷ್ಟನೆ
‘ಮನ್ಸೂರ್‌ ಖಾನ್‌ ಒಡೆತನದ ಕಂಪನಿಗೆ ಸಂಬಂಧಿಸಿದ ವಂಚನೆ ವ್ಯವಹಾರ ಕುರಿತು ಕೆಪಿಐಡಿ ಅಡಿ ಕ್ರಮ ಕೈಗೊಳ್ಳಬಹುದೇ ಎಂದು ಸಿಐಡಿಗೆ ಕೇಳಲಾಗಿತ್ತು. ಆದರೆ, ಈ ಕಾಯ್ದೆಯಡಿ ಕ್ರಮ ಜರುಗಿಸಲು ಬರುವುದಿಲ್ಲ ಎಂದು ವರದಿ ನೀಡಲಾಗಿದೆ’ ಎಂದು ನಿಂಬಾಳ್ಕರ್‌ ಅವರ ಆಪ್ತ ಮೂಲಗಳು ಸ್ಪಷ್ಟಪಡಿಸಿವೆ.

ಇದಾದ ಕೆಲವೇ ದಿನಗಳಲ್ಲಿ ಬೇರೆ ಬೇರೆ ಕಾನೂನುಗಳಡಿ ಕಂಪನಿವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿದೆ ಎಂಬ ಮತ್ತೊಂದು ಪೂರಕ ವರದಿಯನ್ನು ಸಿಐಡಿ ಸರ್ಕಾರಕ್ಕೆ ಕೊಟ್ಟಿದೆ. ರಾಜ್ಯ ಮಟ್ಟದ ಆರ್‌ಬಿಐ ಸಮನ್ವಯ ಸಮಿತಿಯಲ್ಲೂ ಈ ವಿಷಯ ಚರ್ಚೆಯಾಗಿದೆ ಎಂದೂ ಮೂಲಗಳು ವಿವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT