ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮಿಶ್ರ ಸರ್ಕಾರದ ವಿರುದ್ಧ ಬೆಂಕಿ ಹೊತ್ತಿಕೊಂಡಿದ್ದೇ ಬೆಳಗಾವಿಯಿಂದ

Last Updated 23 ಜುಲೈ 2019, 20:29 IST
ಅಕ್ಷರ ಗಾತ್ರ

ಬೆಳಗಾವಿ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ವಿರುದ್ಧ ಬೆಳಗಾವಿಯಿಂದಲೇ ಮೊದಲು ಬೆಂಕಿ ಹೊತ್ತಿಕೊಂಡಿತ್ತು. ಬೆಳಗಾವಿ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ (ಪಿಎಲ್‌ಡಿ) ಅಧ್ಯಕ್ಷರ ಆಯ್ಕೆ ವಿಚಾರವಾಗಿ ಜಾರಕಿಹೊಳಿ ಸಹೋದರರು ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ನಡುವೆ ಹೊತ್ತಿಕೊಂಡ ಅಸಮಾಧಾನದ ಹೊಗೆ ಹಲವು ಮಜಲುಗಳನ್ನು ದಾಟಿ, ಸರ್ಕಾರವನ್ನು ಉರುಳಿಸುವಲ್ಲಿ ಯಶಸ್ವಿಯಾಯಿತು.

ಕಳೆದ ವರ್ಷ ಮೇ ತಿಂಗಳಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಬೆಳಗಾವಿ ಜಿಲ್ಲೆಯ ಪ್ರಭಾವಿ ರಾಜಕಾರಣಿ, ರಮೇಶ ಜಾರಕಿಹೊಳಿ ಅವರಿಗೆ ಪೌರಾಡಳಿತ ಸಚಿವ ಸ್ಥಾನ ನೀಡಲಾಗಿತ್ತು. ಕೇವಲ ನಾಲ್ಕು ತಿಂಗಳು ಕಳೆಯುವಷ್ಟರಲ್ಲಿ ಬೆಳಗಾವಿ ಪಿಎಲ್‌ಡಿ ಬ್ಯಾಂಕಿನ ಚುನಾವಣೆ ಎದುರಾಯಿತು. ತನ್ನ ಗುಂಪಿನ ಜೊತೆ ಗುರುತಿಸಿಕೊಂಡ ಬಾಪುಗೌಡ ಪಾಟೀಲ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಬಯಸಿದ್ದರು. ಇದಕ್ಕೆ ಶಾಸಕ ಸತೀಶ ಜಾರಕಿಹೊಳಿ ತೀವ್ರವಾಗಿ ವಿರೋಧಿಸಿದ್ದರು.

ಅಧ್ಯಕ್ಷರ ಆಯ್ಕೆ ವಿಷಯವು ಲಕ್ಷ್ಮಿ ಹಾಗೂ ಸತೀಶ ನಡುವೆ ತೀವ್ರ ತಿಕ್ಕಾಟಕ್ಕೆ ಕಾರಣವಾಯಿತು. ಚುನಾವಣೆಗೂ ಮುಂಚೆ ರಮೇಶ ಅವರು ಲಕ್ಷ್ಮಿ ಜೊತೆಯಿದ್ದರು. ಆದರೆ, ಪಿಎಲ್‌ಡಿ ಬ್ಯಾಂಕ್‌ ವಿಷಯದಲ್ಲಿ ಲಕ್ಷ್ಮಿ ಪರವಾಗಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಲಾಬಿ ಮಾಡುತ್ತಿದ್ದಾರೆಂದು ಕೆಂಡಾಮಂಡಲರಾದರು. ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪವನ್ನು ಬಿಲ್‌ಕುಲ್‌ ಒಪ್ಪಲಿಲ್ಲ. ಸಹೋದರ ಸತೀಶ ಪರವಾಗಿ ನಿಂತರು.

ಬಾಪುಗೌಡ ಪಾಟೀಲ ಅಧ್ಯಕ್ಷರಾದರೆ, ಸರ್ಕಾರ ಅಸ್ತಿತ್ವದಲ್ಲಿಯೇ ಇರಲ್ಲ ಎಂದು ಮೊದಲ ಬಾರಿ ಎಚ್ಚರಿಕೆಯ ಕಹಳೆ ಊದಿದರು. ಅತೃಪ್ತ ಶಾಸಕರನ್ನು ಸಂಪರ್ಕಿಸಲು ಆರಂಭಿಸಿದರು. ಆಗ ಎಚ್ಚೆತ್ತುಕೊಂಡ ಎಐಸಿಸಿ, ಬಾಪುಗೌಡ ಪಾಟೀಲ ಆಯ್ಕೆಯಾಗದಂತೆ ನೋಡಿಕೊಂಡಿತು. ರಮೇಶ, ಸತೀಶ ಹಾಗೂ ಲಕ್ಷ್ಮಿ ಅವರನ್ನು ಸಮಾಧಾನಪಡಿಸಿ, ಪಕ್ಷಕ್ಕೆ ಧಕ್ಕೆಯಾಗದಂತೆ ನೋಡಿಕೊಂಡಿತು.

ಕೈ ತಪ್ಪಿದ ಸಚಿವ ಸ್ಥಾನ:

ಸಚಿವ ಸಂಪುಟ ಹಾಗೂ ಪಕ್ಷದ ಸಭೆಗಳಿಗೆ ರಮೇಶ ಆಗಾಗ ಗೈರಾಗುತ್ತಿದ್ದರು. ಇದನ್ನೇ ನೆಪವಾಗಿಟ್ಟುಕೊಂಡು, ಪಕ್ಷದ ಹೈಕಮಾಂಡ್‌ ಅವರ ಸಚಿವ ಸ್ಥಾನವನ್ನು ಕಿತ್ತುಕೊಂಡು ಸಹೋದರ ಸತೀಶ ಜಾರಕಿಹೊಳಿಗೆ ನೀಡಿತು. ಇದರಿಂದ ರೊಚ್ಚಿಗೆದ್ದ ರಮೇಶ, ಪಕ್ಷದ ಹೈಕಮಾಂಡ್‌ ವಿರುದ್ಧ ಹೇಳಿಕೆ ನೀಡಿದರು. ರಾಜೀನಾಮೆ ನೀಡಲು ಮುಂದಾದರು. ತಾವೊಬ್ಬರೇ ರಾಜೀನಾಮೆ ನೀಡಿದರೆ ಪ್ರಯೋಜನವಾಗುವುದಿಲ್ಲ ಎಂದುಕೊಂಡು, ಮಹೇಶ ಕುಮಠಳ್ಳಿ ಸೇರಿದಂತೆ ಇತರ ಅತೃಪ್ತ ಶಾಸಕರನ್ನು ಸಂಪರ್ಕಿಸಿ ತಂಡವನ್ನಾಗಿ ರೂಪಿಸಿಕೊಂಡರು.

ಮುಂಬೈ, ಅಜ್ಮೇರ್‌ಗೆ ಭೇಟಿ:

ದೇವಸ್ಥಾನ, ದರ್ಗಾಗಳ ಭೇಟಿಯ ನೆಪದಲ್ಲಿ ಅತೃಪ್ತ ಶಾಸಕರನ್ನು ಮುಂಬೈ, ಅಜ್ಮೇರ್‌ಗೆ ರಮೇಶ ಕರೆದುಕೊಂಡು ಹೋಗಿದ್ದರು. ಬಿಜೆಪಿ ಮುಖಂಡರ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡರು. ಮಹಾರಾಷ್ಟ್ರದ ಬಿಜೆಪಿ ಮುಖಂಡರ ಮೂಲಕ ಅಮಿತ್‌ ಶಾ ಅವರನ್ನು ಸಂಪರ್ಕಿಸಿ, ಪಕ್ಷಕ್ಕೆ ರಾಜೀನಾಮೆ ನೀಡುವುದನ್ನು ಖಾತರಿಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ.

ರಾಜೀನಾಮೆ ನೀಡಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ನಂತರ ರಾಜೀನಾಮೆ ನೀಡಲು ದೃಢ ಹೆಜ್ಜೆ ಇಟ್ಟರು. ಮುಂಬೈ ತಮಗೆ ತೀರ ಪರಿಚಿತ ಸ್ಥಳವಾಗಿದ್ದರಿಂದಲೇ ರಮೇಶ ಅತೃಪ್ತ ಶಾಸಕರನ್ನು ಕರೆದುಕೊಂಡು ಹೋದರು. ಎಷ್ಟೇ ಒತ್ತಡ ಹೇರಿದರೂ ವಾಪಸ್‌ ಬರಲಿಲ್ಲ. ಡಿಕೆಶಿವಕುಮಾರ್‌ ಬಾಗಿಲವರೆಗೆ ಬಂದು ಕರೆದರೂ ಅಲುಗಾಡಲಿಲ್ಲ. ಅಂತಿಮವಾಗಿ ರಮೇಶ ಅವರ ಹಠ ಗೆದ್ದಿತು, ಸಮ್ಮಿಶ್ರ ಸರ್ಕಾರ ಪತನಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT