ಜಿನ್ನಾಗೆ ಹೋಲಿಕೆ ಸಲ್ಲದು: ನಾಗನೂರ ಶ್ರೀ

7
ಯಡಿಯೂರಪ್ಪ, ಶಾಮನೂರು ಹೇಳಿಕೆಗೆ ತಿರುಗೇಟು

ಜಿನ್ನಾಗೆ ಹೋಲಿಕೆ ಸಲ್ಲದು: ನಾಗನೂರ ಶ್ರೀ

Published:
Updated:

ಬೆಳಗಾವಿ: ‘ಸ್ವತಂತ್ರ ಭಾರತದ ಮುಸ್ಲಿಮರಿಗೆ ಅಧಿಕಾರ ನಡೆಸಲು ಸಾಧ್ಯವಿಲ್ಲ ಎಂಬ ಅಂಶ ಮುಂದಿಟ್ಟುಕೊಂಡು ದೇಶ ಒಡೆದ ಮೊಹಮ್ಮದ್ ಅಲಿ ಜಿನ್ನಾರಿಗೂ, ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹೋರಾಡಿದ ಎಸ್.ಎಂ. ಜಾಮದಾರ ಬೆಂಬಲಿಗರಿಗೂ ವ್ಯತ್ಯಾಸವಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿರುವುದು ಕಳವಳಕಾರಿಯಾಗಿದೆ’ ಎಂದು ನಾಗನೂರ ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ ಹೇಳಿದ್ದಾರೆ.

‘ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ, ಜಿನ್ನಾ ರೀತಿ ವೀರಶೈವ– ಲಿಂಗಾಯತ ಸಮಾಜ ಒಡೆಯಲು ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಕೈಹಾಕಿದ್ದರು ಎಂದಿರುವುದು ಪ್ರಜ್ಞಾವಂತರನ್ನು ವಿವೇಚನೆಗೀಡು ಮಾಡಿದೆ. ವಿಭಜಕ ಸಂಸ್ಕೃತಿ ಬಿತ್ತುವಲ್ಲಿ ಮಾಧ್ಯಮಗಳು ಸಹಕರಿಸುತ್ತಿವೆ ಎಂದು ಆರೋಪಿಸಿರುವುದನ್ನೂ ಗಂಭೀರವಾಗಿ ಚಿಂತಿಸಬೇಕಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟಗಾರರನ್ನು, ರಾಣಿ ಚನ್ನಮ್ಮ ಸೋಲಲು ಕಾರಣರಾದ ಮಲ್ಲಪ್ಪಶೆಟ್ಟಿಯಂತಹ ದೇಶದ್ರೋಹಿಗಳಿಗೆ ಹೋಲಿಸಿರುವುದು ಅತಿರೇಕದ ಪರಮಾವಧಿಯಾಗಿದೆ. ಸಮಾಜ ಒಡೆಯಲು ಮುಂದಾದವರ ಗತಿ ಏನಾಗಿದೆ ಎಂದು ಕೇಳಿದ ಶಾಮನೂರು ಆತ್ಮಾವಲೋಕನ ಮಾಡಿಕೊಳ್ಳಬೇಕಿತ್ತು’ ಎಂದು ಎಂದು ತಿರುಗೇಟು ನೀಡಿದ್ದಾರೆ.

ಪ್ರಜ್ಞಾವಂತರಿಗೆ ಗೊತ್ತಾಗುತ್ತದೆ:

‘ನಮ್ಮ ಹೋರಾಟ ಇಂದು ನಿನ್ನೆಯದಲ್ಲ. ಅದು ಚುನಾವಣೆ ಸಂದರ್ಭದಲ್ಲಿ ಹುಟ್ಟಿಕೊಂಡಿದೆ ಎಂದು ಭ್ರಮಿಸಿರುವ ಶಾಮನೂರು, ನಮ್ಮ ಧರ್ಮದ ಇತಿಹಾಸ ಓದಿಲ್ಲ. ಕೇವಲ ಧಣಿ ಎಂಬ ಕಾರಣಕ್ಕೆ ಮಹಾಸಭಾ ಅಧ್ಯಕ್ಷ ಸ್ಥಾನದಲ್ಲಿ ಅಲಂಕೃತರಾಗಿದ್ದಾರೆ. ಲಿಂಗಾಯತರು ಹಿಂದೂಗಳಲ್ಲ, ಅವರ ಧಾರ್ಮಿಕ ಆಚರಣೆ, ಸಂಸ್ಕಾರ, ಪರಂಪರೆ ಎಲ್ಲವೂ ಅವೈದಿಕವಾಗಿದ್ದು, ಹಿಂದೂ ಧರ್ಮಕ್ಕಿಂತ ಭಿನ್ನವಾಗಿರುವುದನ್ನು ಪ್ರಜ್ಞಾವಂತರು ಗುರುತಿಸಬಹುದು. ಕೇವಲ ಹಿಂದುತ್ವದ ಉಗ್ರವಾದಿಗಳಿಗೆ, ಪುರೋಹಿತಶಾಹಿ ಪ್ರವೃತ್ತಿಯವರಿಗೆ ಮಾತ್ರ ಈ ವ್ಯತ್ಯಾಸ ತಿಳಿದಿಲ್ಲ ಅಥವಾ ಹಿಂದುತ್ವದ ವರ್ಣ ವ್ಯವಸ್ಥೆಯೊಳಗೆ ಲಿಂಗಾಯತರು ಶೂದ್ರರಾಗಿ ಮುಂದುವರಿಯಲಿ ಎಂಬ ಮನೋಭಾವ ಅವರದಾಗಿರಬಹುದು’ ಎಂದು ಕುಟುಕಿದ್ದಾರೆ.

‘ನಮ್ಮ ಸಂವಿಧಾನವು ಪ್ರತಿ ಧರ್ಮದ, ಸಂಸ್ಕೃತಿ ರಕ್ಷಣೆಗೆ ಪ್ರಥಮ ಪ್ರಾಶಸ್ತ್ಯ ನೀಡಿದೆ. ಯಾವುದೇ ಧರ್ಮದ ಪ್ರಜಾಸತ್ತಾತ್ಮಕ ಬೇಡಿಕೆ ತಿರಸ್ಕರಿಸುವುದು ಸಂವಿಧಾನ ವಿರೋಧಿ ಕ್ರಮ ಎನ್ನುವುದನ್ನು ರಾಜಕಾರಣಿಗಳು, ತಥಾಕಥಿತ ಬುದ್ಧಿಜೀವಿಗಳು ಮತ್ತು ಧರ್ಮಗುರುಗಳು ಗಮನಿಸಬೇಕು’ ಎಂದು ಸಲಹೆ ನೀಡಿದ್ದಾರೆ.

‘ವೀರಶೈವನೋ, ಲಿಂಗಾಯತನೋ ಎನ್ನುವುದು ನನಗೇ ಗೊತ್ತಿಲ್ಲ ಶಾಮನೂರು ಹೇಳಿದ್ದಾರೆ. ಯಾರೆಂದ ಗೊತ್ತಿಲ್ಲದ ಅವರು ಮಹಾಸಭಾ ಅಧ್ಯಕ್ಷರಾಗಿರುವುದು ದುರ್ದೈವದ ಸಂಗತಿ’ ಎಂದು ವ್ಯಂಗ್ಯವಾಡಿದ್ದಾರೆ.

‘ಧರ್ಮ ಒಡೆಯುವ ಕೆಲಸವನ್ನು ಕೆಲವರು ಮಾಡಿದರು ಎಂದು ಆರೋಪಿಸಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾನವ ಕುಲದ ಉದ್ಧಾರಕ್ಕಾಗಿ ಬಸವಣ್ ಈ ಧರ್ಮ ಸ್ಥಾಪಿಸಿದ್ದಾರೆಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಬಸವಣ್ಣನನ್ನು ಧರ್ಮಸ್ಥಾಪಕರು, ಧರ್ಮಗುರುಗಳು ಎಂದು ವೀರಶೈವವಾದಿಗಳು ಒಪ್ಪಿಕೊಂಡಲ್ಲಿ ಧರ್ಮ ವಿಭಜನೆ ಪ್ರಶ್ನೆ ಉದ್ಭವಿಸದು. ನಮ್ಮನ್ನು ಒಪ್ಪಿಕೊಂಡ ವೀರಶೈವರೂ ಲಿಂಗಾಯತರೇ. ವೀರಶೈವ ಎಂಬುದು ಲಿಂಗಾಯತ ಧರ್ಮದ ಒಳಪಂಗಡ ಎಂಬುದಕ್ಕೆ ಸಾವಿರಾರು ದಾಖಲೆಗಳಿವೆ. ಯಡಿಯೂರಪ್ಪ ಹಾಗೂ ಶಾಮನೂರು ಕೂಡ ಲಿಂಗಾಯತರೇ ಎಂದು ಜನ್ಮ ದಾಖಲೆಗಳೇ ಹೇಳುತ್ತವೆ’ ಎಂದು ನೆನಪಿಸಿದ್ದಾರೆ.

‘ಚುನಾವಣೆ ಮುಂದಿಟ್ಟುಕೊಂಡು ಧರ್ಮ ವಿಭಜನೆಗೆ ಚಾಲನೆ ನೀಡಲಾಯಿತು. ಇದರಿಂದ ಕಾಂಗ್ರೆಸ್ ಸೋತಿತು ಎಂದು ಕೆಲವರು ಹೇಳಿದ್ದಾರೆ. ಅದು ಸತ್ಯಕ್ಕೆ ದೂರವಾದುದು. ಆಡಳಿತ ವಿರೋಧಿ ಅಲೆಯ ನಡುವೆಯೂ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಿದೆ’ ಎಂದು ಸಮರ್ಥಿಸಿಕೊಂಡಿದ್ದಾರೆ.

‘ಆಮಂತ್ರಣವಿಲ್ಲದೇ ಪಾಲ್ಗೊಂಡು ಹೈಜಾಕ್’

‘ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿ ಆಗುತ್ತಿರುವ ತಾರತಮ್ಯ ಸರಿಪಡಿಸಬೇಕು ಮತ್ತು ಅಧಿಕಾರ ವಿಕೇಂದ್ರಿಕರಣಗೊಳ್ಳಬೇಕು ಎಂದು ಬೆಳಗಾವಿಯ ಸುವರ್ಣಸೌಧದ ಎದುರು ನೂರಾರು ಮಠಾಧಿಪತಿಗಳು ಧರಣಿ ನಡೆಸಿದೆವು. ಯಾರೊಬ್ಬರೂ ಪ್ರತ್ಯೇಕತೆಯ ವಿಚಾರ ಪ್ರಸ್ತಾಪಿಸಿಲ್ಲ. ಮಠಾಧಿಪತಿಗಳು ಅಖಂಡ ಕರ್ನಾಟಕದ ಪರವಾಗಿದ್ದಾರೆ. ಆದರೂ ಕೆಲವರು ಕುಚೋದ್ಯದಿಂದ ಪ್ರತ್ಯೇಕ ಧ್ವಜ ಪ್ರದರ್ಶಿಸಿ ಮಠಾಧಿಪತಿಗಳ ಹೋರಾಟಕ್ಕೆ ಕಳಂಕ ತರುವ ಕಾರ್ಯ ಮಾಡಿದರು. ಕೆಲವು ರಾಜಕಾರಣಿಗಳು ಯಾವುದೇ ಆಮಂತ್ರಣವಿಲ್ಲದೆ ಭಾಗವಹಿಸಿ, ಪಕ್ಷಾತೀತವಾಗಿ ನಡೆದ ಹೋರಾಟ ಹೈಜಾಕ್‌ ಮಾಡಲು ಯತ್ನಿಸಿದ್ದೂ ಆಯಿತು’ ಎಂದು ಸ್ವಾಮೀಜಿ ಪರೋಕ್ಷವಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಅಂದು ಪಾಲ್ಗೊಂಡಿದ್ದ ಬಿಜೆಪಿ ಶಾಸಕರನ್ನು ಟೀಕಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !