ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತೃಪ್ತರ ಮುಂದಿನ ನಡೆ ಎತ್ತ?

ನಾಲ್ವರ ಮೇಲೆ ಕಾಂಗ್ರೆಸ್‌ಗೆ ಇನ್ನೂ ಅಪನಂಬಿಕೆ: ಬಿಜೆಪಿಗೆ ಅಪ‍ರಿಮಿತ ವಿಶ್ವಾಸ
Last Updated 13 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹತೆಯ ಭೀತಿಯಿಂದ ಕಾಂಗ್ರೆಸ್‌ನ ನಾಲ್ವರು ಅತೃಪ್ತ ಶಾಸಕರು ವಿಧಾನಸಭಾ ಕಲಾಪಕ್ಕೆ ಬುಧವಾರ ಹಾಜರಾದರು. ಆದರೆ, ‘ಮಾತೃ’ ಪಕ್ಷದಲ್ಲೇ ಉಳಿಯಲಿದ್ದಾರೆಯೇ ಅಥವಾ ಸೂಕ್ತ ಸಮಯದಲ್ಲಿ ‘ಕಮಲ’ ಮುಡಿಯಲಿದ್ದಾರೆ ಎಂಬ ಅನುಮಾನ ಇನ್ನೂ ರಾಜಕೀಯ ವಲಯದಲ್ಲಿದೆ.

ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಅಥಣಿಯ ಮಹೇಶ ಕುಮಠಳ್ಳಿ, ಬಳ್ಳಾರಿ ಗ್ರಾಮಾಂತರದ ಬಿ.ನಾಗೇಂದ್ರ ಹಾಗೂ ಚಿಕ್ಕೋಡಿಯ ಡಾ.ಉಮೇಶ ಜಾಧವ ಅವರು ಮೈತ್ರಿ ಸರ್ಕಾರದ ನಾಯಕರ ವಿರುದ್ಧ ಮುನಿಸಿಕೊಂಡು 25 ದಿನಗಳಿಂದ ಮುಂಬೈಯಲ್ಲಿದ್ದರು.

ಕಾಂಗ್ರೆಸ್‌ ನಾಯಕರು ಅನರ್ಹತೆಯ ಅಸ್ತ್ರ ಪ್ರಯೋಗಿಸಿದ ಬೆನ್ನಲ್ಲೇ ಬಿಜೆಪಿಯ ಅಡಗುದಾಣದಿಂದ ಓಡೋಡಿ ಬಂದರು. ಧನ ವಿನಿಯೋಗ ಮಸೂದೆ ಮಂಡನೆ ವೇಳೆ ಹಾಜರಿರಬೇಕು ಎಂದು ಎಲ್ಲ ಶಾಸಕರಿಗೆ ಪಕ್ಷ ವಿಪ್‌ ನೀಡಿತ್ತು. ಒಂದು ವೇಳೆ ಗೈರುಹಾಜರಾದರೆ ಶಾಸಕ ಸ್ಥಾನಕ್ಕೆ ಕಂಟಕ ಎದುರಾಗುತ್ತದೆ ಎಂಬ ಕಾರಣಕ್ಕೆ ಅವರು ಧಾವಿಸಿ ಬಂದರು ಎನ್ನಲಾಗುತ್ತಿದೆ. ಅವರನ್ನು ಹಿಡಿದಿಟ್ಟುಕೊಂಡಿದ್ದರು ಎನ್ನಲಾದ ಬಿಜೆಪಿ ಶಾಸಕರಾದ ಸಿ.ಎನ್‌.ಅಶ್ವತ್ಥನಾರಾಯಣ (ಮಲ್ಲೇಶ್ವರ), ಅರವಿಂದ ಲಿಂಬಾವಳಿ (ಮಹದೇವಪುರ) ಸಹ ಸದನಕ್ಕೆ ಬಂದರು.

ಮೈತ್ರಿ ಸರ್ಕಾರಕ್ಕೆ ಬೆಂಬಲ ವಾಪಸ್‌ ಪಡೆದಿದ್ದ ಕೆಪಿಜೆಪಿ ಶಾಸಕ ಆರ್‌.ಶಂಕರ್‌ ಹಾಗೂ ಪಕ್ಷೇತರ ಶಾಸಕ ಎಚ್‌.ನಾಗೇಶ್‌ ಸಹ ಸದನಕ್ಕೆ ಪ್ರತ್ಯಕ್ಷರಾದರು. ಮತ್ತೆ ಮುಂಬೈಗೆ ಹೋಗುತ್ತೇವೆ ಎಂದು ಅತೃಪ್ತ ಶಾಸಕರು ಹೇಳಿಕೊಂಡರು. ‘ಅವರು ನೆಪ ಮಾತ್ರಕ್ಕೆ ಸದನಕ್ಕೆ ಬಂದಿದ್ದಾರೆ. ಅವರಿನ್ನೂ ಬಿಜೆಪಿ ತೆಕ್ಕೆಯಲ್ಲೇ ಇದ್ದಾರೆ’ ಎಂಬ ಚರ್ಚೆ ಕಾಂಗ್ರೆಸ್‌ ವಲಯದಲ್ಲಿ ಬುಧವಾರ ನಡೆಯಿತು.

ಅದಕ್ಕೆ ಪೂರಕ ಎಂಬಂತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ‘ನಾಲ್ವರು ಮುಂದಿನ ದಿನದಲ್ಲಿ ಏನ್ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು. ಇದು ರಾಜ್ಯಕ್ಕೆ ಒಳ್ಳೆಯದಲ್ಲ.‌ ವೈಯಕ್ತಿಕ ಅಧಿಕಾರ ಮುಖ್ಯ ಎಂದು ಭಾವಿಸಿದರೆ ಜನರಿಗೆ ದ್ರೋಹ ಮಾಡಿದಂತಾಗುತ್ತದೆ. ಮುಂದೆ ಏನಾಗುತ್ತದೆ ಎಂದು ನೋಡೋಣ’ ಎಂದು ಮಾರ್ಮಿಕವಾಗಿ ಹೇಳಿದರು.

‘ರಮೇಶ ಜಾರಕಿಹೊಳಿ ನಿರ್ಧಾರಕ್ಕೆ ನಾವು ಬದ್ಧ’ ಎಂದು ಹೇಳಿದನಾಗೇಂದ್ರ, ‘ ವೈಯಕ್ತಿಕ ಕೆಲಸದ ಮೇಲೆ ಮುಂಬೈಗೆ ಹೋಗಿದ್ದೆ. ಪಕ್ಷದ 20 ಶಾಸಕರಿಗೆ ಅಸಮಾಧಾನ ಇದೆ. ಅವರೆಲ್ಲ ಪಕ್ಷ ಬಿಡುತ್ತಾರೆ ಎಂದು ಹೇಳಲು ಸಾಧ್ಯವೇ. ಬಿ.ಸಿ. ಪಾಟೀಲ ಕೂಡ ಅತೃಪ್ತರಲ್ಲವೇ’ ಎಂದೂ ಪ್ರಶ್ನಿಸಿದರು.

‘ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಗೈರುಹಾಜರಾದ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಅದರಲ್ಲಿ ತಪ್ಪು ಇದ್ದರೆ ಕ್ರಮ ಕೈಗೊಳ್ಳಲಿ. ಮಲ್ಲಿಕಾರ್ಜುನ ಖರ್ಗೆ ದೊಡ್ಡವರು. ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಸಮಯ ಬಂದಾಗ ಅವರ ಬಗ್ಗೆ ಮಾತನಾಡುತ್ತೇನೆ. ಸ್ಥಳೀಯವಾಗಿ ನನ್ನ ಕ್ಷೇತ್ರದಲ್ಲಿ ಸಮಸ್ಯೆಗಳಿವೆ. ಅದನ್ನು ನಮ್ಮ ನಾಯಕರಿಗೆ ಮನವರಿಕೆ ಮಾಡಿದ್ದೇನೆ’ ಎಂದು ಡಾ. ಉಮೇಶ ಜಾಧವ ಹೇಳಿದರು. ‘ನಾನು ಯಾರನ್ನೂ ಭೇಟಿ ಆಗಿಲ್ಲ. ಬಿಜೆಪಿಯಲ್ಲೂ ನನ್ನ ಗೆಳೆಯರಿದ್ದಾರೆ. ಸಂಪರ್ಕದಲ್ಲಿ ಇರದೇ ಇರಲಿಕ್ಕೆ ಆಗುತ್ತದೆಯೇ. ನಾನು ಮುಂಬೈಗೆ ಹೋಗಿರಲಲ್ಲ’ ಎಂದು ಸ್ಪಷ್ಟಪಡಿಸಿದರು.

‘ಅಪ್ಪ‌ ಮಕ್ಕಳ ಜಗಳದಲ್ಲಿ ಕೂಸು ಬಡವಾಯ್ತು ಅನ್ನುವ ಸ್ಥಿತಿ ನಮ್ಮದು. ಪಕ್ಷದಲ್ಲಿ ನಾಯಕರ ನಡುವಿನ ಜಗಳದಲ್ಲಿ ನಾವು ಬಡವಾದೆವು’ ಎಂದು ಮಹೇಶ ಕುಮಠಳ್ಳಿ ಅವರು ರಮೇಶ ಜಾರಕಿಹೊಳಿ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು.

ನಾಗೇಶ್‌ ಪತ್ರ

ಮುಳಬಾಗಿಲಿನ ಪಕ್ಷೇತರ ಶಾಸಕ ಎಚ್‌.ನಾಗೇಶ್‌ ಅವರು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಬುಧವಾರ ಸಂಜೆ ಭೇಟಿ ಮಾಡಿ ಮಾತುಕತೆ ನಡೆಸಿದರು. ಕಾಂಗ್ರೆಸ್ ಸಹ ಸದಸ್ಯರಾಗುವುದಾಗಿ ಅವರು ಸಿದ್ದರಾಮಯ್ಯ ಅವರಿಗೆ ಪತ್ರ ನೀಡಿದ್ದಾರೆ. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಈ ಸಂದರ್ಭದಲ್ಲಿ ಹಾಜರಿದ್ದರು.

*ಸಿದ್ದರಾಮಯ್ಯ ನಮ್ಮ ನಾಯಕ. ಕಾಂಗ್ರೆಸ್‌ ಬಿಡುವ ಆಲೋಚನೆ ಮಾಡಿಲ್ಲ. ಜಿಲ್ಲಾ ಮಟ್ಟದಲ್ಲಿ ಅಸಮಾಧಾನ ಇದೆ. ಬಗೆಹರಿಸಿಕೊಳ್ಳುತ್ತೇವೆ.

- ಬಿ.ನಾಗೇಂದ್ರ, ಬಳ್ಳಾರಿ ಗ್ರಾಮಾಂತರ ಶಾಸಕ

*ಕಾಂಗ್ರೆಸ್‌ನಲ್ಲೇ ಇರುತ್ತೇನೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ.

- ಡಾ.ಉಮೇಶ್ ಜಾಧವ, ಚಿಂಚೋಳಿ ಶಾಸಕ

*ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ಕಲಾಪಕ್ಕೆ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಬರಲಿಲ್ಲ. ಬಿಜೆಪಿ ಸಂಪರ್ಕದಲ್ಲಿ ನಾನಿಲ್ಲ. ಯಾವ ಅತೃಪ್ತರ ಜೊತೆಯೂ ನಾನಿರಲಿಲ್ಲ.

- ಮಹೇಶ ಕುಮಠಳ್ಳಿ, ಅಥಣಿ ಶಾಸಕ

*ಮಗಳ ಮದುವೆ ಸಿದ್ಧತೆಯಲ್ಲಿದ್ದೇನೆ. ಹಾಗಾಗಿ, ಮುಂಬೈಗೆ ಹೋಗಿದ್ದೆ. ಮತ್ತೆ ಮುಂಬೈಗೆ ಹೋಗುತ್ತೇನೆ.

- ರಮೇಶ ಜಾರಕಿಹೊಳಿ, ಗೋಕಾಕ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT